Thursday, November 9, 2017

ತರಲೆ: ನೀರು.......2050

ತರಲೆ: ನೀರು.......2050: ನೀರು.......2050 ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ...

Monday, October 30, 2017

ನೀರು.......2050

ನೀರು.......2050


ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಸುಮಾರು 8 ಗಂಟೆಯ ಆಸು ಪಾಸಿಗೆ ಒಂದು ಬಿಂದಿಗೆ ನೀರು ಕೊಡುತ್ತಾರೆ. ಅದು ಗುರುತಿನ ಚೀಟಿ ತೋರಿಸಿದ್ರೆ ಮಾತ್ರ. ಅಪ್ಪಿ ತಪ್ಪಿ ಅದನ್ನ ಮರೆತಿದ್ದರೆ ಅವತ್ತು ಹನಿ ನೀರು ಕೂಡ ಸಿಗೋದಿಲ್ಲ. ಕಿಟಕಿಯಿಂದ ನೋಡಿದರೆ ಪಕ್ಕದ ಮನೆ  ರಮೇಶ ಒಂದು ಬಿಂದಿಗೆ ನೀರಿನ ಜೊತೆ ಬರುತ್ತಿದ್ದಾನೆ. ನನ್ನನ್ನು ನೋಡಿದವನೇ ಕುಹಕ ನಗೆ ಬೀರಿದ. ಪ್ರತಿದಿನ ಇಬ್ರು ಜೊತೆಗೇನೆ ಹೋಗ್ತಾ ಇದ್ವಿ. ಅವನೇ ಬಂದು ನನ್ನ ಎಬ್ಬಿಸೋನು. ನಿನ್ನೆ ನನ್ನ ಹಿಂದೆ ನಿಂತಿದ್ದ, ನನ್ನ ಕೊಡ ತುಂಬೋವಷ್ಟರಲ್ಲಿ ಬರೋವಷ್ಟರಲ್ಲಿ ನೀರು ನಿಂತು ಹೋಯ್ತು. ಅವ್ನಿಗೆ ನೀರೇ  ಸಿಕ್ಕಿಲ್ಲ ಅದ್ಕೇ ಇವತ್ತು ಒಬ್ನೇ ಹೋಗಿದ್ದಾನೆ ಬಡ್ಡಿ ಮಗ. ಹಾಳಾಗಿ ಹೋಗ್ಲಿ ಇವತ್ತು ಬ್ಲಾಕ್ ಅಲ್ಲಿ ಒಂದು ಬಿಂದಿಗೆ ನೀರು ತಗೋಬೇಕು ಅಷ್ಟೇ . 

ಸರಿ ಹಲ್ಲು ಸ್ಯಾನಿಟೈಸ್ ಮಾಡೋಣ ಅಂತ ಮೌತ್  ಸ್ಯಾನಿಟೈಸರ್ ತೆಗೆದೆ. ನನ್ನ ಅಪ್ಪನ ಕಾಲದಲ್ಲಿ ಪೇಸ್ಟ್  ಅಂತೇನೋ ಬರುತ್ತಿತ್ತಂತೆ. ಜನರು ಬ್ರಷ್  ಅನ್ನೋದರ ಮೇಲೆ ಪೇಸ್ಟ್ ಅನ್ನೋದನ್ನು ಹಾಕಿ ಗಂಟೆಗಟ್ಟಲೆ ಹಲ್ಲನ್ನು ಉಜ್ಜುತ್ತಿದ್ದರಂತೆ. ಸರಿ ಸುಮಾರು 10-15 ನಿಮಿಷ ನೀರನ್ನು ಪೋಲು ಮಾಡುತ್ತಿದ್ದರಂತೆ. ಅದಕ್ಕೆ ಈಗ ನಮಗೆ ಈ ಗತಿ  ಬಂದಿರೋದು. ಈಗಂತೂ ನಾವು ಈ ಹಾಳು ಅಭ್ಯಾಸ ನಿಲ್ಲಿಸಿದ್ದೀವಿ. ಮೌತ್ ಸ್ಯಾನಿಟೈಸರ್ ಹಾಕಿ ಒಮ್ಮೆ ಬಾಯಿ ಮುಕ್ಕಳಿಸಿದರೆ ಮುಗಿದೋಯ್ತು ಒಂದು  ನಿಮಿಷಕ್ಕೆ ಕೆಲಸ ಮುಗೀತು.  ಸಾನಿಟೈಸರ್ ಬೆಲೆ  200 ರೂಪಾಯಿ ಮಾತ್ರ, ಆದ್ರೆ ಒಂದು ಲೀಟರ್ ನೀರಿನ ಬೆಲೆ ಅದರ ಇಪ್ಪತ್ತು ಪಟ್ಟು. ಸ್ನಾನಕ್ಕೆ ಕೂಡ ಅಷ್ಟೇ. ಮುಂಚೆ ಅದೇನೋ Shower  ಅಂತ ಇತ್ತಂತೆ. ಜನರು ಗಂಟೆಗಟ್ಟಲೆ ಅದರ ಕೆಳಗೆ ನಿಂತು ನೀರು ಪೋಲು ಮಾಡ್ತಾ ಇದ್ದರಂತೆ. You Tube ನಲ್ಲಿ ಆ ವೀಡಿಯೋಗಳನ್ನ ನೋಡಿದರೆ, ಆಗ ಒಬ್ಬರು ಸ್ನಾನ ಮಾಡಲು ಬಳಸ್ತಾ ಇದ್ದ ನೀರಿನಲ್ಲಿ ಈಗ 10-15 ಜನ ಸ್ನಾನ ಮಾಡಬಹುದಿತ್ತೇನೋ. ಈಗ ಅಂತೂ ನಾವು ವೇಪರೈಸರ್ ಟೆಕ್ನಾಲಜಿ ನ ಬಳಸ್ತೀವಿ. ಇದು ನೀರಿನ ಅತ್ಯಂತ ಸಣ್ಣ ಕಣಗಳನ್ನ ಮೈ ಮೇಲೆ ಸ್ಪ್ರೇ ಮಾಡುತ್ತೆ. 5 ನಿಮಿಷಕ್ಕಿಂತ ಜಾಸ್ತಿ ಹೊತ್ತು ಬಾತ್ ರೂಮಿನಲ್ಲಿ  ಇದ್ದರೆ ಅಲಾರಾಂ ಆಗುತ್ತೆ . ಅಪ್ಪಿ ತಪ್ಪಿ ವಾರಕ್ಕೆ ಎರಡಕ್ಕಿಂತ ಜಾಸ್ತಿ ಅಲಾರಾಂ  ಅದರೆ ಅದು ಕ್ರಿಮಿನಲ್ ಕೇಸ್. ನೀರಿನ ದುಂದು  ವೆಚ್ಚ ಮತ್ತು ಕೊಲೆ ಯತ್ನ ಎರಡಕ್ಕೂ ಈಗ ಒಂದೇ ತರದ ದಂಡನೆಯನ್ನು ಸರಕಾರ ಕಾಯಿದೆ ರೂಪದಲ್ಲಿ ತಂದಿದೆ. ಮುಂಚೆ ನೀರು ಸರಬರಾಜು ಮಾಡ್ತಾ ಇದ್ದ ಪೈಪ್ ಲೈನ್ ಗಳು ಈಗ ಅಡುಗೆ ಅನಿಲ ಪೂರೈಕೆಗೆ  ಬಳಸಲಾಗುತ್ತಿದೆ. 

ಮುಂಚೆ  ಕಂಪೆನಿಯ ಷೇರುಗಳನ್ನು ಅಲ್ಲಿ ಕೆಲಸ ಮಾಡೋರಿಗೆ ಕೊಡುತ್ತಿದ್ದರಂತೆ, ಈಗೇನಿದ್ರೂ ನಾವು ಸಂಬಳದ ಒಂದು ಭಾಗವನ್ನು ನೀರಿನಲ್ಲಿ ತಗೊಳುತ್ತೀವಿ. ಇದು ನಮಗೆ ಒಂತರ ಡಬಲ್ ಬೆನಿಫಿಟ್. ಯಾಕಂದ್ರೆ ನೀರಿನ  ಸಂಬಳಕ್ಕೆ  ಟ್ಯಾಕ್ಸ್ ಇರೋದಿಲ್ಲ. ಹಾಗು ಕಂಪೆನಿ ಕೊಡೋ ನೀರಿನ ದರ ಹೊರಗಡೆ ಮಾರ್ಕೆಟ್  ದರಕ್ಕೆ ಹೋಲಿಸಿದರೆ ತುಂಬಾನೇ ಕಮ್ಮಿ. ಅಂಟಾರ್ಟಿಕಾ ದಲ್ಲಿ ಈಗ bottling ಕಂಪನಿ ಶುರು ಮಾಡಿದ್ದಾರೆ. ಇಡೀ ಭೂಮಿಯಲ್ಲಿ ಯಥೇಚ್ಛ  ಶುದ್ಧ ನೀರು ದೊರೆಯುವ ಒಂದೇ ಒಂದು ಜಾಗ ಅಂದರೆ ಅದೊಂದೇ. ವಿಶ್ವದ ದೊಡ್ಡ ದೊಡ್ಡ ದೇಶಗಳಿಗೆ ಇಲ್ಲಿಂದ ನೀರನ್ನು ರಫ್ತು ಮಾಡ್ತಾರೆ. ಕರಾವಳಿ ತೀರದ ಪ್ರದೇಶಗಳಲ್ಲಿ ನೀರಿನ ಸ್ಥಿತಿ ಸ್ವಲ್ಪ ಪರವಾಗಿಲ್ಲ. ಅಲ್ಲಿ ಸಮುದ್ರದ ನೀರನ್ನು ಶುದ್ದೀಕರಿಸಿ ಕುಡಿಯುವ ನೀರಾಗಿ ಸರಬರಾಜು ಮಾಡ್ತಾರೆ. ಆದರೆ ಜನರ ದುರಾಸೆ ನೋಡಿ ಸರಕಾರ ಕೆಲವೇ ಕೆಲವು ಯೂನಿಟ್ ಗಳಿಗೆ ಪರವಾನಿಗೆ ನೀಡಿದೆ. ಅಂತರ್ಜಲವನ್ನು ಜನರು  ಖಾಲಿ ಮಾಡಿರೋ ರೀತಿ ನೋಡಿ ಸರಕಾರ ಪಾಠ ಕಲಿತಿದೆ.  ಆದರೂ ಅಕ್ರಮ ಶುದ್ದೀಕರಣ ಘಟಕಗಳು ತಲೆಯೆತ್ತಿ ನೀರಿನ ಮಾಫಿಯಾಗಳು ಬ್ರಹತ್ ಪ್ರಮಾಣದಲ್ಲಿ ಬೆಳೆದಿವೆ.  ಮುಂಚೆ ಇದ್ದ ಮರಳು ಮಾಫಿಯಾದ ಸಾವಿರ ಪಟ್ಟು ಈ ನೀರಿನ ಮಾಫಿಯಾ ಬೆಳೆದಿದೆ.

ಮಳೆ ಕೊಯ್ಲು ಈಗ ಕಡ್ಡಾಯ, ತಪ್ಪಿದರೆ ಅದು ಕ್ರಿಮಿನಲ್ ಅಪರಾಧ. ಎಲ್ಲ ಮನೆಗಳಲ್ಲಿ ನೀರು ಮರು  ಶುದ್ದ್ದೀಕರಣ ಘಟಕಗಳು ಇರಲೇಬೇಕು ಇಲ್ಲ ಅಂದ್ರೆ ಅವರಿಗೆ ಹತ್ತು ಪಟ್ಟು ತೆರಿಗೆ ಹಾಕ್ತಾರೆ,. ಅಂಗಡಿಗಳಲ್ಲಿ ನೀರಿನ ಬಾಟಲಿ ತಗೋಬೇಕು ಅಂದ್ರೆ ಆಧಾರ್ ಕಡ್ಡಾಯ. ಎಲ್ಲ ಗಣಕೀಕೃತ ಆಗಿರೋದರಿಂದ ಒಂದು ಆಧಾರ್ ನಂಬರ್ ಗೆ 250ml ಬಾಟಲಿ ಅಷ್ಟೇ ಸಿಗೋದು. ಬ್ಲಾಕ್ ಅಲ್ಲಿ ಅಂಗಡಿಯವರು ಆಗಾಗ ಯಾರದ್ದೋ ಆಧಾರ್ ಹೆಸರಿನಲ್ಲಿ ಗೋಲ್ ಮಾಲ್ ಮಾಡ್ತಾರೆ . ಸರಕಾರಕ್ಕೆ ಗೊತ್ತಾದ್ರೆ ಮಾತ್ರ ಅಂಗಡಿ ಮುಚ್ಚಿಸಿ  ಜೈಲ್ಗೆ ಹಾಕ್ತಾರೆ. ಚುನಾವಣೆಯಲ್ಲಿ ಈಗ ಹಣ ಹೆಂಡ ಯಾರು ಹಂಚುವವರಿಲ್ಲ, ಏನಿದ್ರೂ  ಬಾಟಲಿಗಟ್ಟಲೆ ನೀರು ಹಂಚುತ್ತಾರೆ ಅಷ್ಟೇ ಯಾಕಂದ್ರೆ ಅದಕ್ಕಿಂತ ಅಮೂಲ್ಯ ವಸ್ತು ಬೇರೆ ಏನು ಉಳಿದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀರಿದ್ದೆ ಕಾರುಬಾರು. ಒಂದು ಪಕ್ಷ ನಾವು ಪಾತಾಳದಿಂದ ನೀರು ತರಿಸಿಕೊಡ್ತೇವೆ ಅಂದರೆ ಮತ್ತೊಂದು ಪಕ್ಷದವರು ನಾವು ಅನ್ಯಗ್ರಹಗಳಿಂದ ಪೈಪ್ ಮುಖಾಂತರ ನೀರು ತರಿಸಿಕೊಡ್ತೇವೆ ಅಂತಾರೆ, ಆದರೆ ಪಾತಾಳದಲ್ಲಿ ಅಥವಾ ಅನ್ಯಗ್ರಹಗಳಲ್ಲಿ ನೀರು ಇದೆಯೇ ಅನ್ನೋದರ ಬಗ್ಗೆ ಅವರು ಯೋಚ್ನೆ ನೇ ಮಾಡಲ್ಲ. ಆಡಳಿತ ಸರಕಾರ ತಂದಿರೋ ನೀರು ಭಾಗ್ಯ ಅನ್ನೋ ಹೊಸ ಯೋಜನೆ ಸಾಕಷ್ಟು ಪ್ರಚಾರ ಪಡೆದಿದೆ. ಆದರೆ ಫಲಾನುಭವಿಗಳಿಗೆ ದೊರೆಯಬೇಕಾದ ನೀರಿನ ಬಾಟಲಿಗಳು ಮಾತ್ರ ಒಮ್ಮೊಮ್ಮೆ ದಾರಿ  ತಪ್ಪಿ ದಿನಸಿ ಅಂಗಡಿಗೆ ಹೋಗುತ್ತಿವೆ. ಅವಕ್ಕೆ ಸರಿಯಾದ ದಾರಿ ತೋರಿಸೋದು google map ಗು ದೊಡ್ಡ ಸವಾಲಾಗಿದೆ.

ಕಟ್ಟಿರೋ ಅಣೆಕಟ್ಟುಗಳನ್ನು ದೊಡ್ಡ ಕ್ರಿಕೆಟ್ ಗ್ರೌಂಡ್ ಆಗಿ ಪರಿವರ್ತಿಸಲಾಗಿದೆ. ಯಾಕಂದ್ರೆ ನದಿಯಲ್ಲಿ ನೀರು ಹರಿಯೋವಷ್ಟು ಮಳೆ ಬೀಳೋದೇ ಇಲ್ಲ. ಬಿದ್ದರು ಕೂಡಲೇ ಇಂಗಿ ಹೋಗುತ್ತೆ.  ಅಪ್ಪಿ ತಪ್ಪಿ ಮಳೆ  ಬಂದರೆ ನಾವು ಒಂದು ಹನಿಯು ಹಾಳಾಗದಂತೆ ಅದನ್ನು ಸಂಗ್ರಹಿಸಿ ಇಡುತ್ತೇವೆ. ಪ್ರಾಯಶ ಈ ಕೆಲಸ ನಮ್ಮಆ ಪೂರ್ವಜರು ಮಾಡಿದ್ದಾರೆ ನಮಗೆ ಈ ಗತಿ ಬರ್ತಾ ಇರಲಿಲ್ವೇನೋ. ಜಾಸ್ತಿ ನೀರು ಬಳಸುವ ಭತ್ತ, ಕಬ್ಬುಗಳನ್ನೂ ಸರಕಾರದ ಪರವಾನಿಗೆ ಇಲ್ಲದೆ ಬೆಳೆಯುವಂತಿಲ್ಲ. ನಮ್ಮ ಪೂರ್ವಜರು ಚಿನ್ನ ಬೆಳ್ಳಿ ಆಸ್ತಿ ಮನೆ ಅನ್ನೋದನ್ನು ಬಿಟ್ಟು ಈ ನೀರನ್ನು ಕಾಪಾಡಿದ್ದರೆ ಸಾಕಿತ್ತು, ಈ ಪೀಳಿಗೆಗೆ ಅದೇ ದೊಡ್ಡ ಆಸ್ತಿ ಆಗಿರೋದು. ಆದ್ರೆ ಕೆಟ್ಟ ಮೇಲೇ  ತಾನೇ ಬುದ್ದಿ ಬರೋದು. . ಕೋಕೋ ಕೋಲಾ ಪೆಪ್ಸಿ ಕಂಪೆನಿಗಳು ತಮ್ಮ ಕೋಲಾ ಗಳನ್ನು ನಿಲ್ಲಿಸಿ ಕೇವಲ ನೀರನ್ನು ಮಾತ್ರ ಮಾರಾಟ ಮಾಡ್ತಾ ಇದ್ದಾರೆ. ಅವರು ಸಮುದ್ರದ ನೀರಿಂದ ನೀರನ್ನು ಶುದ್ದೀಕರಿಸೋ ಪರ್ಮಿಟ್ ತಗೊಂಡಿದ್ದಾರೆ. ನೀರಿನ ಆಟಗಳನ್ನು ಒಳಗೊಂಡ Wonder La ಇತ್ಯಾದಿ Amusement ಪಾರ್ಕುಗಳು  ಈಗ ನೀರಿನ ಸಂರಕ್ಷಣೆಯ ವಿದಿ ವಿಧಾನಗಳನ್ನು ಸಂಗ್ರಹಿಸೋ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಮುಂಚೆ ಜನ ನೀರನ್ನು ಹೇಗೆ ಪೋಲು ಮಾಡ್ತಾ ಇದ್ರೂ ಅನ್ನೋದರ  ಸಾಕ್ಷ ಚಿತ್ರಗಳಿವೆ, ದುಮ್ಮಿಕ್ಕೋ ಜಲಪಾತ, ಉಕ್ಕಿ ಹರಿಯೋ ನದಿ, ಕಣ್ಣೆತ್ತಿ ನೋಡಿದಷ್ಟು ದೂರ ನೀರನ್ನು ತುಂಬಿಕೊಂಡ ಅಣೆಕಟ್ಟುಗಳ ಚಿತ್ರಗಳು ವೀಡಿಯೋಗಳು ಇಲ್ಲಿ ಲಭ್ಯ ಇವೆ. Amusement ಪಾರ್ಕುಗಳ ಗತವೈಭವದ ಚಿತ್ರಗಳು ಕೂಡ  ಇಲ್ಲಿವೆ.  ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಇವು ತುಂಬಾ ಅನುಕೂಲವಾಗಿವೆ.

ಒಮ್ಮೊಮ್ಮೆ ಅನಿಸುತ್ತೆ ಹಳೇ  ಮೂವೀಗಳಲ್ಲಿ ತೋರಿಸೋ ಹಾಗೆ ಜಲಪ್ರಳಯ ಆಗಿದ್ರೆ ಚೆನ್ನಾಗಿರೋದು.... ಈ ಜೀವಮಾನದಲ್ಲಿ ಮತ್ತೊಮ್ಮೆ ಹರಿಯೋ ನೀರನ್ನು ನೋಡುವ ಆಸೆ...  ಅದರಲ್ಲಿ ಆಡುವ ಆಸೆ... ಅದರಲ್ಲಿ ಮುಳುಗೇಳುವ  ಆಸೆ .... ಬದುಕಿದ್ದರೆ ಅದನ್ನು ಕೊನೆವರೆಗೂ ಉಳಿಸುವ ಆಸೆ  .......


---ಶ್ರೀ :-)