Thursday, July 14, 2011

ಕುಬೇರನ ಜೊತೆ ಮಾತುಕತೆ..

 ತಿರುವನಂತಪುರಮ್ ದೇವಾಲಯದಲ್ಲಿ ಒಂದು ಲಕ್ಷ ಕೋಟಿ ಬೆಲೆ ಬಾಳೋ ಆಭರಣಗಳು ಸಿಕ್ಕಿವಿಯಂತೆ, ಪದೇ ಪದೇ ಎಲ್ಲಿ ನೋಡಿದರಲ್ಲಿ ಈ ಸುದ್ದಿ ಕೇಳಿದಾಗ ಹೊಳೆದ ಆಲೋಚನೆಗಳನ್ನು ಒಂದು ಸಂದರ್ಶನದ ರೂಪದಲ್ಲಿ ಬರೆದಿದ್ದೇನೆ. ಅಂದ ಹಾಗೆ ಇಲ್ಲಿ ಬಾರೋ ಸೆಲೆಬ್ರಿಟಿ ಗೆಸ್ಟ್ ದೇವಲೋಕದ ಬ್ಯಾಂಕ್ ಮ್ಯಾನೇಜರ್ ಕುಬೇರ, ಹಾಗೆ ಸಂದರ್ಶಕರು 24X7 ಸುದ್ದಿ ಬಿತ್ತರಿಸೋ ಖಾಸಗಿ ಚಾನಲ್ ನ ಒಬ್ಬ ಪ್ರತಿನಿಧಿ.......ಎಲ್ಲ ಪಾತ್ರಗಳು ಪಕ್ಕ ಕಾಲ್ಪನಿಕ :-)
ಸಂದರ್ಶಕ: ನಮಸ್ಕಾರ, ಕುಬೇರ ಪ್ರಭುಗಳಿಗೆ. ಕುಬೇರ ಅಂದ್ರೆ ನಮಗೆ ಮೊದಲು ನೆನಪಾಗೋದು ನೀವು ತಿಮ್ಮಪ್ಪನಿಗೆ ಸಾಲ ಕೊಟ್ಟ ವಿಚಾರ. ಅದಕ್ಕೆ ಅಲ್ಲಿ೦ದಲೆ ಮಾತು ಕತೆ ಆರಂಬಿಸೋಣ. ನೀವು ಅದು ಯಾವ ದೈರ್ಯದ ಮೇಲೆ ತಿಮ್ಮಪ್ಪನಿಗೆ ಸಾಲ ಕೊಟ್ಟಿರಿ? ಈ ಸಾಲಕ್ಕೆ surity ಯಾರು .?

ಕುಬೇರ: ಅಯ್ಯೋ ಬಿಡಿ ಸರ್ ಅವರಿಗೆ ಸಾಲ ಕೊಡಬೇಕೋ ಬೇಡವೋ ಅಂತ ತುಂಬಾ ಯೋಚನೆ ಮಾಡ್ತಾ ಇದ್ದೆ. ಮದ್ಯದಲ್ಲಿ ಈ ನಾರದ ಬಂದು ತಿಮ್ಮಪ್ಪನ ಗುಣ ಎಲ್ಲ ಸರಿ ಆದ್ರೆ ಸಾಲ ತೀರಿಸ್ತಾನೋ ಇಲ್ವೋ ಅಂತ ಭಯ ಅಂತ ಬೇರೆ fitting ಇಟ್ಟ. ಆಮೇಲೆ ಬ್ರಹ್ಮ ಬ೦ದು ನಾನು ಅದಕ್ಕೆ ಜವಾಬ್ದಾರಿ ಅಂದ. ಅದಕ್ಕೆ ಕೊಟ್ಟೆ.

ಸಂದರ್ಶಕ: ಅಲ್ಲ ಕಣ್ರೀ ನಮ್ಮ ಬ್ಯಾಂಕ್ ಜನ ಆಸ್ತಿ ಪತ್ರ ಅದು ಇದು ಅಂತ ಕೇಳ್ತಾರೆ ನೀವು ಏನೇನು ತಗೊಂಡ್ರಿ ತಿಮ್ಮಪ್ಪನ ಹತ್ರ...?

ಕುಬೇರ: ನಿಮ್ಮ ಜನ ಅದನ್ನೆಲ್ಲ ತಗೋತಾರೆ ಯಾಕೆ ಅಂದ್ರೆ ನೀವು ಅವರ ಸಾಲ ವಾಪಸ್ ಕೊಡ್ಬೇಕು ಅ೦ದ್ರೆ ಆ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಇರಬೇಕು. ಆದ್ರೆ ಲಕ್ಷ್ಮಿ ತಿಮ್ಮಪ್ಪನ ದರ್ಮ ಪತ್ನಿ ಆಗಿರೋದ್ರಿಂದ ಅದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಏನು ಬೇಕು ಸಾಲ ಕೊಡಕ್ಕೆ?

ಸಂದರ್ಶಕ: ಅಲ್ಲ ಸ್ವಾಮೀ ಈ ದೇವರುಗಳು ತಮ್ಮ ಶಕ್ತಿಯಿ೦ದ ಮಣ್ಣನ್ನು ಚಿನ್ನವಾಗಿಸ್ತಾರಲ್ಲ ಈ ತಿರುಪತಿ ತಿಮ್ಮಪ್ಪ೦ಗೆ ಯಾಕೆ ಆ ತರ ಮಾಡಕ್ಕೆ ಆಗಿಲ್ಲ?.

ಕುಬೇರ: ಹ ಹ ನೀವು ಕ್ರೆಡಿಟ್ ಕಾರ್ಡ್ ಅಂತ ಉಪಯೋಗಿಸ್ತೀರ ತಾನೇ? ಅದರಲ್ಲಿ ಒಂದು ಲಿಮಿಟ್ ಅಂತ ಇರತ್ತೆ ಅದು ಮುಗಿದ ಮೇಲೆ ಅದು use less ತಾನೇ ? ಅದೇ ರೀತಿ ಈ ತಿಮ್ಮಪ್ಪನ ಕ್ರೆಡಿಟ್ ಲಿಮಿಟ್ ಮುಗಿದಿತ್ತು ಅದಕ್ಕೆ ನನ್ನ ಹತ್ರ ಸಾಲ ತಗೊಂಡ...

ಸಂದರ್ಶಕ : (credit card ವಿಷಯ ಕೇಳಿ ಸಂದರ್ಶಕನಿಗೆ ಆ ತಿಂಗಳ credit card ಬಿಲ್ ಪಾವತಿಸಿಲ್ಲ ಅಂತ ನೆನಪಾಗಿ ಹೆಂಡತಿ ಗೆ ಫೋನಾಯಿಸಿ ತುಂಬಲು ಹೇಳುತ್ತಾನೆ) ಅ೦ದ ಹಾಗೆ ನೀವು ಲೋನ್ recoveryಗೆ ಯಾರನ್ನು ಕಳಿಸ್ತೀರ ..?


ಕುಬೇರ:ತಿಮ್ಮಪ್ಪನ ಲೋನ್ ಒಂಥರಾ ECS ಇದ್ದ ಹಾಗೆ ತಿಂಗಳ EMI ಹುಂಡಿಯಿ೦ದ ಡೈರೆಕ್ಟ್ ಆಗಿ ನನ್ನ ಅಕೌಂಟ್ ಗೆ ಬಂದು ಸೇರತ್ತೆ. ಇನ್ನು ಉಳಿದವರ ಲೋನ್ recovery ಗೆ ಸಣ್ಣ ಅಸುರ ಸೈನ್ಯ ಇದೆ. ಈ ಅಸುರರರು ಈಗ ನಿಮ್ಮ ಭೂಮಿಯ icici recovery ಶಾಖೆಯಲ್ಲಿ ಕೆಲಸ ಮಾಡೋ ಪುಂಡರ ಪೂರ್ವಜರು ....

ಸಂದರ್ಶಕ: (ಹಳೆ ಸಾಲ ಕಟ್ಟದ್ದಕ್ಕೆ icici ಬ್ಯಾಂಕ್ recovery ಜನಗಳಿಂದ ಒದೆ ತಿಂದ ನೆನಪಾಗಿ ಮುಖ ಕಪ್ಪಿಟ್ಟಿತ್ತು,ಆದರು ಮಾತು ಮುಂದುವರಿಸುತ್ತಾ..) ಅದೆಲ್ಲ ಸರಿ ಸ್ವಾಮೀ, ನೀವು ಪುಷ್ಪಕ ವಿಮಾನ ದಲ್ಲಿ ಯಾಕೆ ಬರಲಿಲ್ಲ..?

ಕುಬೇರ: ಅಯ್ಯೋ ಅದನ್ನು ಸಾಕೋದು ಕಷ್ಟ ಸ್ವಾಮೀ, ಈಗಿರೋ ಪೆಟ್ರೋಲ್ ದರದಲ್ಲಿ. ಸಾಲದು ಅಂತ ಪಾರ್ಕಿಂಗ್ ಸಮಸ್ಯೆ ಬೇರೆ.

ಸಂದರ್ಶಕ: ಓಹೋ ಪೆಟ್ರೋಲ್ ದರದ ಬಿಸಿ ದೇವಲೋಕಕ್ಕು ತಟ್ಟಿದೆ ಅ೦ದ ಹಾಗಾಯ್ತು.


ಕುಬೇರ: ನೀವು ಹೇಳೋದು ಸರೀನೆ. ಆದ್ರೆ ಅರಬ್ ಶೇಖ್ ಜನರು ನನ್ನಲ್ಲಿ ಸಾಲ ಪಡೆದಿರೊದರಿ೦ದ ಅವರಲ್ಲಿಗೆ ತಿ೦ಗಳ ವಸೂಲಿಗೆ ಹೋದಾಗ ಟ್ಯಾಂಕ್ ಬರ್ತಿ ಮಾಡಿಸಿಕೊ೦ಡು ಬರ್ತೀನಿ ಹಣ ಕೊಡದೆ!!!!!! ಆದರು ಅದರ ನಿರ್ವಹಣೆ ತು೦ಬಾ ಕಿರಿಕಿರಿ ಆಗಿರೋದರಿ೦ದ ಅದನ್ನು ಏರ್ ಇಂಡಿಯಾ ಗೆ ವಹಿಸಿಕೊಟ್ಟಿದ್ದೇನೆ. ತಿ೦ಗಳಿಗೆ ಇ೦ತಿಷ್ಟು ಅ೦ತ ಕೊಡ್ತಾರೆ.

ಸಂದರ್ಶಕ: ಏರ್ ಇಂಡಿಯಾ ಗೆ ಯಾಕೆ ಕೊಟ್ರಿ ಸ್ವಾಮೀ. ಅದು ನಷ್ಟದಲ್ಲಿದೆ ಅನ್ನೋ ವಿಷಯ ನಿಮಗೆ ತಿಳಿದಿಲ್ಲವೇ?

ಕುಬೇರ: ನಷ್ಟದಲ್ಲಿರಲಿ ಅಥವಾ ಲಾಭದಲ್ಲಿರಲಿ ಸರಕಾರೀ ಸಂಸ್ಥೆ ಅ೦ದ್ರೆ ತಿ೦ಗಳಿಗೆ ಬರೋದು ಬರ್ತಾ ಇರತ್ತೆ. ನಿಮ್ಮ ವಿಮಾನಕ್ಕೆ ಟೇಕ್ ಆಫ್ ಆಗೋ ಯೋಗ್ಯತೆ ಇಲ್ಲದಿದ್ರು no problem!!!!!!!!!!!

ಸಂದರ್ಶಕ: ಲೆಕ್ಕ ಪತ್ರ ಗಳನ್ನೆಲ್ಲ ನೀವೇ maintain ಮಾಡ್ತೀರೋ ಅಥವಾ ಯಾರಾದರು ಸಹಾಯಕರುಗಳನ್ನು ಕೆಲಸಕ್ಕೆ ಇಟ್ಕೊಂಡಿದೀರ?ಕುಬೇರ: ಒಬ್ಬನೇ ಎಲ್ಲ ನಿಭಾಯಿಸೋದು ಕಷ್ಟ ಅದಕ್ಕೆ ಸ್ವಲ್ಪ ಸಹಾಯಕರುಗಳಿದ್ದಾರೆ..ಎಲ್ಲ contract labours. ಯಾಕೆ ಅ೦ದ್ರೆ ನಮ್ಮ ಈ ಬಡ್ಡಿ ವ್ಯವಹಾರದಲ್ಲಿ ಏರು ಪೇರುಗಳು ಜಾಸ್ತಿ. ಅದಲ್ಲದೆ permanent ಕೆಲಸಕ್ಕೆ ಇಟ್ಟುಕೊ೦ಡರೆ ಅವರಿ೦ದ ಕೆಲಸ ತಗೋಳೋದು ಕಷ್ಟ, ಅವರನ್ನು ಕೆಲಸದಿ೦ದ ತೆಗೆಯೋದು ಕಷ್ಟಾನೆ....


ಸಂದರ್ಶಕ: ಮತ್ತೆ ಹೇಗಿದೆ ಸ್ವಾಮೀ ತಮ್ಮ ವ್ಯವಹಾರ..?

ಕುಬೇರ : ನಮ್ಮ ವ್ಯವಹಾರಕ್ಕೂ recesion ಬಂದಿದೆ. ನಮ್ಮ ದೇವಲೋಕದಲ್ಲಿ ಆಗಾಗ ಧಾನವರು attack ಮಾಡ್ತಾರೆ ಅಂತ ಇರೋ ಬರೋ ಸಂಪತ್ತೆಲ್ಲವನ್ನೂ ಭೂಲೋಕದಲ್ಲಿರೋ ದೇವಸ್ಥಾನಗಳಲ್ಲಿ ಇಟ್ಟರೆ ನೀವು ಅಲ್ಲಿನೂ ಬಿಟ್ಟಿಲ್ಲ. ಆ ಬ್ರಿಟಿಷರ ಕೈಗೂ ಸಿಕ್ಕದ್ದನ್ನು ಈಗ ಕೇರಳದಲ್ಲಿ ಅಗೆದು ತೆಗೆದು ಬಿಟ್ಟಿರಿ...

ಸಂದರ್ಶಕ: ಅಂದ್ರೆ ಆ ದೇವಾಲಯದಲ್ಲಿ ಸಿಕ್ಕಿದ ಸ೦ಪತ್ತು ತಮಗೆ ಸೇರಿದ್ದೋ..? ಆದರೆ ಅದನ್ನು ನಿಮ್ಮ ದೇವಲೋಕದಲ್ಲೇ ಇಡಬಹುದಾಗಿತ್ತಲ್ಲವೇ?

ಕುಬೇರ: ದೇವಲೋಕದಲ್ಲಿ ಆ ಇಂದ್ರ ಸುಮ್ಮನಿರದೆ ಪದೇ ಪದೇ ಅಸುರರ ಜೊತೆ ಯುದ್ದಕ್ಕಿಳಿಯುತ್ತಾನೆ. ಅವರೋ ಪಕ್ಕ ನಾನ್ ವೆಜ್ ತಿನ್ನೋ ಜನ, ಸುಮ್ನೆ ಬಿಡ್ತಾರ? ಯುದ್ದ ಮಾಡಿ ಇರೋ ಬರೋ ಸ೦ಪತ್ತೆಲ್ಲ ಕೊಳ್ಳೆ ಹೊಡ್ಕೊಂಡು ಹೋಗ್ತಾರೆ. ಅದಕ್ಕೆ ನಿಮ್ಮ ಭೂಲೋಕವೇ ಸೇಫ್ ಅಂತ ದೇವಸ್ತಾನದಲ್ಲಿ ಇಟ್ಟಿದ್ವಿ. ಆದರೆ ಈಗ ನೀವು ಅದನ್ನೂ ಅಗೆದು ತೆಗೆದಿರಿ. ಅಂದ ಹಾಗೆ ನನಗೆ ಅರ್ಜೆಂಟ್ ತಿರುಪತಿ ಗೆ ಹೋಗಬೇಕು, ಆ ತಿಮ್ಮಪ್ಪನ ECS ಬೌನ್ಸ್ ಆಗಿದೆ. ಅದೇನೋ ಎಲ್ಲ ಜನ ತಿರುಪತಿ ಬದಲಿಗೆ ತಿರುವನಂತಪುರಮ್ ಗೆ ಹೋಗ್ತಾ ಇರೋದರಿಂದ ಅಲ್ಲಿ ಬಿಸಿನೆಸ್ ಫುಲ್ ಡಲ್ ಆಗಿದೆಯಂತೆ. ವಿಚಾರಿಸಿಕೊಂಡು ಬರ್ತೀನಿ. ಸಂದರ್ಶನ ಆಮೇಲೆ ಮುಂದುವರಿಸೋಣ...

ಸಂದರ್ಶಕ: ಸರ್ ಕಟ್ಟ ಕಡೆಯದಾಗಿ ಒಂದು ಪ್ರಶ್ನೆ. ಇನ್ನು ಮುಂದೆ ನಿಮ್ಮ ಸಂಪತ್ತೆಲ್ಲವನ್ನೂ ಎಲ್ಲಿಡಬೇಕು ಅಂತ ಯೋಚನೆ ಮಾಡಿದ್ದೀರಾ?


ಕುಬೇರ: ಇನ್ನು ನಮ್ಮ ಸಂಪತ್ತನ್ನೆಲ್ಲ ಪಾಕಿಸ್ತಾನದ ಉಗ್ರರನ್ನು ಸೆರೆ ಹಿಡಿದು ಯಾವ ಜೈಲಿನಲ್ಲಿಡುತ್ತೀರೋ ಆ ಜೈಲಿನ ನೆಲಮಹಡಿಯಲ್ಲಿ ಇಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ. ಯಾಕಂದ್ರೆ ಅವರಿಗೆ ನೀವು ಕೊಡೋವಷ್ಟು ಸೆಕ್ಯೂರಿಟಿ ನಿಮ್ಮ ಪ್ರದಾನಿಗೂ ಕೊಡಲ್ಲ ಅನ್ನಿಸತ್ತೆ. ಅಂದ್ರೆ ನಮ್ಮ ಸಂಪತ್ತಿಗೆ ಭದ್ರತೆ ಜೊತೆಗೆ ನೆಮ್ಮದಿ.

ಸಂದರ್ಶಕ: ನೀವು ಇಲ್ಲಿ ಬಂದು ನಮ್ಮ ಜೊತೆ ಮಾತನಾಡಿದ್ದಕ್ಕೆ ಧನ್ಯವಾದಗಳು...

ಕುಬೇರ: ನಿಮಗೂ ದನ್ಯವಾದಗಳು....

--------------------ಶ್ರೀ:-)