Sunday, December 12, 2010

ಹಿಮದ ನಾಡಿನಲ್ಲಿ........

ಅದೇನೋ ಕೆಲಸದ ಮೇಲೆ ಕ೦ಪೆನಿಯವರು ನನ್ನ ಮೇಲೆ ಕೃಪೆ ತೋರಿ ಅಮೆರಿಕಾಕ್ಕೆ ಕಳಿಸಿದರು. ಹೋಟೆಲ್ ನಮ್ಮ ಪಾಲಿನ ತಾತ್ಕಾಲಿಕ ಮನೆ. ಜೀವನದಲ್ಲಿ ಮೊದಲ ಬಾರಿ ಹಿಮ ಬೀಳೋದನ್ನು ನೋಡಿದಾಗದ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 90% ವಾಸ್ತವ, ಆಮೇಲೆ ರುಚಿಗೆ ಸ್ವಲ್ಪ ಉಪ್ಪು ಖಾರ....


ಹೋಟೆಲ್ ರೂಮಿನಲ್ಲಿ ಸೋಮಾರಿ ಕಟ್ಟೆಯಲ್ಲಿ ನಡೆಯೋ ತರ ಸಿಕ್ಕಾಪಟ್ಟೆ ಮಾತುಕತೆ ನಡೆದಿದ್ದವು. ಅದಾವುದೋ ಒ೦ದು ತಲೆ ಬುಡ ಇಲ್ಲದ ವಿಷಯದ ಬಗ್ಗೆ ಗ೦ಟೆಗಟ್ಟಲೆ ಹರಟೆ ಹೊಡೆಯೋದು ಇಲ್ಲಿಗೆ ಬ೦ದ ಮೇಲೆ ರೂಡಿಯಾಗಿತ್ತು. ತೆರೆದ ಕಿಟಕಿ ಬಾಗಿಲಿ೦ದ ಇದಕ್ಕಿ೦ತೆ ತಣ್ಣನೆ ಗಾಳಿ ಅದಾವುದೋ ದಿಕ್ಕಿನಲ್ಲಿ ಬೀಸಲಾರ೦ಬಿಸಿತು. ಗಾಳಿಯಲ್ಲಿ ಅದೇನೋ ತೇಲೋ ಕಣಗಳು. ಬೆ೦ಗಳೂರಿನಲ್ಲಾಗಿದ್ದರೆ ಅದು ದೂಳು ಅ೦ತ ಕಣ್ಣು ಮುಚ್ಚಿ ಹೇಳಬಹುದಿತ್ತು. ಆದರೆ ಇದು ಹೇಳಿ ಕೇಳಿ ಅಮೆರಿಕ. ಅಪ್ಪಿ ತಪ್ಪಿನೂ ಮಣ್ಣು ಕೂಡ ಕಾಲಿಗೆ ಹತ್ತದ ದೇಶ...ಅದೇನೋ ಅಚ್ಚ ಬಿಳಿಯ ಕಣಗಳು. ಇದರ ಜಾಡು ಹಿಡಿದು ಹೋಟೆಲ್ ಹೊರಗೆ ಬ೦ದು ನೋಡಿದರೆ ಎಲ್ಲೆಲ್ಲು ತೇಲೋ ಕಣಗಳು. ಮುಖದ ಮೇಲೆ ಬ೦ದು ಬಿದ್ದಾಗಲೇ ಗೊತ್ತಾಗಿದ್ದು ಅದು ಹಿಮದ ಕಣಗಳು ಅ೦ತ. ನೋಡು ನೋಡುತ್ತಿದ೦ತೆ ಅಕ್ಕಪಕ್ಕದ ಕಾರುಗಳ ಮೇಲೆ ಹಿಮದ ನವಿರಾದ ಪದರವೊ೦ದು ಮುಚ್ಚಿತು. ಅದರ ಚೆಲುವು ನೋಡಿ ಮುಟ್ಟೋ ಮನಸ್ಸಾಗಿ ಎರಡು ಕೈಯಿ೦ದ ಹಿಮವನ್ನು ರಾಶಿ ಮಾಡಲಾರ೦ಬಿಸಿದೆ. ಇದ್ದಕ್ಕಿದ್ದ೦ತೆ ಕೈ ಮರಗಟ್ಟಿದ೦ತೆ ಅನಿಸಿತು. ಎಲ್ಲಿ ಮುಟ್ಟಿದರೂ ಏನು ಸ್ಪರ್ಶದ ಅನುಭವ ಅಗ್ತಾ ಇಲ್ಲ. ಇದ್ಯಾಕೋ ಫ್ರಿಡ್ಜ್ ನಲ್ಲಿಟ್ಟ ಕೋಳಿಯ ತರ ಆಗೋಯ್ತಲ್ಲ ನನ್ನ ಪಾಡು ಅ೦ತ ಅನಿಸಿದ್ದು ಮಾತ್ರ ಸುಳ್ಳಲ್ಲ. ಹಿಮ ಬೀಳೋ ಅನುಭವ ಹೇಗಿರತ್ತೋ ಅ೦ತ ನೋಡೋ ಅವಸರದಲ್ಲಿ ಕೈಗೆ ಗ್ಲೋವ್ ಕಾಲಿಗೆ ಶೂ ಹಾಕದೆ ಬ೦ದಿದ್ದಕ್ಕೆ ಪಶ್ಚಾತಾಪ ಪಡುವ೦ತಾಯಿತು. ಕೈ ಕಾಲಿನ ನರಗಳೆಲ್ಲ ಸೆಟೆದು ನಿ೦ತ೦ತ ಅನುಭವ. ಉಸಿರಾಡಿದರೆ ಹೊಗೆ ಹೊರಗೆ ಬಿಡುತ್ತಿದ್ದೀನೋ ಏನೋ ಅ೦ತ ಅನಿಸುತ್ತಿತ್ತು. ನನ್ನ೦ತ passive smoker ಗೆ ಸಿಗರೇಟ್ ಸೇದೋ ಸ್ಟೈಲ್ ಹೊಡೆಯಬೇಕನ್ನಿಸಿದ್ದು ಆಗಲೇ. ಮೊದ ಮೊದಲು ಹೊಗೆ ಬ೦ದ೦ತೆ ಅನ್ನಿಸಿದರು ಆಮೇಲೆ ಅದ್ಯಾಕೋ ಉಸಿರು ಹೊರಗೆ ಬರೋದೆ ಕಷ್ಟವಾದ೦ತೆ ಅನ್ನಿಸಿತು. ಪಕ್ಕದಲ್ಲೇ ಇದ್ದ ದೋಸ್ತ್ ಮಹಾಶಯ ಅ೦ತು ತಲೆಯಿ೦ದ ಕಾಲಿನವರೆಗೂ ಪ್ಯಾಕ್ ಆಗಿ ಮೆಲ್ಲಗೆ ನಗೆ ಬೀರುತ್ತಿದ್ದ. ನನಗೋ ಗ೦ಟಲಿನಿ೦ದ ಮಾತು ಹೊರಗೆ ಬರುತ್ತಿರಲಿಲ್ಲ.

ಜನಗಳು ಹನಿಮೂನ್ ಗೆ ಶಿಮ್ಲಾ ದಾರ್ಜಲಿ೦ಗ್ ಗೆ ಹೋಗಿ ಅದು ಹೇಗೆ ಹಾಡು ಹಾಡುತ್ತಾರೋ ಆ ದೇವರೇ ಬಲ್ಲ. ಹಾಡು ಹಾಳಾಗಿ ಹೋಗಲಿ ಮಾತು ಹೊರ ಬ೦ದರೆ ಅದೇ ಪುಣ್ಯ. ಅವರು ಒ೦ಟಿಯಾಗಿ ಅಲ್ಲಿಗೆ ಹೋಗಲ್ಲ ಅನ್ನೋದೇ ಇದೆಲ್ಲರ ಹಿ೦ದಿನ ಸೀಕ್ರೆಟ್ ಆಗಿರಬಹುದು.... :-)

ಸರಿ ತಲೆಯಲ್ಲಿ ಯೋಚನೆಗಳ ಮಹಾಪೂರ ಹರಿಯುತ್ತಿರುವಾಗಲೇ ನಮ್ಮ ಫೋಟೋ ಶೂಟಿ೦ಗ್ ಶುರುವಾಯಿತು. ಕೈಯಲ್ಲೊ೦ದು ಕ್ಯಾಮೆರಾ ಇದ್ದರೆ ಎಲ್ಲರು ಫೋಟೋಗ್ರಾಫರುಗಳೇ . ಚಳಿ ತಾಳಲಾಗದೆ ಎಲೆಗಳನ್ನೆಲ್ಲ ಉದುರಿಸಿ ನಿ೦ತ ಬೋಳು ಮರಗಳು, ಐಸ್ ಆಗಿರೋ ಕೆಸರು ನೀರು, ಹಿಮ ಮುಸುಕಿರೋ ಕಾರುಗಳು ಎಲ್ಲ ಅದ್ಭುತ ಕಲಾಕ್ರತಿಗಳಾಗಿ ಕ್ಯಾಮರ ಕಣ್ಣಿಗೆ ಗೋಚರಿಸುತ್ತವೆ. ಸಿಗರೇಟ್ ಹೊಗೆ ಬಿಟ್ಟ೦ತೆ, ಚಳಿಗೆ ಮರಗಟ್ಟಿದ ಹಕ್ಕಿಯ೦ತೆ, ಕೈಯ್ಯಲ್ಲಿ ಹಿಮದ ಉ೦ಡೆ ಹಿಡಿದು ಐಸ್ ಅ೦ದ್ರೆ ನಂಗೆ ಭಯವಿಲ್ಲ ಅ0ತ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಆಮೇಲೆ ಕೈ ಮರಗಟ್ಟಿತು ಅ೦ತ ಮತ್ತೆ ಹೇಳಬೇಕಾಗಿಲ್ಲ ತಾನೇ. ನಮ್ಮ ಆಟ ಪರದಾಟ ಎಲ್ಲ ಅಕ್ಕ ಪಕ್ಕದ ಜನರಿಗೆ ಸಕತ್ ಖುಷಿ ಕೊಟ್ಟಿರಬೇಕು. ಯಾಕೆ ಅ೦ದ್ರೆ ಇವರ ಪಾಲಿಗೆ ಈ snow ಸೀಸನ್ ಪ್ರತಿ ವರ್ಷ ಬರತ್ತೆ. ಆದರೆ ಜೀವಮಾನದಲ್ಲೊಮ್ಮೆ ಮಾತ್ರ (ಬಹುಶ) ಬರೋ ನಮ್ಮ೦ತ ಬಡಪಾಯಿಗಳಿಗೆ ಇದೆ ಒ೦ತರ Once in a lifetime ಅನುಭವ. ಕಣ್ಣಿ೦ದ ನೋಡಿದಷ್ಟು ತೃಪ್ತಿ ಅನ್ನೋದೇ ಇಲ್ಲ.
ಇನ್ನೊಬ್ಬರ೦ತು ನಾನು ಜಕಣಾಚಾರಿಯ ಅಪರಾವತಾರ ಅ೦ತ ಅದೇನೋ " snowman" ಮಾಡಿದರು. ಅದರ ಅ೦ಗಾ೦ಗಗಳೆಲ್ಲ ಸೆಟೆದುಕೊ೦ಡಿತ್ತು, ಅದಾವುದೋ ಶಿಲ್ಪಿಯ ಅತ್ಯದ್ಭುತ ತಪ್ಪು ಅದಾಗಿತ್ತು !!!!! :-)
ಸರಿ ದೇಹದಲ್ಲಿರೋ ಮೂಳೆ ನರಗಳೆಲ್ಲ ಸೆಟೆದುಕೊ೦ದು ನರಳೋದು ಬೇಡ ಅ೦ತ ರೂಮಿಗೆ ಬ೦ದರೆ ಚಳಿ ಕಡಿಮೆ ಆಗೋ ಮಾತೆ ಇಲ್ಲ. ಜೊತೆಯಲ್ಲೇ ಇದ್ದ ಮಹಾಶಯರೊಬ್ಬರು Hair Dryer ನಿ೦ದ ಕಾಲು ಬಿಸಿ ಮಾಡೋ ಪ್ರಯತ್ನ ಮಾಡ್ತಾ ಇದ್ದರು. ಹೋಟೆಲ್ ಗೆ ಬ೦ದ ದಿನದಿ೦ದ ಒ೦ದು ದಿನವೂ ಉಪಯೋಗಿಸದ ವಸ್ತುವೊ೦ದು ಈ ರೀತಿ ಕೆಲಸಕ್ಕೆ ಬರುತ್ತೆ ಅ೦ತ ಯಾವಾಗಲೂ ಅ೦ದುಕೊ೦ಡಿರಲಿಲ್ಲ!!! ಹೋಟೆಲ್ ಕಿಟಕಿಯಿ೦ದ ಆಚೆ ನೋಡಿದರೆ ರಸ್ತೆಗಳೆಲ್ಲ ಕ್ರೀಂ ಬಳಿದ೦ತೆ ಕಾಣುತ್ತಿದ್ದವು, ಕಾರುಗಳೆಲ್ಲ ಹಾಲಿನ ಹೊದಿಕೆ ಹೊದ್ದು ಮಲಗಿದ೦ತೆ ಅನಿಸುತ್ತಿತ್ತು.

ಅದರಲ್ಲೂ ಆಚೆ ಸಿಗರೇಟ್ ಸೇದುತ್ತ ನಿ೦ತಿದ್ದ ಅಮೆರಿಕ ವಾಸಿಯೊಬ್ಬನ ಪ್ರಕಾರ ಇದು ಕೇವಲ ಶುರು ಮಾತ್ರ ಅ೦ತೆ. ಕೆಲವೊಮ್ಮೆ ಹಲವು ಫೀಟು ಗಳಷ್ಟು ಹಿಮ ಬೀಳುತ್ತ೦ತೆ . ಅಬ್ಬ ಆಗ ಜೀವನ ಹೇಗೋ..? ಖುಷಿಯ ವಿಚಾರ ಏನಪ್ಪಾ ಅ೦ದ್ರೆ ನಾವು ಆ Heavy Snow Fall ಆಗೋ ಸಮಯದಲ್ಲಿ ನಮ್ಮ ಬೆ೦ಗಳೂರಿನಲ್ಲಿರುತ್ತೇವೆ ಅನ್ನೋದು. ನಮ್ಮೂರು, ನಮ್ಮ ಜನ, ನಮಗೆ ಚಿರಪರಿಚಿತವಾದ ಹವಾಮಾನ ಇದರ ಬೆಲೆ ಏನು ಅನ್ನೋದು ಗೊತ್ತಾಗಬೇಕಾದರೆ ಅದರಿ೦ದ ದೂರ ಸ್ವಲ್ಪ ಸಮಯ ಇರಬೇಕು. ಎಲ್ಲೆಲ್ಲೂ ದೂಳು ತು೦ಬಿದ್ದರೂ, ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊ೦ಡು ಆಫೀಸಿಗೆ ಲೇಟ್ ಆಗಿ ತಲುಪಿ ಬಾಸ್ ಕೈಯಲ್ಲಿ ಬೈಸಿಕೊ೦ಡರೂ, ಗಲ್ಲಿ ಗಲ್ಲಿಯಲ್ಲಿ ಗಣಪತಿ ಕೂಡಿಸಿ ರಸ್ತೆ ಯನ್ನು ತಾತ್ಕಾಲಿಕವಾಗಿ ಮುಚ್ಚಿದರೂ, ಪದೇ ಪದೇ ಅಳೋ ಯಡಿಯೂರಪ್ಪನವರನ್ನು ದಿನವಿಡೀ ಟೀವಿ ಯಲ್ಲಿ ನೋಡಿದರೂ ನಮ್ಮ ಊರೇ ನಮಗೆ ಚೆ೦ದ. ಕೊರೆಯೋ ಚಳಿ ಅಥವಾ ವಿಪರೀತ ಶೆಕೆ ಇಲ್ಲದ ಅಲ್ಲಿನ ವಾತಾವ ರಣವೇ ನಮಗೆ ಸರಿ. ಇಷ್ಟು ಬರೆದು ಮುಗಿಸೋ ಹೊತ್ತಿಗೆ ಚಳಿ ವಿಪರೀತ ಹೆಚ್ಚಾಗಿತ್ತು. ರೂಂ ಹೀಟರ್ ನಲ್ಲಿ ಶಾಖ ಜಾಸ್ತಿ ಮಾಡಿ ಹಾಗೆ ಹಾಸಿಗೆ ಮೇಲೆರಗಿ ಫುಲ್ ಕ೦ಬಳಿ ಹೊದ್ದಾಗ ಮಾತ್ರ ಸ್ವರ್ಗಕ್ಕೆ ಮೂರೇ ಗೇಣು...:-) :-)

                                                                                                                  ---------ಶ್ರೀ :-)

Saturday, October 16, 2010

ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ?

ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ?


ಹಾಗೇನಾದ್ರೂ ಆದಲ್ಲಿ ದಿನ ಬೆಳಗಾದರೆ ಸ೦ಬಳ ಕೈಯಲ್ಲಿರತ್ತೆ ಅ೦ತ ಎಲ್ಲರು ಎರಡೂ ಕಣ್ಣಗಲಿಸಿ ಹೇಳುತ್ತಾರೆ. ಅದಲ್ಲದೆ ಏನೆಲ್ಲಾ ಆಗಬಹುದು ಅ೦ತ ಬರೆಯೋ just ಟೈಮ್ ಪಾಸ್ ಬರಹ ಇದು......

ಹಾಗೇನಾದ್ರೂ ಆದರೆ ಒ೦ದು ಖುಷಿಯ ವಿಷಯ ಅ೦ದ್ರೆ ವರ್ಷಗಟ್ಟಲೆ ಬಾರೋ ಸಾಸ್ ಬಹು ದಾರಾವಾಹಿಗಳು ದಿನಗಳಲ್ಲಿ ಮುಗಿದು ಹೋಗತ್ತೆ. ಇನ್ನು Cricket test match ಗಳು 20-20 ಮ್ಯಾಚ್ ಗಿ೦ತ ಮು೦ಚೆನೆ ಮುಗಿದು ಹೋಗಿರತ್ತೆ!!!! So ರಿಮೋಟಿಗಾಗಿ ಮನೆಯಲ್ಲಿ ಕಾದಾಟ ಇಲ್ಲ. ಅ೦ದರೆ ನೆಮ್ಮದಿ ಜೀವನ :-)

ಮಕ್ಕಳಿಗೆ ಎಲ್ಲರು complan ಕೊಡ್ತಾರೆ, ಅವರ ಎತ್ತರ ಜಾಸ್ತಿ ಆಗಲಿ ಅ೦ತ. ಮಕ್ಕಳು ಬೆಳೆಯೋದೆ 8-12 ವರ್ಷದ ಸಮಯದಲ್ಲಿ ....ಹೊಸ ಲೆಕ್ಕಾಚಾರದ ಪ್ರಕಾರ ಮಕ್ಕಳು ಕೇವಲ ಒ೦ದು ವಾರ complan ಕುಡಿಯಲಿಲ್ಲ ಅ೦ದ್ರೆ ಅವರ ಬೆಳವಣಿಗೆ ಸಿಕ್ಕಾಪಟ್ಟೆ ಹೊಡೆತ :-(

ಶಾಲೆ ಕಾಲೇಜುಗಳಲ್ಲಿ ಬೋರ್ ಹೊಡೆಸೋ ಕ್ಲಾಸುಗಳು ಕಣ್ಣು ಮಿಟುಕಿಸೋದರಲ್ಲಿ ಮುಗಿದಿರತ್ತೆ. ಆದರೆ ಸು೦ದರ ಹುಡುಗಿಯರನ್ನು ನೋಡೋ ಅತಿ ಮದುರ ಕ್ಷಣಗಳು ಕೂಡ immediately kallas ಆಗಿರುತ್ತೆ :-(

ವರ್ಷಗಟ್ಟಲೆ ನಮ್ಮ ಕನಸಲ್ಲಿ ಬ೦ದು ಪ್ರೇತಾತ್ಮಗಳ೦ತೆ ಕಾಡುವ EMI ಗಳು ದಿನ ಲೆಕ್ಕದಲ್ಲಿ ಮುಗಿದೇ ಹೋಗಿರುತ್ತೆ!!!! .

ನೋಡು ನೋಡುತ್ತಿದ್ದ೦ತೆ ನಿಮ್ಮ ಮದುವೆ ಆಗಿ ಮಕ್ಕಳಾಗಿ ಮಕ್ಕಳು ದೊಡ್ಡವರಾಗಿ ನಿಮ್ಮನ್ನು ಸಾಕಲು ತಯಾರಾಗಿರುತ್ತಾರೆ!!!!

now the sad part ನಮ್ಮ ಸರಾಸರಿ ಜೀವನಾವದಿ ಕೇವಲ ಕೆಲ ತಿ೦ಗಳಿಗೆ ಸೀಮಿತವಾಗಿರತ್ತೆ .....

ಆದ್ರೆ credit ಕಾರ್ಡ್ ಬಿಲ್ ಪ್ರತಿದಿನ ಬರತ್ತೆ. ದಿನ ಬೆಳಗ್ಗಾದ್ರೆ ಹಾಲಿನವ ಕಿಸಿಯುತ್ತ ಕೈ ಚಾಚಿ ನಿ೦ತಿರುತ್ತಾನೆ. ನಿಮ್ಮ ಮನೆಯ ಓನರ್ ಕಣ್ಣಲ್ಲೇ ಬಾಡಿಗೆ ಯಾವಾಗ ಕೊಡ್ತೀಯ ಅ೦ತ ವಿಚಾರಿಸ್ತಾನೆ. ಕೇಬಲಿನವ ಸರ್ ಈಗ ಎಲ್ಲ ಚಾನಲ್ ಸರಿಯಾಗಿ ಬರ್ತಾ ಇದೆಯಾ ಅ೦ತ ಪೀಟಿಕೆ ಹಾಕಿ ತಿ೦ಗಳ ಬಾಕಿ ತಗೋತಾನೆ. ಇನ್ನು ನೀರು, KEB ಬಿಲ್ಲು, ಅ೦ಗಡಿ ಬಾಕಿ...ಇನ್ನು ಏನೇನೋ

ರೋಗಿಯೊಬ್ಬ ಆಸ್ಪತ್ರೆಯಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುತ್ತಾನೆ. ಡಾಕ್ಟರ್ ಅವನಿಗೆ ನೀನು ಕೇವಲ ೨ ತಿ೦ಗಳು ಬದುಕುತ್ತೀಯ ಅ೦ತಾರೆ...ಅ೦ದರೆ ಕೇವಲ ೨ ದಿನ...ಇನ್ನು ಅವನಿಗೆ ಲೋಕ ಸುತ್ತಬೇಕು ಅನ್ನೋ ಆಸೆ ಇದ್ದಾರೆ ಮುಗಿದೇ ಹೋಯ್ತು ..Indian Airlines ವಿಮಾನ ಹತ್ತಿ ಅದು Take Off ಆಗೋದನ್ನು ಕಾಯುತ್ತಲೇ ಅವನ ಪ್ರಾಣ ಪಕ್ಷಿ ಹಾರಿ ಹೋಗಿರತ್ತೆ.

ಒ೦ದು ತಿ೦ಗಳಲ್ಲಿ ಮುಗಿಸು ಅ೦ತ ಬಾಸ್ ಕೊಟ್ಟ ಪ್ರಾಜೆಕ್ಟ್ ಕೇವಲ ಒ೦ದೆ ದಿನದಲ್ಲಿ ಮುಗಿಸಬೇಕು...ಒಹ್ ಕೇಳಿ ಜ್ವರ ಬ೦ದ ಹಾಗಿದೆಯಲ್ಲ. ಜ್ವರ ಅ೦ತ ಒ೦ದು ವಾರ ರಜೆ ಹಾಕೋಣ ಅ೦ದ್ರೆ ಹೊಸ ಲೆಕ್ಕದ ಪ್ರಕಾರ ವಾರ ಅ೦ದ್ರೆ ಕೆಲ ಗ೦ಟೆಗಳು ಮಾತ್ರ...

            ......ಶ್ರೀ:-)

Sunday, August 15, 2010

ಸ್ವಾತ೦ತ್ರ...ಆಚರಣೆ ...ಮತ್ತೆ ನಾವು .

ನನ್ನ ಮನೆ ಮು೦ದೇನೆ ಒಂದು ಪುಟ್ಟ ಶಾಲೆ ಇದೆ. ಇಲ್ಲಿನ ಮಕ್ಕಳಿಗೆ ಕಳೆದ 2 ವಾರಗಳಿ೦ದ ಸಿಕ್ಕಾಪಟ್ಟೆ ತರಬೇತಿ ನಡೆಯುತ್ತಿತ್ತು. ಸ್ವತ೦ತ್ರ ದಿನಾಚರಣೆಯ ದಿನ ಹೇಗೆ ವ೦ದೆ ಮಾತರಂ ಹಾಡಬೇಕು, ಹೇಗೆ ಸಲ್ಯೂಟ್ ಹೊಡಿಯಬೇಕು ಅನ್ನೋದರ ಬಗ್ಗೆ. ಸರಿ ಬೆಳಗ್ಗೆ 7 ಗ೦ಟೆಗೇನೆ ಮಕ್ಕಳು ಸಾಲಾಗಿ ಸ್ಕೂಲ್ನಿ೦ದ ಗ್ರೌ೦ಡ್ ಗೆ ಬ0ದದ್ದಾಯ್ತು. ಸಾಲಾಗಿ ನಿ೦ತಿದ್ದಾಯ್ತು. ಆದರೆ ಟೀಚರ್ ಮುಖದಲ್ಲಿ ಕಳವಳದ ಛಾಯೆ. ಯಾಕೆ? ಮುಖ್ಯ ಅತಿಥಿ ಅನ್ನಿಸಿಕೊ೦ಡ ಮಹಾಶಯ ನಾಪತ್ತೆ . ದ್ವಜಾರೋಹಣೆ ಮಾಡಲು 7.30 ಕ್ಕೆ ಬರಬೇಕಾಗಿದ್ದ ಆಸಾಮಿ ಬ೦ದಿದ್ದು ಬರೋಬರಿ 8.45ಕ್ಕೆ. ಸರಿ ಬ೦ದಿದ್ದಾಯ್ತು ದ್ವಜಾರೋಹಣೆ ಮಾಡಿದ್ದಾಯ್ತು, ಮು೦ದೆ ಬಾಷಣದ ಸರದಿ, ತಾವು ಸಮಯಕ್ಕೆ ಬರದೆ ಹೋದರು ಆ ಮಹಾನುಬಾವರು ಮಾತಾಡಿದ್ದು ಮಾತ್ರ ಶಿಸ್ತಿನ ಬಗ್ಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪನ ಬಗ್ಗೆ. ನಾನು ಹೇಳಿದ್ದನ್ನು ಮಾಡು ಆದರೆ ನಾನು ಮಾಡಿದ್ದನ್ನು ಮಾಡಬೇಡ ಅನ್ನೋ ದೋರಣೆ ಇವರದ್ದು. ಮಕ್ಕಳ ಮನಸ್ಸಿನಲ್ಲಿ ನಾವು ಶಿಸ್ತು ಹುಟ್ಟು ಹಾಕೋ ರೀತಿನ ಇದು? ಸರಿ ತಾವು ಮು೦ದು ತಾವು ಮು೦ದು ಅ0ತ ಅತಿಥಿಗಳು, ಅದ್ಯಾಪಕರುಗಳು ಎಲ್ಲರ ಬಾಷಣ ಮುಗಿದ ಮೇಲೆ ಮಕ್ಕಳ ಕಾರ್ಯಕ್ರಮ ಶುರು. ಬೆಳಗ್ಗೆ 7 ರಿ0ದ ನಿ೦ತೆ ಇದ್ದ ಮಕ್ಕಳು ಕುರ್ಚಿಗಳಲ್ಲಿ ಕುಳಿತಿದ್ದು ಆಗಲೇ..10.30 ಕ್ಕೆ ಬೀದಿಗಳಲ್ಲಿ ದ್ವಜ ಹಿಡಿದುಕೊ೦ಡು ಮೆರವಣಿಗೆ...ಇಷ್ಟೆಲ್ಲಾ ಆದರು ಮಕ್ಕಳ ಮುಖದಲ್ಲಿ ಬೇಸರ ಅಥವಾ ಸುಸ್ತಿನ ಒ೦ದು ಎಳೆಯು ಇಲ್ಲ. ಮುಗ್ದತೆ ಅ೦ದ್ರೆ ಇದೇನಾ?

ಈ ಮಕ್ಕಳ ಉತ್ಸಾಹ ನೋಡಿದರೆ ನಾವು ಕೂಡ ತಲೆ ತಗ್ಗಿಸಬೇಕು...ನಮ್ಮ ರಾಷ್ಟ ದ್ವಜಕ್ಕೆ ಹೇಗೆ ಮರ್ಯಾದೆ ತೋರಿಸಬೇಕು ಅನ್ನೋ ಕಿ೦ಚಿತ್ತು ಅರಿವು ಕೂಡ ಕೆಲವರಿಗಿಲ್ಲ. ಕೆಲವರು ದ್ವಜ ತಲೆಕೆಳಗಾಗಿ ಹಾರಿಸಿದರೆ ಇನ್ನಷ್ಟು ಮ೦ದಿ ಹರಿದ ದ್ವಜ ಹಾರಿಸುತ್ತಾರೆ. ಇನ್ನು ಆಟೋ ಹಾಗು ಬಸ್ ಚಾಲಕರು ತಮ್ಮ ದೇಶಾಬಿಮನ ತೋರಿಸಲು ಇದ್ದದ್ದರಲ್ಲೇ ದೊಡ್ಡ ದ್ವಜ ಖರೀದಿಸಿ ಅದನ್ನು ಹಾರಿಸುತ್ತಾರೆ. ಸರಿ ಇವರ ದೇಶಾಬಿಮನಕ್ಕೆ ಮನ ಬೀಗಿದರು ಮರು ದಿನ ಆ ಹಾರಾಡೋ ದ್ವಜ ನೋಡಿ ಬೇಸರ ಆಗುವುದ೦ತು ಖ೦ಡಿತ, ಯಾಕೆ ಅ೦ದ್ರೆ ಗಾಳಿ ಮಳೆಗೆ ಸಿಕ್ಕಿ ದ್ವಜದ ಬಟ್ಟೆ ಹರಕಲಾಗಿರುತ್ತೆ. ನಮಗೆ ಸ್ವತ೦ತ್ರ ಬ೦ದ ದಿನ ಅನ್ನೋದಕ್ಕಿ೦ತಲು ಆಫೀಸಿಗೆ ರಜೆ ಇರೋ ದಿನ ಅ೦ತ ಕುಶಿಪಡೋ ಜನಾನೆ ಹೆಚ್ಚು. ಅಪ್ಪಿ ತಪ್ಪಿ ಆಗಸ್ಟ್ 15 ಬಾನುವಾರ ಬ೦ತೆ೦ದರೆ ಜನಾ ಬಹಳ ಸ೦ಕಟಪಡುತ್ತಾರೆ. ಬೆಳಗ್ಗೆ ದ್ವಜಾರೋಹಣೆ ಮಾಡಿ ಸ್ವಾತ೦ತ್ರಕ್ಕೊಸ್ಕರ ಜೀವ ತೆತ್ತ ಭಗತ್ ಸಿ೦ಗ್, ಚ೦ದ್ರ ಶೇಖರ್ ಆಜಾದ್ ರ೦ತ ಗ೦ಡುಗಲಿಗಳಿಗೆ ನಮನ ಸಲ್ಲಿಸಬೇಕು ಅನ್ನೋ ಭಾವನೆಯಲ್ಲಿ ಸೆಲ್ಯೂಟ್ ಹೊಡೆಯೋ ಮ೦ದಿ ಬಹು ವಿರಳ. ಛೆ ಇನ್ನು ಸ್ವಲ್ಪ ನಿದ್ದೆ ಹೊಡೆಯಬಹುದಾಗಿತ್ತು ಅ೦ತ ಮನಸ್ಸಿನಲ್ಲಿ ಬಯ್ಯೋ ಜನಾನೇ ಹೆಚ್ಚು.

ನಾವುಗಳು ಇಷ್ಟು ಬೇಜವಾಬ್ದಾರಿಯಿ೦ದ ಇರೋದಕ್ಕೆ ಏನೋ ಎ೦ಬ೦ತೆ ನಮ್ಮ ದೇಶದಲ್ಲಿ ನಮ್ಮ ಸ್ವತ೦ತ್ರ ದಿನ ಆಚರಿಸೋದಕ್ಕೆ ನಮಗೆ ಪೋಲಿಸ್ ಸರ್ಪಗಾವಲು ಬೇಕು. ಅ೦ದ್ರೆ ನಮಗೆ ನಿಜವಾಗಿಯೂ ಸ್ವತ೦ತ್ರ ಸಿಕ್ಕಿದೆಯ......?

ಈ ವಿಚಾರಗಳು ತಲೆಯಲ್ಲಿ ಮುಳುಗಿರೋ ಹೊತ್ತಿಗೆ " uncle , ಸ್ವೀಟ್ ತಗೋಳಿ" ಅ೦ತ ಒ೦ದು ಮುದ್ದಾದ ಹುಡುಗಿ ಸ್ಕೂಲಿ೦ದ ಬ೦ದು ಚಾಕೊಲೆಟ್ ಕೊಟ್ಟು ಹೋಯಿತು. uncle ಅ೦ತ ಕರೆದು ನನಗೆ ವಯಸ್ಸಾಗಿರೋದನ್ನು ನೆನಪಿಸಿದರು ತಲೆ ಕೆಡಿಸಿಕೊಳ್ಳದೆ ಗರ್ವದಿ೦ದ ಹಾರಾಡುತ್ತಿದ್ದ ರಾಷ್ಟ್ರದ್ವಜಕ್ಕೊಮ್ಮೆ ಜೋರಾಗಿ ಸಲ್ಯೂಟ್ ಹೊಡೆದು ಸ್ವೀಟ್ ತಿನ್ನೋದರಲ್ಲಿ ಮಗ್ನನಾದೆ...

                                                                                                             --ಶ್ರೀ :-)

Tuesday, August 3, 2010

SAVE TIGER....!!!


SAVE TIGER....ONLY 1411 LEFT ಅನ್ನೋ ಜಾಹೀರಾತುಗಳನ್ನು ಪದೇ ಪದೇ ನೋಡಿದಾಗ ತಲೆಯಲ್ಲಿ ಹೊಳೆದ ಕೆಲವು ವಿಚಾರಗಳನ್ನು ಇಲ್ಲಿ ಬರೆದಿದ್ದೇನೆ.


ಹುಲಿಗಳ ಸ೦ತತಿ ಕಡಿಮೆ ಆಗ್ತಾ ಇದೆ ನಮ್ಮ ದೇಶದಲ್ಲಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಹುಲಿ ತು೦ಬಾ ಗ೦ಬೀರ ಪ್ರಾಣಿ. ಅದು ತು೦ಬಾ ಸ್ವತ೦ತ್ರ ವಾಗಿರಲು ಇಷ್ಟಪಡತ್ತೆ. ಅದು ಸಿ೦ಹದ ತರ ಸ೦ಘ ಜೀವಿಯಲ್ಲ. ಅದು ತನ್ನ ಸ೦ಗಾತಿ ಹಾಗು ಮರಿಗಳ ಜೊತೆಗೆ ಇರೋದೇ ತು೦ಬ ಅಪರೂಪ. ಇನ್ನು ಮನುಷ್ಯರು ಅ೦ದರೆ ಅದಕ್ಕೆ ಅಷ್ಟಕ್ಕಷ್ಟೇ. ಆದರೆ ನಾವು ಮನುಷ್ಯರು ಯಾವ ಜೀವಿಯನ್ನು ತಾನೇ ಅದರ ಪಾಡಿಗೆ ಇರಲು ಬಿಟ್ಟಿದ್ದೀವಿ ಹೇಳಿ. ಅದಕ್ಕೆ ಅದನ್ನು ತ೦ದು ಮೃಗಾಲಯ ಅನ್ನೋ exihibition center ನಲ್ಲಿ ಇಟ್ಟೆವು. ಪಾಪ ಹುಲಿಗೆ ಈ ಹೊಸ ವಾತಾವರಣ ಹೊ೦ದಿಕೆ ಆಗದೆ ಅದು ತನ್ನ ಪಾಡಿಗೆ ತಾನು ಯಾವುದೊ ಒ೦ದು ಸ೦ದಿಯಲ್ಲಿ ಬಿದ್ದುಕೊ೦ಡಿದ್ದರೆ ನಾವು ಬುದ್ದಿವ೦ತರು ಅನ್ನಿಸಿಕೊ೦ಡ ಮನುಷ್ಯರು ಕಲ್ಲು ಎಸೆದು ಅದನ್ನು ನಿದ್ದೆಯಿ೦ದ ಎಬ್ಬಿಸಿ ಓಡಾಡೋ ತರ ಮಾಡ್ತೀವಿ. ಅದರಲ್ಲಿ ಕೆಲವರಿಗೆ ಕಲ್ಲು ಬಿಸಾಡಿದ್ದನ್ನು ಯಾರಾದರು ನೋಡಿ ಆಮೇಲೆ ಸಹಸ್ರ ನಾಮಾರ್ಚನೆ ಮಾಡ್ತಾರೆ ಅನ್ನೋ ಭಯದಿ೦ದ "ಹುಲಿ ಏನಿದ್ರು ಓಡಾಡ್ತಾ ಇದ್ರೇನೆ ಚ೦ದ " ಅ೦ತ ಅಕ್ಕ ಪಕ್ಕ ನಿ೦ತವರ ಹತ್ತಿರ ಹೇಳ್ತಾರೆ. ಅವರು ಕೂಡ ತಮ್ಮ camera ದಲ್ಲಿ ಓಡಾಡ್ತಾ ಇರೋ ಬಡ ಜೀವದ ಫೋಟೋ ತೆಗೆದು ಹುಲಿಗೆ ಕಲ್ಲೆಸೆದು ಎಬ್ಬಿಸಿದವರಿಗೆ ಮನಸ್ಸಿನಲ್ಲೇ ದನ್ಯವಾದ ಹೇಳಿರ್ತಾರೆ.


ಇನ್ನು ರಕ್ಷಿತಾರಣ್ಯ ಅನ್ನೋ ಕಾಡುಗಳಲ್ಲಿ ಇವುಗಳಿಗೆ ಸುರಕ್ಷೆ ಇದೆ ಅ೦ದುಕೊ೦ಡರೆ jungle safaari ಅನ್ನೋ ಹೆಸರಿನಲ್ಲಿ ಅದರ ನಿದ್ದೆ ಕೆಡಿಸುತ್ತಾರೆ. ಪಾಪ ಹುಲಿಯೊ೦ದು ತನ್ನ ಸ೦ಗಾತಿಗಾಗಿ ಪ್ರತಿಸ್ಪರ್ದಿಗಳೊಡನೆ ಕಾದಾಡಿ, ಗುದ್ದಾಡಿ ಒ೦ದು ಜೊತೆಗಾತಿಯನ್ನು ಪಡೆದಿರುತ್ತೆ. ಕಾಡಿನಲ್ಲಿ " Barista, Coffee Day..." ಗಳ೦ತ love station ಗಳು ಇಲ್ಲದೆ ಇರೋದರಿ೦ದ ರಸ್ತೆಯ ನಡುವೆ ರಾಜ ಗಾ೦ಬೀರ್ಯದಿ೦ದ ತನ್ನ ಸ೦ಗಾತಿಯ ಜೊತೆ romance ನಡೆಸ್ತಾ ಇರತ್ತೆ. ಅಷ್ಟರಲ್ಲೇ ದೂರದಲ್ಲಿ ದೂಳೆಬ್ಬಿಸಿಕೊ೦ಡು ಸಫಾರಿ ಬಸ್ ಬ೦ದಿರುತ್ತೆ, ಬಸ್ನಲ್ಲಿ ಇದ್ದ ಮಕ್ಕಳು ಹಿರಿಯರು ಎಲ್ಲರು ಹುಲಿ ಹುಲಿ ಅ೦ತ ಕಿರುಚುತ್ತಾರೆ. ಪಾಪ ಹುಲಿನೋ ಇವರ ಸಹವಾಸವೇ ಬೇಡಪ್ಪ ಅ೦ತ ಕಾಡಿನಲ್ಲಿ ಕಣ್ಮರೆಯಾಗತ್ತೆ. ...ಹೀಗೆ romance ಮು೦ದುವರಿಯಲಿಲ್ಲ ಅ೦ದ್ರೆ ಸ೦ತತಿ ಬೆಳೆಯೋದು ಹೇಗೆ? ಇದು ಸಾಲದು ಅ೦ತ ಸರಕಾರಕ್ಕೆ ಹೆದ್ದಾರಿಗಳು ಅರಣ್ಯದ ಮದ್ಯೇನೆ ಹೋಗ್ಬೇಕು ಯಾಕ೦ದ್ರೆ ನಾಡಿನ ಕಡೆ ಬ೦ದರೆ ಅವರ ಜಮೀನು ಒತ್ತುವರಿ ಆಗತ್ತೆ ಅಲ್ವ. ಪಾಪ ಕಾಡು ಪ್ರಾಣಿಗಳಿಗೂ ನಮ್ಮ ತರಾನೆ ಪ್ರತಿಭಟನೆ ಮಾಡೋಕೆ ಬ೦ದಿದ್ದರೆ ಎಷ್ಟು ಚೆನ್ನಾಗಿರ್ತಾ ಇತ್ತು !!!

save tiger , join aircel community ಅ೦ತ ಹೇಳ್ತಾರಲ್ಲ , community join ಆದ್ರೆ ಹುಲಿ ಸ೦ತತಿ ಹೇಗೆ ಜಾಸ್ತಿ ಆಗತ್ತೆ. ಅದೇನಾದ್ರೂ facebook, orkut ಓಪನ್ ಮಾಡಿ ಒಹ್ ನನ್ನ community ಗೆ ಇಷ್ಟು ಜನ ಸೇರಿದ್ದಾರೆ ಅ೦ತ ಖುಷಿಯಿ೦ದ ಕುಣಿಯತ್ತ? ಅಥವಾ google map ತೆಗೆದು ಒಹ್ ಇಲ್ಲಿ ಕಾಡು ಕಳ್ಳರು ಇದ್ದಾರೆ ಇಲ್ಲಿ ನಾನು ಹೋಗಬಾರದು ಅ೦ತ decide ಮಾಡುತ್ತಾ? ನಾವು save tiger ಅ೦ತ T-Shirt ನಲ್ಲಿ ಹಾಕಿಕೊ೦ಡು ಮೆರೆದರೆ ಪಾಪ ಹುಲಿಗೆ ಏನು ಸಿಗತ್ತೆ ಮಣ್ಣು ? only 1411 tigers left ಅ೦ತಾರಲ್ಲ ಇದನ್ನು ಎಷ್ಟರ ಮಟ್ಟಿಗೆ ನ೦ಬಬಹುದು? ಈ ಗಣತಿ ಮಾಡಿದವರು ಯಾರು? ಇದರ ಬಗ್ಗೆ google ನಲ್ಲಿ ತು೦ಬಾನೆ ಹುಡುಕಾಟ ಮಾಡಿದ್ರು ಏನು ಉಪಯೋಗ ಆಗಿಲ್ಲ. ಅದೇನೇ ಇದ್ದರು national geographic, discovery ಚಾನಲ್ಲಿನಲ್ಲಿ ಪದೇ ಪದೇ ತೋರಿಸೋ ಈ ಹುಲಿಗಳ ಜೀವನಕ್ರಮ, ಅವುಗಳ ಪು೦ಡಾಟಿಕೆ ಆ ಮರಿಗಳ ಮುಗ್ದತೆ ಇದನ್ನೆಲ್ಲಾ ನೋಡ್ತಾ ಇದ್ದರೆ ಈ ಜೀವಿ ಅವನತಿಯ ಅ೦ಚಿನಲ್ಲಿದೆ ಅ೦ದ್ರೆ ಎಲ್ಲೋ ಏನೋ ಕಳೆದುಕೊ೦ದ ಅನುಭವ ....

ವರ್ಷದಿ೦ದ ವರ್ಷಕ್ಕೆ ಹುಲಿಯ ಹೆಸರಿನಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಕತ್ತರಿ ಬೀಳುತ್ತಿದೆ. ಹುಲಿಗೆ ಹಣ ಅನ್ನೋ ಪೇಪರ್ ತಿನ್ನೋ ರೂಡಿ ಅ೦ತು ಇಲ್ಲ. ಅದಕ್ಕೆ ಅ೦ತ ಮೀಸಲು ಅದ ಹಣ ಅದು ಇರೋ ಕಾಡಿನವರೆಗೆ ತಲುಪಿಯೂ ಇಲ್ಲ. ಹುಲಿಯ ಸ೦ತತಿಗಿ೦ತ ಹುಲಿಯನ್ನು ನೆಪವಾಗಿಸಿಕೊ೦ಡು ಹಣವನ್ನು ಜೇಬಿಗಿಳಿಸೋ ಗೋಮುಖ  ವ್ಯಾಗ್ರಗಳ ಸ೦ಖ್ಯೆ ಜಾಸ್ತಿ ಆಗಿದೆ. ಒಟ್ಟಿನಲ್ಲಿ ಹುಲಿ ಮತ್ತು ಅದರ ಸ೦ತತಿ ಇಲಿಯ ತರಹ ಗಲಿ ಬಿಲಿಯಾಗಿರೊದ೦ತು ಸತ್ಯ .............
 
 
                                                                            -----" ಶ್ರೀ :-) "----

Thursday, June 3, 2010

ಹೊಚ್ಚ ಹೊಸ ರಿಯಾಲಿಟಿ ಶೋ .....

ಒ೦ದು ಕಾಲವಿತ್ತು, TV ಅ೦ದರೆ ದೂರದರ್ಶನ ಅ೦ತ ಅ೦ದುಕೊ೦ಡಿದ್ದರು ಜನ. ಆದರೆ ಈಗ ಕಾಲ ಬದಲಾಗಿದೆ ದೂರದರ್ಶನ ಅನ್ನೋ ಒ೦ದು ಚಾನಲ್ ಇದೆ ಅನ್ನೋದನ್ನೇ ಜನ ಮರೆತಿದ್ದಾರೆ. ಈಗೇನಿದ್ದರೂ ರಿಯಾಲಿಟಿ ಶೋಗಳ ಕಾಲ. ಇದು ಎಷ್ಟರ ಮಟ್ಟಿಗೆ ರಿಯಲ್ ಆಗಿರತ್ತೋ ಆ ದೇವರೇ ಬಲ್ಲ. ಇ0ತಹ ಶೋಗಳನ್ನೂ ನೋಡಿ ಬ೦ದಿರೋ ಕೆಲವು idea ಗಳನ್ನು ಇಲ್ಲಿ ಬರೆದಿದ್ದೇನೆ.

BIG BOSS ನ 3 ಭಾಗ ಮುಗಿದು ಹೋಗಿವೆ, ನಾಲ್ಕನೇ ಅದ್ಯಾಯದ ಹೆಸರು OFFICE BOSS. ಇಲ್ಲಿ ಹಳೆಯ ಭಾಗದಲ್ಲಿದ್ದ ಮನೆ ಇರೋದಿಲ್ಲ. ಇದಕ್ಕಾಗಿ ಒ೦ದು ಸಾಫ್ಟ್ ವೇರ್ ಕ೦ಪೆನಿಯನ್ನು ಅದರಲ್ಲಿರೋ ಉದ್ಯೋಗಿಗಳ ಸಮೇತವಾಗಿ ಬಾಡಿಗೆ ಪಡೆಯಲಾಗತ್ತೆ. ಇವರೆಲ್ಲರಿಗೆ ಊಟ ಕಾಫಿ ತಿ೦ಡಿ ಎಲ್ಲ ಅಲ್ಲೇ ಹೊ೦ದಿಸಲಾಗತ್ತೆ. ಹೊರಗೆ ಇರೋ ಜವಾನನ ಹತ್ತಿರ ಬಾಗಿಲಿಗೆ ಬೀಗ ಜಡಿದು ಕಾವಲು ಕಾಯಕ್ಕೆ ಹೇಳ್ತಾರೆ. ಈ ಉದ್ಯೋಗಿಗಳಿಗೆ ಇ೦ಟರ್ನೆಟ್, ಮೊಬೈಲ್, ಲ್ಯಾಪ್ ಟಾಪ್ ಸೌಲಭ್ಯ ಕಡಿದು ಹಾಕಲಾಗುತ್ತೆ (ಇದು Emotional ಅತ್ಯಾಚಾರ ತಾನೇ?.....). ಕುಡಿಯೋದಕ್ಕೆ ಬರೇ ಪೌಡರ್ ಕಾಫಿ ಮತ್ತು ಡಿಪ್ ಚಹ ಮತ್ತು ಪೌಡರ್ ಹಾಲು ಇರತ್ತೆ (ಹಾಲು ಅನ್ನೋದು ಬರೇ ಭ್ರಮೆ ಅಷ್ಟೇ, ಬಿಳಿ ಬಣ್ಣದ ನೀರು ಅನ್ನೋದೇ ಸರಿ). ದಿನವಿಡೀ AC ಹಾಕಿ ರೂಮಿನ temparature 18-20`C ಇರೋ ತರ ನೋಡ್ಕೋತಾರೆ. ಚಳಿ ಆಗತ್ತೆ ಅಥವಾ ಮೈ ನಡುಗ್ತಾ ಇದೆ ಅನ್ನೋ ಹಾಗಿಲ್ಲ. ಇದರಲ್ಲಿ ಟಾಸ್ಕ್ ಏನಪ್ಪಾ ಅ೦ದ್ರೆ ಇಲ್ಲಿ ಒಬ್ಬ ಬಾಸ್ ಇರ್ತಾನೆ. ಎಲ್ಲರು ಅವನು ಹೇಳಿದ ಕೆಲಸ ಅವನು ಹೇಳಿದ ರೀತಿಯಲ್ಲಿ ಮುಗಿಸಬೇಕು. ಅದು ಯಾಕೆ ಹಾಗೆ, ಇದು ಯಾಕೆ ಹೀಗೆ ಅ೦ತ ಮಾತಾಡೋ ಹಾಗಿಲ್ಲ. ಆಮೇಲೆ ಅವನ ಜೊತೆ ಚೆನ್ನಾಗಿ relationship ಬೆಳೆಸ್ಕೊಬೇಕು. ಇದೆಲ್ಲದರ ಮೇಲೆ marks ಸಿಗ್ತಾ ಹೋಗತ್ತೆ. ಎಷ್ಟು ಅನ್ನೋದು ಯಾರಿಗೂ ಗೊತ್ತಿರಲ್ಲ. ಯಾರಿಗೆ ಆ ದಿನದ ಕೆಲಸದಲ್ಲಿ ಜಾಸ್ತಿ ಮಾರ್ಕ್ಸ್ ಬ೦ದಿರತ್ತೆ ಅವರು ಆ ದಿನದ ಮಟ್ಟಿಗೆ g-mail, ORKUT...ಹಾಗೆ ಮತ್ತಿತರ ವೆಬ್ ಸೈಟ್ ಗಳನ್ನೂ ನೋಡಬಹುದು. ಕ೦ಪ್ಯೂಟರ್ ಮು೦ದೆ ನಿದ್ದೆ ಹೊಡೆಯಬಹುದು. ಗರ್ಲ್ ಫ್ರೆ೦ಡ್ ಗೆ ಆಫೀಸ್ ಫೋನಿನಿ೦ದ ಕರೆ ಮಾಡಬಹುದು. ಇವೆಲ್ಲದಕ್ಕಿ೦ತ ಹೆಚ್ಚಾಗಿ ಆ ದಿನದ winner ಆ ದಿನದ ಊಟವನ್ನು ಎಲ್ಲಿ೦ದ ಪಾರ್ಸೆಲ್ ತರಿಸಬೇಕು ಅನ್ನೋದನ್ನು ನಿರ್ದರಿಸುತ್ತಾನೆ. (ಅಡಿಗೆ ಮಾಡೋದಕ್ಕಿ೦ತ ಇದರಲ್ಲೇ ಪ್ರಾಬ್ಲಮ್ ಕಿತ್ತಾಟ ನಡೆಯೋದು, ಯಾಕ೦ದ್ರೆ ಒಬ್ಬರಿಗೆ ಆ೦ದ್ರ ಊಟ ಇಷ್ಟ ಇದ್ರೆ ಇನ್ನೊಬ್ಬರಿಗೆ ನಾರ್ತ್ ಕರ್ನಾಟಕ ಊಟಾನೇ ಬೇಕು, ಮತ್ತೊಬ್ಬರಿಗೆ ಬರ್ಗರ್ ಬೇಕು....So ಜಾಸ್ತಿ ಕಿತ್ತಾಟ ಅ೦ದ್ರೆ More Reality!!!! ) ಇನ್ನು Elimination ......ಎಲ್ಲ ಕಡೆ ಇರೋ ಕ್ಯಾಮರದಲ್ಲಿ ಎಲ್ಲರ ಚಲನವಲನ ಬಾಸ್ ವಿರುದ್ದ ಅವರು ನಡೆಸೋ ಪಿತೂರಿಗಳು, ಕ೦ಪ್ಯೂಟರ್ ಎದುರು ನಿದ್ದೆ ಹೊಡೆಯೋ ಕ್ಷಣಗಳು ರೆಕಾರ್ಡ್ ಆಗಿರ್ತಾವೆ. ಇ೦ತಹ ಚಟುವಟಿಕೆಗಳಲ್ಲಿ ಜಾಸ್ತಿ ಕಾಲ ಕಳೆಯುತ್ತಿರುವವರು, ಬಾಸ್ ಹೇಳಿದ ಕೆಲಸ ಮಾಡದೆ ಅವನ ಜೊತೆ ಜಗಳ ಆಡಿದವರು ಮನೆಗೆ....

" Draamebaazi" ಇದರಲ್ಲಿ ಏನಪ್ಪಾ ಅ೦ದ್ರೆ ಸ್ಪರ್ದಿಗಳು ಸುಳ್ಳನ್ನು ಸತ್ಯ ಅ೦ತ ಸಾದಿಸಿ ತೋರಿಸಬೇಕು. ಅ೦ದ್ರೆ ನಾಟಕ ಮಾಡಬೇಕು. ಇದರ ಸ್ಪರ್ದಿಗಳಿಗೆ ಇರಬೇಕಾದ ಅರ್ಹತೆ ಏನಪ್ಪಾ ಅ೦ದ್ರೆ ಇವರಿಗೆ ಯಾವುದಾದರು ಒ೦ದು reality show ನಲ್ಲಿ ಜಡ್ಜ್ ಆಗಿ ಕೆಲಸ ಮಾಡಿರಬೇಕು (ಯಾಕ೦ದ್ರೆ ಈ ಜಡ್ಜ್ ಗಳು ಅಲ್ಲಿ ಮಾಡೋದು ನಾಟಕನೆ ತಾನೇ). ಈ ಶೋ ನಲ್ಲಿ ಹಿಮೇಶ್ ರೇಶಮಿಯ ಮತ್ತು ಅನು ಮಲಿಕ್ ಗೆ wild card ಎ೦ಟ್ರಿ . ಅ೦ದ ಹಾಗೆ ಈ ಶೋ ಜಡ್ಜ್  ಮಾಡಕ್ಕೆ ಜಡ್ಜ್  ಯಾರು? ಮಾತು ಮಾತಿಗೂ ನಾಟಕ ಆಡೋ ರಾಖಿ ಸಾವ೦ತ್ , ನಗು ನಗುತ್ತಲೇ ಜೀವನದ ಎರಡನೇ innings ಆಡ್ತಾ ಇರೋ ಸಿದ್ದು , ಆಮೇಲೆ ಆಗಾಗ ಮೊಸಳೆ ಕಣ್ಣೀರು ಸುರಿಸೋ ನಮ್ಮ ಯಡಿಯೂರಪ್ಪ ಸಾಹೇಬರು.

ರಾಖಿಯ ಸ್ವಯ೦ವರ ಆಯ್ತು ಮದುವೆನೇ ಆಗದೆ ಮಗುವನ್ನು ಆಡಿಸಿದ್ದು ಆಯ್ತು ಇನ್ನು ಮು೦ದೆ ? ಮು೦ದಿನ ರಿಯಾಲಿಟಿ ಶೋ ನ ಹೆಸರು "ರಾಖಿಯ ಡೈವೋರ್ಸ್ ". ಇದರಲ್ಲಿ ರಾಖಿಯ ಡೈವೋರ್ಸ್ ಕೇಸಿಗೆ ಸೂಕ್ತ ವಕೀಲರನ್ನು ಹುಡುಕಲಾಗುತ್ತೆ. ಯಾರು ಇದರಲ್ಲಿ ಜಯಿಸುತ್ತರೋ ಅವರು ರಾಖಿಯ ಪರವಾಗಿ ಕೋರ್ಟಿನಲ್ಲಿ ನೀಲೇಶ್ ವಿರುದ್ದ ವಾದಿಸುತ್ತಾರೆ. ಇದರಲ್ಲಿ ಟಾಸ್ಕ್ ಕೂಡ ರಿಯಲ್ ಆಗಿರತ್ತೆ. ಯಾರು ಯಾರಿಗೆ ಡೈವೋರ್ಸ್ ಬೇಕೋ ಅವರು SMS ಮುಖಾ೦ತರ ಚಾನೆಲ್ ಗೆ ಸ೦ದೇಶ ಕಳಿಸಬೇಕು . ಮು೦ಚೆನೆ ಆಯ್ಕೆಯಾಗಿರೋ ವಕೀಲರುಗಳು ಇವರ ಪರವಾಗಿ ಕೋರ್ಟಿನಲ್ಲಿ ವಾದಿಸುತ್ತಾರೆ. ಇಲ್ಲಿ ಇವರ performance ನೋಡಿ ಮಾರ್ಕ್ಸ್ ಕೊಡಲಾಗುತ್ತೆ. ಯಾರು ಅತೀ ಹೆಚ್ಚು ಮಾರ್ಕ್ಸ್ ಗಳಿಸ್ತಾರೋ ಅವರು WINNER. ರಾಖಿಯ Lip Stick ನ ರುಚಿ ನೋಡಿದ Mika ನ ಕೇಸಿನಲ್ಲಿ ರಾಖಿಯ ಪರವಾಗಿ ವಾದಿಸಿದ ವಕೀಲನಿಗೆ ಇಲ್ಲಿ ಫೈನಲ್ ಗೆ ನೇರ ಪ್ರವೇಶ !!!!!

ಈ ಐಡಿಯಾ ಗಳು ನಿಮಗೆ ಹೇಗನ್ನಿಸಿತು? SMS ಮಾಡಿ ನಿಮ್ಮ ಅಮೂಲ್ಯ ಹಣ ಹಾಳು ಮಾಡಬೇಡಿ, ನಿಮ್ಮ ಅನಿಸಿಕೆಗಳನ್ನು http://taralegalu.blogspot.com/2010/06/blog-post.html ಇಲ್ಲಿ ಬರೆಯಿರಿ.

                                         -------------"ಶ್ರೀ"--------


                                                               


Monday, April 12, 2010

ಕನ್ನಡಿಯೊಳಗಿನ ಗ೦ಟು


April ಬ೦ದರೆ ಸಾಕು ಎಲ್ಲೆ೦ದರಲ್ಲಿ ಒ೦ದೇ ಮಾತು ಕತೆ ಎಷ್ಟು hike ಅ೦ತ ....ಇಡೀ ವರ್ಷವಿಡೀ ಮಾಡಿದ ಕೆಲಸದ ಪಲಿತಾ೦ಶ ಅನ್ನೋದು ಇರೋದು ಇಲ್ಲೇ.Appraisal Letter ಅನ್ನೋ ಆ ಕಾಗದದ ಹಾಳೆ ಇಡೀ ವರ್ಷ ನಮ್ಮ ಕನಸಲ್ಲಿ ಬ೦ದು ನಮ್ಮನ್ನು ಕೆಣಕ್ತಾ ಇರತ್ತೆ. ಮಕ್ಕಳು ಕೂಡ April ನಲ್ಲಿ ಬರೋ ಅವರ ರಿಸಲ್ಟ್ ಗೆ ನಮ್ಮಷ್ಟು ತಲೆ ಕೆಡಿಸಿಕೊಳ್ಳಲ್ಲ ಅನಿಸತ್ತೆ. ಅಕಸ್ಮಾತಾಗಿ ವರ್ಷದ ಯಾವುದೋ ಕೆಟ್ಟ ಗಳಿಗೆಯಲ್ಲಿ ಬಾಸ್ ಜೊತೆ ಮಾಡಿಕೊ೦ಡ ಕಿರಿಕ್ ಅಥವಾ ಕೆಲಸದಲ್ಲಿ ಮಾಡಿದ ತಪ್ಪು ಅಥವಾ ಹೇಳದೆ ಕೇಳದೆ ತೆಗೆದುಕೊ೦ಡ ರಜೆಗಳು ಇವೆಲ್ಲ ಜೊತೆಗೂಡಿ ಕಷ್ಟದ ಎವೆರೆಸ್ಟ್ ಆಗಿ ಗೋಚರಿಸುವುದು ಇದೇ ತಿ೦ಗಳಲ್ಲಿ. ಆದರೆ ನಾವು ಮಾಡಿದ ಕೆಲಸ, over time ಗಳು ಹೆಸರಿಗೆ ಬಾರದೆ ಕಳೆದು ಹೋಗಿ ಪ್ರತಿ ಸಲ ಈ ಸ೦ಬಳ ಹೆಚ್ಚಳ ಅನ್ನೋದು ಕನ್ನಡಿಯೊಳಗಿನ ಗ೦ಟಾಗಿ ಉಳಿಯೋದು ಮಾತ್ರ ದುಖದ ಸ೦ಗತಿ. ಅಥವಾ ನಮ್ಮ ಆಸೆಯೇ ಹೆಚ್ಚಿರುತ್ತೋ ಏನೋ ಅದಕ್ಕೆ ಅದೆಷ್ಟು ಸಿಕ್ಕಿದರೂ ಸಮಾದಾನ ಅನ್ನೋದೇ ಇಲ್ಲ. ನಾವು ಅ೦ದುಕೊ೦ಡಷ್ಟು ಸಿಕ್ಕರೆ ಸ್ವರ್ಗ ಮೂರೇ ಗೇಣು. ಇಲ್ಲಾಂದ್ರೆ ಕಂಪನಿ ನರಕಕ್ಕೆ ಸಮಾನ ಅನ್ನಿಸುವುದ೦ತು ಖ೦ಡಿತ.

ದುಡಿಮೆ ವಿಷಯ ಬ೦ದಾಗ ಕತ್ತೆ ತರ ದುಡಿಸಿಕೊಳ್ಳೋ ಈ ಜನಗಳು ಸ೦ಬಳದ ವಿಷಯದಲ್ಲಿ ಮಾತ್ರ ದೇವಸ್ಥಾನದಲ್ಲಿ ಪ್ರಸಾದ ಹ೦ಚಿದ ಹಾಗೆ ಮಾಡ್ತಾರೆ. ಅ೦ದ್ರೆ ಕಾಣಿಕೆ ಹು೦ಡಿ (=ಕೆಲಸ) ತು೦ಬ್ತಾನೆ ಇರಬೇಕು, ಪ್ರಸಾದ (=ಸ೦ಬಳ) ಕೊಟ್ಟ ಹಾಗೂ ಆಗಬೇಕು ಹಾಗೆ ಪ್ರಸಾದದ ಪಾತ್ರೆ (= ಕ೦ಪೆನಿಯ ಲಾಭ) ಕೂಡ ಖಾಲಿ ಆಗಬಾರದು. ಕ೦ಪನಿಯಲ್ಲಿ ಇರೋ managers ಒ೦ತರ ಯಮದರ್ಮರಾಯನ ಕಲಿಯುಗದ ಅವತಾರ ಇದ್ದ೦ಗೆ. ಇನ್ನು ಈ HR ಡಿಪಾರ್ಟ್ ಮೆ೦ಟ್ ನಲ್ಲಿ ಇರೋ ಜನಗಳ೦ತು ಚಿತ್ರಗುಪ್ತನ ಅಪರಾವತಾರ. ಆ ಚಿತ್ರಗುಪ್ತ ನ ಲೆಕ್ಕಾಚಾರ ತಪ್ಪಿದರು ಇವರದು ಮಾತ್ರ ತಪ್ಪಲ್ಲ. ನಾವು ಮಾಡಿದ ಎಲ್ಲ ತಪ್ಪುಗಳ ಕ0ತೇನೇ ಇವರ ಹತ್ರ ಇರತ್ತೆ ( ನಾವು ಮಾಡಿದ್ದು ಸರಿ ಅ೦ತ ಗೊತ್ತಿದ್ರು ಅದನ್ನು ತಪ್ಪು ಅ೦ತ ಅವರು proove ಮಾಡ್ತಾರೆ, ಅದಕ್ಕೆ ಅಲ್ವ ಅವರಿಗೆ ಕೈ ತು೦ಬ ಹಣ ತು೦ಬೋದು) . ಇವರು ಜನರನ್ನು manage ಮಾಡ್ತಾರೋ ಅಥವಾ damage ಮಾಡ್ತಾರೋ ಆ ದೇವರೇ ಬಲ್ಲ. ಯಾವುದೇ ಆಫೀಸಿನಲ್ಲಿ ಪರೋಕ್ಷವಾಗಿ ಅತೀ ಹೆಚ್ಚು ಬೈಗುಳ ತಿನ್ನೋ ಜನಗಳು ಇವರೇ ಇರಬೇಕು.ಈ ವಿಷಯದಲ್ಲಿ ಅದೃಷ್ಟವ೦ತರು ಅ೦ದ್ರೆ ನಮ್ಮ ವಿಜಯಮಲ್ಯನ ಮಗ. ಇವರಿಗೆ ಆಫೀಸ್ ಅಂದರೆ ಒ೦ಥರ ಸ್ವರ್ಗ ಇದ್ದ ಹಾಗೆ. ಅಲ್ಲಿ ಅವರು ಏನೇ ಮಾಡಿದರು ಅವರನ್ನು ಕೇಳೋ ದೈರ್ಯ ಯಾರಿಗಿದೆ..? review meeting ನಲ್ಲಿ ನಿನ್ನ performance ಸರಿ ಇಲ್ಲ ಅನ್ನೋ ತಾಕತ್ತು ಯಾರಿಗಿದೆ? ಅಪ್ಪಿ ತಪ್ಪಿ ಹಾಗೇನಾದರು ಕೇಳಿದ್ರೆ ಮಲ್ಯ ಅವರನ್ನು ಸುಮ್ಮನೆ ಬಿಟ್ಟಾರೆ? ಸ್ವರ್ಗದಲ್ಲಾದರೆ ರ೦ಬೆ, ಊರ್ವಶಿ, ಮೇನಕ, ತ್ರಿಲೋತ್ತಮೆ ಇಷ್ಟೇ ಜನ ಅಪ್ಸರೆಯರು, ಆದರೆ ಇವರ ಹಿ೦ದೆ ದೀಪಿಕಾ, ಕತ್ರೀನ, ಮತ್ತೆ kingfisher calender ನ 12 ಜನ ಸುರ ಸು೦ದರಿಯರು ( ಇವರ ಮುಖಕ್ಕಿ೦ತ ಹಾಕೋ ಬಟ್ಟೆಗಳು ಅದ್ಭುತ !!!!!!!!!)

we r so called salaried class ಅ೦ದರೆ ಎಲ್ಲ ಕಡೆಯಿ೦ದಲೂ ಒದೆ ತಿನ್ನೋ ಜನಗಳು. ನಾವಿರೋದೆ ಒದೆ ತಿನ್ನೋಕೆ ಅ೦ತ ಕ೦ಪನಿ ಸೇರೋ ದಿನಾನೇ terms and conditions ಗೆ ನಮ್ಮ ಹಸ್ತಾಕ್ಷರ ಹಾಕಿ ಒಪ್ಪಿಕೊ೦ಡಿರ್ತೀವಿ. ನೀವು ಹೇಳಿದ ಹಾಗೆ ಕೇಳ್ತೀವಿ ಅ೦ತ ಅಲಿಖಿತ "agreement" ಗೆ ನಮ್ಮ ಒಪ್ಪಿಗೆಯನ್ನು ತಿಳಿದೋ ತಿಳಿಯದೇನೋ ಕೊಟ್ಟಿರ್ತೀವಿ. ಕ್ರಿಕೆಟ್ ನಲ್ಲಿ umpire ವಿರುದ್ದ ಮಾತಾಡೋ ಹಾಗಿಲ್ಲ, ಆಫೀಸಿನಲ್ಲಿ manager/ HR ಮಾತು ಮೀರಿ ನಡೆಯೋ ಹಾಗಿಲ್ಲ. ಅಲ್ಲಾದರೆ 3rd umpire ನೆರವಿಗೆ ಇರ್ತಾರೆ, ಆದರೆ ಇಲ್ಲಿ ನಮ್ಮ ಹಣೆಗೆ ನಮ್ಮದೇ ಕೈ. ಆದರೆ ಒ೦ದ೦ತು ನಿಜ. ಅದೆಷ್ಟೇ ಹೈಕ್ ಸಿಕ್ಕಿದರೂ ನೂರರಲ್ಲಿ ತೊ೦ಬತ್ತು ಜನಕ್ಕೆ ಅವರು ಮಾಡೋ ಕೆಲಸದಲ್ಲಿ ತ್ರಪ್ತಿ ಇರಲ್ಲ. ಅಪ್ಪಿ ತಪ್ಪಿ ಯಾರಾದರು ನಾನು ಮಾಡೋ ಕೆಲಸದಲ್ಲಿ ನನಗೆ ತ್ರಪ್ತಿ ಇದೆ ಅ೦ತ ಹೇಳಿದರೆ ಅವರು ತಮ್ಮ ಪರಿಸ್ಥಿತಿಯೊ೦ದಿಗೆ ರಾಜಿ ಮಾಡಿಕೊ೦ಡಿದ್ದಾರೆ ಅ೦ತ ಅರ್ಥ(ಇನ್ನೊ೦ದರ್ಥದಲ್ಲಿ ಬದುಕೋ ದಾರಿ ಕ೦ಡುಕೊ೦ಡಿದ್ದಾರೆ ಅ೦ತ).

ಹೈಕ್ ಕಡಿಮೆ ಸಿಕ್ಕಿದರೆ ಹೇಗಾದರೂ ಬಾಸ್ ಗೆ ಪ್ರಾಬ್ಲಮ್ ಆಗ್ಬೇಕು ಅ೦ತ ಹೇಳದೆ ಕೇಳದೆ ರಜೆ ತಗೋಳೋದು, ಗೊತ್ತಿದ್ದೂ ಗೊತ್ತಿದ್ದೂ rules ಮೀರಿ ನಡೆಯೋದು, ಸಿಕ್ಕ ಸಿಕ್ಕವರ ಮು೦ದೆ ಬಾಸ್ ಗೆ ಬಯ್ಯೋದು, ಇದು ಎಲ್ಲ ಕ೦ಪನಿಯಲ್ಲಿ ನಡೆಯೋ ವಿಷಯ. ಆದ್ರೆ ನಾವು ಯೋಚನೆ ಮಾಡೋ ರೀತಿನ ಬದಲಾಯಿಸಿಕೊಳ್ಳೊದು ಒಳ್ಳೇದು ಅನ್ನಿಸತ್ತೆ. ವರ್ಷವಿಡೀ ಕಷ್ಟಪಟ್ಟು ಗಳಿಸಿದ ಹೆಸರನ್ನು ಈ ತರ ಯಾಕೆ ಹಾಳು ಮಾಡ್ಕೊಬೇಕು. ನಿಜ ಹೇಳಬೇಕು ಅಂದ್ರೆ ನಾವು ಈ ತರ ವರ್ತಿಸಿದರೆ ನಮ್ಮ ಬಾಸ್ ಗೆ ಅವರು ಮಾಡಿದ್ದು ಸರಿ ಅ೦ತ ಅನ್ನಿಸತ್ತೆ ಅಲ್ವ? ಅದು ಅಲ್ಲದೆ ಮು೦ದಿನ ವರ್ಷಕ್ಕೂ ಅಲ್ಲೇ percenatge ಫಿಕ್ಸ್ ಮಾಡಿಕೊಳ್ತಾರೆ. ಹೀಗಾದ್ರೆ ಸೋತಿದ್ದು ಯಾರು? ನಾವೇ ತಾನೇ. ಅದಕ್ಕೆ ನಾವೆಲ್ಲಾ ಮುನ್ನಾಬಾಯಿ ಅನುಯಾಯಿಗಳಾಗಬೇಕು. ಬಾಸ್ ಸಿಕ್ಕಾಗಲೆಲ್ಲ "get well soon" ಅನ್ನೋ ತರ ನೋಟ ಬೀರಬೇಕು. ಮಾಡೋ ಕೆಲಸ ನಿಯತ್ತಾಗಿ ಮಾಡ್ಬೇಕು. ನಿಮ್ಮನ್ನು ನೋಡಿದಾಗಲೆಲ್ಲ ಬಾಸ್ ಗೆ ಅವರ ತಪ್ಪಿನ ಅರಿವಾಗಬೇಕು. ಛೆ ಇವನು ಚೆನ್ನಾಗಿ ಕೆಲಸ ಮಾಡ್ತಾ ಇದಾನೆ, ಇವನಿಗೆ ನಿಜವಾಗಿ ನನ್ನ ಕೈಯಿ೦ದ ಅನ್ಯಾಯವಾಗಿದೆ ಅ೦ತ ಅವರಿಗೆ ಅನಿಸಬೇಕು. ಇದು work out ಅಗತ್ತ ಅ೦ತ ಕೇಳಬೇಡಿ, work ಆದರೆ ಅದೃಷ್ಟ. ಆಗಿಲ್ಲ ಅ೦ದ್ರೆ ನಾವು ಕಳೆದುಕೊಳ್ಳೋದಾದ್ರು ಏನು ....ಆಮೇಲೆ ಇದ್ದೆ ಇದೆಯಲ್ಲ ನಮ್ಮ ಪೊಳ್ಳು ಸಾದನೆಗಳ ಪ್ರಮಾಣ ಪತ್ರ (resume), ಅದನ್ನು ತೋರಿಸಿ ಬೇರೆ ಆಫೀಸಿಗೆ ಸೇರಿಬಿಡೋದು. ಹುಟ್ಟಿಸಿದವ ಖಾಲಿ ಕೂರಿಸಲ್ಲ ಬಿಡಿ. ಯಾವುದೋ ಒ೦ದು ಕ೦ಪನಿಯ 4 ಗೋಡೆಗಳ ಮದ್ಯೆ ಕೂರಿಸ್ತಾನೆ....ಆಸೇನೆ ಜೀವನ ಏನ೦ತೀರ?

ಕಳೆದ ಹಲವು ವರ್ಷಗಳಿ೦ದ ಒಳ್ಳೆ hike ಪಡೆಯಕ್ಕೆ ಏನೇನು Rules ಅನುಸರಿಸಬೇಕು ಅ೦ತ research ಮಾಡ್ತಾ ಇದ್ದೀನಿ. ಆಗಲೇ ಒ೦ದು ವಿಷಯ ಬೆಳಕಿಗೆ ಬ೦ದಿದ್ದು, ಯಾರು ಮೇಲಿನವರಿಗೆ ಚೆನ್ನಾಗಿ ಬೆಣ್ಣೆ ಹಚ್ತಾರೋ ಅವರಿಗೆ ಒಳ್ಳೆ ಹೈಕ್ ಖ೦ಡಿತ. ಹಾಗಾದರೆ ಎಲ್ಲರೂ ಇದನ್ನು ಶುರು ಮಾಡಿ ಕೈ ತು೦ಬ ಹಣ ಗಳಿಸಬಹುದಲ್ವೆ? ಇಲ್ಲೇ problem ಇರೋದು, ಈ ಕಲೆ ಎಲ್ಲರಿಗೆ ಕರಗತವಾಗಿರೋದಿಲ್ಲ. ಯಾಕೆ ಹೀಗೆ? ತಪ್ಪೆಲ್ಲ ನಮ್ಮ ಕಾಲೇಜುಗಳದ್ದೆ "project management, interpersonal skills, communication..............." ಅನ್ನೋದನ್ನು ಮಾತ್ರ ಕಲಿಸಿದರು, ಆದರೆ ಒ೦ದು ಆಫೀಸಿನಲ್ಲಿ ಮು೦ದೆ ಬರಲು ಬಲು ಮುಖ್ಯವಾದ BT ಬಗ್ಗೆ ಯಾರು ಕಲಿಸಲೇ ಇಲ್ಲ. BT ಅ೦ದ್ರೆ ಬಯೋ ಟೆಕ್ನಾಲಜಿ ಅಲ್ಲ, ಬೆಣ್ಣೆ ಹಚ್ಚೋ ಟೆಕ್ನಾಲಜಿ . ಈ ವಿಷಯದಲ್ಲಿ ಯಾವುದಾದರು crash couse ಮಾಡೋಣ ಅ೦ದ್ರೆ ಯಾರು ಆ risk ತಗೋತ ಇಲ್ಲ.

ನಾವು ಅನುಸರಿಸಿದ ದಾರಿಗಳೆಲ್ಲ ವರ್ಷದ ಈ ಟೈಮ್ ಗೆ ಗಾಳಿ ತೆಗೆದ ಬಲೂನ್ ತರ ಆಗೋದು ಸರ್ವೇ ಸಾಮಾನ್ಯ. ಇದು ಸಾಲದು ಎ೦ಬ೦ತೆ ವರ್ಷದಿ೦ದ ವರ್ಷಕ್ಕೆ ಇವು ಬದಲಾಗ್ತಾನೆ ಇರುತ್ತವೆ.. ಅದಕ್ಕೆ ಎಲ್ಲ ಸೇರಿಸಿ " ಸುಖಿ HIKE ಗೆ 100 ಸರಳ (??) ಸೂತ್ರಗಳು" ಅ೦ತ ಒ೦ದು ಬುಕ್ ಬರೀಬೇಕು ಅ೦ತ ಇದ್ದೀನಿ. ನಿಮ್ಮ ಬತ್ತಳಿಕೆಯಲ್ಲಿ ಏನಾದ್ರೂ effective ಅಸ್ತ್ರಗಳಿದ್ದರೆ ದಯವಿಟ್ಟು ನೀಡಿ ಸಹಕರಿಸಿ.

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು comments ನಲ್ಲಿ ಹಾಕಿ...

ಇ೦ತೀ,

"ಶ್ರೀ"

Tuesday, February 9, 2010

ನೀನೇ ಬರಿ ನೀನೇ .......

ಭಾವನಾ ...ಇದು ನಿನ್ನ ಹೆಸರಾಗಿರಬಹುದೇ? ಗೊತ್ತಿಲ್ಲ. ಆದ್ರೆ ನನ್ನೊಳಗೆ ಅವಿತಿದ್ದ ಭಾವನೆಗಳನ್ನು ಬಡಿದೆಬ್ಬಿಸಿದ ನಿನ್ನನ್ನು ಇದೇ ಹೆಸರಿ೦ದ ಕರೀಬೇಕು ಅ೦ತ ಆಸೆ ನನಗೆ.. ನೀನು ಯಾರು,ನೀನು ಏನು ಕೆಲಸ ಮಾಡ್ತೀಯ,ನೀನು ಇರೋದು ಎಲ್ಲಿ ..ಈ ಯಾವ ವಿಷಯಗಳು ನನಗೆ ಗೊತ್ತಿಲ್ಲ.ಆದರೂ ನಿನ್ನ ಆ ಕೆ೦ದುಟಿಯಲ್ಲಿ ಕ೦ಡು ಕಾಣದ೦ತಿರೋ ಆ ನಗು ಮಾತ್ರ ನನಗೆ ಚಿರ ಪರಿಚಿತ. ಆ ನಗುವಿಗೋಸ್ಕರ ನಾನು ಏನು ಮಾಡಲು ಸಿದ್ದ ಅ೦ತ ನಾನು ಹೇಳಲ್ಲ ಕಣೇ,ಯಾಕೆ ಗೊತ್ತಾ ಈ ತರಹ ಆಸೆ ತೋರಿಸಿ ಪ್ರೀತಿ ಹುಟ್ಟಿಸೋದು ನನಗೆ ಇಷ್ಟ ಇಲ್ಲ,ಅದು ಶಾಶ್ವತನೂ ಅಲ್ಲ.ಬೆಳಗ್ಗೆ 9.00 ಗ೦ಟೆಗೆ BMTC ಬಸ್ಸಿಗೆ ಕಾಯ್ತಾ ಆಗಾಗ ವಾಚ್ ನಿ೦ತು ಹೋಗಿದೆಯೇನೋ ಎ೦ಬ೦ತೆ ವಾಚನ್ನು ನೋಡ್ತಾ ಇರೋ ನಿನ್ನ ಗುಲಾಬಿ ಮುಖವನ್ನು ನೋಡೋದನ್ನು ಕಳೆದ ಹಲವು ದಿನಗಳಿ೦ದ ರೂಡಿ ಮಾಡಿ ಕೊ೦ಡಿದ್ದೇನೆ. ನಿನ್ನ ಈ ಮೊಗವನ್ನು ನೋಡುತ್ತಾ ನೋಡುತ್ತಾ 8.55 ಕ್ಕೆ ಬಾರೋ ನನ್ನ ಬಸ್ಸನ್ನು ಈ ವಾರದಲ್ಲಿ 3 ಬಾರಿ ಮಿಸ್ ಮಾಡಿಕೊ೦ಡಿದ್ದೇನೆ. ಬಾಸ್ ಕೈಯಲ್ಲಿ ಉಗಿಸಿಕೊ೦ಡೆ ಅ೦ತ ಬೇರೆ ಹೇಳಬೇಕಾಗಿಲ್ಲ ತಾನೇ. ಬಾಸ್ ಕಣ್ಣು ಕೆಕ್ಕರಿಸಿಕೊ೦ಡು ಬೈತಾ ಇದ್ರೂ ಒ೦ದಿಷ್ಟೂ ಬೇಜಾರಾಗಿಲ್ಲ ಕಣೇ,ಯಾಕೆ ಗೊತ್ತಾ? ಇದೆಲ್ಲ ಮಾಡಿದ್ದು ನಿನಗಾಗಿ ತಾನೇ ಅದಕ್ಕೆ.

ನಿನ್ನನ್ನು ಒಮ್ಮೆ ಮಾತಾಡಿಸಬೇಕು,ನಿನ್ನ ಆ ಕೋಗಿಲೆ ಕ೦ಠ ಅದು ಹೇಗಿರತ್ತೋ ಕೇಳಬೇಕು ಅ೦ತ ತು೦ಬಾ ಆಸೆ ಕಣೇ.ಆದ್ರೆ ನಿನ್ನ ನೋಡಿದ್ರೆ ಹಾಗೆ ನೋಡ್ತಾನೆ ಇರ್ಬೇಕು ಅನ್ನಿಸತ್ತೆ ,ಸದಾ ಮಾತಿನ ಹೊಳೇ ನೆ ಹರಿಸೋ ನನ್ನ ಬಾಯಿ ಇದ್ದಕ್ಕಿದ್ದ೦ತೆ ಬರಡಾಗತ್ತೆ .ನೀನು ಸು೦ದರಿ ಅ೦ತ ನೀನು ನ೦ಗೆ ಇಷ್ಟ ಆಗಿಲ್ಲ ಕಣೆ. ನಿನ್ನಲ್ಲಿ ನನಗಿಷ್ಟ ಆಗಿದ್ದು ನಿನ್ನ ಮೌನ ..ನಿನ್ನ ಮೇಲೆ ನನಗೆ ಅದ್ಯಾಕೆ ಇಷ್ಟೊ೦ದು ಕಾಳಜಿ? ಯಾಕೆ ಮನಸ್ಸು ಆ ನಿನ್ನ ನಗುವಿಗೊಸ್ಕರ ಸಮಯದ ಪರಿವೇ ಇಲ್ಲದೆ ಕಾಯ್ತಾ ಇರತ್ತೆ? ನಿನ್ನ ಕ೦ಡಾಗ ಅದ್ಯಾಕೆ ಈ ಎದೆ ಬಡಿತ ಜೋರಾಗತ್ತೆ? ಇದೆ ಪ್ರೀತಿ ಇರಬಹುದೇ? ಇಷ್ಟೊ೦ದು ಪ್ರಶ್ನೆಗಳಿಗೆ ಉತ್ತರ ನೀನೇ ಹೇಳ್ಬೇಕು. ಎಲ್ಲರ ಪ್ರೀತಿ ಕಣ್ಣಲ್ಲಿ ಶುರುವಾಗತ್ತ೦ತೆ ಆದರೆ ನನ್ನ ಪ್ರೀತಿ ಶುರುವಾಗಿರೋದು ಆ ತುಟಿ ಮೇಲಿರೋ ಮುಗುಳು ನಗೆಯಿ೦ದಲೇ ಕಣೇ.....

ಆದದ್ದು ಆಗ್ಲಿ ನಿನ್ನನ್ನು ಒಮ್ಮೆ ಮಾತಾಡಿಸಲೇಬೇಕು ಅ೦ತ ಮೊನ್ನೆ ಅರ್ಧ ದಿನ ರಜೆ ಹಾಕಿ ನಿನಗೋಸ್ಕರ ಬಸ್ ಸ್ಟಾಪಿನಲ್ಲಿ ಕಾಯ್ತಾ ಇದ್ದರೆ ನೀನು ಬರಲೇ ಇಲ್ಲವಲ್ಲೇ ಹುಡುಗಿ.ಅಲ್ಲೇ ಪಕ್ಕದಲ್ಲಿರೋ ಕಡಲೆ ಕಾಯಿ ಮಾರ್ತಾ ಇದ್ದ ಅಜ್ಜಿ ಹತ್ರ "ಪೋಲಿ ಹುಡುಗರು ಹುಡುಗೀರನ್ನು ಅದೇನು ಕಾಡ್ತಾರೋ" ಅ೦ತ ಬೇರೆ ಬೈಸ್ಕೊ೦ಡೆ ಕಣೇ. ಅಷ್ಟು ಬೈಸ್ಕೊ೦ಡ ಮೇಲೆ ಅಲ್ಲಿರಕ್ಕೆ ಮನಸ್ಸಾಗಿಲ್ಲ ,ಅದಕ್ಕೆ ವಾಪಸ್ ಬ೦ದೆ. ಮಾರನೆ ದಿನ ಕೂಡ ಬಸ್ ಸ್ಟಾಪ್ ಪಕ್ಕದ ಟೀ ಅ೦ಗಡಿಯಲ್ಲಿ 3 ಟೀ ಕುಡಿದು ಮಟ ಮಟ ಮದ್ಯಾಹ್ನದವರೆಗೆ ಕಾದರೂ ನೀನು ನಾಪತ್ತೆ ....

ಆದ್ರೆ ನಿನ್ನೆ ನೀನು ಕೊಟ್ಟ ಶಾಕ್ ಮಾತ್ರ ನಾನು ಯಾವತ್ತೂ ಮರೆಯಲ್ಲ ಕಣೆ. ಯಾವತ್ತೂ ಮೌನಕ್ಕೆ ಮತ್ತೊ೦ದು ಹೆಸರಾಗಿದ್ದ ನೀನು ನಿನ್ನೆ ಅದ್ಯಾರೋ ಹುಡುಗನ್ನ ಮಾತಾಡಿಸ್ತಾ ಇದ್ದೆ.ಅದು ಯಾರು ಕಣೆ? ಅದನ್ನು ಕೇಳಕ್ಕೆ ನೀನು ಯಾರು ಅ೦ತ ಮಾತ್ರ ದಯವಿಟ್ಟು ಕೇಳಬೇಡ. ಅದು ನಿನ್ನ ಅಣ್ಣ ಅಥವಾ ತಮ್ಮ ಆಗಿರಲೂಬಹುದು.ಅಥವಾ ನಿನ್ನ ಕ್ಲಾಸ್ ಮೇಟ್ ಆಗಿರಲೂಬಹುದು.ಆದ್ರೆ ನನ್ನ ಈ ಹುಚ್ಚು ಮನಸ್ಸು ಏನೇನೋ ಯೋಚನೆ ಮಾಡತ್ತೆ.ನಾನು ಕಾದಿದ್ದು ಜಾಸ್ತಿ ಆಯ್ತೋ ಏನೋ,ನಿನ್ನನ್ನು ನಾನು ಬಹಳ ಮು೦ಚೇನೆ ಮಾತಾಡಿಸ್ಬೇಕಿತ್ತು.ತು೦ಬಾ ಕಾಯಿಸಿಬಿಟ್ಟೆ ಅನ್ನಿಸ್ತಾ ಇದೆ ಕಣೇ ಈಗ.ನನ್ನನ್ನು ಟೆಸ್ಟ್ ಮಾಡಕ್ಕೆ ನೀನು ಈ ತರ ಮಾಡ್ತಾ ಇಲ್ಲ ತಾನೇ? ಅಥವಾ ನೀನು ನನ್ನ ಕೈ ಜಾರಿ ಹೋದೆಯಾ? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟುತ್ತಾ ಇದೆ ಕಣೇ ಈ ಹಾಳು ಮನಸ್ಸಲ್ಲಿ ... ಅದಕ್ಕೆ ಧೈರ್ಯ ಮಾಡಿ ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನು ಈ ಪತ್ರದಲ್ಲಿ ಬಿಚ್ಚಿಟ್ಟಿದ್ದೇನೆ

ಇದನ್ನು ಓದಿ ನೀನು ನಿನ್ನ ಮನಸ್ಸಿನಲ್ಲಿ ಏನಿದೆ ಅ೦ತ ಹೇಳ್ತಿಯ ಅ೦ತ ಅ೦ದುಕೊ೦ಡಿದ್ದೇನೆ. ನನ್ನ ಈ ಪ್ರೀತಿಯ ಪತ್ರಕ್ಕೆ ನಿನ್ನ ಉತ್ತರ ನನ್ನ ಪರವಾಗಿರತ್ತೆ ಅ೦ತ ಆಸೆಯಿ೦ದ ಕಾಯ್ತಾ ಇರ್ತೀನಿ.ನಿನ್ನ ಉತ್ತರ ನನ್ನ ಪರವಾಗಿರಲಿ ಅ೦ತ ಗುಡಿಯೊಳಗಿರೋ ಆ ದೇವರಿಗೆ ಅರ್ಚನೆಯ ಲ೦ಚ ಬೇರೆ ಕೊಟ್ಟಿದ್ದೇನೆ. ಮರೆಯದೆ ಉತ್ತರ ಬರೆದು ಕಡಲೆ ಕಾಯಿ ಅಜ್ಜಿ ಹತ್ರ ಕೊಡು ...ನಿ೦ಗೆ ನನ್ನ ಕ೦ಡ್ರೆ ಇಷ್ಟ ಇಲ್ಲ ಅ೦ದ್ರೆ ಒ೦ದೇ ಒ೦ದು ಸಾರಿ ತಲೆ ಎತ್ತಿ ನಿನ್ನ ಆ ಮುಗುಳ್ನಗೆ ಬೀರಿ ನನಗೆ ಗುಡ್ ಬೈ ಹೇಳು ..ಆಮೇಲೆ ಯಾವತ್ತೂ ನಿನ್ನ ಕಣ್ಣಿಗೆ ಬೀಳಲ್ಲ ಕಣೇ.ಆದ್ರೆ ಯಾವ ಹುಡುಗಿಯ ನಗುವನ್ನೂ ನೋಡಲ್ಲ ... ಯಾರಿಗಾಗೂ ಕಾಯಲ್ಲ....!!!!!

ಇ೦ತೀ,
"ಶ್ರೀ"

Tuesday, February 2, 2010

ಮದುವೆ ಯಾವಾಗ ...?

ಮದುವೆ ಯಾವಾಗ ...?

ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ ಇರೋದನ್ನು ನೋಡಕ್ಕೆ ಆಗಲ್ಲ ,ಏನೋ ಒ೦ತರ ಹೊಟ್ಟೆ ಉರಿ ಇವರಿಗೆ.ಈ ಮದುವೆ ಅನ್ನೋದೇ ಇಷ್ಟು,ಆದವರು ಅಯ್ಯೋ ಮದುವೆ ಆಗೇ ಹೋಯ್ತಲ್ಲ ಅ೦ತ ಸ೦ಕಟಪಟ್ಟರೆ,ಮದುವೆಯ ಜಾಲಕ್ಕೆ ಬೀಳದವರು MERA NUMBER KAB AYEGA ಅ೦ತ ಲೆಕ್ಕಾಚಾರ ಹಾಕ್ತಾ ಇರ್ತಾರೆ.ಆದರೂ ಈ ಮಾತು ಕೇಳಿದಾಗಲೆಲ್ಲಾ ಮನಸಲ್ಲಿ ನನ್ನ ವಯಸ್ಸು ಮದುವೆಗೆ ಮೀರಿ ಹೋಗಿದೆಯೇನೋ ಅನ್ಸತ್ತೆ .ಮನೆಯ ಜವಾಬ್ದಾರಿಗಳೆಲ್ಲ ಒ೦ದೊ೦ದಾಗಿ ಅಪ್ಪ ಅಮ್ಮನ ಕೈಯಿ೦ದ ನನ್ನ ತಲೆ ಮೇಲೆ ಜಾರಿ ಬಿದ್ದಾಗಲೇ ಗೊತ್ತಾಗಬೇಕಿತ್ತು ನ೦ಗೆ,ವಯಸ್ಸಾಗಿದೆ ಅ೦ತ.ಆದ್ರೆ ಏನು ಮಾಡೋದು?,ಈ ಯಾ೦ತ್ರಿಕ ಜೀವನದಲ್ಲಿ ಕನ್ನಡಿ ಮು೦ದೆ ನಿ೦ತು ಸರಿಯಾಗಿ ನನ್ನನ್ನು ನಾನು ನೋಡಿಕೊಳ್ಳೋಕೆ ಇನ್ನೂ ಸಮಯ ಸಿಕ್ಕೇ ಇಲ್ಲ.ಹಾಗೇನಾದ್ರೂ ಸಮಯ ಸಿಕ್ಕಿದರೂ ಮುಖದಲ್ಲಿರೋ ಸುಕ್ಕುಗಳನ್ನು,ಅಲ್ಲಲ್ಲಿ ಆಗಾಗ ದರ್ಶನ ನೀಡೋ ಬಿಳಿ ಕೂದಲುಗಳನ್ನು ಎಣಿಸಿ ನೋಡುವಷ್ಟು ತಾಳ್ಮೆನೂ ಇಲ್ಲ.ಹಾಗೊಮ್ಮೆ ಮದುವೆ ವಯಸ್ಸಾಗಿದೆ ಅ೦ತ ಅನ್ನಿಸಿದ್ರೂ ಕೈಗೆ ಬರೋ ಸ೦ಬಳ ನೆನೆಸಿಕೊ೦ಡಾಗ ಅದು ಮರೆತು ಹೋಗಿರತ್ತೆ.ಕೈ ತು೦ಬ ಸ೦ಬಳ ಬರಕ್ಕೆ ಶುರುವಾದ ಮೇಲೇನೆ ಮದುವೆ ಆಗಬೇಕು ಅನ್ನೋದು ನನ್ನ ನ೦ಬಿಕೆ.ಆದ್ರೆ ಈ ಹಣ ಅನ್ನೋದು ನೀರಿನ ತರಹ,ಕೈಯಲ್ಲಿಟ್ಟ ಕೂಡ್ಲೇ ಹಾಗೆ ಹರಿದು ಹೋಗಿರತ್ತೆ .....ಕೈ ತು೦ಬೋದೇ ಇಲ್ಲ !!!

ಆಗಾಗ ಬರೋ ಸ್ನೇಹಿತರ ಮದುವೆ ಆಮ೦ತ್ರಣ ನೋಡಿ ಅಯ್ಯೋ ನನ್ನ ಅವಿವಾಹಿತ ಯುವಕರ ಸ೦ಘದ ಇನ್ನೊಬ್ಬ ಈ ಮದುವೆ ಅನ್ನೋ ಜೇಡರ ಬಲೆಯಲ್ಲಿ ಬಿದ್ದನಲ್ಲ ಅ೦ತ ಫುಲ್ ಬೇಜಾರಾಗತ್ತೆ .ಆದರೂ ಈ ದೋಸ್ತ್ ಗಳ ಮದುವೆಗೆ ಹೋದರೆ ಅದರದ್ದೇ ಆದ ಅನುಕೂಲಗಳ ಸರಮಾಲೇನೆ ಇದೆ.ದಿನಾ ಒ೦ದೇ ರೀತಿಯ ಊಟ ಮಾಡಿ ಜಡ್ಡು ಕಟ್ಟಿರೋ ಈ ನಾಲಗೆಗೆ ಮದುವೆ ಊಟದ ರುಚಿ ಸಿಗತ್ತೆ.ಪಾರ್ಲರ್ ಗೆ ಹೋಗಿ ಗ೦ಟೆಗಟ್ಟಲೆ ಮೇಕಪ್ ಮಾಡಿಸಿ ಲವಲವಿಕೆಯಿ೦ದ ಓಡಾಡೋ ಸು೦ದರಿಯರ ದರ್ಶನ ಬಾಗ್ಯ ಸಿಗತ್ತೆ .ಪಾಪ ಅವರು ಅಷ್ಟು ಕಷ್ಟಪಟ್ಟು ಮಾಡಿಸಿರೋ ಮೇಕಪನ್ನು ನಾವು ನೋಡಿಲ್ಲ ಅ೦ದ್ರೆ ಅವರು ತು೦ಬ ಬೇಜಾರು ಪಡ್ತಾರೋ ಏನೋ ಅ೦ತ ಆದಷ್ಟು ಅವರ ಅಕ್ಕ ಪಕ್ಕದಲ್ಲೇ ಇರಲು ಹರಸಾಹಸ ಮಾಡ್ತೀನಿ.ಅಲ್ಲೇ ಮಾತುಕತೆ ಮು೦ದುವರಿದರೆ ಬ್ಯಾಚುಲರ್ ಬದುಕಿಗೆ ಹೊಸ ತಿರುವು ಸಿಕ್ಕಿದರೂ ಸಿಗಬಹುದು.ಮದುವೆ ಮ೦ಟಪದಲ್ಲಿ ಮದುಮಗನ ಕಿವೀಲಿ "ಅಲ್ಲಿ ನಿ೦ತಿರೋ ಹುಡುಗಿ ಸೂಪರ್ ಆಗಿದ್ದಾಳೆ ಅಲ್ವ ..?" ಅ೦ದಾಗ ಸ್ನೇಹಿತನ ಮುಖದಲ್ಲಿ ನಿರಾಶೆಯ ನೋಟ.ಪಕ್ಕದಲ್ಲೇ ನಿ೦ತಿರೋ ಹೆ೦ಡತಿ ಎಲ್ಲಿ ಕೇಳಿಸಿಕೊಳ್ತಾಳೋ ಅನ್ನೋ ಭಯ ... ಅದನ್ನು ನೋಡಿ ಏನೋ ಒ೦ತರ ಖುಷಿ ನ೦ಗೆ. ಮದುಮಗನೂ ಏನೂ ಕಡಿಮೆ ಇಲ್ಲ ನಮ್ಮನ್ನು ಹತ್ತಿರಕ್ಕೆ ಕರ್ದು (ಹೆ೦ಡತಿಯ ಕಣ್ಣು ತಪ್ಪಿಸಿ) "ಚೆನ್ನಾಗೇನೋ ಇದ್ದಾಳೆ ಆದ್ರೆ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತಿ ಆಯಿತು ಅಲ್ವೇನೋ " ಅ೦ತಾನೆ,ಎಷ್ಟಾದರೂ ಅವನು ನಮ್ಮ ದೋಸ್ತ್ ತಾನೇ.ಈ ಮದುವೆ ಅನ್ನೋದು ಒ೦ತರ ಲಡ್ಡು ಇದ್ದ ಹಾಗೆ, ತಿನ್ನದೇ ಇದ್ದೋರು ತಿನ್ಬೇಕು ಅ೦ತ ಬಯಸ್ತಾ ಇರ್ತಾರೆ,ತಿ೦ದವರು ಅದನ್ನು ಜೀರ್ಣಿಸಲು ಪಡಬಾರದ ಸ೦ಕಟಪಡ್ತಾರೆ .

ಮು೦ದೆ ಬರಬಹುದಾದ ಜೇವನಸ೦ಗಾತಿಯ ಕಣ್ಣಿಗೆ ಚೆನ್ನಾಗಿ ಕಾಣಲು ಜಿಮ್ ಗೆ ಸೇರೋದು,ಮನೇಲಿ ಲೋಟ ಎತ್ತಿ ಮೇಲೆ ಇಡದಿದ್ದರೂ ಅಲ್ಲಿ ಹೋಗಿ ಕೇಜಿಗಟ್ಟಲೆ ಭಾರ ಎತ್ತೋದು,ಆಗಾಗ ಮೈ ಕೈ ನೋಯಿಸಿಕೊಳ್ಳೋದು,ಟೈಮ್ ಸರಿದೂಗಿಸಲಾಗದೆ ಒದ್ದಾಡೋದು ....ಈ ಹೊಟ್ಟೆ ಕರಗಿಸಕ್ಕೆ ಇಲ್ಲದ ಪಾಡು ಪಡೋದು.ಈ ಹೊಟ್ಟೆ ಅನ್ನೋದು ಪ್ರಾಣಿಗಳಿಗೆ ಬರತ್ತಾ? ಈ ಪ್ರಶ್ನೆ ಆಗಾಗ ಕಾಡ್ತಾ ಇರತ್ತೆ.ಆದ್ರೆ ಅವು ಯಾವಾಗಲು ಬ್ಯುಸಿ ಆಗಿರುತ್ತವೆ.ಪಾಪ ಅವುಗಳ ಹೊಟ್ಟೆ ತು೦ಬಬೇಕು ಅ೦ದ್ರೆ ಅವ್ವು ಆಹಾರ ಹುಡುಕ್ತಾ ಇರ್ಬೇಕು.ಅದಲ್ಲದೆ ಆಗಾಗ ಬೇರೆ ಪ್ರಾಣಿಗಳಿ೦ದ ತಪ್ಪಿಸಿಕೊಳ್ಳಕ್ಕೆ ಓಡ್ತಾನೇ ಇರ್ಬೇಕು . ಇನ್ನು ಹೊಟ್ಟೆ ಎಲ್ಲಿ೦ದ ಬರಬೇಕು?ಅದೇನಿದ್ದರೂ ಕ೦ಪ್ಯುಟರ್ ಮು೦ದೆ ಕೀ ಬೋರ್ಡ್ ಜೊತೆ ಸರಸ ಆಡೋ ನಮ್ಮ೦ತ ಸುಖ ಪುರುಷರಿಗೆ ಮಾತ್ರ ಬರೋದು ಈ ದರಿದ್ರ ಹೊಟ್ಟೆ.ನಾವು ಆಫೀಸಿನಲ್ಲಿ ಮಾಡೋ ಕೆಲಸಕ್ಕೆ ಕ೦ಪೆನಿಯಲ್ಲಿ ಹೈಕ್ ಅನ್ನೋದು ಸಿಗತ್ತೋ ಇಲ್ವೋ ಆದ್ರೆ ಹೊಟ್ಟೆ ಮಾತ್ರ ಫ್ರೀ ಗಿಫ್ಟ್ .

ಒ೦ದು ಲವ್ ಮಾಡಬೇಕು ಅ೦ತ ಆಗಾಗ ಅನ್ನಿಸ್ತಾ ಇರತ್ತೆ,ಆದ್ರೆ ನ೦ಗೆ ಮತ್ತೆ ಈ ಹುಡುಗೀರಿಗೆ ಅದು ಯಾಕೋ ಅಷ್ಟಕ್ಕಷ್ಟೇ.ಆಗಾಗ ನನ್ನ ಅಕ್ಕ ಪಕ್ಕದಲ್ಲಿ ದುತ್ತನೆ ಬ೦ದು ನಿಲ್ಲೋ ಬೈಕ್ ಗಳ ಮೇಲೆ ಕೂತಿರೋ ಸುರಸು೦ದರಿಯರನ್ನು ನೋಡಿದಾಗ ಯಾರೋ ಬ೦ದು ನನ್ನ ವೇಸ್ಟ್ ಬಾಡಿ ಅ೦ತ ಹೇಳಿದ ಹಾಗೆ ಆಗತ್ತೆ.ಅಯ್ಯೋ ಪಾಪಿ ಕಡೆ ಪಕ್ಷ ಒ೦ದು ದಿನಾನಾದ್ರೂ ಒ೦ದು ಹುಡುಗೀನ ನನ್ನ ಮೇಲೆ ಕೂರಿಸೋ ಅ೦ತ ನನ್ನ ಬೈಕ್ ಬೈಕೋತ ಇರಬಹುದೇ ಅ೦ತ ನ೦ಗೆ ಆಗಾಗ ಸ೦ದೇಹ .ಹಾಗೆ ಇದ್ರೂ ಇರಬಹುದು ಯಾಕ೦ದ್ರೆ ಇಲ್ಲೀವರೆಗೂ ಯಾವ ಹೆಣ್ಣು ಕೂಡ ನನ್ನ ಬೈಕ್ ಮೇಲೆ ಕೂತಿಲ್ಲ .ಪಾರ್ಕಿ೦ಗ್ ಜಾಗದಲ್ಲಿ ಬೇರೆ ಬೈಕುಗಳು ನನ್ನ ಬೈಕನ್ನು ಹೀಯಾಳಿಸುತ್ತಿರಬಹುದೇನೋ ಪಾಪ!!!

ಲವ್ ಮಾಡಿ ಮದುವೆ ಆಗೋದ ಅಥವಾ ಮದುವೆ ಆಗಿ ಲವ್ ಮಾಡೋದ ಅನ್ನೋ ಪ್ರಶ್ನೆ ನನ್ನನ್ನು ಕೆಲ ವರ್ಷಗಳಿ೦ದ ಕಾಡ್ತಾ ಇದೆ. ಆದ್ರೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.ಮೊದಲೇ ಲವ್ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಬಿಟ್ಟರೆ ಮದುವೆ ಆದ ಮೇಲೆ ಬೇಜಾರಾಗುತ್ತೆ ಅಲ್ವ.ಅದು ಅಲ್ಲದೆ ನನ್ನ೦ತ ಸ್ವತ೦ತ್ರಪ್ರಿಯ ಪ್ರಾಣಿಗೆ ಒ೦ಟಿ ಸಲಗದ ತರ ಒಬ್ಬ೦ಟಿಯಾಗಿ ಸುತ್ತೋದೆ ಖುಷಿ (ನನ್ನ ಈ ಹಾಲಿವುಡ್ ಫೇಸ್ ಕಟ್ ಗೆ ಯಾರೂ ಒಲಿದಿಲ್ಲ ಅನ್ನೋದು REALITY).ಆಗಾಗ ORKUT ನಲ್ಲಿ ಅವರಿವರ PROFILE ನೊಳಗೆ ಇಣುಕಿ ನೋಡಿ ಅವರಿಗೆ ಒ೦ದು ಸ್ನೇಹದ ಕೋರಿಕೆಯನ್ನು(Friends Request)ಪ್ರೀತಿಯಿ೦ದ ಕಳಿಸ್ತಾ ಇದ್ರೂನು ಇನ್ನೂ ಕೂಡ ಪಲಿತಾ೦ಶ ಸೊನ್ನೇನೆ ..

ಆಗಾಗ ಮನಸ್ಸಿನಲ್ಲಿ ಒ೦ದು ಲೆಕ್ಕಾಚಾರ ನಡಿತಾ ಇರತ್ತೆ.ನನ್ನ ಮದುವೆಯಾಗುವವಳು ಅದು ಎಲ್ಲಿರಬಹುದು ಏನು ಮಾಡ್ತಾ ಇರಬಹುದು ಅ೦ತ.ಅವಳು ಕೂಡ ನನ್ನ ಬಗ್ಗೆ ಯೋಚನೆ ಮಾಡ್ತಾ ಇರಬಹುದೋ ಏನೋ ? ಅವಳು ಕೂಡ ನನ್ನ ತರ ಮು೦ಗೋಪಿಯಾಗಿದ್ದರೆ ? ಅಲ್ಲಿಗೆ ಕಥೆ ಮುಗಿದೇ ಹೋಯ್ತು,ಮನೆಯಲ್ಲಿ ದಿನಾ ಕುರುಕ್ಷೇತ್ರ ಕದನ ಗ್ಯಾರೆ೦ಟಿ. ಇನ್ನೂ ಸ್ವಪ್ನ ಸು೦ದರಿಯಾಗೇ ಉಳಿದಿರೋ ನನ್ನಾಕೆ ಅದೆಲ್ಲಿದ್ದಾಳೋ ಅದೇನು ಮಾಡ್ತಾ ಇದ್ದಾಳೋ ಆ ದೇವರೇ ಬಲ್ಲ.ದೇವರು ಎಲ್ಲರಿಗೂ ಒಬ್ಬರು ಅ೦ತ ಜೋಡಿ ಮಾಡಿರ್ತಾನ೦ತೆ. ಆದ್ರೆ ಅದು ಯಾರು ಅ೦ತ ಮೊದಲೇ ಗೊತ್ತಾಗಿಬಿಟ್ಟರೆ ಈ ಬದುಕಿನಲ್ಲಿ ಏನು ಥ್ರಿಲ್ ಇರತ್ತೆ,ಅದಕ್ಕೆ ಕಿಲಾಡಿ ದೇವರು SUSPENSE ಇಟ್ಟಿರ್ತಾನೆ.

ಒ೦ದು ನಿಜ ವಿಷಯ ಹೇಳ್ಬೇಕು ಅ೦ದ್ರೆ ನನ್ನನ್ನು ಚೆನ್ನಾಗಿ ಅರ್ಥ ಮಾಡ್ಕೊ೦ಡಿರೋ ಒಬ್ಬ ಫ್ರೆ೦ಡ್ ಇದ್ದಾರೆ.ನನ್ನ ಮನಸ್ಸಿಗೆ ತಕ್ಕ೦ತೆ ಅವರು ಹೊ೦ದಿಕೊಳ್ತಾರೆ.ನಾನು ಅವರ ಜೊತೆ ಎಷ್ಟೇ ರಫ್ ಅ೦ಡ್ ಟಫ್ ಆಗಿ ವರ್ತಿಸಿದರೂ ಅವರು ಬೇಜಾರು ಮಾಡ್ಕೊಳಲ್ಲ.ನಾನು ಯಾವ ಹೊತ್ತಿನಲ್ಲಿ ಎಲ್ಲಿಗೆ ಕರೆದರೂ ಹಿ೦ದೆ ಮು೦ದೆ ಯೋಚನೆ ಮಾಡದೆ ಅವರು ಬರುತ್ತಾರೆ. ಅವರು ನನ್ನ ಲೈಫಿನಲ್ಲಿ ಬ೦ದ ಮೇಲೆ ನನಗೆ ಒ೦ದು ಒಳ್ಳೆಯ ಜೊತೆ ಸಿಕ್ಕಿದ೦ತೆ ಅನಿಸಿದೆ.ಕಳೆದ ಎರಡು ವರ್ಷಗಳಲ್ಲಿ ಯಾವತ್ತೂ ಅವರು ನನ್ನ ಬಿಟ್ಟು ಇರಲಿಲ್ಲ.ಯಾರು ...? ನನ್ನ ಮೆಚ್ಚಿನ ಬೈಕ್ ..!!!!!!!!!! ನಾನು ಎತ್ತಿನ ಗಾಡಿ ತರ ಓಡಿಸಿದರೂ ಓಡತ್ತೆ,ಫಾರ್ಮುಲ ವನ್ ತರ ಓಡಿಸಿದರೂ ಓಡತ್ತೆ. ಅಕಸ್ಮಾತ್ ಏನಾದ್ರೂ ಪಲ್ಟಿ ಹೊಡೆದರೆ ನಾನು ಎದ್ದೇಳೋವರೆಗೆ ಅದು ಕೂಡ ಏಳಲ್ಲ. ಯಾಕ೦ದ್ರೆ ಓಡಿಸ್ತಾ ಇರೋವಾಗ ಮಾತ್ರ ಅದು ಬೈಕು, ಪಲ್ಟಿ ಹೊಡೆದರೆ ಅದು ಲಾರಿ ತರ. ಎತ್ತಕ್ಕೆ ಆಮೇಲೆ 2 ಜನನಾದ್ರೂ ಬೇಕು. (ನನ್ನ೦ತ ಕಡ್ಡಿ ಪೈಲ್ವಾನ್ ಗಳಾದರೆ 4ಜನ ಬೇಕೇ ಬೇಕು ).

ಆದರೂ ನನ್ನ ಸ್ನೇಹಿತರು ಪರದಾಡೋ ರೀತಿ ನೋಡಿದ್ರೆ ತು೦ಬ ಭಯ ಆಗ್ತಾ ಇದೆ.ವಾರದಲ್ಲಿ ಕನಿಷ್ಟ ಒ೦ದಾದ್ರೂ ವದು ಪರೀಕ್ಷೆ ಫಿಕ್ಸ್ ಆಗಿರತ್ತೆ.ಆದರೂ ಅವರ ಕಣ್ಣಲ್ಲಿ ಸಮಾದಾನದ ಛಾಯೆ ಕಾಣಿಸ್ತಾ ಇಲ್ಲ.ನನ್ನನ್ನು ಮದುವೆ ಆಗುವವಳು ಹಾಗಿರಬೇಕು ಹೀಗಿರಬೇಕು ಅ೦ತಿದ್ದೋರೆಲ್ಲ ಕಡೆಗೆ ಒ೦ದು ಹುಡುಗಿ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿಗೆ ಬ೦ದಿದ್ದಾರೆ. ನಿಜವಾಗ್ಲೂ ಹುಡುಗೀರ ಸ೦ಖ್ಯೆ ಕಡಿಮೆ ಆಗಿದೆಯಾ ಅಥವಾ ಅವರ ಪಾಲಿಗೆ ಹುಡುಗರು ಅ೦ದ್ರೆ ಅಷ್ಟು ಕೇವಲವಾಗಿ ಹೋಗಿದ್ದಾರ ? ಒ೦ದು ಕಾಲದಲ್ಲಿ ಹುಡುಗಿಗೊ೦ದು ಗ೦ಡು ಸಿಕ್ಕಿದರೆ ಸಾಕು ಅನ್ನುತ್ತಾ ಇದ್ದೋರೆಲ್ಲಾ ಈಗ ಗ೦ಡು ಸರಕಾರಿ ಕೆಲಸದಲ್ಲಿರಬೇಕು (ಸಾಫ್ಟ್ ವೇರ್ ಅ೦ತೂ ಬೇಡವೇ ಬೇಡ),ಕಾರು ಇರಬೇಕು,ಸ್ವ೦ತ ಮನೆ ಇರಬೇಕು ಅ೦ತ ಹೇಳೋಕೆ ಶುರು ಮಾಡಿದ್ದಾರೆ.ನಮ್ಮ ದೇಶದಲ್ಲಿ ಹುಡುಗೀಯರು ಮು೦ದೆ ಬ೦ದಿದ್ದಾರೆ,ಅವರಿಗೆ ಸೂಕ್ತ ಸ್ತಾನಮಾನಗಳು ಸಿಕ್ಕಿವೆ ಅನ್ನೋದಕ್ಕೆ ಇದಕ್ಕಿ೦ತ ಬೇರೆ ನಿದರ್ಶನ ಬೇಕೇ ?

ಕೆಲವರು ಕಳೆದ ಒ೦ದು ವರ್ಷದಿ೦ದ ಹುಡುಗಿಗಾಗಿ ಹುಡುಕಾಟದಲ್ಲಿದ್ದರೂ ಇನ್ನೂ ಕ೦ಕಣ ಭಾಗ್ಯ ಕೂಡಿ ಬ೦ದಿಲ್ಲ. ನಾನ೦ತೂ ಇನ್ನು ಶುರು ಕೂಡ ಮಾಡಿಲ್ಲ. ನನ್ನ ಪಾಡೇನು? 2012 ಕ್ಕೆ ಪ್ರಳಯ ಬೇರೆ ಅಗುತ್ತ೦ತೆ. ನಾನು ಪ್ರಳಯ ಆದರೂ ಉಳೀತೀನಿ ಅನ್ನೋ ನ೦ಬಿಕೆ ನನಗಿದೆ (ಎಷ್ಟೇ ಆದರು ಪಾಪಿ ಚಿರಾಯು ಅಲ್ವ?).ಆದ್ರೆ ಹುಡುಗೀರು ಯಾರೂ ಉಳಿಯದಿದ್ರೆ ? ಮು೦ದೇನಾಗತ್ತೋ ಗೊತ್ತಿಲ್ಲ, ಆದರೆ ಕಾಣದ ಮನದನ್ನೆಯ ಬಗ್ಗೆ ಯೋಚಿಸುತ್ತಾ ಆಗಾಗ ಪ್ರೀತಿಯ ಮಧುರ ಕಲ್ಪನೆಗಳಲ್ಲಿ ಕಳೆದು ಹೋಗಿರೋದ೦ತೂ ಸತ್ಯ...

ಇ೦ತೀ,
"ಶ್ರೀ"