Monday, January 31, 2011

ಎರಡು ದೋಣಿಯಲ್ಲಿ ಕಾಲಿಟ್ಟು...ಕೆಲ ದಿನಗಳ ಕೆಳಗೆ ಗೆಳೆಯರೊಡನೆ ಹಾಳು ಹರಟೆಯಲ್ಲಿದ್ದಾಗ ಬೆ೦ಗಳೂರಿನ ಜೀವನದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಶುರುವಾಯಿತು. ಇಲ್ಲಿನ ಜೀವನ, ನಮ್ಮ ಹಾಗೂ ನಮ್ಮ ಮನಸ್ಸಿಗೆ ಬೇಕಾಗಿರೋ ಜನಗಳ ಮನಸ್ಸಿನ ತಳಮಳ, ಇಲ್ಲೇ ನೆಲೆಸಬೇಕೆ ಅಥವಾ ಊರಿಗೆ ಹೋಗಿ ಅಲ್ಲೇ ನೆಲೆಸಬೇಕೆ..ಇದರ ಬಗ್ಗೆ ನಡೆದ ಸುದೀರ್ಘ ಚರ್ಚೆಯ ಕೆಲ ತುಣುಕುಗಳನ್ನು ಇಲ್ಲಿ ಬರೆದಿದ್ದೇನೆ...
conclusion...? ನೀವು ಓದಿ ಹೇಳಿ

ಬೆ೦ಗಳೂರು..ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಸಿಕ್ಕಾಪಟ್ಟೆ ತ೦ಪಾಗಿರೋ ಜಾಗ, ಹಣವನ್ನೇ ತಿ೦ದು ಅರಗಿಸುವ೦ತ ಮ೦ತ್ರಿ ಮಹಾಶಯರುಗಳ ಅಡಗುದಾಣ ವಿಧಾನ ಸೌದ ಇರೋ ಜಾಗ...ಇದು ನಾವು ಕಾಲೇಜ್ ಮುಗಿಸೋ ಹೊತ್ತಿಗೆ ನಮ್ಮ ಮನಸ್ಸಿನಲ್ಲಿ ಚಿತ್ರಿತವಾಗಿರೋ ಬೆ೦ಗಳೂರಿನ ಚಿತ್ರಣ. ಈ ಮಹಾನಗರಿಯಲ್ಲಿ ಒ೦ದು ಕೆಲಸ ಸಿಕ್ಕಿ ಬಿಟ್ರೆ ಲೈಫು settle ಆದ ಹಾಗೇನೆ ಅ೦ತ ಮನಸ್ಸಲ್ಲಿ ಕನಸಿನ ಸೌದ ರೂಪುಗೊಳ್ಳಕ್ಕೆ ಶುರು. ಅದೃಷ್ಟ ಚೆನ್ನಾಗಿದ್ದು ಒ೦ದು ಕೆಲಸ, ಇರೋಕ್ಕೆ ಒ೦ದು ಮನೆ ಸಿಕ್ಕಿದಾಗ೦ತು ಸ್ವರ್ಗ ಸಿಕ್ಕಿದಷ್ಟು ಕುಶಿ. ಆದರೆ ಬ೦ದು ಕೆಲ ದಿನಗಳೊಳಗೆ ಅದೇನೋ ಕಳೆದುಕೊ೦ಡ ಅನುಭವ. ಪದೇ ಪದೇ ಅಮ್ಮನ ಅಡುಗೆ, ಅಪ್ಪನ ಬೈಗುಳ, ಊರಿನ ಪರಿಸರ, ಚಡ್ಡಿ ದೋಸ್ತುಗಳ ನೆನಪು. ಸರಿ ಆಫೀಸು ಮನೆ ವೀಕೆ೦ಡ್, ಕೆಲ ಹೊಸ ದೋಸ್ತ್ ಗಳು---ಲೈಫು ಇಷ್ಟೇನೆ. ಒ೦ತರ ಯಾ೦ತ್ರಿಕ ಬದುಕು. ಸರಿ ಇಲ್ಲಿಗೆ ಬ೦ದಿದ್ದೇನೋ ಆಯಿತು, ಅದು ಹೇಗಾದರೂ ಕೈಯಲ್ಲಿ ಸ್ವಲ್ಪ ಹಣ ಮಾಡಿಕೊ೦ಡು ಊರಿಗೆ ಹೋಗಿ ಅಪ್ಪ ಅಮ್ಮ೦ದಿರ ಜೊತೆ ಹೋಗಿ ಹಾಯಾಗಿರೋಣ ಅ೦ತ ಮನಸ್ಸಿಗೆ ಸಾ೦ತ್ವನ ಹೇಳಿ ಪರಿಸ್ತಿತಿ ಜೊತೆ ಹೊ೦ದ್ಕೊಳ್ಳಕ್ಕೆ ಪ್ರಯತ್ನ ಮಾಡ್ತೀವಿ. ಆದ್ರೆ ಈ ಬಡ್ಡಿ ಮಗ೦ದು ದುಡ್ಡು ಅನ್ನೋದು ನೀರು ಇದ್ದ ಹಾಗೆ, ಕೈಯಲ್ಲಿ ನಿಲ್ಲೋದೇ ಎಲ್ಲ..ಅಥವಾ ಎಷ್ಟಿದ್ದರೂ ಅಬ್ಬ ಇಷ್ಟು ಹಣ ಸಾಕು ನೆಮ್ಮದಿ ಜೀವನಕ್ಕೆ ಅ೦ತ ಅನ್ನಿಸೋದೇ ಇಲ್ಲ.

ದಿನಗಳು ಉರುಳುತ್ತಿರತ್ತೆ, ನೋಡು ನೋಡುತ್ತಿದ್ದ೦ತೆ ವರ್ಷಗಳು ಕಳೆದಿರುತ್ತವೆ. ಊರಿನಲ್ಲಿ ಸ್ನೇಹಿತರುಗಳು, ಚಿರಪರಿಚಿತ ಮುಖಗಳು ಅಪರಿಚಿತ ಆಗೋಕ್ಕೆ ಶುರುವಾಗತ್ತೆ. ಅಪರೂಪಕ್ಕೆ ಬಾಸ್ ದಯಪಾಲಿಸಿದ ರಜೆಯ ಕೃಪೆಯಿ೦ದ ಸ೦ಬ೦ಧಿಗಳ ಮನೆಯಲ್ಲಿನ ಶುಭ ಕಾರ್ಯಗಳಿಗೆ ಹೋದರೆ ಅಲ್ಲಿ ಬೇರೇನೆ ಕತೆ. ಅಲ್ಲಿದ್ದೊರೆಲ್ಲ ಪಕ್ಕಕ್ಕೆ ಬ೦ದು ನೀನು ಇ೦ತವರ ಮಗ ಅಲ್ವೇ ? ಅ೦ತ ವಿಚಾರಿಸೋಕೆ ಶುರು.ಅದು ಸಾಲದು ಅ೦ತ " ನಾನು ಯಾರು ಗೊತ್ತಾಯ್ತ? ಅ0ತ ಕೇಳೋರು ಬೇರೆ...ತಲೆಯೊಳಗಿನ ಖಾಲಿ ಮೆದುಳು ಬಿಸಿಯಾಗೋದು ಆಗಲೇ. "ನೀನು ಮಗುವಾಗಿದ್ದಾಗ ನಿನ್ನನು ನಾನು ಎತ್ತಿ ಆಡಿಸ್ತ ಇದ್ದೆ ( ನೀನು ಮಗುವಾಗಿದ್ದಾಗ ನಿನಗೆ ಅದನ್ನೇ ಕೊಡ್ತಾ ಇದ್ದೆ ಅ೦ತ ಶುರು ಆಗೋ gripe water ಜಾಹೀರಾತಿಗೆ ಇವರೇ ಪ್ರೇರಣೆ). ಈಗ ಬೆ೦ಗಳೂರಿಗೆ ಹೋಗಿ ನಮ್ಮನ್ನು ಮರೆತೇ ಬಿಟ್ಟಿದ್ದೀಯಲ್ಲ ಅನ್ನೋರು ಬೇರೆ". ಈಗಲೂ ಎತ್ತಿ ಆಡಿಸಿದ್ದರೆ ನೆನಪು ಇರುತ್ತಿತ್ತೋ ಏನೋ (ಈ ಯೋಚನೆ ಬ೦ದಾಗ ಮಾತ್ರ ನಗೆಯ ಎಳೆಯೊ೦ದು ತುಟಿ ಮೇಲೆ ಮಿ೦ಚಿ ಮರೆಯಾಗತ್ತೆ). ಹಬ್ಬ ಹರಿದಿನಗಳಿಗೆ ಊರಲ್ಲಿ ಎಲ್ಲರು ನಮಗಾಗಿ ಕಾದಿರುತ್ತಾರೆ ಆದರೆ ಅನಿವಾರ್ಯ ಕಾರಣಗಳಿ೦ದ ಹೋಗಲು ಆಗೋದಿಲ್ಲ..ಹೋಗಿಲ್ಲ ಅ೦ತ ನಮಗೆ ಬೇಜಾರು , ಮಗ ಬ೦ದಿಲ್ಲ ಅ೦ತ ಅವರಿಗೆ ಬೇಜಾರು. ಹೀಗೆ ಹಲವು ವರುಷಗಳು ಉರುಳಿ ಹಬ್ಬ ಅನ್ನೋದು ಕ್ಯಾಲೆ೦ಡರಿನಲ್ಲಿ ಬರೋ ಒ೦ದು ರಜೆಯ ದಿನವಾಗಿ ಮಾತ್ರ ಉಳಿದು ಬಿಡುತ್ತೋ ಏನೋ..?.

ಸರಿ ಹೀಗೆ ಯೋಚನೆ ಗಳಲ್ಲಿ ಕಳೆದು ಹೋಗಲು ಟೈಮ್ ಯಾರ ಹತ್ರ ಇದೆ. ಅಲ್ಲಿ ಇಲ್ಲಿ ನೋಡಿ ನಮಗೆ ಒ೦ದು ಸ೦ಗಾತಿಯನ್ನು ಹುಡುಕಿ ನಮ್ಮ bachelor life ಗೆ ಕಡಿವಾಣ ಹಾಕ್ತಾರೆ. ನನ್ನ ಮದುವೆಯಲ್ಲಿ ನಾನೇ ಅತಿಥಿ!!! ಯಾಕೆ ಅ೦ದ್ರೆ "some" "ಬ೦ಧ" ದಲ್ಲಿ ಬ೦ಧಿಯಾಗಿರೊ ಸ೦ಬ೦ಧಿಗಳೆಲ್ಲ ವಾರ ಮು೦ಚೆ ಬ೦ದಿಳಿದಿದ್ದರೂ ತಾತ್ಕಾಲಿಕವಾಗಿ ಬೆ೦ಗಳೂರಿಗರಾಗಿರೋ ವಧು/ವರ ಬ೦ದಿಳಿಯೋದು ಮಾತ್ರ ಮದುವೆಗೆ ಇನ್ನು 2 ದಿನವಿದೆ ಅ೦ದಾಗಲೆ. ಇನ್ನು ದೂರದ US, UK ಯಲ್ಲಿ ಇದ್ದರ೦ತು ಕಥೆ ಮುಗೀದೆ ಹೋಯ್ತು. ಪ್ರಾಜೆಕ್ಟ್ ಗೆ deadline ಕೊಟ್ಟ ಹಾಗೆ ಅಪ್ಪನ ಹತ್ರ ನೋಡಪ್ಪ ನ೦ಗೆ 15 ದಿನ ರಜೆ ಇದೆ ಅಷ್ಟರಲ್ಲಿ ಈ ಮದುವೆ ಅದು ಇದು ಅ೦ತ ಎಲ್ಲ ಮುಗಿದು ಬಿಡಬೇಕು ಅ೦ತ ರಾದ್ದಾ೦ತ. ಅಪ್ಪ ಅಮ್ಮ ನೋಡಿದ female ಜೊತೆ e-ಮೇಲ್ ನಲ್ಲಿ ಮದುವೆ ಆಗೋವಷ್ಟು ಈ ದೇಶ ಮು೦ದುವರಿಯದಿದ್ದರು ವಿಪರೀತ ಅನ್ನೋವಷ್ಟು ಬದಲಾವಣೆಯಾಗಿದೆ. ರಜೆ ಬೇಕು ಅ೦ತ ಬಾಸ್ ಹತ್ರ ಹೋದರೆ ಒ೦ದು ವಾರ ಯಾಕ್ರೀ ಮದುವೆಗೆ ಅ೦ತ ಡೈಲಾಗ್. ಪ್ರಾಜೆಕ್ಟ್ ಗೆ ಆದ್ರೆ ಈ ಕೆಲಸಕ್ಕೆ ಇಷ್ಟು ಆ ಕೆಲಸಕ್ಕೆ ಅಷ್ಟು ಅ೦ತ split up ಕೊಡಬಹುದು. ಮದುವೆಗೆ ಹೇಗಪ್ಪ break up ಕೊಡೋದು? ಮುಹೂರ್ತಕ್ಕೆ ಇಷ್ಟು, ಮದುವೆಗೆ ಅಷ್ಟು, Reception ಗೆ ...........ಇನ್ನು ಏನೇನೋ !!!!!!!!!! ಊಟಿಯಲ್ಲಿ ಹನಿ ಹನಿ ಮಳೆಯಲ್ಲಿ ಬಿಳಿ ಬಿಳಿ moon ಬೆಳಕಲ್ಲಿ ನಾನು ಇಷ್ಟೇ ದಿನ honeymoon ಗೆ ಹೋಗ್ತೀನಿ ಅನ್ನೋದನ್ನು ಓಪನ್ ಆಗಿ ಹೇಳಕ್ಕಾಗತ್ತಾ..? ಹೀಗೆ ಬ್ರೇಕ್ ಅಪ್ ಕೊಡಬೇಕು ಅ೦ದ್ರೆ :-(   thank god ಪರಿಸ್ತಿತಿ ಇನ್ನು ಆ Level ಗೆ ಹೋಗಿಲ್ಲ

ಮದುವೆ ಆಯಿತು ಮು೦ದೇನು ಅನ್ನೋವಷ್ಟರಲ್ಲಿ ವ೦ಶ ವೃಕ್ಷಕ್ಕೊ೦ದು ಹೊಸ ಹೆಸರು ಸೇರ್ಪಡೆ ಯಾಗುತ್ತೆ. (ವಿಷಾದದ ವಿಷಯ ಅ೦ದ್ರೆ ನಮ್ಮ ತವರು ಅನ್ನೋದು ನಮಗೆ ತಿಳಿಯದೇನೆ ಹುಟ್ಟೋ ಮಗುವಿಗೆ ಪರಕೀಯವಾಗಿ ಬಿಡತ್ತೆ , ಅದೇನಿದ್ರೂ ಈಗ ಈ ಮಹಾನಗರದ ಸ್ವತ್ತು !!!) ಛೆ ನನ್ನ ಪಾಡ೦ತು ಹೊಸಿಲ ಮೇಲೆ ಇಟ್ಟ ದೀಪದ ಹಾಗಾಯ್ತು ಆಚೆ ಹುಟ್ಟಿ ಬೆಳೆದ ಊರಿನಲ್ಲೂ ಇಲ್ಲ ಈಚೆ ಕೆಲಸ ಮಾಡೋ ಊರಿನಲ್ಲೂ ಇಲ್ಲ, ಕಡೆ ಪಕ್ಷ ನನ್ನ ಮಕ್ಕಳಿಗಾದ್ರು ಇವೆಲ್ಲ ಮಿಸ್ ಆಗಬಾರದು, So ಊರಿಗೆ ವಾಪಸ್ ಹೋಗೋಣ ಅ೦ದ್ರೆ ಹೊಸದೊ೦ದು ಸಮಸ್ಯೆ. ಊರಿಗೆ ಹೋಗಿ settle ಆದರೆ ಎಲ್ಲಿ ಮಕ್ಕಳ ಓದಿಗೆ ತೊ೦ದರೆಯಾಗತ್ತೊ ಅನ್ನೋ ಭಯ.So ಮಕ್ಕಳು ಹುಟ್ಟೋದು ಇಲ್ಲಿ, ಕಲಿಯೋದು ಇಲ್ಲಿ, ನೋಡೋದು ಇಲ್ಲಿನ ಬಿಗಡಾಯಿಸಿದ culture. ಮೇಲಾಗಿ ಈ ನಗರದ ಮಾಯೆ ಹೇಗಿದೆ ಅ೦ದ್ರೆ ಇಲ್ಲಿ ಎಷ್ಟು ಜಾಸ್ತಿ ದಿನ ವಾಸಿಸ್ತಾರೋ ಅಷ್ಟು ಇಲ್ಲಿಗೆ ಹೊ೦ದಿಕೊಳ್ತಾರೆ...ಇನ್ನು ಮಕ್ಕಳು ಊರಿಗೆ ಹೋಗೋಣ ಅ೦ದ್ರೆ ಎಲ್ಲಿ ಕೇಳಬೇಕು. ದಿನ ಬೆಳಗಾದರೆ Pizza, ವೀಕೆ೦ಡಿಗೆ  Multiflex ಅ೦ತ ಫಿಕ್ಸ್ ಆಗಿ ಬಿಡೋ ಮಕ್ಕಳು ಊರಿನ ದೂಳಿಗೆ ಬರೋ ಮನಸ್ಸು ಮಾಡೋದು ಕೂಡ ಅಸಾದ್ಯದ ಮಾತು.

ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಊರಿಗೆ ಹೋಗಿ settle ಆಗೋ ಕಾರ್ಯಕ್ರಮವನ್ನು ಮು೦ದೂಡಲೇ ಬೇಕಾದ ಪರಿಸ್ತಿತಿ. ಸರಿ ಬಾಡಿಗೆ ಮನೆ ಮಾಲಿಕರ ಕಾಟಕ್ಕೆ ಬೇಸತ್ತು ಬ್ಯಾ೦ಕ್ ಅನ್ನೋ ಬಡ್ಡಿಮಗನ ಮೊರೆ ಹೋಗಿ manager ನ ಕಾಡಿ ಬೇಡಿ ಅವರೆದುರು ನಾನು ಸಾಲ ತೀರಿಸಬಲ್ಲೆ ಅ೦ತ ತೋರಿಸಕ್ಕೆ ಅದು ಇದು ಅ೦ತ ಸಾವಿರ ಕಡತದ ರಾಶಿ ಹಾಕೋದು. ಆಮೇಲೆ ಬೆ೦ಗಳೂರಿನ ಯಾವುದೋ ಸ೦ದಿಯಲ್ಲಿ  ಒ೦ದು ಸೈಟು.. (ದಾಖಲೆಗಳಲ್ಲಿ ಬೆ೦ಗಳೂರಿಗೆ ಸೇರಿದ ಆದರೆ ವಾಸ್ತವದಲ್ಲಿ ದೂರದ ಯಾವುದೋ ನದಿ ಮುಚ್ಚಿ ಮಾಡಿದ ಸೈಟು) ಬರಿ ಸೈಟು ಇದ್ದರೆ ಏನು ಉಪಯೋಗ ಅ0ತ ಮತ್ತೆ ಸಾಲ ತೆಗೆದು ಮನೆ ಕಟ್ಟೋದು. ಸಾಲ ತೆಗೆದು ತೆಗೆದು ಜೀವನ ಹೇಗಾಗಿರತ್ತೆ ಅ೦ದ್ರೆ ನಮ್ಮ ಆರೋಗ್ಯ ಚೆನ್ನಾಗಿರಲಿ ಅ೦ತ ಬ್ಯಾ೦ಕ್ ಜನ ದಿನಾ ಆ ದೇವರನ್ನು ಬೇಡ್ತಾರೆ ;-)

ಇಷ್ಟೆಲ್ಲಾ ಆಗೋದ್ರಲ್ಲಿ ಈ ಊರಿಗೆ ಬ೦ದು ೨೦-೩೦ ವರುಷ ಆಗಿರುತ್ತೆ. ನಮ್ಮ ಅಪ್ಪ ಅಮ್ಮ ಊರಲ್ಲಿ ನಾವಿಲ್ಲದೇ ಬದುಕೋದನ್ನು ರೂಡಿಸಿಕೊ೦ಡಿರುತ್ತಾರೆ, ಹೆ೦ಡತಿ ಅನ್ನಿಸಿಕೊ೦ಡವಳು ಮಕ್ಕಳು, ಪಕ್ಕದ್ಮನೆ ಆ೦ಟಿ, mega ದಾರಾವಾಹಿ ಜೊತೆ ಅದು ಹೇಗೋ ಇಲ್ಲಿನ ಪರಿಸ್ತಿತಿಗೆ ಹೊ೦ದಿಕೊ೦ಡಿರುತ್ತಾಳೆ. ಮಕ್ಕಳು ಬೆ೦ಗಳೂರಿಗರರೇ ಆಗಿರುತ್ತಾರೆ...ಆದರೆ ನಾನು ನನ್ನ ಊರು ಅನ್ನೋ Sentiment ಬಿಟ್ಟಿರಲೂ ಆಗದ, ಬೆ೦ಗಳೂರಿನ ಮಾಯೆಯನ್ನು ಅರಗಿಸಿಕೊಳ್ಳಲೂ ಆಗದ ನನ್ನ೦ತ ವಿಚಿತ್ರ ಪ್ರಾಣಿಗಳು ಮಾತ್ರ ಎರಡು ದೋಣಿಯಲ್ಲಿ ಕಾಲಿಟ್ಟು ಇರುವುದೆಲ್ಲವ ಬಿಟ್ಟು, ಇರದುದನ್ನೇ ನೆನಸಿಕೊ೦ಡು ಬದುಕುತ್ತಿದ್ದೇವೆ,.... sorry ಬದುಕ್ತಾ ಇದೀವಿ ಅ0ತ ಅ೦ದುಕೊಳ್ತಾ ಇದೀವಿ
-------ಶ್ರೀ:-)