Sunday, July 19, 2015

Simply Complicated

ತಾರೀಕು ಹದಿನೈದು, ತಿಂಗಳ ಮದ್ಯಂತರ... ಕಂಪನಿ ಕೊಟ್ಟ ಸಂಬಳ ಖಾಲಿ... ಬ್ಯಾಂಕ್ ಪ್ರತಿ ತಿಂಗಳೂ ಕೊಡೋ ಸಾಲ (ಕ್ರೆಡಿಟ್ ಕಾರ್ಡ್) ನ ಮಿತಿಯು (ಕ್ರೆಡಿಟ್ ಲಿಮಿಟ್)  ಸರಿ ಸುಮಾರು ಮಿತಿ ಮೀರಿತ್ತು.... ತಲೆ ಕೆಟ್ಟು ಹೋದ ಹಾಗೆ ಅನ್ನಿಸಿ ಮಾಲ್ ಗೆ ಒಂದು ರೌಂಡ್ ಹಾಕಿಕೊಂಡು ಬರೋಣ ಅಂತ ಹೊರಟೆ. ವಾಪಸ್ಸು ಬಂದಾಗ ಸುಮಾರು ಒಂದು ಮೀಟರ್ ಉದ್ದದ ಬಿಲ್ಲು,  ಕೈ ತುಂಬಾ ಸಾಮಾನು, ತಲೇಲಿ ಮೂಡಿದ್ದು ಈ ಲೇಖನ...... 

Simply Complicated..... 

ಮನೆಗೆ ರೇಶನ್ ಎಲ್ಲರಿಗೂ ಬೇಕು. ಆದ್ರೆ ಮನೆ ಪಕ್ಕದಲ್ಲಿ ಇರೋ ಪ್ರಾವಿಶನ್ ಅಂಗಡೀಲಿ ತಗೊಳ್ಳೋದಕ್ಕಿಂತ AC ಮಾಲ್ ಅಲ್ಲಿ ತಗೊಂಡ್ರೆ  ನಮ್ಮ ಘನತೆ ಹೆಚ್ಚುತ್ತೆ, ಡಿಸ್ಕೌಂಟ್ ಸಿಗುತ್ತೆ  ಅಂದ್ಕೋತೀವಿ. ಅಲ್ಲಿ ಹೋದ್ರೆ ನಮಗೆ ಬೇಕಿದ್ದುದಕಿಂತ ಬೇಡದೆ ಇರೋದೇ ಜಾಸ್ತಿ. ಸರಿ ಒಳಗೆ ಹೋಗಿ ಒಂದು ರೌಂಡು ಹಾಕಿ ಬರೋವಷ್ಟರಲ್ಲಿ ಒಂದೋ ನಮ್ಮ ಕೈಲಿರೋ ಕಾಸು ಖಾಲಿ ಆಗಬೇಕು,ಇಲ್ಲ ಅವರು ಕೊಡೋ ತಳ್ಳೋ ಗಾಡಿ ತುಂಬಿರಬೇಕು. ಒಂದು ಕೆಜಿ ತಗೊಳ್ಳೋ ಬದಲು 2 kg  ತಗೊಂಡ್ರೆ ಏನೋ ಫ್ರೀ ಸಿಗುತ್ತೆ  ಅಂತ ತಗೋತೀವಿ. ಆ ಫ್ರೀ ಸಿಗೋ ವಸ್ತು ಏನಾದ್ರೂ ಪರವಾಗಿಲ್ಲ ಆದರೂ ತಗೋತೀವಿ. 500 ಕ್ಕಿಂತ ಜಾಸ್ತಿ ಬಿಲ್ ಆದ್ರೆ ಪಾರ್ಕಿಂಗ್ ಫ್ರೀ, ಅದ್ಕೆ ಏನೇನೋ ತಗೊಂಡು 500 ಕ್ಕೆ ಸರಿದೂಗಿಸ್ತೀವಿ. ಹೀಗೆ ಹೆಚ್ಚಿಗೆ ತಗೊಂಡ ವಸ್ತುಗಳು ಹಾಳಾಗೋದೆ ಜಾಸ್ತಿ. ಆದ್ರೆ who cares ..... ಸರಿ ಶಾಪ್ಪಿಂಗ್ ಮಾಡಿ ಸುಸ್ತಾಗಿದೆ ಅಂತ ಮಾಲ್ ಪಕ್ಕ ಇರೋ ಜ್ಯೂಸು ಸೆಂಟರಿನಲ್ಲಿ  ಜ್ಯೂಸು ತಗೊಂಡು ಕುಡಿದು ಖುಷಿ ಪಡ್ತೀವಿ. ಮಾಲ್ ಪಕ್ಕ ಜ್ಯೂಸ್ ಗೆ ರೇಟು ಡಬಲ್ ಅನ್ನೋದನ್ನು ಮರೀತೀವಿ. ಕಾರ್ ಪೆಟ್ರೋಲ್ ಚಾರ್ಜ್ ವೇಸ್ಟು , ಪಾರ್ಕಿಂಗ್ ಕಾಸು ವೇಸ್ಟು, ತಿಂಡಿ ತೀರ್ಥಗಳಿಗೆ ಹೆಚ್ಚಿಗೆ ಹಣ ಕೊಟ್ಟಿದ್ದು ವೇಸ್ಟು, ಫ್ರೀ ಸಿಕ್ಕಿರೋ ವಸ್ತುಗಳು ಒಂತರಾ ವೇಸ್ಟೇನೆ. ಒಟ್ಟಿನಲ್ಲಿ ಮಾಲ್ ಅಲ್ಲಿ ಸಿಗೋ 2-10% ಡಿಸ್ಕೌಂಟ್ ಗೆ ಅಥವಾ ಉಪಯೋಗಕ್ಕೆ ಬರದೇ  ಇರೋ ಫ್ರೀ ವಸ್ತುಗಳಿಗೆ ಮಾರು ಹೋಗಿ ಬಕ್ರ ಆಗ್ತೀವಿ...  ಆಗ್ತಾನೆ ಇರ್ತೀವಿ.


ದೊಡ್ಡ ಮನೆ ಬೇಕು ಅನ್ನೋದು ಎಲ್ಲರ ಆಸೆ... ದೊಡ್ಡ ಮನೆಗೆ ಶಿಫ್ಟ್ ಆದ ಮೇಲೆ ಮನೆ ತುಂಬಾ ಖಾಲಿ ಖಾಲಿ ಅಂತ ಅನ್ನಿಸೋಕೆ ಶುರು ಆಗತ್ತೆ. ಅಲ್ಲಿ ಇಲ್ಲಿ ನೋಡಿ, Olx, Quikr ಗಳಲ್ಲೆಲ್ಲ ಅದು ಇದು ಅಂತ ಹುಡುಕಾಟ ಮಾಡಿ ಸೊಸೆಯನ್ನು  ಮನೆಗೆ  ತುಂಬಿಸಿಕೊಂಡ ಹಾಗೆ ಡೈನಿಂಗ್ ಟೇಬಲ್ಲು, ಸೋಫಾ, ಟೀಫಾಯಿ, ಬುಕ್ ಸ್ಟಾಂಡು ಎಲ್ಲವನ್ನು ಮನೆಗೆ ಬರ ಮಾಡಿಕೊಳ್ತೀವಿ. ಸೋಫಾದ ಲೆದರ್ ಹಾಳಾಗತ್ತೆ ಅಂದುಕೊಂಡು ಅದಕ್ಕೊಂದು ಸೋಫಾ ಕವರ್ ಹಾಕಬೇಕು... ಡೈನಿಂಗ್ ಟೇಬಲ್ ಶೈನ್ ಹೋಗತ್ತೆ ಅಂತ ಅದರ ಮೇಲೆ ಕೂರೋದೇ ಇಲ್ಲ. ಅಥವಾ ಅದಕ್ಕೆ ಇನ್ನೊಂದು ಕವರ್.. ಸರಿ ಕವರ್ ಹಾಕಿದ ಮೇಲೆ ಅದು ದೂಳಾಗತ್ತೆ, ಕಲೆ ಆಗತ್ತೆ. ಅದನ್ನು ಒಗೆಯೋಕೆ ಅಂತ ಸ್ಟ್ರಾಂಗ್ ಡಿಟರ್ಜೆಂಟ್.  ಸ್ಟ್ರಾಂಗ್ ಡಿಟರ್ಜೆಂಟ್ ಅಂದ ಮೇಲೆ ಅದು ಒಗೆಯೋ ಕೈ ಮೇಲೆ ಪರಿಣಾಮ ಬೀರದೇ ಇರೋಕೆ ಹೇಗೆ ಸಾದ್ಯ ..?  ಕೈ ಎಲ್ಲ ಒಡೆದು ನೋವು ಉರಿ ಶುರು ಆಗುತ್ತೆ. ಇದು ಯಾಕೋ ಸರೀ ಹೋಗ್ತಾ ಇಲ್ಲ ಅಂತ ದೀಪಾವಳಿಗೋ  ಇಲ್ಲ ನ್ಯೂ ಇಯರ್ ಗೋ  ಆಫರ್ ಗಳು ಬಂದ ಕೂಡ್ಲೇ ಒಂದು ವಾಶಿಂಗ್ ಮಷೀನ್ ತಗೋತೀವಿ.... ಅದ್ಕೆ ಒಂದು ಹೊಸ ಕವರ್ ಅಂತ ಮತ್ತೆ ಹೇಳೋದು ಬೇಕಾಗಿಲ್ಲ ಅನ್ಸುತ್ತೆ ..? ಸರಿ ಮನೆ ಎಲ್ಲ ಸೆಟ್ ಒಂದು ಲೆವೆಲ್ ಗೆ ಸೆಟ್  ಆಯಿತು ಅಂತ ಉಸಿರು ಬಿಡೋವಷ್ಟರಲ್ಲಿ ಹನ್ನೊಂದು ತಿಂಗಳು ಮುಗಿದಿರತ್ತೆ . ಒಂದು ದಿನ ರಾಹುಕಾಲದಲ್ಲಿ ಮನೆ ಓನರ್ ಬಾಡಿಗೆ ಜಾಸ್ತಿ ಮಾಡಿ ಹೊಸ ಅಗ್ರಿಮೆಂಟ್ ತಗೊಂಡು ಕುಹಕ ನಗೆ ಬೀರುತ್ತಾ ನಿಂತಿರ್ತಾರೆ .  ಹೆಚ್ಚೇನು ಇಲ್ಲ ಅಬ್ಬಬ್ಬ ಅಂದ್ರೆ 500-1000 ರೂಪಾಯಿ ಜಾಸ್ತಿ ಅಷ್ಟೇನೇ. ಹಳೇ ಮನೆ ಬಿಟ್ಟು ಹೋಗಬೇಕಾದ್ರೆ ಕೊಡಬೇಕಾದ ಪೇಂಟಿಂಗ್ ಖರ್ಚು, ಬ್ರೋಕರ್ ಗೆ ಕೊಡಬೇಕಾದ ಹಣ, ಮನೆಯಲ್ಲಿರೋ ಸಾಮನುಗಳನ್ನು ಸಾಗಿಸೋ ಖರ್ಚು ಇವನ್ನೆಲ್ಲ ಲೆಕ್ಕ ಹಾಕಿದರೆ ಜಾಸ್ತಿ ಮಾಡಿರೋ ಬಾಡಿಗೆಯ ಮೊತ್ತವೇ ವಾಸಿ. ಆದರೂ  ಯಾಕೋ ಬಾಡಿಗೆ ಜಾಸ್ತಿ ಅನ್ನಿಸಿ ಬೇರೆ ಮನೆ ನೋಡೋ ಪ್ಲಾನ್ ಮಾಡ್ತೀವಿ. ಆದರೆ ಈಗ ಮನೆಯಲ್ಲಿರೋ ಫರ್ನಿಚರ್ ಗೆ ಅನುಗುಣವಾಗಿನೇ ಮನೆ ಹುಡುಕಬೇಕು. ಮನೆಯಲ್ಲಿ ವಾಸ ಮಾಡಬೇಕಾಗಿರೋ ಮನುಷ್ಯರನ್ನು ಬಿಟ್ಟು ನಿರ್ಜೀವವಾಗಿರೋ ಟೇಬಲ್ ಕುರ್ಚಿಗಳಿಗೋಸ್ಕರ ಬದುಕೋ ಅನಿವಾರ್ಯತೆ ...ವಿಚಿತ್ರವೆನಿಸಿದರೂ ನಿಜ.


ಕಾಲ ಬದಲಾಗಿದೆ. ಊಟಕ್ಕೆ ಕಾಸಿಲ್ದೇ ಇದ್ರೂ ಪರವಾಗಿಲ್ಲ ಆದ್ರೆ ಕೈಯಲ್ಲಿ ಮಾತ್ರ  ದೊಡ್ಡದಾದ ಮೊಬೈಲ್ ಬೇಕೇ ಬೇಕು. ಆ ಮೊಬೈಲಲ್ಲಿ ಇರೋ app ಗಳನ್ನ ಉಪಯೋಗಿಸಬೇಕು ಅಂದರೆ ಇಂಟರ್ನೆಟ್ ಪ್ಯಾಕ್ ಬೇಕು...... ಸರಿ ಇಂಟರ್ನೆಟ್ ಪ್ಯಾಕ್ ಇದ್ದ ಮೇಲೆ ಕೈ ಸುಮ್ನೆ ಕೂರುತ್ತಾ? ಅದು ಇದು ಅಂತ Download ಮಾಡ್ತೀವಿ, ಬೇಡದೆ ಇರೋ ನ್ಯೂಸ್ ಗಳನ್ನು ಓದಿ ಕಾಮೆಂಟ್ ಮಾಡ್ತೀವಿ..... WhatsApp, Facebook ನಲ್ಲಿ  ಅದು ಇದು  ನೋಡಿ ಕಣ್ಣು ತಂಪು ಮಾಡ್ಕೋತೀವಿ. ನಾವು ಜೀವನದಲ್ಲಿ ಎಷ್ಟು ಬ್ಯುಸಿ ಅಂದರೆ  ದೇವಸ್ಥಾನದಲ್ಲಿ ದೇವರಿಗೆ  ಸುತ್ತು ಹಾಕೋಕೆ ಕೂಡ  ಟೈಮ್ ಇಲ್ಲ ಆದ್ರೆ ಮೊಬೈಲ್ ಅಲ್ಲಿ ಮಾತ್ರ Temple Run ಬೇಕು. ದೇವರಿಗೆ ಸುತ್ತು ಹಾಕೋದು ಬಿಡಿ ಚೆಲುವೆಯರ ಸುತ್ತ ಸುತ್ತೋ ಹುಡುಗರು ಬೆ ರಳೆಣಿಕೆಯಷ್ಟೇ . ಯಾಕಂದ್ರೆ ಹುಡುಗಿಯರ ಮೇಲೆ ಹುಡುಗರಿಗೆ, ಹುಡುಗರ ಮೇಲೆ ಚೆಲುವೆಯರಿಗೆ CRUSH ಆಗೋದರ ಬದಲು CANDY ಮೇಲೆ CRUSH ಆಗಿದೆ. ಅವರೆಲ್ಲ ಆಡೋದರಲ್ಲೇ ಬ್ಯುಸಿ. ಸರಿ ಮೊಬೈಲ್ ಮೇಲೆ ಇಷ್ಟೆಲ್ಲಾ ಅತ್ಯಾಚಾರ ಮಾಡಿದರೆ ಬ್ಯಾಟರಿ ಖಾಲಿ ಆಗದೆ ಇರುತ್ತಾ? ಅದು ಖಾಲಿ ಆಗತ್ತೆ .... ಆಗ್ತಾನೆ ಇರತ್ತೆ. ಆದರೆ ಪದೇ ಪದೇ ಚಾರ್ಜ್  ಮಾಡೋಕೆ ಎಲ್ಲಿ ನೆನಪಾಗುತ್ತೆ ,  ಪವರ್ ಪ್ಯಾಕ್ ತಗೊಳ್ಳೋದು ಉತ್ತಮ ಅನ್ನಿಸಿ ತಗೋತೀವಿ.... ಈಗ ಫುಲ್ ನೆಮ್ಮದಿ ಅಂತ ಅಂದ್ಕೋತೀವಿ.  ಆದರೆ ಅಲ್ಲಿ ಆಗೋದೇ ಬೇರೆ. ಪವರ್ ಪ್ಯಾಕ್ ಇದೆ ಅಂತ ಮೊಬೈಲ್ ಚಾರ್ಜ್ ಗೆ ಹಾಕೋದೇ ಅಪರೂಪ. ಪವರ್ ಬ್ಯಾಂಕ್ ಇದೆ ಅಂತ ಗೊತ್ತಾದ ಕೂಡಲೇ ಸ್ನೇಹಿತರಿಗೂ ಅದರಲ್ಲಿ ಪಾಲು ಬೇಕೇ ಬೇಕು. CANDY CRUSH ಅಲ್ಲಿ ಯಾವುದೋ ಲೆವೆಲ್ ಅಲ್ಲಿ ಆಟ ಮುಂದೆ ಹೋಗದೆ ಇದ್ದಾಗ ಅಥವಾ WhatsApp ಅಲ್ಲಿ ಯಾರೂ ಮೆಸೇಜ್ ಕಳುಹಿಸದೇ ಇದ್ದಾಗ, ಅಪರೂಪಕ್ಕೆ ಮನೆಯ ನೆನಪು ಬಂದು ಒಂದು ಕಾಲ್ ಮಾಡೋಣ ಅಂದುಕೊಂಡ ವೇಳೆಯಲ್ಲಿ ಮಾತ್ರ  " ಲೋ ಬ್ಯಾಟರಿ.... ಪ್ಲೀಸ್ ಕನೆಕ್ಟ್ ಚಾರ್ಜರ್"


ಮೇಲೆ ಹೇಳಿದ ಸನ್ನಿವೇಷ ಗಳು ಕೆಲವು ಮಾತ್ರ, ಇಂತವು ದೈನಂದಿನ ಜೀವನದಲ್ಲಿ ಸಾಕಷ್ಟು ಇವೆ. ಆದ್ರೆ ಇದೆಲ್ಲ ಮಾಡೋವಾಗ ಮನಸ್ಸಿಗೆ ಏನೋ ಒಂದು ಮುದ ಸಿಗುತ್ತೆ ಅನ್ನೋದು ಕೂಡ ನಿಜ.... ಜೀವನವನ್ನು Simple ಇಂದ Complicate ಮಾಡಿಕೊಳ್ಳೋದರಲ್ಲಿ ಸಂತೋಷ ಕಂಡುಕೊಳ್ಳುತ್ತಾ ಇದೀವಿ ಅನ್ನೋದು ಮಾತ್ರ ಕಟು ವಾಸ್ತವ... Side Effects of  So Called Happy (Luxurious..?)  City Life :-) :-)


--- ಶ್ರೀ :-)

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"