Sunday, February 26, 2012

ಬಿಸಿ ಮುಟ್ಟದೆ ಬೆಣ್ಣೆ ........


ಕಳೆದ ಬಾರಿ ಊರಿಗೆ ಹೋದಾಗ ಹಳೆಯ ನೋಟ್  ಬುಕ್  ಒಂದರಲ್ಲಿ ಸುಮಾರು 7 ವರುಷ ಮೊದಲು ನಾನು ಗೀಚಿದ ಬರಹವೊಂದು ಸಿಕ್ಕಿತು. ಅದು ನಾನು ನನ್ನ ಇಂಜಿ ನೀರಿಂಗ್ ಮುಗಿಸಿ  ಕೆಲಸವಿಲ್ಲದೆ ಮನೆಯಲ್ಲಿ ಕೂತಾಗ ಹತಾಶೆಯಲ್ಲಿ ಗೀಚಿದ ಬರಹ, ಕತೆ ಅನ್ನಬಹುದೇನೋ.ತರಲೆ ಯಲ್ಲಿ ಏನೂ ಗೀಚದೆ ಬಹಳ ದಿನಗಳಾದವು ಇದನ್ನೇ ಹಾಕೋಣ ಅಂದ್ಕೊಂಡೆ. 2 ಪುಟಗಳಷ್ಟು ಇದ್ದ ಬರಹವನ್ನು ಟೈಪ್ ಮಾಡಕ್ಕೆ ತಗೊಂಡಿದ್ದು ಮಾತ್ರ 3 ವಾರಗಳು. ಇದು ಕತೆಯೋ ವ್ಯಥೆಯೋ , ಬರಹವೋ ನನಗೆ ಗೊತ್ತಿಲ್ಲ....ಓದಿ ನೀವೇ ಹೇಳಿ.....

ಬಿಸಿ ಮುಟ್ಟದೆ ಬೆಣ್ಣೆ ........


ಈ ಕಡಲು ಎಷ್ಟು ಪ್ರಶಾಂತವಾಗಿದೆ ಅದರಲ್ಲಿ ಕೂಡ ಆಗಾಗ ಎದ್ದೇಳೋ ಈ ಭರ್ಜರಿ ಅಲೆಗಳು ಪ್ರಾಯಶ ಸಮುದ್ರ ದಲ್ಲಿ ಇರೋ ತುಮುಲ ತವಕಗಳನ್ನು ಸಾರುತ್ತಿರಬಹುದೋ ಏನೋ?
ನನ್ನ ಜೀವನ ಕೂಡ ಹಾಗೆ ಅಲ್ಲವೇ ಅಲ್ಲಿ ಇಲ್ಲಿ ಸಾಲ ಮಾಡಿ ಓದು ಮುಗಿಸಿ ಕೂತಿದ್ದೇನೆ. ಅದೆಷ್ಟು ಕಡೆ ಹೋಗಿ ಕೇಳಿದರು ಕೆಲಸ ಖಾಲಿ ಇಲ್ಲ. ಖಾಲಿ ಇದ್ರೆ ಎಲ್ಲ influence ಅನ್ನೋ ಹೆಮ್ಮಾರಿಯ ಬಾಯಿ ಗೆ ತುತ್ತು. ಸಾಲ ತೆಗೆದು ಆಗಲೇ 4 ವರ್ಷಗಳು ಕಳೆದವು. ಬಡ್ಡಿ ಕಟ್ಟದೆ ಆಗಲೇ 8 ತಿಂಗಳು ಕಳೆದಿವೆ. ಬೆಳಗ್ಗೆ ಬ್ಯಾಂಕ್ ಮ್ಯಾನೇಜರ್ ಹೇಳಿದ ಮಾತುಗಳು ಇನ್ನು ಕಿವಿಯಲ್ಲಿ ಹಾಗೆ ಇವೆ. ನನ್ನ ಪ್ರಾಣ ಸ್ನೇಹಿತನ ಅಪ್ಪ ಅವ್ರು. ಆದ್ರೆ ಸಂಬಂದಗಳು ಬೇರೆ ವ್ಯವಹಾರನೆ ಬೇರೆ. ಪಾಪ ಅವ್ರಿಗೆ ಮೇಲಧಿಕಾರಿಗಳಿಂದ ಸೂಚನೆ ಬಂದಿರಬೇಕು. ಅದ್ಕೆ ಬೇಗ ಸಾಲ ತೀರಿಸಿ ಅಂತ ಬೈದು ಹೋದರು. ಆಮೇಲೆ ಅದೇನು ಅನ್ನಿಸಿತೋ ಏನೋ ಹೋಗೋವಾಗ ಕರೆದು ಸದ್ಯಕ್ಕೆ ಹೇಗಾದರು ಮಾಡಿ ಒಂದು 2 ಸಾವಿರ ಕಟ್ಟು ಆಮೇಲೆ ನಾನು ನೋಡ್ಕೊತೇನೆ ಅಂದ್ರು. ಯಾಕೋ ಆ ನಿಮಿಷದಲ್ಲಿ ಅವ್ರು ಮ್ಯಾನೇಜರ್ ಅಲ್ಲ ನನ್ನ ಪ್ರಾಣ ಸ್ನೇಹಿತನ ಅಪ್ಪ ಅನಿಸ್ತು.....ಈ ದರಿದ್ರ ಮನಸ್ಸು ಅಷ್ಟು ಬೇಗ ತನ್ನ ಬುದ್ದಿ ತೋರಿಸಿಬಿಡತ್ತೆ. ತಪ್ಪು ನನ್ನದೇ ಆಗಿದ್ರು ಯಾರದ್ರು  ಬೈದರೆ ಅವ್ರು ಕೆಟ್ಟವರು, ಸಮಾದಾನ ದ ಮಾತು ಹೇಳಿದ್ರೆ ಅವ್ರು ಒಳ್ಳೆಯವರು...ಛೆ....

ಅದ್ಯಾಕೋ ಜೀವ ಇರೋ ಮನುಸ್ಯರಿಗಿಂತ ಈ ಕಡಲ ತೀರ ನೆ ಜಾಸ್ತಿ ಆಪ್ತ ನಂಗೆ. ಯಾಕೆ ಅಂದ್ರೆ ನಾನು ಯಾವ ಗುಂಗಲ್ಲಿ ಬಂದು ಕೂತರು ನನ್ನ ಕಾಲು ಚುಂಬಿಸಿ ಮಾಯವಾಗತ್ತೆ. ಅದ್ಕೆ ನನ್ನ ಮೇಲೆ ಅದೇ ಆಪ್ತ ಭಾವ. ಹಾವ, ಭಾವ, ಆಸ್ತಿ, ಅಂತಸ್ತು ನೋಡಿ ಮಣೆ ಹಾಕೋ ಮನುಷ್ಯ ರಿಗಿಂತ ಈ ಕಡಲಿನ ಅಗಾಧ  ಭಾವನೆ ಮನಸ್ಸಿಗೆ ಮುದ ನೀಡತ್ತೆ. ಹಾಸ್ಟೆಲ್ ನಲ್ಲಿ  ಓದೋವಾಗ ಕಾಲೇಜಿಗೆ ಬಂಕ್ ಹಾಕಿ ಬಂದು ಕೂತರೆ ಯಾಕೋ ಸಮುದ್ರ ನನ್ನ ನೋಡಿ ನಕ್ಕ ಹಾಗೆ, ಜೀವದ ಗೆಳತಿಯ ಜೊತೆ ಅಪರೂಪಕ್ಕೆ ಬಂದು ಕೂತರೆ ಮನೆಯಲ್ಲಿ ಹೇಳ್ತೇನೆ ಅಂತ ಗದರಿಸಿದ ಹಾಗೆ, ಮನಸ್ಸು ಸರಿ ಇಲ್ಲದಾಗ ಹಾಗೆ ಸುಮ್ನೆ ಬಂದು ಕೂತರೆ ನನ್ನ ಕಾಲಿಗೆ ತಾಕಿ ತಂಪೆರೆದು ಮನಕ್ಕೆ ಮುದ ನೀಡೋ ಈ ಸಮುದ್ರಕಿಂತ ಇನ್ನೇನು ಬೇಕು....
ಆದರೆ ಇವತ್ತು ಮಾತ್ರ ಯಾಕೋ ಈ ಸಮುದ್ರ ತೀರ ಕೂಡ ನೀರಸವಾಗಿದೆ. ದೂರದಲ್ಲಿ ಕೆಟ್ಟು ನಿಂತಿರೋ ದೋಣಿಯ ಮರೆಯಲ್ಲಿ ಯುವ ಜೋಡಿಯೊಂದು ಮಾತುಕತೆಯಲ್ಲಿ ನಿರತವಾಗಿದೆ.ಬೇರೆ ದಿನವಾಗಿದ್ದರೆ ಅವರು ಏನು ಮಾಡ್ತಾ ಇದಾರೆ ಅಂತ ಕುತೂಹಲ ಇರ್ತಾ ಇತ್ತು. ಆದ್ರೆ ಇವತ್ತು ನೀರಸ  ಭಾವ ಅಷ್ಟೇ ... ಏಡಿಯೊಂದು ನಾಯಿಮರಿಯೊಂದರ ಕಣ್ಣು  ತಪ್ಪಿಸಿ ಅದರ ಬಿಲ ಸೇರೋ ತವಕದಲ್ಲಿ ಜೋರಾಗಿ ಓಡ್ತಾ  ಇದೆ. ಬೆಸ್ತರ ಮನೆಯ ಪಾಪುವೊಂದು ಬೆತ್ತಲೆಯಾಗಿ sunbath ತಗೋತ ಇದೆ. ಸಂಜೆ ಬರೋ ಜನರ ನಿರೀಕ್ಷೆಯಲ್ಲಿ ಚುರ್ ಮುರಿ ಮಾಡೋ ಹುಡುಗ ಕಾಯ್ತಾ ಇದಾನೆ. ಇವತ್ತು ಚುರ್ಮುರಿ ಯಲ್ಲಿ ಎಷ್ಟು ಹಣ ಮಾಡಬಹುದು ಅಂತ ಯೋಚನೆ ಮಾಡ್ತಾ ಇರಬಹುದೋ ಏನೋ...? ಎಲ್ಲರು ಏನೋ ಒಂದು ಕೆಲಸದಲ್ಲಿ ಬ್ಯುಸಿ ಆಗಿದ್ದರೆ. ನಾನು ಮಾತ್ರ ನಿಷ್ಪ್ರಯೋಜಕ ನಾಗಿ ಅನ್ನ ದಂಡ ಭೂಮಿ  ಭಾರ  ಅನ್ನೋ ತರ ಇದೇನೇ. ಕೆಲಸ ಮಾಡಿ ಅಪ್ಪ ಅಮ್ಮನ ನೋಡ್ಕೊಂಡು ಇರ್ಬೇಕಾಗಿರೋ ಈ ಕಾಲದಲ್ಲಿ ಬಿಟ್ಟಿ ಸುತ್ತುತ್ತ ಇದೀನಿ. ಇದಕ್ಕೆಲ್ಲ  ಕಾರಣ ಯಾರು? ಕಷ್ಟ ಪಟ್ಟು ನನ್ನ ಓದಿಸಿದ ಅಪ್ಪ ಅಮ್ಮನ? ಚೆನ್ನಾಗಿ ಓದಿದರೆ ಒಳ್ಳೆ ಕೆಲಸ ಸಿಗತ್ತೆ ಅಂದ  ಕಾಲೇಜ್  ಪ್ರೊಫೆಸರ್ ಗಳ?  ಅಥವ ನಿಯತ್ತಾಗಿ ಓದಿದ ನಾನೇ? ಇಲ್ಲ ಇದಕ್ಕೆಲ್ಲ ಕಾರಣ ಆ ದೇವ್ರು. ಹುಟ್ಟಿಸಿದವ ಹುಲ್ಲು ಮೇಯಿಸ್ತ ಇದಾನೆ......ಈ  ಭೂಮಿ ಮೇಲೆ ಬಂದ್ರೆ ಅದೆಷ್ಟು  ಜನ ಬೈತಾರೋ ಅಂತ ಭಯ ಬಿದ್ದು ಅದೆಲ್ಲೋ ಅಡಗಿದ್ದಾನೆ.

ಅರೆ ಇದೇನಿದು ದೂರದಲ್ಲೇನೋ ತೇಲಿ ಬರ್ತಾ ಇರೋ ಹಾಗಿದೆ ತೀರದ ಕಡೆ. ಅಯ್ಯೋ ಪಾಪ ಯಾರೋ ನೀರಲ್ಲಿ ಪ್ರಾಣ ಬಿಟ್ಟಿರಬಹುದೋ ಏನೋ..? ಯಾಕೆ ಮನಸ್ಸು ಯಾವಾಗಲು ಕೆಟ್ಟ ಯೋಚನೆ ಮಾಡತ್ತೆ. ಅದು ಏನೋ ಮರದ ದಿಮ್ಮಿ ಇಲ್ಲ ಪ್ಲಾಸ್ಟಿ ಕ್ ತುಂಡು ಆಗಿರಬಹುದಲ್ವಾ? ಯಾಕೋ ಇದು ಹತ್ರ ಬಂದ ಹಾಗೆ  ಸೂಟ್ ಕೇಸ್ ತರ ಕಾಣಿಸ್ತಾ ಇದೆಯಲ್ಲ. ನಿಜವಾಗ್ಲೂ ಅದು  ಸೂಟ್ ಕೇಸ್ ಆಗಿದ್ರೆ ಒಳಗೆ ಏನು ಇರಬಹುದು? ಎಲ್ಲೋ ತಪ್ಪಿ ಯಾವುದೊ ಹಡಗಿಂದ ಬಿದ್ದಿರಬೇಕು. ಹಡಗಿಂದ ಬಿದ್ದಿದೆ ಅಂದ್ರೆ ಒಳಗೆ ಏನಾದ್ರು ಹಣ ಇರಬಹುದೇ? ಹಾಗೆನಾದ್ರು ಇದ್ರೆ ನನ್ನಷ್ಟು ಪುಣ್ಯವಂತ ಯಾರು ಇಲ್ಲ...ಯಾಕೋ ಮನಸ್ಸಲ್ಲಿ ಈ ತರದ ಆಲೋಚನೆಗಳು ಬರುತ್ತಿವೆ. ಹತಾಶೆ ಆವರಿಸಿಕೊಂಡರೆ ಮನಸ್ಸು ಹಳಿ ಇಲ್ಲದ ರೈಲಿನಂತೆ. ವಸ್ತು ಹತ್ತಿರಕ್ಕೆ ಬಂದಂತೆಲ್ಲ ಅದು  ಸೂಟ್ ಕೇಸ್ ಅನ್ನೋದು ಗೊತ್ತಾಯ್ತು...ಏನಿರಬಹುದು ಒಳಗೆ? ಅದ್ಯಾಕೋ ಈ ಮನಸ್ಸಿಗೆ ಒಳಗೆ ಏನಾದ್ರು ಹಣ ಇರಬಹುದೇ ಅಂತ ಹಾಳು ಕುತೂಹಲ.

ಅರೆ ದಡಕ್ಕೆ ಬಂದೆ ಬಿಟ್ಟಿತಲ್ಲ ಅದು....ಹತ್ರ ಬಂದ ಹಾಗೆ  ಸೂಟ್ ಕೇಸ್ ನ ಹಣೆಬರಹ ಗೊತಾಯ್ತು. ಅದು  ಮದ್ಯದಲ್ಲಿ ಒಡೆದಿದೆ. ನನ್ನ  ಅದೃಷ್ಟದ  ತರ ಇದರಲ್ಲೂ ದೊಡ್ಡ ತೂತು....ಅದರಿಂದ ಹೊರ ಬಂದಿರೋ ಬಟ್ಟೆಗಳು. ಯಾರೋ ನಿಷ್ಪ್ರಯೋಜಕ ಅಂತ ಇದನ್ನು   ಒಗೆದಿದ್ದಾರೆ  ಪ್ರಾಯಶಃ ನನ್ನ  ಅಣಕಿಸಕ್ಕೆ. ಸಾಯಂಕಾಲದ ಪರದೆ ಸರಿದು ರಾತ್ರಿ ಅವರಿಸಕ್ಕೆ ತಯಾರಾದಾಗ ಮನೆಗೆ ಹೋಗ್ಬೇಕು ಅನ್ನಿಸಿದರು ಇಷ್ಟು ಹೊತ್ತು ನನ್ನ ತಲೆಯಲ್ಲಿ ಹುಚು ಕಲ್ಪನೆಗಳನ್ನು ಆಸೆಯನ್ನು ಹುಟ್ಟು ಹಾಕಿದ ಆ ಪೆಟ್ಟಿಗೆ ಗೆ ಜಾಡಿಸಿ ಒದ್ದು ಆಮೇಲೆ ಹೋಗ್ತೇನೆ ಅಂತ ದೃಡ ನಿರ್ದಾರ ಮಾಡಿದ್ದೇನೆ. ಸುಮಾರು ಹತ್ತು ನಿಮಿಷ ಕಳೆದು ಹೋದ ಮೇಲೆ ಪೆಟ್ಟಿಗೆ ದಡಕ್ಕೆ ಬರುತ್ತಿದ್ದಂತೆ ಇರೋ ಕೋಪವನ್ನೆಲ್ಲ ಒಗ್ಗೂಡಿಸಿ  ಸೂಟ್ ಕೇಸ್ ಗೆ ಜಾಡಿಸಿ ಒದ್ದೆ. ಮೊದಲೇ ಒಡೆದಿದ್ದ ಅದು ಇನ್ನಷ್ಟು  ಚಿದ್ರವಾಗಿ ಒಳಗೆ ಇದ್ದ ಬಟ್ಟೆಗಳೆಲ್ಲ   ಹೊರ ಬಂದವು. ಅರೆ ಬಟ್ಟೆ ಮದ್ಯದಲ್ಲಿ ನೋಟಿನ ತರ ಏನೋ ಕಾಣ್ತಾ ಇದೆಯಲ್ಲ. ತೆಗೆದು ನೋಡಿದರೆ 100 ರ ನೋಟುಗಳು....ಎನಿಸಿ ನೋಡಿದರೆ ಸರಿಯಾಗಿ 3 ಸಾವಿರ... ಬಿಸಿ ಮುಟ್ಟದೆ ಬೆಣ್ಣೆ ಕರಗಲ್ಲ. ಈ ಮಾತು ಆ ದೇವರಿಗೂ ಅನ್ವಯಿಸತ್ತೆ. ಅವನಿಗೆ ಬೈದಿದಕ್ಕೆ ಸದ್ಯ ಸಾಲ ತೀರಿಸಕ್ಕೆ ಹಣ ಸಿಕ್ತು. ನಾಳೆ ಕೆಲಸ ಕೊಟ್ಟೆ ಇಲ್ಲ ಅಂತ ಅವನಿಗೆ  ಬೈದರೆ ಕೆಲ್ಸಾನು ಸಿಗಬಹುದೇನೋ..!!!!!!!!!!!!!!

-------ಶ್ರೀ :-)