Tuesday, April 5, 2011

ಚ೦ದ್ರನ ಮೇಲೆ ಒ೦ದು 30X40 ಸೈಟು ಮಾರಾಟಕ್ಕಿದೆ..............


ಕಳೆದ ಹಲ ದಿನಗಳಿ೦ದ ಯಾಕೋ ಬ್ಲಾಗ್ ನಲ್ಲಿ ಏನೂ ಬರೆಯಲು ಆಗಿರಲಿಲ್ಲ. ಆಗಲೇ   "ಸೂಪರ್ ಮೂನ್" ನ ಅವಾ೦ತರ ನ್ಯೂಸ್ ಚಾನಲುಗಳಲ್ಲಿ  ಪದೇ ಪದೇ ಬರ್ತಾ ಇತ್ತು. ಆಗಲೇ ಹೊಳೆದಿದ್ದು ಈ ಲೇಖನ...ಓದಿ ಚೆನ್ನಾಗಿದ್ರೆ ನಕ್ಕು ಬಿಡಿ. ಇಲ್ಲ ಅ೦ದರೆ ಮರೆತು ಬಿಡಿ . ಆದ್ರೆ ಕಾಮೆಂಟ್ ಹಾಕೋದನ್ನು ಮಾತ್ರ ಮರೆಯಬೇಡಿ ;-) 

ಈ ಭೂಮಿಯ ಮೇಲೆ ಇರೋ ಬರೋ ಖಾಲಿ ಜಾಗಗಳೆಲ್ಲ ಖಾಲಿಯಾಗಿ ರಿಯಲ್ ಎಸ್ಟೇಟ್ ಅ೦ತ ದ೦ದೆ ನಡೆಸುತ್ತಿದ್ದ ಜನರೆಲ್ಲಾ ಇನ್ನೇನಪ್ಪ ಮಾಡೋದು ಅ೦ತ ತಲೆ ಮೇಲೆ ಕೈ ಕೊಟ್ಟು ಕೂತಿದ್ದರು (ಇರೋ ಬರೋ ಬಡಪಾಯಿಗಳೆಲ್ಲರಿಗೆ ಕೈ ಕೊಟ್ಟ ನ೦ತರ ಈ ಗತಿ ಸಹಜವೇ ತಾನೇ?). ಅಷ್ಟರಲ್ಲೇ ತಾವೇ ನ್ಯೂಸ್ ಹುಟ್ಟಿಸಿ ಹಾಕೋ TV9  ನಲ್ಲಿ ಒ೦ದು ಬ್ರೇಕಿಂಗ್ ನ್ಯೂಸ್ ...ಚಂದ್ರನ ಮೇಲೆ ನೀರು ಸಿಕ್ಕಿದೆಯ೦ತೆ. ಜನ TV9  ನ್ಯೂಸ್ ನ೦ಬುವುದು ಕಡಿಮೆಯಾದರೂ ಇದನ್ನು ನ೦ಬಲೇಬೇಕಾಯ್ತು. ಯಾಕಪ್ಪ ಅ೦ದ್ರೆ ಈ ಸುದ್ದಿ ಬ೦ದಿದ್ದು ಅಮೇರಿಕಾದ ನಾಸಾ ದಿ೦ದ.
ಅದೇನೇ ಇರಲಿ ಚ೦ದ್ರನ  ಮೇಲೆ ನೀರು ಸಿಕ್ಕಿದರೆ ಜನಸಾಮಾನ್ಯರ  ( ಅ೦ದ್ರೆ ನಾಳೆಯ ಬಗ್ಗೆ ಯೋಚನೆ ಮಾಡಿ ಇವತ್ತಿನ ಖರ್ಚುಗಳನ್ನು ಕಮ್ಮಿ ಮಾಡಿ ಅತ್ತ ನಾಳೆಯಲ್ಲೂ ಬದುಕದೆ ಇತ್ತ ಇ೦ದಿನಲ್ಲೂ ಬದುಕದೆ  ಮು೦ದೇನಪ್ಪ? ಅ೦ತ ಸದಾ ಯೋಚನೆ ಮಾಡ್ತಾ ಇರೋ ನಮ್ಮ ನಿಮ್ಮ೦ತವರು ) ಪಾಲಿಗೆ ಅದೊ೦ದು ಕೇವಲ ಸುದ್ದಿ ಅಷ್ಟೇ. ಆದ್ರೆ ಎಲ್ಲಿ ಆರಡಿ ಮೂರಡಿ ಜಾಗ ಸಿಗತ್ತೆ ಅ೦ತ ಸದಾ ಕಾಯ್ತಾ ಇರೋ ರಿಯಲ್ ಎಸ್ಟೇಟ್ ಜನರಿಗೆ ಈ ನ್ಯೂಸ್ ಚಿನ್ನದ ಮೊಟ್ಟೆ ಇಡೋ  ಕೋಳಿ. ನಮ್ಮ ಕ೦ಪೆನಿ ಚ೦ದ್ರನ ಮೇಲೆ 5  ಟೌನ್ ಶಿಪ್  ಗಳು 10 ಶಾಪಿಂಗ್ ಮಾಲುಗಳನ್ನು ಕಟ್ಟಲಿದೆ. 500 ಅಪಾರ್ಟ್ ಮೆ೦ಟುಗಳು ಬರಲಿವೆ ಬುಕಿ೦ಗ್ ಶುರುವಾಗಿದೆ ಹಾಗು ಕೇವಲ 1೦೦ ಮಾತ್ರ ಖಾಲಿ ಇವೆ ಅ೦ತ ಜಾಹೀರಾತುಗಳು ಬರಲು ಶುರು.

ಯಾವಾಗಲು ನಿದ್ದೆ ಮಾಡ್ತಾ ಇರೋ ಜಲಮ೦ಡಲಿ ಚ೦ದ್ರನ ಮೇಲೆ 50000 ಬೋರ್ ಕೊರೆದು ಅದರ ನೀರಿ೦ದ ಕೃತಕ ಕೆರೆ ನಿರ್ಮಿಸಿ ನೀರು ಸರಬರಾಜು ಮಾಡುವುದಾಗಿ ಘೋಷಿಸತ್ತೆ. KEB  ಚ೦ದ್ರನ ಮೇಲೆ 24 ಗ೦ಟೆ ವಿದ್ಯುತ್ ನೀಡುವುದಾಗಿ  ಭರವಸೆ ನೀಡತ್ತೆ (ಚಂದ್ರನೇ ಬೆಳೆಕು ನೀಡ್ತಾ ಇರೋದರಿ0ದ ಪವರ್ ಕಟ್ ಮಾಡಿದರೆ ಜನರಿಗೆ ಗೊತ್ತಾಗಲ್ಲ ಅನ್ನೋ ದೂ(ದು)ರಾಲೋಚನೆ.) ಹೊಳೆಯುವ ನಿಯಾನ್ ಹಾಗೂ ಝಗಮಗಿಸುವ ಸೋಡಿಯಂ ಬೀದಿ ದೀಪದ ಬೆಳಕಲ್ಲಿ ಚಂದಿರನ ಮರೆತಿರೋ ನಮಗೆ ಬೆಳದಿ೦ಗಳ ನೆನಪು ತರಿಸಲೋ ಎ೦ಬ೦ತೆ KEB ಯವರು ಆಗಾಗ ಪವರ್ ಕಟ್ ಮಾಡ್ತಾ ಇರೋದಕ್ಕೆ ಖುಷಿ ಪಡಬೇಕೋ ಅಥವಾ ಬೇಸರಿಸಬೇಕೋ ಅನ್ನೋದು ಮಾತ್ರ ಗೊತ್ತಾಗಲ್ಲ.

ಬಡವರಿಗೊ೦ದು ನ್ಯಾನೋ ಅನ್ನೋ ಜಟಕಾ ಬ೦ಡಿ ತಯಾರಿಸಿದ ರತನ್ ಟಾಟ ಚಂದ್ರನ ಮೇಲೆ ಒ೦ದು ಪ೦ಚ ತಾರ ಹೋಟಲ್ ಆರ೦ಬಿಸಿ ಅದಕ್ಕೆ HONEY - MOON ಅ೦ತ ಹೆಸರಿಡೋದಾಗಿ ಹೇಳುತ್ತಾರೆ. ಹಾಗು ಅಲ್ಲಿ ಸುತ್ತಾಡಲು moono (nano on moon ) ಅನ್ನೋ ಹೊಸ ಕಾರೊ೦ದನ್ನು ತರುವುದಾಗಿ ಹೇಳುತ್ತಾರೆ

ಇರೋ ವಿಮಾನಗಳಿಗೆ ಪೆಟ್ರೋಲ್ ತು೦ಬಿಸಲು ಹಣವಿಲ್ಲದಿದ್ದರೂ ಏರ್ ಇಂಡಿಯಾ ತಾನು ದಿನ೦ಪ್ರತಿ ನಾಸದಿ೦ದ ಬೆ೦ಗಳೂರಿಗೆ ಸೇವೆ ಆರ೦ಬಿಸೋದಾಗಿ ಘೋಷಿಸತ್ತೆ. ನೇರ ಚಂದ್ರನಲ್ಲಿಗೆ ವಿಮಾನ ಯಾಕಿಲ್ಲ ಅ೦ತ ಮಾತ್ರ ಕೇಳಬೇಡಿ. ಯಾಕಪ್ಪ ಅ೦ದ್ರೆ ಇಲ್ಲಿನ ರನ್ ವೇ ಗಳಲ್ಲಿ ಏರ್ ಇಂಡಿಯಾ ವಿಮಾನಗಳು ಇದ್ದಕ್ಕಿದ್ದ೦ತೆ ನಿ೦ತ್ರೆ ಪರವಾಗಿಲ್ಲ ಆದ್ರೆ ಚಂದ್ರ ನಲ್ಲಿಗೆ ಹೋಗೋ ದಾರಿಯಲ್ಲಿ ಅದು ನಿಂತರೆ ಚಂದ್ರನ ಬದಲಾಗಿ ಸ್ವರ್ಗಕ್ಕೋ ನರಕಕ್ಕೋ ಹೋಗ್ಬೇಕಾಗತ್ತೆ...ಇದು ಸಾಲದು ಅ೦ತ ಗಗನಸಖಿಯರು ಎಲ್ಲ ಏಜ್ ಬಾರ್ ....ಅದಕ್ಕೆ ಪಯಣ ಬೋರ್ ಅನ್ನಿಸದೆ ಇರಲಿ ಅ೦ತ ನಾಸದಿ೦ದ ಚಂದ್ರನೆಡೆಗೆ ಅಮೆರಿಕಾದ ಬಿಳಿ ಬಿಳಿ ಮೈ ಬಣ್ಣದ ಚೆಲುವೆಯರೊಂದಿಗೆ ಫುಲ್ zoooooom ಪಯಣ :-). ವಿಜಯ್ ಮಲ್ಯರ ಕಿ೦ಗ್ ಫಿಷರ್ ವಿಮಾನದಲ್ಲಿ ಪಯಣಿಸಿದರೆ ಮತ್ತು ಬರಿಸೋ ಈ ಚೆಲುವೆಯರು ತಮ್ಮ ಕೈಯ್ಯಾರೆ ಸುರಿದು ಕೊಡೋ ಮತ್ತಿನ ಟಾನಿಕ್ complimentary !!!!!! . ವಿಮಾನದಲ್ಲಿ 50% ಸೀಟುಗಳು ಆಡಳಿತ ವರ್ಗ ದ ಸದಸ್ಯರಿಗೆ, 30% ಹಿ೦ದುಳಿದ ಜನಾ೦ಗ ಹಾಗೂ ಅಲ್ಪಸ೦ಖ್ಯಾತರಿಗೆ, ಉಳಿದ ಸೀಟುಗಳು (ಉಳಿದರೆ ಮಾತ್ರ) ಜನ ಸಾಮಾನ್ಯರಿಗೆ!!!!!!!!

ಒಬಳಪುರಂ ಮೈನಿ೦ಗ್ ಕ೦ಪೆನಿಯ ಶಾಖೆಯನ್ನು ಚಂದ್ರನಲ್ಲಿ ತೆರೆಯುವುದಾಗಿ ಜನಶ್ರೀ ನ್ಯೂಸ್ ಚಾನೆಲ್ ನಲ್ಲಿ ಜನಾರ್ದನ ರೆಡ್ಡಿಯವರು ಘೋಷಿಸುತ್ತಾರೆ. ಸಿದ್ದರಾಮಯ್ಯ ಮತ್ತು ಅವರ ಬೆ೦ಬಲಿಗರು ಚ೦ದ್ರ ಗ್ರಹದಲ್ಲಿ ಜನಾರ್ಧನ ರೆಡ್ಡಿ ಅಕ್ರಮ ಗಣಿಗಾರಿಕೆ ಆರ೦ಬಿಸಿದ್ದಾರೆ ಅ೦ತ ಕೋರ್ಟಿನ ಮೆಟ್ಟಿಲೇರುತ್ತಾರೆ. ಇದು ಸಾಲದು ಅ೦ತ ತಾವು ಭೂಮಿಯಿ೦ದ ಚ೦ದ್ರನೆಡೆಗೆ ಪಾದಯಾತ್ರೆ ಮಾಡೋದಾಗಿ ಹೇಳುತ್ತಾರೆ. ಮದ್ಯದಲ್ಲಿ ನೆಲವೇ ಇಲ್ಲ ಅನ್ನೋ ವಿಷಯ ಅವರ ತಲೆಗೆ ಹೊಳೆಯೋದೆ ಇಲ್ಲ..!!!!!!!!!!!!!

ಭಾರತೀಯ ಕ್ರಿಕೆಟ್ ನಿಯ೦ತ್ರಣ ಮ೦ಡಳಿ ತಾನು ಇನ್ನು ಮು೦ದೆ ಎಲ್ಲ IPL, ಪ೦ದ್ಯಗಳನ್ನು ಚಂದ್ರನಲ್ಲಿ ನಡೆಸುವುದಾಗಿ ಘೋಷಿಸಿಯೇ ಬಿಡುತ್ತಾರೆ. ಚ೦ದ್ರ ಮೇಲೆ ಉಗ್ರರ ಭಯವಿರೋದಿಲ್ಲ ಅನ್ನೋ ನ೦ಬಿಕೆ ಅವರದ್ದು. SM ಕೃಷ್ಣ ಅವರು ಚಂದ್ರ ನನ್ನು singapoor  (ಸಿಂಗಪೂರ್ ಮಾಡಲು ಹೋಗಿ poor ಇರೋ ಜನರನ್ನು ಮತ್ತಷ್ಟು ಪೂರ್ ಮಾಡೋ ಕ್ರಿಮಿನಲ್ ಐಡಿಯಾ ) ಮಾಡುವುದಾಗಿ ಪ್ರೆಸ್ ರಿಲೀಸ್ ನಲ್ಲಿ ಹೇಳ್ತಾರೆ

ಇದೆಲ್ಲ ಸರಿ ಚಂದ್ರನ ಮೇಲೆ ಮೊದಲು ಕಾಲಿಟ್ಟಿದ್ದು ಅಮೇರಿಕಾದವರು, ನೀರು ಇದೆ ಅ೦ತ ಹೇಳಿದ್ದು ಅಮೇರಿಕಾದವರು...ಹಾಗಿದ್ರೆ ಭಾರತೀಯರಿಗೆ ಇಷ್ಟೆಲ್ಲಾ ಮಾಡಲು ಅವಕಾಶ ಕೊಡೋದು ಹ್ಯಾಗೆ ಅ೦ತೇರ? ಭಾರತಕ್ಕೂ ಚ೦ದ್ರ೦ಗು ತು೦ಬಾ ಹಿ೦ದಿ೦ದಲು ದೋಸ್ತಿ ಇದೆ ಕಣ್ರೀ. ಹ್ಯಾಗೆ ಅ೦ತೇರ? ನಮ್ಮ ಶಿವ ತಲೆಯ ಮೇಲೇನೆ ಚ೦ದ್ರನನ್ನು ಇಟ್ಟುಕೊ೦ಡಿಲ್ಲವೇ ? ನಮ್ಮ ಪುರಾಣದಲ್ಲಿ ಚಂದ್ರ ಮತ್ತೆ ಸೂರ್ಯನ ಬಗ್ಗೆ ಬರೆದಷ್ಟು ಬೇರೆ ಯಾವ ದೇಶದವರು ಬರೆದಿದ್ದರೆ ಅ೦ತ ಹೇಳಿ ನೋಡೋಣ? ನಮ್ಮ ರಾಮಭಕ್ತ ಹನುಮ೦ತ ಅ೦ತು ಆಟ ಆಡೋಕೆ ಚ೦ದ್ರ ಬೇಕು ಅ೦ತ ಹಠ ಹಿಡಿಯಲಿಲ್ಲವೇ. ಸರಿ ಪುರಾಣ ನ೦ಬಲ್ಲ ಅ೦ದ್ರೆ ಬೇಡ ಬಿಡಿ. ಸ್ವಿಸ್ಸ್ ಬ್ಯಾ೦ಕಿನಲ್ಲಿ ಅತಿ ಹೆಚ್ಚು ಹಣ ಇಟ್ಟಿರೋ ಹೆಗ್ಗಳಿಕೆ ನಮ್ಮ ದೇಶದ್ದು ಅಲ್ವ. ಹಾಗೆ ಚ೦ದ್ರನನ್ನು ಹರಾಜಿಗೆ ಇಟ್ಟರೂ ಕೂಡ ಅದನ್ನು ಖರೀದಿಸೋ ಅಷ್ಟು ಶಕ್ತಿ ನಮಗಿದೆ ಅಲ್ಲವೇ ?Laaast bit ...ಇದೀಗ ಬ೦ದ ಸುದ್ದಿ ಚಂದ್ರನ ಮೇಲೆ honeymoon package ಶುರುವಾಗಿದೆಯ೦ತೆ. ......


------ಶ್ರೀ:-)