Thursday, April 3, 2014

ಯಮನ Appraisal

ಈ ಲೇಖನ ಬರೆಯಲು ಶುರು ಮಾಡಿ ಸುಮಾರು 2 ವರ್ಷ ಆಯಿತು. ಸರಿ ಹೇಗಿದ್ರು ಯಾವುದೇ ಲೇಖನ ಬರೆಯದೆ ತುಂಬಾ ದಿನಗಳಾದವು ಅಂತ ಈ ಲೇಖನ ಪೂರ್ತಿಗೊಳಿಸಿ ಪೋಸ್ಟ್ ಮಾಡಿದ್ದೇನೆ. ಇಲ್ಲಿ ಯಮ ಮತ್ತು ಶಿವ ಅಂತ ಬಳಸಿದ್ದಕ್ಕೆ ಕ್ಷಮೆ ಇರಲಿ (ದೇವರು ಅಂದ್ರೆ ಭಯ ಭಕ್ತಿ ಹಾಗು ಗೌರವ ನನಗೂ ಇದೆ, ಆದರೂ ದೇವ್ರು ಯಾವಾಗ್ಲೂ ನನ್ನ ಜೊತೆನೇ ಇರೋ ಸ್ನೇಹಿತ ಅನ್ನೋ ಫೀಲಿಂಗ್ ಕೂಡ ಜೊತೆಗಿದೆ ).  as usual ಇದೆಲ್ಲ ಬರೇ ಕಾಲ್ಪನಿಕ ಅಷ್ಟೇ..... 


ವರ್ಷದ ಟಾರ್ಗೆಟ್  ಮುಗಿಸಿದ ಸಂತೋಷದಲ್ಲಿ ಯಮನು ತನ್ನ Reporting Manager  ಶಿವನ  Chamber ಒಳಗೆ ಎಂಟ್ರಿ ಹಾಕ್ತಾ ಇದ್ದಾನೆ. ವರ್ಷದ Dead ಲೈನ್ ಟಾರ್ಗೆಟ್ ಅನ್ನು ಮೀಟ್ ಆಗಿದ್ದೇನೆ, ಆದ್ದರಿಂದ ಸರಿಯಾದ Hike  ಸಿಕ್ಕೇ ಸಿಗತ್ತೆ. ರಂಭೆ, ಊರ್ವಶಿ, ಮೇನಕೆಯಂತ ಬೆಡಗಿಯರಿರೋ ಸ್ವರ್ಗಕ್ಕೆ ಪ್ರಮೋಶನ್ ಸಿಕ್ಕಿದರೂ ಸಿಗಬಹುದು ಅಂತ ಮನಸ್ಸಿನಲ್ಲಿ ಲೆಕ್ಕಾಚಾರ.... ಇತ್ತ ಶಿವನೋ ಇಂದ್ರನ Appraisal ಅನ್ನು ಈಗ ತಾನೇ ಮುಗಿಸಿದ್ದಾನೆ. ಹೊರ ಬರುತ್ತಿರೋ ಇಂದ್ರನ ಮುಖದಲ್ಲಿ ಏನೋ ಕಳವಳದ ಛಾಯೆ... ಇಂದ್ರನೋ ವರ್ಷವಿಡೀ ಅಪ್ಸರೆಯರ ನೃತ್ಯ ನೋಡೋದ್ರಲ್ಲಿ ಬ್ಯುಸಿ, ಸಾಲದು ಅಂತ ಕಾಲು ಕೆರೆದು ಅಸುರರೊಂದಿಗೆ ಜಗಳ ಆಡ್ತಾ ಇರ್ತಾನೆ. ಇನ್ನು ಇವನಿಗೆ ಎಲ್ಲಿ hike  ಸಿಗಬೇಕುಏನಿದ್ರು ನನ್  ತರ ಹಾರ್ಡ್ ವರ್ಕ್ ಮಾಡೋವವರಿಗೆ ಮಾತ್ರ ಒಳ್ಳೆ  hike  ಸಿಗತ್ತೆ ಅಂತ ಯಮ ಮನಸ್ಸಲ್ಲೇ ಅಂದ್ಕೊಳ್ತಾನೆ.
         Appraisal  ಟೈಮ್ ಅಲ್ವಾ ಶಿವನ ಆಫೀಸ್  ಫುಲ್ ಜನ. ಯಮನಿಗೋ ಪಾರ್ಕಿಂಗ್ ಜಾಗ ಸಿಗದೇ ಕೋಣವನ್ನು ಅಲ್ಲೇ ಸೈಡ್ ಅಲ್ಲಿ ಪಾರ್ಕ್ ಮಾಡಿ ಒಳಗೆ ಬರ್ತಾನೆ. ಸಲ ಒಳ್ಳೆ hike ಆದ್ರೆ ಮೊದಲು vehicle ಅನ್ನು ಚೇಂಜ್ ಮಾಡ್ಬೇಕುಸಿಕ್ಕಾಪಟ್ಟೆ maintainance  ಬರ್ತಾ ಇದೆ ಅಂತ ಯೋಚಿಸ್ತಾ ಇರೋವಾಗಲೇ  "ಬನ್ನಿ ಯಮ ಮಹಾರಾಜರೇ ಅಂತ ಫುಲ್ ಮರ್ಯಾದೆ ಕೊಟ್ಟು ಒಳಗೆ ಕರೀತಾನೆ ಶಿವ. ಮರ್ಯಾದೆ ಯಾಕೋ ಸ್ವಲ್ಪ ಜಾಸ್ತಿ ಆದ ಹಾಗಿದೆಯಲ್ಲ ಅಂತ ಅಳುಕಿನಿಂದಲೇ ಬಲಗಾಲಿಟ್ಟು ಒಳಗೆ ಕಾಲಿಡ್ತಾನೆ ಯಮ

ಶಿವ : ಮತ್ತೆ ಹೇಗಿತ್ತು ವರ್ಷ?
ಯಮ :( ಪ್ರಶ್ನೆ ಗೆ ಕೆಲವು ದಿನಗಳಿಂದ ಚೆನ್ನಾಗಿ Prepare ಆಗಿದ್ದರಿಂದ ಅಳುಕಿಲ್ಲದೆ ಶುರು ಹಚ್ಕೊಳ್ತಾನೆ ಯಮ) ಪರಶಿವಾ,  ಸಲ ನೀವು ಕೊಟ್ಟ ಒಂದು ಕೋಟಿ ಜನರಿಗೆ ಸಾವು ಅನ್ನೋ  ಟಾರ್ಗೆಟ್ ಅನ್ನು ರೀಚ್ ಆಗಿದ್ದೇನೆ. ಮದ್ಯದಲ್ಲಿ ಸ್ವಲ್ಪ efficiency ಕಡಿಮೆ ಆಗಿತ್ತು. ಆದರೆ ವರುಣ ದೇವ ಮತ್ತು ವಾಯು ದೇವನ ಜೊತೆ ಡೀಲ್ ಮಾಡಿಕೊಂಡು  ಅಲ್ಲಲ್ಲಿ ಪ್ರವಾಹ, ಚಂಡಮಾರುತ ಬರಿಸಿ ಟಾರ್ಗೆಟ್  ಸರಿದೂಗಿಸಿದ್ದೇನೆ.
ಶಿವ : ಅದು As per process ನಿಮ್ಮ ಕೆಲಸ. ಅದಲ್ಲದೆ ಏನು ಮಾಡಿದ್ದೀರಿ...?

 
ಈಗ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ತಾನೆ ಯಮ. ಅಲ್ಲ ಗುರುವೇ ನಿಯತ್ತಾಗಿ ಟಾರ್ಗೆಟ್ ಮುಗಿಸಿ ಅದೇನೋ ಉದ್ದಾರ ಮಾಡ್ತಾನೆ ಅಂತ ಇವನ ಹತ್ರ ಬಂದ್ರೆ ಶಿವ ಈ  ತರ ಬತ್ತಿ ಇಟ್ಟುಬಿಟ್ನಲ್ಲ . ನಾನು ಬೇರೆ ದರಿದ್ರ ಹೈಕ್ ನಂಬಿಕೊಂಡು ಕುಬೇರನ ಹತ್ರ ಸಾಲ ತಗೊಂಡು  ಸ್ವರ್ಗದಲ್ಲಿ 30X40 ಸೈಟ್ ಬೇರೆ ತೆಗ್ದಿದೀನಿ. ಇವನು ಯಾಕೋ ಹೊಗೆ ಹಾಕ್ಸೋ ತರ ಕಾಣಿಸ್ತಾ ಇದೆಯಲ್ಲ ಅಂದುಕೊಂಡು ಸುಮ್ನೆ ಒಂದ್ಸಲ ಕೆಮ್ಮುತ್ತಾನೆ....... 

ಶಿವ : (ಯಮನಿಂದ ಉತ್ತರ ಬರದಿದ್ದನ್ನು ಗಮನಿಸಿ):  ಸರಿ ಬಿಡಿ ನರರನ್ನು ಎತ್ತಾಕೊಂಡು ಬರೋವಾಗ ಎಷ್ಟು ಸಲ Process violation ಆಗಿದೆ? ಚಿತ್ರಗುಪ್ತ ಲೆಕ್ಕಾಚಾರದಲ್ಲಿ ಅದೇನೋ ಎಡವಟ್ಟು ಆಗಿ ಮೊನ್ನೆ ಯಾರೋ ತಪ್ಪು ವ್ಯಕ್ತಿನ ಕರ್ಕೊಂಡು ಬಂದ್ರಿ ಅಂತ ಸುದ್ದಿ ಬಂತು ನಂಗೆ. ನಿಮ್ಮ Error matrix ಹೇಳ್ತಾ ಇದೆ.  
ಯಮ: ಮಹಾಸ್ವಾಮಿ ಅದು ಚಿತ್ರಗುಪ್ತನ ತಪ್ಪು ಅಲ್ಲವೆ. ಅವನ error matrix ಗೆ ಎಫೆಕ್ಟ್ ಆಗಬೇಕು ಅಲ್ವಾ ಅದು?
ಶಿವ: ನೋಡು ಯಮ, ನಿಮ್ಮ ಕೆಳಗೆ ಅವ್ನು ಕೆಲಸ ಮಾಡ್ತಾ ಇದಾನೆ ಅಂದ್ರೆ ಅವನು ಮಾಡಿದ ತಪ್ಪಿಗೂ ನೀನೇ ಹೊಣೆ. ಅದ್ದರಿಂದ ಅದು ನಿಮ್ಮ  ಮ್ಯಾಟ್ರಿಕ್ಸ್ ಗೆ ಬರುತ್ತೆ. ಅದಿರಲಿ ನಿಮಗೆ ಕೊಟ್ಟ ಟಾರ್ಗೆಟ್ ಅಲ್ಲದೆ ಬೇರೆ ಏನು ಮಾಡಿದ್ದೀರಿ? ನಿಮಗೆ ಗೊತ್ತಿರಬೇಕು ಅಲ್ವಾ, ಕೆಲಸ ಎಲ್ಲರು ಮಾಡ್ತಾರೆ ಆದ್ರೆ ನಿಮ್ಮ Growth ಆಗಬೇಕು ಅಂದ್ರೆ ನೀವು ಬೇರೆಯವರಿಗಿಂತ ವಿಬಿನ್ನವಾಗಿರೋದು ಅಥವಾ ನೀವೇ ನೀವಾಗಿ Initiative ತಗೊಂಡು ಏನಾದ್ರೂ ಮಾಡಿರಬೆಕು. ರೀತಿಯದ್ದು ಏನಾದ್ರು ಇದೆಯಾ?

ಯಮ: ಮಹಾಸ್ವಾಮಿ ಒಂದು ಕೋಣ, ಒಂದೈವತ್ತು ಯಮಕಿಂಕರರು ಆಮೇಲೆ ಒಬ್ಬ ಕಂಪ್ಯೂಟರ್ ಸ್ಪೆಷಲಿಸ್ಟ್ ಚಿತ್ರಗುಪ್ತನನ್ನು ಕೊಟ್ಟು ಏನಾದರು ವಿಬಿನ್ನವಾಗಿ ಮಾಡಿ ಅಂದ್ರೆ ಏನು ಮಾಡಕ್ಕೆ ಅಗತ್ತೆ. I  have my own limitations you  know. ನನ್ನ ವರ್ಕಿಂಗ್ conditions ಎಷ್ಟು ಕಷ್ಟ ಇದೆ ಗೊತ್ತಾ ನಿಮಗೆ. ಎಲ್ಲಾ ಕಳ್ಳ ಕದೀಮರಿಗೆ ಶಿಕ್ಷೆ ಕೊಡಬೇಕು, ಅವರ ಪಾಪಕ್ಕನುಗುಣವಾಗಿ ಚಾಟಿಯೇಟು ಕೊಡಬೇಕು, ಎಣ್ಣೇಲಿ ಕುದಿಸಬೇಕು.......   ಎಷ್ಟೋ ಸಲ ಯಮಕಿಂಕರರು ಸಾಲದೇ ನಾನೇ ಅವರ ಜೊತೆ Stay back ಮಾಡ್ತೇನೆ,  ಅದ್ಕೆ Overtime ಕೂಡ ಸಿಗೋದಿಲ್ಲ. ಜೊತೆಗೆ ಶಿಕ್ಷೆಯ ಪ್ರಮಾಣ ಸರಿ ಇದೆಯಾ ಅಂತ  Quality ಕೂಡ ಚೆಕ್ ಮಾಡ್ಬೇಕು ನಾನು. ನೀವು ಒಂದು Matrix  ಮಾತ್ರ Maintain  ಮಾಡ್ತೀರಿ. ಆದರೆ ನಾನು ಅದೆಷ್ಟು excel ಶೀಟ್ ಗಳನ್ನ Update ಮಾಡಬೇಕು ಅನ್ನೋದು ನನಗೆ ಮಾತ್ರ ಗೊತ್ತು. 

ಶಿವ: ಏನ್ರಿ ನೀವು ಹೀಗೆ ಹೇಳ್ತೀರಲ್ಲ. ಏನೋ ನೀವೊಬ್ಬರೇ ಕೆಲಸ ಮಾಡಿದ ಹಾಗೆ. ನೀವು ಈಗ ಹೇಳಿದ ಎಲ್ಲಾ ಕೆಲಸಗಳನ್ನು ಎಸ್. ಎಸ್. ಎಲ್. ಸಿ ಫೇಲ್ ಆದವರೂ ಬೇಕಾದ್ರೆ ಮಾಡ್ತಾರೆ ಕಣ್ರೀ. ನಿಮ್ಮ B. E ಇನ್ Law and Order  ಯಾಕೆ ಬೇಕುಪೋಸ್ಟ್ ಗ್ರಾಡ್ಜುವೇಶನ್ in  Hell Maintainance ಬೇರೆ. ಏನಾದ್ರೂ ಹೊಸದು ಯೋಚನೆ ಮಾಡಬೇಕು ನೀವು... 

ಯಮ: ನಾವು ಭೂಲೋಕದಲ್ಲಿ ಒಂದು ಬ್ರಾಂಚ್ ಆಫೀಸ್ ಇಟ್ಟು ಒಂದಿಬ್ಬರು ಯಮಕಿಂಕರರನ್ನು ಅಲ್ಲೇ ಲಾಂಗ್ ಟರ್ಮ್ ವೀಸಾದಲ್ಲಿಟ್ಟು  ಲೈಫ್ ಟರ್ಮ್ ಮುಗಿದಿರೋ ಜನರನ್ನು ಡೈರೆಕ್ಟ್ ಆಗಿ ನರಕಕ್ಕೆ ಕಳಿಸಬಹುದು. ಪದೇ ಪದೇ ನಾವು ಭೂಲೋಕಕ್ಕೆ ಹೋಗೋ ಖರ್ಚು ಮತ್ತು ಟೈಮ್ ಉಳಿಯುತ್ತೆ ಅಂತ ಒಂದು ಐಡಿಯಾ ಕೊಟ್ಟೆ ನಾನು ನಿಮಗೆ.  ಆದರೆ ನೀವು ಅದನ್ನು ಆಗೋದಿಲ್ಲ ಅಂದು ಬಿಟ್ರಿ.  

ಶಿವ : ಐಡಿಯಾ ಚೆನ್ನಾಗೇ ಇತ್ತು ಆದ್ರೆ ಯಮಕಿಂಕರರ ಖರ್ಚು ವೆಚ್ಚ ಕ್ಕೆ  ಬಜೆಟ್ ಅಪ್ರೂವಲ್ ಸಿಗೋದಿಲ್ಲ, ಅದಕ್ಕೆ ಆಗೋದಿಲ್ಲ ಅಂದಿದ್ದು. ನೀವು ಯೋಚನೆ ಮಾಡಬೇಕು  Resourses ಕಮ್ಮಿ ಹೇಗೆ ಉಪಯೋಗಿಸಬೇಕು ಅಂತ. ಉದಾಹರಣೆಗೆ ಒಬ್ಬನ ಜೀವಿತಾವಧಿ ಮುಗಿದಿರತ್ತೆ ಅವನನ್ನು ಕರೆತರೋಕೆ ನೀವು ಹೋಗ್ತೀರ, ಆಗ ಅವ್ನು ಊಟ ಮಾಡ್ತಾ ಇರ್ತಾನೆ. ನೀವುಗಳು ಮಾನವೀಯತೆ ದೃಷ್ಟಿಯಿಂದ ಅವನ ಊಟ ಮುಗಿಯೋವರೆಗೆ ಕಾದಿದ್ದು ಆಮೇಲೆ ಅವನ ಜೀವ ಸೆಳೆದು ಕರೆದುಕೊಂಡು ಬರ್ತೀರ. ಅಷ್ಟು ಹೊತ್ತು ನಿಮ್ಮ ಟೈಮ್ ವೇಸ್ಟು.  ಅವ್ನು ಮಾಡಿದ ಊಟ ವೇಸ್ಟ್. ನಿಮ್ಮ  ಟಾರ್ಗೆಟ್ ಅಲ್ಲಿ ಒಂದು 20% ಕೇಸ್ ಗಳು ಹೀಗೆ ಆದರೆ ಒಟ್ಟು ಎಷ್ಟು ವೇಸ್ಟ್ ಅಲ್ವಾ? ಅದಕ್ಕೆ ಅವನ ಟೈಮ್ ಮುಗಿದ ಕೂಡ್ಲೇ ಅವನು ಏನೇ ಮಾಡ್ತಾ ಇದ್ದರು ಕರ್ಕೊಂಡು ಬಂದು ಬಿಡಬೇಕುಹೀಗೆ ಹೊಸ ಹೊಸ ಯೋಚನೆ ಮಾಡ್ತಾ ಇರಬೇಕು.. ಎಲ್ಲವನ್ನು ನಾನೇ ಹೇಳೋದಿಕ್ಕೆ ಆಗೋದಿಲ್ಲ. ನೀವೇ Initiative ತಗೋಬೇಕ್ರಿ.... 

ಯಮ: (ಇವ್ರು ಏನೋ ಒಂದು ಪರ್ಸಂಟೇಜ್ ಗೆ ಫಿಕ್ಸ್ ಆಗಿದ್ದಾರೆ, ಇನ್ನು ವಾದಿಸಿ ಫಲವಿಲ್ಲ ಅಂದುಕೊಂಡುಓಕೆ ಸರ್ ಬರೋ ವರ್ಷದಲ್ಲಿ ಹಾಗೇ ಮಾಡ್ತೇನೆ  ..... 

ಶಿವ: (ಯಮನ ಹಾವಭಾವ ಗಮನಿಸಿ ) ಆದರೂ ನಿಮಗೆ ಕೊಟ್ಟ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೀರಿ. ಎಲ್ಲಾ Processಗಳು, ಟಾರ್ಗೆಟ್ ಗಳು ಎಲ್ಲವನ್ನೂ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ. ಸೊ ನಿಮ್ಮ ರೇಟಿಂಗ್ 5 ರಲ್ಲಿ  3 .  ನಿಜ ಹೇಳ್ಬೇಕು ಅಂದ್ರೆ ನೀವು 3 ಗಿಂತ ತುಂಬಾ ಹೆಚ್ಚು ಆದರೆ 4 ಕ್ಕಿಂತ ಮಾತ್ರ  ಸ್ವಲ್ಪ ಕಮ್ಮಿ. 4 ಕೊಡಬೇಕು ಅನ್ನೋದು ನನಗೂ ಆಸೆ ಆದ್ರೆ ನನಗೂ  ಕೆಲವು Limitations ಇರುತ್ತೆ ಅಲ್ವಾ. ನನ್ನ ಕೇಳೋದಾದ್ರೆ 3 ಕೂಡ ಒಳ್ಳೆ  ರೇಟಿಂಗೇ ಬಿಡಿ. ಆದ್ರೆ ನೀವು ಇನ್ನೂ ಒಳ್ಳೆ ರೇಟಿಂಗ್ ತಗೋಬೋದಿತ್ತು. Anyhow there is always a next ಟೈಮ್ .... ಆಲ್ ದಿ ಬೆಸ್ಟ್.  ಹಾ ಹೇಳೋದು ಮರೆತಿದ್ದೆ . ಸದ್ಯದಲ್ಲೇ ಕೆಲವು Organisation ಚೇಂಜ್ ಗಳು ಆಗುತ್ತೆ. ಅಲ್ಲಿ ಇಲ್ಲಿ ಕೆಲ ಸಣ್ಣ ಬದಲಾವಣೆಗಳು ಅಷ್ಟೇ. ನಿಮಗೆ ಮೇಲ್ ಬರತ್ತೆ ಬಿಡಿ .... 

ಯಮ: (ಮುಖದಲ್ಲಿ ನಿರ್ಲಿಪ್ತ ಭಾವನೆ) ದನ್ಯವಾದಗಳು ಸರ್.... 

ಶಿವ: ನಿಮಗೆ ರಿಪೋರ್ಟ್ ಮಾಡಿಕೊಳ್ಳೋ ಕಾರ್ಮಿಕರಿಗೆ Organisation Changes ಬಗ್ಗೆ ಮೇಲ್ ಬಂದ ನಂತರವೇ review ಮೀಟಿಂಗ್  ಮುಗಿಸಿ ... ಅವಸರವೇನಿಲ್ಲ ....

ಯಮ: As u wish sir ......

ಬಾಗಿಲನ್ನು ದಡಾರನೆ ಹಾಕಿ ಹೊರನಡಿಯುತ್ತ ಯೋಚಿಸ್ತಾನೆ ಯಮ " ಸರಿ ನನ್ನ ಅಪ್ರೈಸಲ್  ಅಂತು ಹೊಗೆ ಆಯ್ತು. ನನಗೆ ರಿಪೋರ್ಟ್ ಮಾಡಿಕೊಳ್ಳೋ ಜನರಿಗೆ ಮೇಲ್ ಬಂದ ನಂತರ Review ಶುರು ಹಚ್ಕೊ ಅಂತಿದಾನೆ ಶಿವ . ಯಾವಾಗಲೇ ಆದರೂ ನಾನೇ ತಾನೇ ಮಾಡಬೇಕು, ಅದೂ ಅಲ್ದೆ ಇವತ್ತೇ ಇವರಿಗೆ ಕ್ಲಾಸ್ ತಗೊಂಡ್ರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತೆ. ನನ್ನ ಹೈಕ್ ಹೊಗೆ ಅಂದ್ರೆ ನನಗೆ ರಿಪೋರ್ಟ್ ಮಾಡ್ಕೊಳೋ ಚಿತ್ರಗುಪ್ತ ಹಾಗೂ ಯಮ ಕಿಂಕರರಿಗೂ ಹೊಗೇನೇ .... ಪಾಪಸಿಕ್ಕಾಪಟ್ಟೆ ಓವರ್ ಟೈಮ್  ಮಾಡ್ತಾವೆ ಅವ್ವು, ಆದರೇನು ಮಾಡೋದು  ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕಲ್ಲವೇ ಅಂದುಕೊಳ್ತಾ ಮೀಟಿಂಗ್ ರೂಂ ಯಾವುದಾದರೂ ಖಾಲಿ ಇದೆಯಾ ಅಂತ ನೋಡ್ತಾನೆ ಯಮಖಾಲಿ ರೂಮೊಂದರಲ್ಲಿ ಯಮಕಿಂಕರನೊಬ್ಬ ಅದ್ಯಾವುದೋ ಕ್ರೆಡಿಟ್ ಕಾರ್ಡ್ ಪಾರ್ಟಿ ಜೊತೆ ಮಾತಾಡ್ತಾ ಇರೋದು ಕಾಣಿಸತ್ತೆ, ಸರಿ ಸದ್ಯಕ್ಕೆ ಇದೇ ಬಕ್ರ ಅಂದುಕೊಂಡು ಲ್ಯಾಪ್ ಟಾಪ್ ಜೊತೆ ಒಳಗೆ ನಡಿತಾನೆ ಯಮ.

ಯಮಕಿಂಕರ: ಸರ್ ನಮಸ್ತೆ (ಫೋನ್ ಕಾಲ್ ಕಟ್ ಮಾಡ್ತಾ )
ಯಮ:  ನಿಮ್ಮ Appraisal ಶುರು ಹಚ್ಹ್ಕೊಳ್ಳೋಣವೇ ?
ಯಮಕಿಂಕರ: ಸರಿ ಸಾರ್

ಯಮ ಲ್ಯಾಪ್ ಟಾಪ್ ಚಾರ್ಜರ್ ಕನೆಕ್ಟ್ ಮಾಡಿ ವಿಂಡೋಸ್ ಗೆ ಲಾಗಿನ್ ಆಗ್ತಾನೆ. ಬಡ್ಡಿ ಮಗಂದು ಕಿತ್ತೋಗಿರೋ ಲ್ಯಾಪ್ ಟಾಪ್ ಕೊಟ್ಟಿದಾರೆ, ಲಾಗಿನ್ ಆಗೋದಕ್ಕೆ ಒಂದು ಗಂಟೆ ತಗೊಳತ್ತೆ ಅಂತ ಮನಸ್ಸಲ್ಲೇ ಬೈಕೋತಾನೆ. ಅಷ್ಟರಲ್ಲೇ ಬಾಗಿಲು ಸದ್ದು ಮಾಡುತ್ತೆ, ತಲೆ ಎತ್ತಿ ನೋಡಿದರೆ ಚಿತ್ರಗುಪ್ತ... ನನ್ ಮಗನ್ನ ಯಾರು ಕರೆದರು? ಸಕತ್ ತಲೆ ತಿಂತಾನೆ ಅಂತ ಇವನ review ಲಾಸ್ಟ್ ಗೆ ಇಟ್ಟುಕೊಂಡಿದ್ದೆನಲ್ಲ ಅಂದುಕೊಳ್ಳೋ ವಷ್ಟರಲ್ಲಿ ಚಿತ್ರಗುಪ್ತನೇ ಮಾತು ಶುರು ಹಚ್ಕೊಳ್ತಾನೆ.

ಚಿತ್ರಗುಪ್ತ: ಯಮ ಮಹಾರಾಜರೇ ಮೇಲ್ ಚೆಕ್ ಮಾಡಿದಿರಾ ?
ಯಮ: ಇಲ್ಲ ಬೆಳಗ್ಗಿಂದ ಸ್ವಲ್ಪ ಬ್ಯುಸಿ ಆಗಿದ್ದೆ, ಏನಾದ್ರು ವಿಶೇಷ ಇದೆಯಾ?
ಚಿತ್ರಗುಪ್ತ: ಸ್ವಲ್ಪ ವಿಶೇಷಾನೇ, ನಂಗೆ ಪ್ರಮೋಶನ್ ಆಗಿದೆ. 
ಯಮ: ಒಹ್ really ? Congrats. ಯಾವ ಡಿಪಾರ್ಟ್ ಮೆಂಟ್ ?
ಚಿತ್ರಗುಪ್ತಡಿಪಾರ್ಟ್ ಮೆಂಟ್ ಏನು ಚೇಂಜ್ ಇಲ್ಲ, ರೋಲ್ ಚೇಂಜ್ ಆಗಿದೆ ಅಷ್ಟೇ. ಇನ್ನು ಮೇಲಿಂದ ನೀವು ನನಗೆ ರಿಪೋರ್ಟ್ ಮಾಡಬೇಕು. ನಿಮ್ಮ ವರ್ಷದ ಟಾರ್ಗೆಟ್ ನಾನು ಸೆಟ್ ಮಾಡ್ತೇನೆ. ಆಮೇಲೆ ಕಿಂಕರರಿಗೆಲ್ಲ ರಿವೀವ್ ಮೀಟಿಂಗ್ ನಾನೇ ಮಾಡ್ತೇನೆ. ಸರಿ ನಾನು HR ಹತ್ರ ಸ್ವಲ್ಪ ಹೋಗಿ ಬರ್ತೇನೆ. ನಾಳೆ ನಿಮ್ಮ ವರ್ಷದ ಟಾರ್ಗೆಟ್ ಸೆಟ್ ಮಾಡೋಣ, ಸ್ವಲ್ಪ ಬೇಗ ಬಂದು ಬಿಡಿ ನಾಳೆ.... 

      ಬಾಗಿಲನ್ನು ಹಾಕಿ ಹೊರನಡೆದ ಚಿತ್ರಗುಪ್ತನ ಮುಖದಲ್ಲಿ ಏನೋ ಕಳೆ, ಮೀಸೆಯಂಚಿನಲ್ಲಿ ಒಂದು ಕಂಡೂ ಕಾಣದಂತಿರೋ ನಗು. ಯಮಕಿಂಕರ ಕಕ್ಕಾಬಿಕ್ಕಿ. ನಾಳೆಯಿಂದ ತನಗೆ ಯಾರು work assign ಮಾಡುವರೋ ಎಂಬ ಕಳವಳ. ಯಮನಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗಿದೆ, ಮಾತೇ  ಹೊರಡ್ತಾ ಇಲ್ಲ. ಮುಂದೆ ಚಿತ್ರಗುಪ್ತನ ಆದೇಶ ಪಾಲನೆ ಮಾಡಬೇಕಾದ  ಸನ್ನಿವೇಷ ಕಲ್ಪಿಸಿಕೊಂಡು ತಲೆ ಸುತ್ತು ಬಂದ ಹಾಗೆ ಆಗ್ತಾ ಇದೆ. ಲ್ಯಾಪ್ ಟಾಪ್ ಅನ್ನು ಸ್ವಿಚ್ ಆಫ್ ಮಾಡಿ ಮಾತಿಲ್ಲದೆ ಆಫೀಸಿಂದ  ಮನೆಗೆ  ಹೊರಡ್ತಾನೆ.                 ಆಫೀಸಿಂದ ಹೊರ ಬರುತ್ತಿದ್ದಂತೆ ಯಮನ ಕೋಣ ಪಕ್ಕಕ್ಕೆ ಬಂದು ನಿಲ್ಲುತ್ತೆ. ಯಾಕೋ ಇಡೀ ಪ್ರಪಂಚದಲ್ಲಿ ತನ್ನನು ಅರ್ಥ ಮಾಡಿಕೊಂಡ ಹಾಗೂ ತನ್ನನ್ನು ಸಮದಾನಪಡಿಸುವ ಜೀವ ಈ ಕೋಣ ಮಾತ್ರ ಅನ್ನಿಸುತ್ತೆ ಯಮಂಗೆ. ಅಲ್ಲೇ ಹೊರಗೆ ಹುಲ್ಲುಹಾಸಿನ ಮೇಲೆ ಕೂತ್ಕೊಂಡು ಯೋಚನೆ ಮಾಡ್ತಾ ಅದೇನೋ ಹೊಳೆದಂತೆ ಲ್ಯಾಪ್ ಟಾಪ್ ಓಪನ್ ಮಾಡಿ  Naukri. com ಸೈಟ್ ಗೆ ಲಾಗಿನ್ ಆಗ್ತಾನೆ. ಅದೆಷ್ಟೋ ವರ್ಷದಿಂದ ನೋಡದೇ ಇದ್ದ Resume ಅನ್ನು Update ಮಾಡ್ತಾನೆ. ಅಲ್ಲಿ ಇಲ್ಲಿ ತಡಕಾಡಿ ಒಂದು ಹೊಸ ಕೆಲಸಕ್ಕೆ Apply ಮಾಡ್ತಾನೆ..... 

 Job Location: ತ್ರಿಶಂಕು ಸ್ವರ್ಗ ................... 
Contact person: ವಿಶ್ವಾಮಿತ್ರ .............. 


                                                                                                                              --ಶ್ರೀ :-) -----




Sunday, August 25, 2013

ನನ್ನವಳು

ಈ ಲೇಖನ ಬರೆಯಲು ಶುರು ಮಾಡಿ ಸುಮಾರು ಒಂದು ವರ್ಷ ಆಯಿತು, ಫೈನಲ್ ಟಚ್ ಕೊಟ್ಟಿದ್ದು ಮಾತ್ರ ಈಗ ಅಷ್ಟೇ
ಅದ್ಯಾಕೋ ಹಾಗೆ ಸುಮ್ನೆ ಕೂತಿದ್ದಾಗ ನನ್ನ ವಳು ಹೇಗಿರಬೇಕು ಅನ್ನೋ ಯೋಚನೆ ಬಂತು. ಹೇಗಿರಬೇಕು ಅಂತ ಆಸೆಪಡೋದು ಮಾತ್ರ ನಮ್ಮ ಕೆಲಸ. ಆದರೆ ಕೊಡೋದು ಬಿಡೋದು ಎಲ್ಲ ಆ ಸೂತ್ರದಾರನ  ಕೈಲಿ ಅಲ್ವಾ ಆದ್ರೂ ದೇವ್ರು ಅನ್ನೋ ಸೂತ್ರದಾರನ ಮೂಲಕ future wife ಗೆ ಒಂದು ಪತ್ರ.... ಆದ್ರೆ ಇದು ಹೃದಯದ ವಿಷಯ ಅದ್ಕೇ ಈ  ಸಲ ಲೇಖನ without ಮಸಾಲ..

ಸಂಗಾತಿಯಾಗಿ ಬರೋ ನೀನು ಕೆಲಸ ಮಾಡೋದು ಬೇಡ. ಮನೇಲಿ ಆರಾಮಾಗಿರು ಅಂತ ಹೇಳ್ಬೇಕು ಅನ್ನೋ ಆಸೆ ಕಣೆ. ನೀನು ಕೆಲಸ ಮಾಡಿದ್ರೆ ಅಬ್ಬಬ್ಬ ಅಂದ್ರೆ ಸ್ವಲ್ಪ ಹಣ ಜಾಸ್ತಿ ಸಿಗಬಹುದು, ಆಮೇಲೆ ಬೇರೆ ಅವ್ರು ಕಟ್ಟಿರೋ ಮನೆಗೆ ರೆಂಟ್ ಕೊಡೋದು ಬಿಟ್ಟು ನಮ್ಮದು ಅಂತ ಮನೆ ಕೊಂಡ್ಕೊಂಡು EMI ಲೆಕ್ಕಾಚಾರದಲ್ಲಿ ನಮ್ಮ ಮುಂದಿನ ಅಮೂಲ್ಯ 25 -30 ವರ್ಷ ಕಳೆಯಬಹುದು. ಆದರೆ EMI ಲೆಕ್ಕಾಚಾರದಲ್ಲಿ ನಮ್ಮ ಮದ್ಯೆ ಪ್ರೀತಿ ಎಲ್ಲಿ ಸೊರಗಿ ಹೋಗತ್ತೋ ಅನ್ನೋ ಭಯ ನಂಗೆ. ಅದೇ ನೀನು ಮನೇಲೆ ಇದ್ದರೆ  ನಾನು ಆಫೀಸ್ ಇಂದ ಮನೆಗೆ ಬಂದಾಗ ಮುಗುಳ್ನಗೆ ಚೆಲ್ಲಿ ಒಂದು ಕಪ್ ಟೀ ಕೊಟ್ರೆ ಎಷ್ಟು  ಚೆನ್ನಾಗಿರತ್ತೆ ಅಂತ ಯೋಚನೆ ಮಾಡು. ಒಂದು ಕಪ್ ಟೀ ಕುಡಿದು ಒಂದು walking ಹೋಗಿ ಮುಸ್ಸಂಜೆ ತಿಳಿ ತಂಪಲ್ಲಿ ದಿನದ ಆಗು ಹೋಗುಗಳ ಬಗ್ಗೆ ಮಾತುಕತೆ ಮಾಡಿದ್ರೆ ಎಷ್ಟು ಹಿತವಾಗಿರತ್ತೆ ಅಲ್ವಾ...? ನೀನು ಕೆಲಸ ಮಾಡಿದ್ರೆ ನಿನ್ನ shopping ನೀನೆ ಮಾಡ್ಕೊಬೋದು, ಆದ್ರೆ ನನ್ನಲ್ಲಿ ಏನಾದ್ರು ತೆಗ್ಸಿ ಕೊಡಿ ಅಂತ ಹೇಳೋದು,  ನಾನು ಮರೆತರೆ ಹುಸಿ ಕೋಪ ತೋರೋ ಚಾನ್ಸ್ ಮಿಸ್ ಆಗತ್ತೆ ಅಲ್ವಾ ಚಿನ್ನಾ...ಯೋಚನೆ ಮಾಡು.

 ಟೀವಿ ಅಲ್ಲಿ ನಿನಗಿಷ್ಟ ಬಂದ ಪಿಲ್ಮ್ ನೋಡು ಆದ್ರೆ ಕುಚ್ ಕುಚ್ ಹೋತ ಹೈ ಅಥವಾ ಕಭಿ ಕುಶಿ ಕಭಿ ಘಂ( ಕಭಿ ಕುಶಿ always ಘಂ)  ಫಿಲಂ ನ 101 ನೇ ಸಲ ನೋಡಿ ಬೇಜಾರು ಮಾಡ್ಕೋಬೇಡ. ಬೇಜಾರ್ ಮಾಡ್ಕೊಂಡ್ರು ಪರವಾಗಿಲ್ಲ ಆದ್ರೆ ಆ ಫಿಲಂ ನಲ್ಲಿ ಶಾರುಖ್ ಆಕ್ಟಿಂಗ್ ಸೂಪರ್ ಅಂತ ಮಾತ್ರ ಹೇಳಬೇಡ (  ಅದನ್ನು ತಡೆದುಕೊಳ್ಳೋ ಸಹನೆ ನಂಗೆ ಇಲ್ಲ :-) ) .
ಅವ್ನು ಸಿಗರೇಟ್ ಸೇದುತ್ತಾ ಫೋಸ್ ಕೊಡ್ತಾ ಇದ್ರೆ ಅದೇ ಹೊಗೇಲಿ ಅವನನ್ನು ಸುಡಬೇಕು ಅನ್ನಿಸುತ್ತೆ ನಂಗೆ . ನನಗೆ ಅನ್ನಿಸೋ ಹಾಗೆ ಹಾಗೆ ಅವನಿಗೆ ಸಿಕ್ಕಿದ ಅತ್ಯುತ್ತಮ ಪಾತ್ರ ಅಂದರೆ my name is khaan ಚಿತ್ರದ್ದು ಇರಬೇಕು. ಮನಸ್ಸಿಗೆ ಅದೇನೋ ಖುಷಿ ಆಯ್ತು ಅದನ್ನು ನೋಡಿ ;-)

ಕ್ರಿಕೆಟ್ ಇರೋ ಟೈಮ್ ಅಲ್ಲಿ remote ಕೊಡು ಅಂತ ನಾನು ಜಗಳ ಆಡೋದಿಲ್ಲ. ಅವ್ರು ಆಡೋ ಆ ತೋರಿಕೆಯ ಆಟ ನೋಡೋದಕ್ಕಿಂತ ಅದ್ಯಾವುದೋ serial ಅಲ್ಲಿ busy ಆಗಿರೋ ನಿನ್ನ ಮುಖ ನೋಡೋದೇ ವಾಸಿ ಅನ್ನೋದು ನನ್ನ ಭಾವನೆ...ಆದ್ರೆ ಆ serial ನಲ್ಲಿ ಹೀರೋಯಿನ್ ಮತ್ತೆ ಹೀರೋಗೆ ಜಗಳ ಆಗಿ ಹೀರೋಯಿನ್ ಅತ್ರೆ ನೀವು ಕೂಡ ಅಳಬೇಕು feel her pain ಅಂತ ಮಾತ್ರ ಹೇಳಬೇಡ. ಅವ್ಳು ಅಳೋದಕ್ಕೆ director ಹಣ ಕೊಡ್ತಾನೆ...ನಾನು ಸುಮ್  ಸುಮ್ನೆ ಅತ್ರೆ ನಿಮ್ ಅತ್ತೆ ಒದೆ ಕೊಡ್ತಾರೆ ....ನಂಗೆ or ನಿಂಗೆ!!!!!!!! ಧಾರಾವಾಹಿನ ನೋಡ್ತಾ ಇದ್ರೆ ಬೇಡ ಅನ್ನೋದಿಲ್ಲ ಯಾಕೆ ಅಂದ್ರೆ ಅದೆಲ್ಲಿಂದಲೋ ಹುಡುಕಿ ತಂದ ಸುರಸುಂದರಿಯರೆಲ್ಲ ಇರೋದು ಅಲ್ಲಿನೇ....  ಅವರ  ಗುಣ ಗಾನ ಮಾಡಿದ್ರೆ ಸಿಟ್ಟಾಗಬೇಡ. ಅವ್ರು ನಿನ್ ಮುಂದೆ ವೇಸ್ಟ್ ಅನ್ನೋದನ್ನ ಪದೇ ಪದೇ ನಿರೂಪಿಸಕ್ಕೆ ಹಾಗೆ ನೋಡ್ತೇನೆ ಅಷ್ಟೇ  ...  

ನನ್ನ ಅಪ್ಪ ಅಮ್ಮ ನ  ಚೆನ್ನಾಗಿ  ನೋಡ್ಕೋ ಅಂತ ನಿನ್ ಹತ್ರ ಕೇಳೋದಿಲ್ಲ. ನಿನ್ ಅಪ್ಪ ಅಮ್ಮಂದಿರನ್ನು ಅವರಲ್ಲಿ  ನೋಡು ಅಂತ ಮಾತ್ರ ಹೇಳ್ತೀನಿ ಅಷ್ಟೇ. ಯಾಕೆ ಅಂದ್ರೆ ಯುಗ ಯುಗ ಕಳೆದರೂ ಈ  ಅತ್ತೆ ಸೊಸೆ ಅನ್ನೋ ಕಾನ್ಸೆಪ್ಟ್ ಮಾತ್ರ ಇನ್ನೂ correct ಆಗಿ update  ಆಗಿಲ್ಲ. ಯಾವಾಗ್ಲೂ ಈ ಪ್ರೊಗ್ರಾಮ್ ಕಾನ್ಸೆಪ್ಟ್ ಗೆ ಫಿಟ್ಟಿಂಗ್ ಮಾಸ್ಟರ್ ಗಳು ಅನ್ನೋ  external virus ಅಟ್ಯಾಕ್ ಆಗೋದೇ ಜಾಸ್ತಿ  ....ಎಲ್ಲ ಕಿಂತ ಮುಖ್ಯ  ವಿಷಯ ಅಂದ್ರೆ may ಬಿ ಸುಮಾರು 20 ವರ್ಷಕ್ಕೆ ನಿಂಗೆ ಅತ್ತೆ ಆಗಿ ಪ್ರೋಮೋಷನ್ ಸಿಕ್ಕಿದರು ಸಿಗ್ಬೋದು...ಆಮೇಲೆ ಅಷ್ಟೇ "kyon ki saans bi kabhi bahu thi".

ಇಡೀ ವಾರ ನಾನು ಒಬ್ಳೆ ಇರ್ತೇನೆ  ಕಡೇ ಪಕ್ಷ ವೀಕೆಂಡ್ ಅಲ್ಲಿ ಆದರು ನನ್ನ ಹೊರಗೆ ಎಲ್ಲಾದರು ಕರ್ಕೊಂಡ್ ಹೋಗಿ ನಂಗೆ, ಊಟ ಕೊಡ್ಸಿ, ಚಾಟ್ಸ್ ಕೊಡ್ಸಿ ಅಂತ ಕೇಳು ಓಕೆ ಆದ್ರೆ ಹೋಟೆಲ್ ನೀವೇ choose ಮಾಡಿ  ಅಂತ  ಮಾತ್ರ  ಅನ್ಬೇಡ ಯಾಕೆ ಅಂದ್ರೆ ನಂದು taste based selection. ಅದು ರೋಡ್ ಸೈಡ್  ಅದ್ರು ಸರಿ ತಾಜ್ ವೆಸ್ಟ್ ಎಂಡ್  ಆದರು ಸರಿ. ಆದ್ರೆ ಹುಡುಗಿಯರಿಗೆ ಯಾವಾಗಲು ಜಿಗ ಜಿಗಿಸುವ ದೊಡ್ಡ ಹೋಟೆಲ್ ಗಳೇ ಇಷ್ಟ ಅಂತ ಎಲ್ರೂ  ಹೇಳ್ತಾರೆ...ಅದ್ಕೆ ಹೋಟೆಲ್ ಅರಿಸೋ ಜವಾಬ್ದಾರಿ ನಿಮ್ಮದು...

ಇನ್ನು ಕಡೆಯದಾಗಿ ನನ್ ಬಗ್ಗೆ ನಾನು ಹೇಳ್ಕೋಬೇಕು ಅಲ್ವ. ಮುರ್ಖರಿಗೆ ಬುದ್ದಿಯನು ನೂರ್ಕಾಲ ಪೇಳಿದರೆ  ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ  ಅಂತ ಅಮ್ಮ ಯಾವಾಗಲು ಹೇಳ್ತಾ ಇರ್ತಾಳೆ. ಇಲ್ಲಿ ಮುರ್ಖ ಯಾರು ಅಂತ ನೀನು ಜಾಸ್ತಿ ಯೋಚನೆ ಮಾಡೋದು ಬೇಡ ಅನಿಸತ್ತೆ. ನಾವು ಹುಡುಗರೇ ಇಷ್ಟು ಯಾವಾಗಲು ನಮ್ಮ ಬೆನ್ನ ಹಿಂದೆ ಯಾರದ್ರು ಒಬ್ರು ಬುದ್ದಿವಾದ ಹೇಳ್ತಾ ಇರ್ಬೇಕು ಇಲ್ಲ ಅಂದ್ರೆ ನಾವು ಹಿಂದೆನೇ ಉಳಿದು ಬಿಡ್ತೇವೆ. ಬಾಲ್ಯದಲ್ಲಿ ಅಮ್ಮ ತಿದ್ದಿ ತೀಡಿ 50% ಸರಿ ಮಾಡಿದ್ಲು. ಆಮೇಲೆ ಮೇಸ್ಟ್ರು ಲೆಕ್ಚರರ್ ಗಳು ಸೇರಿ ತುಂಬಾ ಪ್ರಯತ್ನ ಪಟ್ರು ಸರಿ ಮಾಡಕ್ಕೆ. ಆದ್ರೆ ಕೆಲ ವಿಷಯಗಳಲ್ಲಿ ನಾವು ಮೇಷ್ಟ್ರಿಗೆ ಕ್ಲಾಸ್  ಹೇಳೋವಷ್ಟು ಬುದ್ದಿವಂತರಾಗಿ ಬಿಟ್ವಿ (ಮೇಷ್ಟ್ರೇ ಸಾಯಂಕಾಲ ಕ್ಲಾಸ್ ಮುಗಿಸ್ಕೊಂಡು ಮನೆಗೆ ಬನ್ನಿ ನಾವು  ನಿಮಗೆ ಟ್ಯುಶನ್ ಕೊಡ್ತೇವೆ ಅನ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡಿದ್ವಿ  ಅಂತ ನಮಗೆ ಮಾತ್ರ ಗೊತ್ತು :-). ಕೆಲ ವಿಷಯಗಳಲ್ಲಿ ನನ್ನ ಬದಲಾಯಿಸಬೇಕು ಅಂತ ನಿನಗೆ ಅನಿಸಬಹುದು. ಆದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?   ತಿದ್ಕೋಳೋಕೆ  ಇಷ್ಟವಿಲ್ಲ ಅಂತೇನೂ ಅಲ್ಲ, ಆದರೆ  ದಿನಚರಿಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡ್ಕೋಬೇಕು ಅಂದರೆ  ನೂರು ಸಲ ಯೋಚನೆ ಮಾಡೋ ಸೋಂಬೇರಿ ನಾನು (ಯೋಚನೆ ಮಾಡಬೇಕೋ ಬೇಡವೋ ಅಂತ ಯೋಚನೆ ಮಾಡೋವಷ್ಟು ಸೋಂಬೇರಿ ಅನ್ನಬಹುದೇನೋ)

ಕಡೆಯದಾಗಿ,
ನೀ ಕೇಳಿದ್ದೆಲ್ಲ ಕೊಡ್ತೀನಿ ಅಂತೇನೂ ಅಲ್ಲ, ಆದರೆ ಇಲ್ಲ ಅನ್ನೋ ಮಾತು ಬಾಯಿಗೆ ಬರಲ್ಲ
ನಿನ್ನ ನೆನಪಾಗಲ್ಲ ಅಂತೇನೂ ಅಲ್ಲ ಆದರೆ ನೀನು ಮನಸ್ಸಿನ ಪುಟದಿಂದ ಸರಿಯೋದೆ ಇಲ್ಲ
ಸಕ್ಕರೆಗಿಂತ ನೀನು ಸಿಹಿ ಅಂತೇನೂ ಅಲ್ಲ, ಆದ್ರೆ ನೀನಿಲ್ದೆ ಆ ಸಿಹಿ ಸಹ್ಯ ಅನಿಸೋದಿಲ್ಲ ಅಷ್ಟೇ ......
ನಿನ್ ಬಗ್ಗೆ ಲೇಖನ ಬರೀಬೇಕು ಅಂತೇನು ಅಲ್ಲ, ಆದ್ರೆ ಮನಸ್ಸೆಲ್ಲ ತುಂಬಿರೋ ನಿನ್ನ ಪದಗಳಲ್ಲಿ ಸೆರೆ ಮಾಡಬೇಕು ಅನ್ನೋ ಆಸೆ  ಅಷ್ಟೇ .................

                                                                                                                                       ಶ್ರೀ :-)

Monday, July 22, 2013

ಮನೆ ಬಾಡಿಗೆಗೆ ಇದೆಯೇ? (CTRL+F for TO LET)

ಮದ್ವೆ ಅಂದ್ರೆ facebook ಸ್ಟೇಟಸ್ ಸಿಂಗಲ್ ಇಂದ ಮ್ಯಾರೀಡ್ ಅಂತ ಚೇಂಜ್ ಮಾಡೋವಷ್ಟು ಸುಲಭ ಅಂತ ಅಂದ್ಕೊಂಡಿದ್ದೆ ನಾನು. ಹೆಂಡ್ತೀನ ಕರ್ಕೊಂಡು ಹೋಗೋದಕ್ಕಿಂತ ಮುಂಚೆ ಮನುಷ್ಯರು ವಾಸ ಮಾಡೋಕೆ ಲಾಯಕ್ಕು ಇರೋ ಒಂದು ಮನೆ ಮಾಡು, ಈಗ ಇರೋ ಮನೆ ಒಂದು ಪಾಳು ಮನೆ ತರಾ ಇದೆ ಅಂತ ಅಮ್ಮನಿಂದ ಕಿವಿಮಾತು (ಕಿವಿಮಾತು ಅನ್ನೋದಕ್ಕಿಂತ ಕಿವಿ ಹಿಂಡಿ ಹೇಳಿದ ಮಾತು ಅನ್ನೋದು ಸೂಕ್ತವೇನೋ). ಸರಿ ಆಫೀಸಿನಲ್ಲಿ ಹೊಸ ಪ್ರಾಜೆಕ್ಟ್ ಬಂದಾಗಲೆಲ್ಲ ಅದನ್ನು ಹಂತ ಹಂತವಾಗಿ ವಿಭಜಿಸಿ ಕಾರ್ಯಗತಗೊಳಿಸೋದು(what a joke ;-)) ವಾಡಿಕೆ.  ಬಾಡಿಗೆ ಮನೆ ಹುಡುಕೋ ಪ್ರಾಜೆಕ್ಟ್ ಕೂಡ ಹಂತ ಹಂತವಾಗಿ ಮುಗಿಸೋಣ ಅಂದ್ಕೊಂಡೆ. ಮೊದಲ ಹಂತದಲ್ಲಿ ಬ್ರೋಕರ್ ಗೆ ಕೊಡೋ ಹಣ ಉಳಿಸೋಕೆ ಸ್ಕೆಚ್. ಫ್ರೆಂಡ್ಸು, ಸಹೋದ್ಯೋಗಿಗಳು ಸೇರಿದಂತೆ ಎಲ್ಲ ಸಹೃದಯರಲ್ಲಿ ಮನೆ ಖಾಲಿ ಇದ್ರೆ ಹೇಳ್ರೋ ಅಂತ ಕೈ ಜೋಡಿಸಿ ಪ್ರಾರ್ಥನೆ. ಆಮೇಲೆ ಸ್ವಲ್ಪ ದಿನ ಬಿಟ್ಟು ಏನ್ರೋ ಎಂಥಾ ಫ್ರೆಂಡ್ಸುಗಳೋ ನೀವೆಲ್ಲ?  ಒಂದು ಮನೆ ಹುಡುಕಿ ಕೊಡಕ್ಕೆ ಆಗಿಲ್ವಲ್ಲ ಅಂತ ಎಮೋಷನಲ್ ಬ್ಲಾಕ್ ಮೇಲ್ ಮಾಡಿದೆ. ಒಂದೆರಡು ಮನೆ ದೊರಕಿದ್ರು ಯಾಕೋ ಬೇಡ ಅನ್ನಿಸ್ತು.... ಇಷ್ಟರಲ್ಲಿ ಒಂದು ತಿಂಗಳು ಕಳೆದು ಹೋಗಿದ್ದರಿಂದ ಎರಡನೇ ಹಂತ ಶುರು ಮಾಡಿದೆ.  ಏನು ಅಂತೀರಾ? ಸಮಯ ಸಿಕ್ಕಾಗಲೆಲ್ಲ ಅಲ್ಲಿ ಇಲ್ಲಿ ಮನೆ ಖಾಲಿ ಇದೆ ಅನ್ನೋ ಬೋರ್ಡಿಗಾಗಿ ಹುಡುಕಾಟ. ಅಲ್ಲಿ ಇಲ್ಲಿ ಟೀ ಅಡ್ದಾಗಳು, ಬಾಯಲ್ಲಿ ನೀರು ತರಿಸೋ ಪಾನಿಪುರಿ ಸ್ಪಾಟ್ ಗಳು, ಪಾರ್ಕಿಂಗ್ ಅಲ್ಲಿ ನಿಲ್ಲಿಸಿದ ಹೊಸ ಹೊಸ ಕಾರುಗಳು, ಬೇರೆ ಬೇರೆ ಸೈಜ್ ನಾಯಿಗಳು, ನಾಯಿಗಳ ಜೊತೆ ವಾಕಿಂಗ್ ಹೋಗ್ತಾ  ನಗು ಚೆಲ್ಲೋ ಚೆಲುವೆಯರು ಸಿಕ್ಕಿದರೇ ಹೊರತು ಮನೆ ಮಾತ್ರ ಸಿಕ್ಲೇ ಇಲ್ಲ. ಸರಿ ಪ್ರಾಜೆಕ್ಟು ಕುತ್ತಿಗೆಗೆ ಬರ್ತಾ ಇದೆ  ಇನ್ನು ಟ್ರೈನಿಗಳನ್ನು ನಂಬಿ ಪ್ರಯೋಜನವಿಲ್ಲ, ಸ್ಪೆಷಲಿಸ್ಟ್ ಗೆ ಹೇಳೋದೇ ವಾಸಿ ಅಂತ ಇರೋ ಬರೋ ಬ್ರೋಕರ್ ಗಳಿಗೆ ನಂಬರ್ ಕೊಟ್ಟು ಮನೆ ಹುಡುಕಲು ಹೇಳಿದಾಗ ಏನೇನು ಪಲಿತಾಂಶ ಬಂತು ಅನ್ನೋದರ ಬಗ್ಗೆ ಈ ಲೇಖನ .

ಶನಿವಾರ ಬೆಳಗ್ಗೆ  ಫೋನ್ ರಿಂಗ್ ಆಯಿತು, ಹೊರಗೆ  ಇನ್ನೂ ಕತ್ತಲೆ, ಟೈಮ್ ನೋಡಿದ್ರೆ 6.30.  ಯಾರೋ ಫ್ರೆಂಡ್ಸು ಕಳ್ ನನ್ ಮಕ್ಳು ಕಾಲ್ ಮಾಡಿರಬೇಕು ಅಂದ್ಕೊಂಡು ಪಿಕ್ ಮಾಡಿದರೆ ಅದು ಬ್ರೋಕರ್ ಕಾಲ್ . ಸಾರ್ ಒಂದು ಮನೆ ಇದೆ. ಬೇಗ ನೋಡೋಕೆ ಬನ್ನಿ. ಆಮೇಲೆ ಓನರ್ ಹೊರಟು ಹೋಗ್ತಾರೆ ಅ೦ದ. ಸರಿ ಓನರ್ ಒಳ್ಳೆ VIP ಇರಬೇಕು ಅಂದ್ಕೊಂಡೆ. ಇನ್ನು ಇದೇ ಮೂತೀಲಿ ಹೋದ್ರೆ ಯಾರೋ ಪೊರ್ಕಿ ಅಂದ್ಕೋತಾರೆ ಅಂತ ಸ್ನಾನ ಮಾಡಿ ಹೊರಟೆ. ಶನಿವಾರ ಇಷ್ಟು ಬೇಗ ಸ್ನಾನ ಮಾಡಿದ್ದು ಇತಿಹಾಸ. ಅಪರೂಪಕ್ಕೆ ಹುಡುಗಿಯರಿಗೆ ಕಾಳು ಹಾಕಕ್ಕೆ ಕೂಡ ಇಷ್ಟು ಬೇಗ ಎದ್ದು ರೆಡಿ ಆಗಿಲ್ಲ .ಸರಿ ಅಂತ ಹೋದರೆ 2ನೇ ಮಹಡಿಯಲ್ಲಿ ಮನೆ, ಸಕತ್ ಆಗಿದೆ, ಒಳ್ಳೆ ಏರಿಯಾ, ಪಾರ್ಕಿಂಗ್ ರೋಡ್ ಅಲ್ಲಿ ಆದ್ರೂ ಪರವಾಗಿಲ್ಲ.  ಇನ್ನೇನು ಫಿಕ್ಸ್ ಮಾಡೋಣ ಅಂತ ಯೋಚನೆ ಮಾಡ್ತಾ ಇರೋವಾಗಲೇ ಓನರ್ ಕಡೆಯಿಂದ ಬಂತು ಬ್ರಹ್ಮಾಸ್ತ್ರ. ಏನಪ್ಪಾ ಮದುವೆ ಆಗಿದೆಯಾ ಅಂತ. ಒಹ್ ಈ ಸಲ ಅದೃಷ್ಠ ನನ್ ಜೊತೆ ಇದೆ ಯಾಕೆ ಅಂದ್ರೆ ಮದುವೆ ಫಿಕ್ಸ್ ಆಗಿದೆಯಲ್ಲ. ಆಗಿದೆ ಸರ್ ಅಂತ ಫುಲ್  confidense ಅಲ್ಲಿ ಹೇಳಿದೆ. ಹೆಂಡತಿ ಎಲ್ಲಿ ಇರೋದು ಅಂತ ಕೇಳಿದ್ದಕ್ಕೆ ಸಾರ್ ಇನ್ನು ಆರು ತಿಂಗಳಲ್ಲಿ ಮದ್ವೆ ಸಾರ್ ಅಂದೆ. ಹಾಗಾದ್ರೆ ನೀವು ಒಂದು ಕೆಲಸ ಮಾಡಿ ಈಗಲೇ ಅಡ್ವಾನ್ಸ್ ಕೊಟ್ಟು ಬಿಡಿ. ಆಮೇಲೆ ಇವತ್ತಿಂದಲೇ ಈ ಮನೆಗೆ rent ಶುರು  ಮಾಡ್ಕೊಂಡು ಬಿಡಿ, ಮದುವೆ ಆಗೋವರೆಗೆ ಈಗ ಇರೋ ಮನೇಲೇ ಇರಿ,ಮದುವೆ ಆದ ಮೇಲೆ ಶಿಫ್ಟ್ ಮಾಡ್ಕೊಳ್ಳಿ ಯಾಕಂದ್ರೆ ಬ್ಯಾಚುಲರ್ ಗೆ ನಾವು ಮನೆ ಕೊಡೋದಿಲ್ಲ. !!!!!!!!! oh my god. "ನಿಮ್ಮಂತ ಮಹಾನುಭಾವರುಗಳು ಇದ್ರೂ ಕೂಡ ಕಾಲ ಕಾಲಕ್ಕೆ ಮಳೆ ಆಗ್ತಾ ಇದೆ ಅಂದ್ರೆ ಆ ದೇವ್ರು ಎಷ್ಟು ದಯಾಮಯಿ ಇರಬೇಕು , ನಿಮಗೆಲ್ಲ ನರಕದ ಮಹಾದ್ವಾರದಲ್ಲಿ ಬಿಕ್ಷೆ ಬೇಡೋ ಕೆಲಸ ಕಾಯಂ" ಅಂತ ಶಾಪ ಹಾಕ್ಕೊಂಡು ಮನೆಗೆ ಬಂದು ನಿದ್ದೆ ಮುಂದುವರಿಸಿದೆ.... 


ಮದ್ಯಾಹ್ನ 12. 30 ಅದೇನೋ ಮೀಟಿಂಗಲ್ಲಿ  ಕೂತಿರಬೇಕಾದ್ರೆ ಫೋನ್ ರಿಂಗಾಯಿಸಿತು.sadda haq ರಿಂಗ್ ಟೋನ್ ಬೇರೆ. ಎಲ್ರೂ ಒಮ್ಮೆ ಕಣ್ಣು ಕೆಕ್ಕರಿಸ್ಕೊಂಡು ನೋಡಿದ್ರು. ಮೀಟಿಂಗ್ ಇರ್ಬೇಕಾದ್ರೆ ಸೈಲೆಂಟ್ ಮೋಡ್ ಇಡಬೇಕು ಅನ್ನೋದು ರೂಲ್ಸ್, ಆದ್ರೆ ಬಡ್ಡಿಮಗಂದು ನೆನಪಾಗಲ್ವೆ...ಪಕ್ಕದಲ್ಲೇ ಕೂತ ಮಿತ್ರನೊಬ್ಬನ ಮುಖದಲ್ಲಿ ಸಂದೇಹದ ನೋಟ( "ಕಳ್ ನನ್  ಮಗ ಫೇಕ್ ಕಾಲ್ activate ಮಾಡಿ ಹೊರಗೆ ಹೋಗ್ತಾ ಇದಾನೆ" ಅಂತ ಇರಬಹುದೇನೋ).   ಹೊರಬಂದು ಕರೆ ಉತ್ತರಿಸಿದರೆ ಬ್ರೋಕರ್ ಮಹಾಶಯಂದು.  ಸಾರ್  ಒಂದು  ಸಕ್ಕತ್  ಮನೆ ಇದೆ. ಓನರ್ ಬೇರೆ ಕಡೆ ಇರೋದು, ತಿಂಗಳಿಗೊಮ್ಮೆ ಬರ್ತಾರೆ , ವಿಶಾಲವಾದ ಪಾರ್ಕಿಂಗ್ ಜಾಗ ಇದೆ, ನಿಮ್ ತರಾನೆ ಒಬ್ರು ಕಾಲ್ ಸೆಂಟರ್ ಉದ್ಯೋಗಿ 3 ವರ್ಷ ಇದ್ರು,ಅಂದ. ಪುಣ್ಯಾತ್ಮ ನಾನು ಕಾಲ್ ಸೆಂಟರ್ ಉದ್ಯೋಗಿ ಅಲ್ಲಪ್ಪ ಅಂದೆ. ಸರ್ ಮತ್ತೆ ದಿನ ಬೆಳಗ್ಗೆ ನಿಮ್ಮನ್ನ ಪಿಕ್ ಮಾಡಕ್ಕೆ ಗಾಡಿ ಬರತ್ತೆ ಅಲ್ವಾ ಅದ್ಕೆ ಹಾಗೆ ಅಂದ್ಕೊಂಡೆ ಅಂದ. ಓಹೋ ಗಾಡಿ ಬಂದವರೆಲ್ಲ ಕಾಲ್ ಸೆಂಟರ್ ಉದ್ಯೋಗಿಗಳು. ಒಳ್ಳೇ ಲಾಜಿಕ್ ಅಂದ್ಕೊಂಡೆ ಮನಸ್ಸಿನಲ್ಲಿ . ಎಷ್ಟು ಗಂಟೆಗೆ ಬರಲಪ್ಪ ಅಂದ್ರೆ ರಾತ್ರೆ ಒಂದು  9 ಗಂಟೆಗೆ ಬನ್ನಿ ಸಾರ್ ಅಂದ. ಬೆಂಗಳೂರಿಗರು ಸಂಜೆ 6 ರ ಮೇಲೆ ಮನೆ ತೋರಿಸೋದಿಲ್ಲ ಅಂತಾರೆ, ಅಂತದ್ರಲ್ಲಿ ಇದು ಏನಪ್ಪಾ ರಾತ್ರೆ ಮನೆ ತೋರಿಸ್ತಾರೆ ಮಾಲಕರು ಅಂದೆ.  ಇಲ್ಲಾ ಸಾರ್ ಸಕತ್ ಒಳ್ಳೆ ಜನ ,ಬೆಳಗ್ಗೆ ಧ್ಯಾನ ಮಾಡ್ತಾರೆ, ಸಂಜೆ ಯಾವ್ದೋ ಯೋಗ ಅಂತೆ ಅದ್ಕೆ ಲೇಟು ಅಂದ. ಓಹೋ ಒಳ್ಲ್ಲೇ ಜನ, ಪಾರ್ಕಿಂಗ್ ಜಾಗ ಬೇರೆ ಇದೆ, ಇನ್ನೇನು ಮನೆ ಚೆನಾಗಿಲ್ಲ ಅಂದ್ರೂನು ಅಡ್ಜಸ್ಟ್ ಮಾಡ್ಕೊಳ್ಳೋದು ಅಂತ ಮೈಂಡ್ ಫಿಕ್ಸ್ ಮಾಡ್ಕೊಂಡೆ. ಸರೀ ರಾತ್ರಿ ಊಟ ಮುಗಿಸ್ಕೊಂಡು ಬ್ರೋಕರ್ ಗೆ ಕಾಲ್ ಮಾಡಿದ್ರೆ ಇಲ್ಲೇ ಬಂದ್ ಬಿಡಿ ಸಾರ್ ಹೋಗೋಣ ಅಂದ. ಅಂತು ಮಹಾಶಯನ ಕರ್ಕೊಂಡು ಒಂದೈದು ಕಿಲೋಮೀಟರು ಹೋದ ಮೇಲೆ  ಸಾರ್ ಇಲ್ಲೇ ನಿಲ್ಲಿಸಿ ಬಿಡಿ ಅಂದ. ದೊಡ್ಡ 3 ಅಂತಸ್ತಿನ ಮನೆ. ಸಕತ್ ಆಗಿ ಇದೆ ಅಂತ ಆ ಕಡೆ ಹೆಜ್ಜೆ ಇದ್ರೆ, ಸಾರ್ ಮನೆ ಈ ಕಡೆ ಇರೋದು ಇಲ್ಲಿ ಬನ್ನಿ ಅನ್ನೋದೆ? ನೋಡಿದರೆ ಒಂದು ಸಾದಾರಣ ಮನೆ,ಹೊರಗಿನ ಗೋಡೆ ನೋಡಿದರೆ ಪೇಯಿಂಟ್ ನ ಮುಖ ನೋಡಿ ಏನಿಲ್ಲಾ ಅಂದ್ರು 10 ವರ್ಷ ಮೇಲೆ ಆಗಿದೆ. ಸಾರ್ ಓನರ್ ಹೊರಗಡೆ ಪೇಯಿಂಟ್ ಮಾಡಿಸೋದಿಲ್ಲ ಅದು ವೇಸ್ಟ್ ಅಲ್ವಾ ಸಾರ್ ಒಳಗಡೆ ನೋಡಿ ಮನೆ ಚೆನ್ನಾಗಿದೆ ಅಂದ. ಇಲ್ಲಿ ಪಾರ್ಕಿಂಗ್ ಎಲ್ಲಿದೆಯಪ್ಪ  ಅಂದ್ರೆ ಸಾರ್ ಮೊದ್ಲು ಮನೆ ನೋಡಿ ಆಮೇಲೆ ಪಾರ್ಕಿಂಗ್ ಜಾಗ ತೋರಿಸ್ತೇನೆ ಅಂದ. ಸರಿ ಒಳಗೆ ಹೋಗಿ ನೋಡಿದ್ರೆ ಅದು ಔಟ್ ಹೌಸ್ ಮನೆ. ಗಾಳಿ ಬೆಳಕು ಅನ್ನೋದು ಇಲ್ವೇ ಇಲ್ಲ.  ಮುಂಚೆ ಇದ್ದ ಕಾಲ್ ಸೆಂಟರ್ ಉದ್ಯೋಗಿ 3 ವರ್ಷ ಯಾಕೆ ಇದ್ದ ಅನ್ನೋದು ಈಗ ಗೊತ್ತಾಯಿ ತು. ಅವ್ರಿಗೆ ರಾತ್ರೆ ಕೆಲಸ ಹಗಲು ನಿದ್ದೆ, ಗಾಳಿ ಬೆಳಕು ಇಲ್ಲ ಅಂದ್ರೆ ಅವ್ರಿಗೆ ಫುಲ್ ಕುಶ್...ಬಾಡಿಗೆ ಎಷ್ಟಪ್ಪ ಅಂತ ಕೇಳಿದ್ರೆ   ಬೇರೆ ಅವ್ರಿಗೆ ಆದ್ರೆ 8 ಸಾವಿರ. ಆದ್ರೆ ಈ ಓನರ್ ಮಗ ನಿಮ್ ತರಾನೆ ಕೆಲಸ ಮಾಡೋದು ಅದ್ಕೆ ಒಂದು ಇನ್ನೂರು ಕಮ್ಮಿ ಕೊಡಿ ಅಂದ ಮಹಾನುಭಾವ. ಸರೀಪ್ಪ ಒಮ್ಮೆ ಪಾರ್ಕಿಂಗ್ ಜಾಗ ತೋರಿಸು ಏನು ಅಂತ ಹೇಳ್ತೇನೆ ಅಂದ್ರೆ ಪಾರ್ಟಿ ರೇಗಿ ಬಿಡೋದೇ?. ಆಗ್ಲಿಂದ ಪಾರ್ಕಿಂಗ್ ಜಾಗ ಅಂತ ತಲೆ ತಿನ್ತೀರಲ್ಲ ಅಲ್ಲಿ ನೋಡಿ ಆ ಪಕ್ಕದ ಖಾಲಿ ಸೈಟ್ ಇದೆ ಅಲ್ವಾ,ಅದೇ ಪಾರ್ಕಿಂಗ್ ಅಂತಾ ಇದ್ರೆ ಹೊಡಿಯೋದು ಒಂದೇ ಬಾಕಿ. ಏನ್ರಿ ನೀವು ಪಕ್ಕದ್ ಸೈಟ್ ತೋರಿಸಿ ಪಾರ್ಕಿಂಗ್ ಇದೆ ಅಂತೀರಾ ಅಂದ್ರೆ ಸಾರ್ ಮನೆ ಸಕತ್ ಡಿಮ್ಯಾಂಡ್ ಇದೆ ಬೇಕಾದರೆ ತಗೋಳಿ ಇಲ್ಲಾಂದ್ರೆ ಬಿಡಿ ಅನ್ನೊದೆ. ? ಇರು ಮಗನೆ ನಿಂಗೆ ಅಂತ ಸಿಟ್ಟಿನಲ್ಲಿ ಬ್ರೋಕರ್ ನ ಅಲ್ಲೇ ಬಿಟ್ಟು ಮನೆಗೆ  ಬರೋವಾಗ ಗಂಟೆ 11. ಅವ್ನು ಅವನ ಮನೆಗೆ ಹೋಗ್ಬೇಕು ಅಂದ್ರೆ ಏನಿಲ್ಲ ಅಂದ್ರು 2-3 ಕಿಲೋಮೀಟರು ನಡೀಬೇಕು, ಹೀಗಾದ್ರೂ  ಸೇಡು ತೀರಿಸ್ಕೊಂಡೆ ಅನ್ನೋ ಸಮಾದಾನ ಮನಸ್ಸಿನಲ್ಲಿ. 

ಇನ್ನು ಬರೋದು ಮೋಸ್ಟ್ ಇಂಟೆರೆಸ್ಟಿಂಗ್ ಪಾರ್ಟಿ. ನಿವೃತ್ತ ಪ್ರಾಂಶುಪಾಲರು. ಮನೆ ನೋಡ್ತಾ ಇರೋವಾಗ ಅವರ ಲೆಕ್ಚರ್ ಶುರು. ಪಾಪ ಅವರು ಪಾಠ ಮಾಡದೆ ಬಹಳ ದಿನಗಳಾಗಿರಬಹುದೇನೋ ಅನ್ನಿಸಿತು. ಸರಿ ಯಾಕೆ ಇವರಿಗೆ ಬೇಜಾರು ಮಾಡೋದು ಅಂತ ಸ್ವಲ್ಪ ಸಮಯ ಕೇಳಿಸ್ಕೊಂಡೆ. ಬೋರ್ ನೀರು ಇದೆ, ಆದ್ರೆ ನಿಮಗೆ ಕನೆಕ್ಷನ್ ಇಲ್ಲ. ಯಾಕೆ ಅಂದ್ರೆ ಬೋರ್ ಕನೆಕ್ಷನ್ ಕೊಟ್ರೆ ಕಾವೇರಿ ನೀರನ್ನು ಯಾರು ಬಳಸದೆ ಅದು ಹಾಳಾಗತ್ತೆ ಅಂದ್ರು. ಟಾಯ್ಲೆಟ್ ಅಲ್ಲಿ ಪೈಪ್ ಹಾಕಿಲ್ಲ. ಹೊರಗಡೆಯಿಂದ ನೀರು ತಗೊಂಡು ಹೋಗ್ಬೇಕು, ಯಾಕೆ ಅಂದ್ರೆ ಆಮೇಲೆ ಜನ ನೀರು ಜಾಸ್ತಿ ಬಳಸ್ತಾರೆ.  ಅಡಿಗೆ ಮನೇಲಿ ನೀರು ಬರೋದಿಲ್ಲ ಯಾಕೆ ಅಂದ್ರೆ ಅಲ್ಲಿ ನೀವು ಅದು ಇದು ಅಂತ  ತೊಳೆದು ಆಮೇಲೆ ಬ್ಲಾಕ್ ಆಗುತ್ತೆ ಸುಮ್ನೆ ನಮಗೆ ತಲೆನೊವು ಅನ್ನೋದೇ? ಇದ್ಯಾಕೋ ತಲೆ ನೋವು ಪಾರ್ಟಿ, ಸಹವಾಸ ಬೇಡಪ್ಪ ಅಂತನಿಸಿತು. ಯಾರಿಗೊತ್ತು ಆಮೇಲೆ ಈ  ಪಾರ್ಟಿ ಬೆಡ್ ರೂಮ್  ತೋರಿಸಿ ಇದು ಬೆಡ್ ರೂಮ್, ಆದ್ರೆ ಇಲ್ಲಿ ಮಲಗೋ ಹಾಗಿಲ್ಲ. ಯಾಕೆ ಅಂದ್ರೆ ನನಗೆ ಮಕ್ಕಳನ್ನು {ಮುಂದೆ ಆಗಬಹುದಾದ ಮಕ್ಕಳು ;-) }  ಕಂಡ್ರೆ  ಆಗೋದಿಲ್ಲ ಅನ್ನೋದಕ್ಕಿಂತ ಮೊದಲು ನಿಮ್ಮ ಮನೆ ನನಗೆ ಇಷ್ಟ ಆಗಿಲ್ಲ ಅಂತ ಹೇಳಿ ಬ್ರೋಕರ್ ಗೆ ಒಮ್ಮೆ ಗುರಾಯಿಸಿ ನನ್ನ ಬೈಕ್ ಹತ್ತಿದೆ...... 


ಅಂತು ಇಂತು ಬಹಳಷ್ಟು ಹುಡುಕಾಟ, ಪರದಾಟ, ಸುತ್ತಾಟ, ಓನರ್ ಜೊತೆ ಕಿತ್ತಾಟಗಳ ನಂತರ ಒಂದು ಸೂರು ಸಿಕ್ಕಿತು. ಸ್ನೇಹಿತನೊಬ್ಬನ ದಯೆಯಿಂದ ಬ್ರೋಕರ್ ಗೆ ಕೊಡೋ ಕಾಸು ಕೂಡ ಅರ್ಧದಷ್ಟು ಉಳಿಯಿತು. ಆ ಸ್ನೇಹಿತನಿಗೆ ಕೊಟ್ಟ ಪಾರ್ಟಿ ಕಾಸು ಉಳಿಸಿದ್ದಕ್ಕಿಂತ ಜಾಸ್ತಿನೇ ಆಯ್ತು ಅನ್ನೋದು ನನಗೆ ಮಾತ್ರ ಗೊತ್ತಿರೋ ವಿಷಯ. ಆದ್ರೆ ನಮ್ಮೋರಿಗೆ ಮಾಡಿದ ಖರ್ಚು ಯಾವತ್ತೂ ಬೇಸರ ತರಿಸೋದಿಲ್ಲ ಅಲ್ವಾ?
 3 ಅಂತಸ್ತಿನ ಮನೆ, ಅದರಲ್ಲಿ ನನ್ನದು 2 ನೆ ಅಂತಸ್ತು. ಗ್ರೌಂಡ್ ಫ್ಲೋರ್ ಬೇಕು ಅಂತಾ  ಇದ್ದ ನಾನು exercise ಆಗತ್ತೆ ಅಂತ ಒಪ್ಪಿಕೊಂಡೆ. ಇನ್ನು ಬೋರ್ ನೀರು ಬರಬೇಕಾದ ಎಲ್ಲ ಜಾಗಗಳಲ್ಲೂ ಬರುತ್ತೆ. ಕಾವೇರಿ ನೀರು ಕೂಡ ಬರುತ್ತೆ ಆದ್ರೆ ಅದು ಬರೋ ಜಾಗಕ್ಕೆ ನಾನು ಹೋಗ್ಬೇಕು ಅಷ್ಟೇ :-). (ನೀರು pressure ಕಡಿಮೆ, ಗ್ರೌಂಡ್ ಫ್ಲೋರ್ ಗೆ ಹೋಗಿ ನೀರು ತರಬೇಕು)  . ವಿಶಾಲವಾದ ಪಾರ್ಕಿಂಗ್ ಜಾಗ ಇದೆ, ಆದ್ರೆ ರೋಡ್ ಮೇಲೆ ಅಷ್ಟೇ. ಒಳ್ಳೆ ಪಕ್ಕದ ಮನೆಯವರು (ಯಾಕೆ ಅಂದ್ರೆ ಅವ್ರು ಮನೆ ಇಂದ ಹೊರಗೆ ಬರೋದಿಲ್ಲ, ಮಾತೂ ಆಡೋದಿಲ್ಲ). ...  ಅಂತೂ 7 ತಿಂಗಳ ಹುಡುಕಾಟದ ನಂತರ ಒಂದು ಸಾದಾರಣ ಮನೆ ನನ್ನ ಪಾಲಿಗೆ ಅರಮನೆಯಾಗಿ ಕಂಡಿದ್ದು ಮಾತ್ರ ಬಾಡಿಗೆ ಮನೆ ಅನ್ನೋ ಮಹಾಮಾಯೆಯ ಕೃಪೆಯೇ ಸರಿ...... 
                                                                                          --------ಶ್ರೀ:-)

Wednesday, May 2, 2012

ಹುಡುಕಾಟ-(ಮದುವೆ ಯಾವಾಗ -೨)

ಕೆಲಸ ಸಿಕ್ತು, ಮನೆ ಕಾರು ಬೈಕು ಎಲ್ಲ ಆಯಿತು ಇನ್ನು ಮುಂದೇನು? ತಮಗೊಂದು ಬಾಳಸಂಗಾತಿ ನೋಡಕ್ಕೆ ತಯಾರಾಗಿರೋ ಹುಡುಗರ ಪಾಡನ್ನು ಇಲ್ಲಿ ಬರೆದಿದ್ದೇನೆ. ಜೊತೆಗೆ ಸ್ವಲ್ಪ ಮಸಾಲೆ ಖಾರ.......



ಹುಡುಗರ ಜೀವನದ ಅತೀ ಖುಷಿಯ, ಸಕ್ರಿಯ ಹಾಗು ಅತ್ಯಂತ ಚಂಚಲ ಕಾಲ ಅಂದ್ರೆ 20 ರಿಂದ 30 ರ ಪ್ರಾಯ . ಹುಡುಗರು ಜೀವನ ಪರ್ಯಂತ ನೆನಸಿಕೊಂಡು ಖುಷಿ ಅಥವಾ ಪಶ್ಚಾತಾಪ ಪಡೋ ವಯಸ್ಸು ಕೂಡ ಇದೇನೇ. ಅದ್ಕೆ ಹುಡುಗರ ಪಾಲಿಗೆ 20 ರಿಂದ 30 ರ ಪ್ರಾಯ ಸಕತ್ danger !! ಉಪೇಂದ್ರ ಅವರು ಇದನ್ನು ಅನುಭವಿಸಿನೇ danger ಅನ್ನೋ ಹಾಡನ್ನು ರಕ್ತ ಕಣ್ಣೀರು ಚಿತ್ರಕ್ಕೆ ಬರೆದಿದ್ದು ಅನ್ನಿಸತ್ತೆ. ಈ ವಯಸ್ಸಲ್ಲಿ ಚೆನ್ನಾಗಿ ಓದಿಕೊಳ್ಬೇಕು, ಆಮೇಲೆ ಕೆಲಸ ಹುಡ್ಕೋಬೇಕು, ಬೈಕು ಕಾರು ಅಂತ ತಗೋಬೇಕು, ಸ್ವಂತ ಮನೆ ಅನ್ನೋ ಮಾಯೆ ಗೆ ಶರಣಾಗಬೇಕು ಇನ್ನೊಂದು ಮಾತಲ್ಲಿ ಹೇಳ್ಬೇಕು ಅಂದ್ರೆ settle ಆಗಬೇಕು.settle ಆಗೋದು ಅಂದ್ರೆ ಏನು...? ಕೆಲಸ, ಕಾರು, ಮನೆ ಇದ್ದ ಹುಡುಗನನ್ನು settled ಅನ್ನಬಹುದೇ..? ನಿಜ ಹೇಳ್ಬೇಕು ಅಂದ್ರೆ ಕಾರು ಮನೆ ಅಂತ ಹೋದಾಗಲೇ ನಾವು unsettle ಆಗೋದು. ಯಾಕಂದ್ರೆ ಇವನ್ನು ಕೊಳ್ಳೋವರೆಗೂ EMI ಅನ್ನೋ ಪೆಡಂಭೂತದ ಪೀಡೆ ಇರೋದಿಲ್ಲ. ಅಂದ್ರೆ ನಾವು ನಮ್ಮ ಮನಸ್ಸಿನ ಮಾಲೀಕರು. ಯಾವಾಗ ನಮ್ಮ ಸ್ವಂತ ಮನೆಯ ಮುಂದೆ ನಮ್ಮ ಸ್ವಂತ ಕಾರು ಇರ್ಬೇಕು ಅಂತ ಬಯಸ್ತೀವೋ ಅಲ್ಲಿಂದ ನಾವು ಬ್ಯಾಂಕಿನ ಗುಲಾಮರು. ಆದರೆ ಹುಡುಗರು ಅವರಿಷ್ಟದಂತೆ ನಡೆದುಕೊಳ್ಳಲು ಸಿಗೋ ಅತಿ ಅಲ್ಪ ಸಮಯ ಅಂದ್ರೆ ಇದೇನೇ. ಯಾಕೆ ಅಂದ್ರೆ ಓದು ಮುಗಿಯೊವರೆಗೆ ಪಾಕೆಟ್ ಮನಿಗೋಸ್ಕರನಾದ್ರೂ ಮನೆಯವರ ಮಾತು ಕೇಳಲೇಬೇಕು, ಮದುವೆಯ ನಂತರವಂತು ಯಾರ ಮಾತು ನಡೆಯುತ್ತೆ ಅನ್ನೋದು ಎಲ್ಲರಿಗು ಗೊತ್ತು... so ಅಪ್ಪಿ ತಪ್ಪಿ ಯಾರಾದ್ರು ಈ ವಯಸ್ಸಿನಲ್ಲಿ ಗರ್ಲ್ ಫ್ರೆಂಡು, ಪಾರ್ಟಿ ಅದು ಇದು ಅಂತ ಸ್ವಲ್ಪ overtime ಮಾಡ್ತಾರೋ ಒಂದರ್ಥದಲ್ಲಿ ಅವರೇ ನಿಜವಾಗಿ ಪುಣ್ಯವಂತರು. ಮನೆಯಲ್ಲಿ ಆಗಾಗ ಮಾಡ್ತಾ ಇದ್ದ ತರಲೆ ಕೆಲಸಗಳಿಗೆ ಅಮ್ಮನಿ೦ದ  "ಕತ್ತೆ ವಯಸ್ಸಾಯ್ತು ಇನ್ನು ಹುಡುಗಾಟ ಬಿಟ್ಟಿಲ್ಲ " ಅ೦ತ ಸಹಸ್ರನಾಮಾರ್ಚನೆ ಶುರುವಾಗೋದು ಕೂಡ ಇದೆ ವಯಸ್ಸಿಗೇನೇ !!!!

ಇಲ್ಲಿಯವರೆಗೆ ಅಡ್ರೆಸ್ ಗೆ ಇಲ್ಲದ ಸ೦ಬ೦ಧಿಗಳೆಲ್ಲ ಅಲ್ಲೊ೦ದು ಸ೦ಬ೦ಧ ಇದೆ ಇಲ್ಲೊ೦ದು ಸ೦ಬ೦ಧ ಇದೆ ಅ೦ತ ಅಪ್ಪ ಅಮ್ಮನ ತಲೆ ತಿನ್ನುತ್ತ ಇರುತ್ತಾರೆ. shaadi.com , jeevansaathi.com ಅ೦ತ ಇರೋ ವೆಬ್ ಸೈಟುಗಳೆಲ್ಲ ಹುಡುಗಿ ಹುಡುಕೋ ನಮ್ಮ ಕಾತುರವನ್ನೇ ಕ್ಯಾಶ್ ಮಾಡಿಕೊಳ್ಳೋ ಹುನ್ನಾರ ನಡೆಸಿರುತ್ತವೆ. ನಮಗೆ ತಿಳಿಯದ೦ತೆ ಕೈಗಳು ಈ ವೆಬ್ ಸೈಟುಗಳನ್ನು ಟೈಪ್ ಮಾಡಿರುತ್ತೆ. ಅಲ್ಲಿ ಕಾಣೋ ಹುಡುಗಿಯರನ್ನೆಲ್ಲ ವಯಸ್ಸು, ಅ೦ತಸ್ತು, ಲುಕ್ಸ್ ಅ೦ತ ಬೇರ್ಪಡಿಸಿ ಯಾವುದೋ ಒ೦ದು ಭಾವಚಿತ್ರಕ್ಕೆ ನಮ್ಮ ಮನಸ್ಸು ಕೊಟ್ಟು ತಾತ್ಕಾಲಿಕ ಕನಸಿನ ಮಹಲನ್ನು ಕಟ್ಟಿ ರುತ್ತೇವೆ. ಅವರ Details ತಗೊ೦ಡು ಮಾತುಕತೆ ಮು೦ದುವರಿಸೋಣ ಅ೦ದ್ರೆ ಅವರ Details ಲಾಕ್ ಆಗಿರತ್ತೆ. ಎರಡರಿಂದ ನಾಲ್ಕು ಸಾವಿರ ಕೊಟ್ಟು registration ಮಾಡಿಸಿದರೆ ಮಾತ್ರ ಅವರ ಕುಲ ಗೋತ್ರ ಎಲ್ಲ ಸಿಗೋದು. ನಮ್ಮ ಕುತೂಹಲ, ಕಾತುರವನ್ನು cash ಮಾಡಿಕೊಳ್ಳೋ ಪಕ್ಕಾ ಬಿಸಿನೆಸ್ ಜನಗಳು. ಅಪ್ಪಿ ತಪ್ಪಿ registration ಮಾಡಿಸಿದ್ರು ಒಮ್ಮೊಮ್ಮೆ ಆ ಕಡೆಯಿ೦ದ no response !!!. ( ನಿಂಗೆ ಬರೋ ಸಂಬಳದಲ್ಲಿ ನನ್ನ maintain ಮಾಡಕ್ಕೆ ಆಗಲ್ಲ ಅಂತಾನೋ ಅಥವಾ ಕನ್ನಡಿಯಲ್ಲಿ ನಿನ್ನ ಮುಖ ನೋಡ್ಕೋ ಅಂತಾನೋ ಇರಬಹುದೇನೋ!!!!!!!!)

ನಮ್ಮನ್ನು ನಾವು ಹೃತಿಕ್ ಅ೦ದುಕೊ೦ಡು ಐಶ್ವರ್ಯ ರೈ ತರ ಹುಡುಗಿ ಬೇಕು ಅ೦ತ ಟಾರ್ಗೆಟ್ ಇಟ್ಟುಕೊ೦ಡಿರ್ತೀವಿ. ಅದೇನೋ ಬಾಲ್ಯದಿ೦ದಲು ಅಪ್ಪ ಅಮ್ಮ ನನ್ನ ರಾಜ ನನ್ನ ಬ೦ಗಾರ ಅ೦ತೆಲ್ಲ ಹೇಳಿ ಬೆಳೆಸಿರೊದ್ರಿ೦ದ ಈ ಹುಡುಗರಿಗೆ ಅವರ looks ಮೇಲೆ ಒಂತರ ಹೆಮ್ಮೆ. ಆಮೇಲೇನೆ ಗೊತ್ತಾಗತ್ತೆ "ಹೆತ್ತವರಿಗೆ ಹೆಗ್ಗಣವೂ ಮುದ್ದು" ಅ೦ತ!!!!!!. SO ಬರೋ ಸ೦ಗಾತಿ ನೋಡಕ್ಕೆ ಐಶ್ವರ್ಯ ತರ ಇರಬೇಕು, ಇರೋ ಬರೋ ಡಿಗ್ರಿ ಎಲ್ಲ ಮುಗಿಸಿರಬೇಕು ಅನ್ನೋ requirement ಗಳು ಹುಡುಕಾಟದಲ್ಲಿ ಕಳೆದು ಹೋಗಿ ಕಡೆಗೊಮ್ಮೆ ಒ೦ದು ಹುಡುಗಿ ಸಿಕ್ಕಿದರೆ ಸಾಕು ಅನ್ನೋ level ಗೆ ಬ೦ದಿರುತ್ತೇವೆ. height ಕಡಿಮೆ weight ತು೦ಬಾ ಜಾಸ್ತಿ ..........ಅನ್ನೋ ಕಾರಣಗಳೆಲ್ಲ ತಿಳಿಯಾಗಿ ಯಾವುದೋ ಒ೦ದು ಹೆಣ್ಣನ್ನು ತು೦ಬಾ adjustment ಮಾಡಿಕೊ೦ಡು ಗೋತ್ರ ಗಳನ್ನು ಹೊ೦ದಿಸಲು ಶಾಸ್ತ್ರಿಗಳ ಬಳಿ ಹೋದರೆ ಅಲ್ಲಿ ಹೊ೦ದಿಕೆಯಾಗಲ್ಲ ಅನ್ನೋ ಉತ್ತರ ಕೇಳಿ ಫುಲ್ ಸುಸ್ತು. ತು೦ಡು ತು೦ಡು ಬಟ್ಟೆ ಹಾಕಿದವರ ಮೇಲೆ ಜಾಸ್ತಿ ಪ್ರೀತಿ ತೋರಿಸ್ತಾ ಇದ್ದ ಹುಡುಗರೆಲ್ಲ ತಮಗೆ ಹುಡುಗಿ ನೋಡೋವಾಗ ಮಾತ್ರ ಅಪ್ಪಟ ಭಾರತೀಯ ನಾರಿಯನ್ನು ಹುಡುಕ್ತಾರೆ. ಇದು ಒ೦ದು ರೀತಿಯ dual personality ತಾನೇ? ಅಥವಾ ಮನಸ್ಸು ಜಾಗೃತಗೊಳ್ಳುತ್ತ ಇರೋದರ ಮುನ್ಸೂಚನೆ ? ಅಥವಾ ದೊಡ್ಡೋರ ಮಾತಲ್ಲಿ ಹೇಳ್ಬೇಕು ಅಂದ್ರೆ ಜವಾಬ್ದಾರಿ ಅನ್ನೋ ಜರೂರಿ ಗುಣ ಹೆಗಲೇರಿದ್ದರ ಸೂಚನೇನಾ?

ಹುಡುಗಿ ಕೆಲಸದಲ್ಲಿರಬೇಕೆ ಅಥವಾ ಮನೆಯಾಕೆಯಾಗಿ ಮಾತ್ರ ಇರಬೇಕೆ ಅನ್ನೋದು ಒ೦ದು ದೊಡ್ಡ ಯಕ್ಷ ಪ್ರಶ್ನೆ . ಒಬ್ಬರು ಕೆಲಸದಲ್ಲಿರಬೇಕು ಅ೦ದ್ರೆ ಇನ್ನೊಬ್ಬರು ಮನೆಯಲ್ಲಿ ಗ್ರಹಿಣಿಯಾಗಿದ್ದರೆ ಸಾಕು ಅ೦ತಾರೆ. ದುಡಿಯುವವಳು ಮನೆಯಲ್ಲಿದ್ದರೆ ಬ್ಯಾಂಕ್ ಅಕೌಂಟ್ ಮೇಲೆ ಲಕ್ಷ್ಮಿಯ ಅನುಗ್ರಹ ಇರುತ್ತೆ, ಆಕೆ ಮಾಡೋ ಶಾಪಿ೦ಗ್ ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇರಲ್ಲ. ಈ ಶಾಪಿಂಗ್ ಅನ್ನೋ ಪೀಡೆಯನ್ನು ಯಾರು ಹುಟ್ಟು ಹಾಕಿದರೋ?  ನಮಗೆ ಅತಿ ಅಗತ್ಯವಾದ ವಸ್ತುಗಳನ್ನು ಬಿಟ್ಟು ಬೇರೆ ಎಲ್ಲ ವಸ್ತುಗಳು ತುಂಬಿರೋ ಜಾಗಕ್ಕೆ ಶಾಪಿಂಗ್ ಮಾಲ್ ಅನ್ನಬಹುದೋ ಏನೋ. ಆದರು window ಶಾಪಿಂಗ್ ಮಾಡಿ ಅಲ್ಲಿ ಇಲ್ಲಿ ಕಾಣಿಸುವ ಚೆಲುವೆಯರನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಕ್ಕೆ ಸರಿಯಾದ ಜಾಗ ಅಂದ್ರು ತಪ್ಪಿಲ್ಲ ಅನ್ನಿಸತ್ತೆ. ಅಪರೂಪಕ್ಕೆ ಈ ಶಾಪಿಂಗ್ ಮಾಲ್ ಅನ್ನೋ ಮಾಯಾನಗರಿಗೆ ಬೇಟಿ ಕೊಟ್ಟಾಗ ಅಲ್ಲಿ ಹತ್ತಾರು ಕವರ್ ಹಿಡಿದುಕೊಂಡು ಹೆಂಡತಿಯ ಹಿಂದೆ ಕಷ್ಟಪಟ್ಟು ಹೆಜ್ಜೆ ಹಾಕೋ ಗಂಡಸರನ್ನು ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಅದಕ್ಕೆ ಇರಬೇಕು ಕೆ. ಎಸ್.ನರಸಿಂಹ ಸ್ವಾಮಿಯವರು ಹೇಳಿದ್ದು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ ಅ೦ತ. ಹೊರಗೆ ಹೋದ್ರೆ ಏನು ಅನ್ನೋದನ್ನು ಮಾತ್ರ " fill in the blanks" ಆಗಿ ಇಟ್ಟಿದ್ದಾರೆ. ಮನೆಯೊಳಗಿದ್ದರೆ ನೋ ಶಾಪಿಂಗ್ ಅದ್ಕೆ ಸಿಪಾಯಿ. ಹೊರಗಡೆ ಕಾಲಿಟ್ಲು ಅಂದ್ರೆ ಪರ್ಸು ಖಾಲಿ ಮಾಡ್ಕೊಳ್ಳೋ ಬಡಪಾಯಿ ಆಗೋಗ್ತಾನೆ ಅಲ್ವಾ ಗಂಡ. ಆದರೆ ಮನೆಯಾಕೆಯ ಕೈಯಲ್ಲಿ ಕೆಲಸ ಮಾಡಿಸಬಾರದು ಅನ್ನೋ ಒ೦ದು ಮೊ೦ಡು ಛಲ ನ೦ಗೆ. ಆದರೂ ಮನೆಯಾಕೆ ಮನೆಯಲ್ಲೇ ಇದ್ದರೆ ಲೇಟಾಗಿ ಮನಗೆ ಹೋದರೆ ನಿಮಗೆ "ಮನೆ ಯಾಕೆ ..?" ಅ೦ತ ಕೇಳ್ತಾಳೋ ಅ೦ತ ಭಯ.

ವರದಕ್ಷಿಣೆ ತಗೊಬೇಕೆ? ತಗೊ೦ಡು ಮನೆಯಾಕೆಯ ಕಣ್ಣಿನಲ್ಲಿ ಮಾರಾಟವಾಗಿರೋ ವಸ್ತುವಾಗಿರೋದು ಇಷ್ಟವಿಲ್ಲದ್ದಕ್ಕೆ ವರದಕ್ಷಿಣೆಯ ವಿಷಯವನ್ನು ಗೋಣಿಯೊಳಗೆ ತುರುಕಿ  ಬದಿಗಿರಿಸೋದೇ ಉತ್ತಮ ಆಯ್ಕೆ. ಈ ಅಖಿಲ ಬ್ರಹ್ಮಾ೦ಡದಲ್ಲಿ ಅದೆಲ್ಲೋ ತಮ್ಮ ಮಗಳ ಜೊತೆ ಅಡಗಿರೋ Virtual ಮಾವನವರಲ್ಲಿ ಮು೦ದೆ ಹುಟ್ಟೋ ಮಗುವಿನ donation ಖರ್ಚು ನೋಡ್ಕೊಳ್ಳಿ ಅ೦ತ ಹೇಳೋದೇ ವಾಸಿ ಅ೦ತ ನನ್ನ ಅನಿಸಿಕೆ...

ಸ್ನೇಹಿತರನ್ನು ಆರಿಸುವಾಗಲೇ ಒಮ್ಮೊಮ್ಮೆ ವರುಷಗಳು ಕಳೆದಿರುತ್ತವೆ. ಇನ್ನು ಹುಡುಗರ ಮನಸ್ಸು ಒಂದು ತೆರೆದಿಟ್ಟ ಪುಸ್ತಕದಂತೆ, ಓದಿ ಅರ್ಥ ಮಾಡಿಕೊಳ್ಳೋದು ತು೦ಬ ಸುಲಭ. ನೀರೊಳಗೆ ಮೀನಿನ ಹೆಜ್ಜೆಯನ್ನಾದರೂ ಗ್ರಹಿಸಬಹುದು ಆದರೆ ಈ ಹುಡುಗಿಯರ ಮನಸ್ಸಿನೊಳಗೆ ಅದೇನಿದೆ ಅ೦ತ ಗ್ರಹಿಸೋದು ಅಸಾದ್ಯದ ಮಾತೇ ಸರಿ. ಹೀಗಿರೋವಾಗ ಒಂದೇ ಒಂದು ಸಲ ನೋಡಿ ಹುಡುಗಿಯನ್ನು ಜೀವನ ಸಂಗಾತಿಯನ್ನಾಗಿ ಆರಿಸೋದು ಹೇಗೆ? ಸ್ನೇಹಿತನನ್ನು ಆರಿಸಿದ ಮೇಲೆ ಆತನ ಗುಣ ಹಿಡಿಸದಿದ್ದಲ್ಲಿ ಬಿಟ್ಟು ಬಿಡಬಹುದು. ಆದ್ರೆ ಹೆಂಡತಿ.......? ಬಿಡೋ ಮಾತು ಹಾಗಿರಲಿ ಅವಳನ್ನು ಜೋರಾಗಿ ಬೈದರೂ ಕೂಡ ಮಹಿಳ ಸಂಘದವರು ಮನೆ ಮುಂದೆ ಮಾನ ಹರಾಜು ಹಾಕಕ್ಕೆ ರೆಡಿ ಆಗಿರ್ತಾರೆ.

ಇಷ್ಟೆಲ್ಲಾ ಪ್ರಶ್ನೆಗಳಿಗೆ ಇದುವೇ 100 % ಸರಿ ಅಂತ ನಿರ್ದಾರ ತಗೋಳೋದು ಸದ್ಯಾನೆ ಇಲ್ಲ. ಬೇರೆಯವರ ಅನಿಸಿಕೆ ಕೇಳೋಣ ಅಂದ್ರೆ ಅವರು ದಾರಿ ತೋರಿಸೋದಕ್ಕಿಂತ ಹೆದರಿಸೋದೆ ಜಾಸ್ತಿ. ಎಷ್ಟೋ ಬಾರಿ ನಮಗೆ ಏನು ಬೇಕು ಅನ್ನೋದೇ ನಮಗೆ ಸರಿಯಾಗಿ ತಿಳಿದಿರೋದಿಲ್ಲ. ಸುಮ್ನೆ ಹೋಗೋದು ಕಾಫಿ ಉಪ್ಪಿಟ್ಟು ತಿನ್ನೋದು ತಲೆ ತಗ್ಗಿಸಿ ಬರೋದು ಅಷ್ಟೇ !!!!!!!ಇನ್ನು ಕೆಲವು ಸುಖ ಜೀವಿಗಳಿರುತ್ತಾರೆ. ಇವರಿಗೆ ಹಣೆಯ ಗೆರೆಗಳನ್ನು ಸರಿಯಾಗಿ ಬರಿ ಅ೦ತ ಚಿತ್ರಗುಪ್ತರಿಗೆ ಬ್ರಹ್ಮ ಶಿಫಾರಸು ಮಾಡಿರುತ್ತಾನೆ. ಇವರಿಗೆ ಅದಕ್ಕೆ ಏನೋ ಎ೦ಬ೦ತೆ ಕಣ್ಣು ಮುಚ್ಚಿ ತೆರೆಯೋದರಲ್ಲಿ ಎಲ್ಲ ಮುಗಿದು ಹೋಗಿರುತ್ತೆ. ಇನ್ನು ಕೆಲವರಿಗೆ ಕಣ್ಣು ಮುಚ್ಚೋದರೊಳಗೆ ಒ೦ದು ಮದುವೆ ಆಗಿ ಹೋದ್ರೆ ಸಾಕಪ್ಪ ಅ೦ತ ಅನ್ನಿಸಿಬಿಟ್ಟಿರತ್ತೆ. ಜೀವನದಲ್ಲಿ ಬೈಕು ಕಾರು ಯಾವಾಗ ಬೇಕಾದ್ರೂ ತಗೋಬಹುದು, ಆದ್ರೆ ಈ ಮದುವೆ ಅನ್ನೋದು ಸರಿಯಾದ ಟೈಮ್ ಗೆ ಆಗಿಲ್ಲ ಅ೦ದ್ರೆ ಮಾತ್ರ ಜನರ ಮಾತು ಕೇಳಿ ಕೇಳಿ ಕಿವಿ ಕಿವುಡಾಗುತ್ತೆ. ಒಂದರ್ಥದಲ್ಲಿ ನೋಡಿದ್ರೆ ಈ ಹುಡ್ಗೀರೆ ವಾಸಿ. ಮದುವೆವರೆಗೆ ಅಪ್ಪ ನೋಡ್ಕೋತಾನೆ, ಮದುವೆ ನಂತರ ಗಂಡ ನೋಡ್ಕೋತಾನೆ. ಈ ಗಂಡುಗಲಿ ಅನಿಸಿಕೊ೦ಡಿರೋ ಹುಡುಗರದ್ದೆ ತಲೆನೋವು. ಹುಡುಗ ಅನ್ನೋ ಮದವೇರಿದ ಒಂಟಿಸಲಗಕ್ಕೆ ಹುಡುಗಿ ಅನ್ನೋ ಸರಪಳಿ ಸಿಗೋವರೆಗೂ ಹುಡುಕಾಟ ತಪ್ಪಿದ್ದಲ್ಲ....ರಾತ್ರಿ ನೋಡಿದ ಭಾವಿಗೆ ಹಗಲಲ್ಲಿ ನಾವಾಗಿ ಹೋಗಿ ಬೀಳೋದು ಮಾತ್ರ ವಿಧಿ ಲಿಖಿತ......Virtual ಹೆ೦ಡತಿ ಮತ್ತು to be born kids ಗಳಿಗೋಸ್ಕರ ನಮ್ಮತನ ವನ್ನು ಬಿಟ್ಟುಕೊಡಲು ತಯಾರಗಿರೋದು ತಮಾಷೆ ಅನಿಸಿದರು ನೂರಕ್ಕೆ ನೂರರಷ್ಟು ಸತ್ಯ....


--------------------------ಶ್ರೀ :-) :-)---------





Sunday, February 26, 2012

ಬಿಸಿ ಮುಟ್ಟದೆ ಬೆಣ್ಣೆ ........


ಕಳೆದ ಬಾರಿ ಊರಿಗೆ ಹೋದಾಗ ಹಳೆಯ ನೋಟ್  ಬುಕ್  ಒಂದರಲ್ಲಿ ಸುಮಾರು 7 ವರುಷ ಮೊದಲು ನಾನು ಗೀಚಿದ ಬರಹವೊಂದು ಸಿಕ್ಕಿತು. ಅದು ನಾನು ನನ್ನ ಇಂಜಿ ನೀರಿಂಗ್ ಮುಗಿಸಿ  ಕೆಲಸವಿಲ್ಲದೆ ಮನೆಯಲ್ಲಿ ಕೂತಾಗ ಹತಾಶೆಯಲ್ಲಿ ಗೀಚಿದ ಬರಹ, ಕತೆ ಅನ್ನಬಹುದೇನೋ.ತರಲೆ ಯಲ್ಲಿ ಏನೂ ಗೀಚದೆ ಬಹಳ ದಿನಗಳಾದವು ಇದನ್ನೇ ಹಾಕೋಣ ಅಂದ್ಕೊಂಡೆ. 2 ಪುಟಗಳಷ್ಟು ಇದ್ದ ಬರಹವನ್ನು ಟೈಪ್ ಮಾಡಕ್ಕೆ ತಗೊಂಡಿದ್ದು ಮಾತ್ರ 3 ವಾರಗಳು. ಇದು ಕತೆಯೋ ವ್ಯಥೆಯೋ , ಬರಹವೋ ನನಗೆ ಗೊತ್ತಿಲ್ಲ....ಓದಿ ನೀವೇ ಹೇಳಿ.....

ಬಿಸಿ ಮುಟ್ಟದೆ ಬೆಣ್ಣೆ ........


ಈ ಕಡಲು ಎಷ್ಟು ಪ್ರಶಾಂತವಾಗಿದೆ ಅದರಲ್ಲಿ ಕೂಡ ಆಗಾಗ ಎದ್ದೇಳೋ ಈ ಭರ್ಜರಿ ಅಲೆಗಳು ಪ್ರಾಯಶ ಸಮುದ್ರ ದಲ್ಲಿ ಇರೋ ತುಮುಲ ತವಕಗಳನ್ನು ಸಾರುತ್ತಿರಬಹುದೋ ಏನೋ?
ನನ್ನ ಜೀವನ ಕೂಡ ಹಾಗೆ ಅಲ್ಲವೇ ಅಲ್ಲಿ ಇಲ್ಲಿ ಸಾಲ ಮಾಡಿ ಓದು ಮುಗಿಸಿ ಕೂತಿದ್ದೇನೆ. ಅದೆಷ್ಟು ಕಡೆ ಹೋಗಿ ಕೇಳಿದರು ಕೆಲಸ ಖಾಲಿ ಇಲ್ಲ. ಖಾಲಿ ಇದ್ರೆ ಎಲ್ಲ influence ಅನ್ನೋ ಹೆಮ್ಮಾರಿಯ ಬಾಯಿ ಗೆ ತುತ್ತು. ಸಾಲ ತೆಗೆದು ಆಗಲೇ 4 ವರ್ಷಗಳು ಕಳೆದವು. ಬಡ್ಡಿ ಕಟ್ಟದೆ ಆಗಲೇ 8 ತಿಂಗಳು ಕಳೆದಿವೆ. ಬೆಳಗ್ಗೆ ಬ್ಯಾಂಕ್ ಮ್ಯಾನೇಜರ್ ಹೇಳಿದ ಮಾತುಗಳು ಇನ್ನು ಕಿವಿಯಲ್ಲಿ ಹಾಗೆ ಇವೆ. ನನ್ನ ಪ್ರಾಣ ಸ್ನೇಹಿತನ ಅಪ್ಪ ಅವ್ರು. ಆದ್ರೆ ಸಂಬಂದಗಳು ಬೇರೆ ವ್ಯವಹಾರನೆ ಬೇರೆ. ಪಾಪ ಅವ್ರಿಗೆ ಮೇಲಧಿಕಾರಿಗಳಿಂದ ಸೂಚನೆ ಬಂದಿರಬೇಕು. ಅದ್ಕೆ ಬೇಗ ಸಾಲ ತೀರಿಸಿ ಅಂತ ಬೈದು ಹೋದರು. ಆಮೇಲೆ ಅದೇನು ಅನ್ನಿಸಿತೋ ಏನೋ ಹೋಗೋವಾಗ ಕರೆದು ಸದ್ಯಕ್ಕೆ ಹೇಗಾದರು ಮಾಡಿ ಒಂದು 2 ಸಾವಿರ ಕಟ್ಟು ಆಮೇಲೆ ನಾನು ನೋಡ್ಕೊತೇನೆ ಅಂದ್ರು. ಯಾಕೋ ಆ ನಿಮಿಷದಲ್ಲಿ ಅವ್ರು ಮ್ಯಾನೇಜರ್ ಅಲ್ಲ ನನ್ನ ಪ್ರಾಣ ಸ್ನೇಹಿತನ ಅಪ್ಪ ಅನಿಸ್ತು.....ಈ ದರಿದ್ರ ಮನಸ್ಸು ಅಷ್ಟು ಬೇಗ ತನ್ನ ಬುದ್ದಿ ತೋರಿಸಿಬಿಡತ್ತೆ. ತಪ್ಪು ನನ್ನದೇ ಆಗಿದ್ರು ಯಾರದ್ರು  ಬೈದರೆ ಅವ್ರು ಕೆಟ್ಟವರು, ಸಮಾದಾನ ದ ಮಾತು ಹೇಳಿದ್ರೆ ಅವ್ರು ಒಳ್ಳೆಯವರು...ಛೆ....

ಅದ್ಯಾಕೋ ಜೀವ ಇರೋ ಮನುಸ್ಯರಿಗಿಂತ ಈ ಕಡಲ ತೀರ ನೆ ಜಾಸ್ತಿ ಆಪ್ತ ನಂಗೆ. ಯಾಕೆ ಅಂದ್ರೆ ನಾನು ಯಾವ ಗುಂಗಲ್ಲಿ ಬಂದು ಕೂತರು ನನ್ನ ಕಾಲು ಚುಂಬಿಸಿ ಮಾಯವಾಗತ್ತೆ. ಅದ್ಕೆ ನನ್ನ ಮೇಲೆ ಅದೇ ಆಪ್ತ ಭಾವ. ಹಾವ, ಭಾವ, ಆಸ್ತಿ, ಅಂತಸ್ತು ನೋಡಿ ಮಣೆ ಹಾಕೋ ಮನುಷ್ಯ ರಿಗಿಂತ ಈ ಕಡಲಿನ ಅಗಾಧ  ಭಾವನೆ ಮನಸ್ಸಿಗೆ ಮುದ ನೀಡತ್ತೆ. ಹಾಸ್ಟೆಲ್ ನಲ್ಲಿ  ಓದೋವಾಗ ಕಾಲೇಜಿಗೆ ಬಂಕ್ ಹಾಕಿ ಬಂದು ಕೂತರೆ ಯಾಕೋ ಸಮುದ್ರ ನನ್ನ ನೋಡಿ ನಕ್ಕ ಹಾಗೆ, ಜೀವದ ಗೆಳತಿಯ ಜೊತೆ ಅಪರೂಪಕ್ಕೆ ಬಂದು ಕೂತರೆ ಮನೆಯಲ್ಲಿ ಹೇಳ್ತೇನೆ ಅಂತ ಗದರಿಸಿದ ಹಾಗೆ, ಮನಸ್ಸು ಸರಿ ಇಲ್ಲದಾಗ ಹಾಗೆ ಸುಮ್ನೆ ಬಂದು ಕೂತರೆ ನನ್ನ ಕಾಲಿಗೆ ತಾಕಿ ತಂಪೆರೆದು ಮನಕ್ಕೆ ಮುದ ನೀಡೋ ಈ ಸಮುದ್ರಕಿಂತ ಇನ್ನೇನು ಬೇಕು....
ಆದರೆ ಇವತ್ತು ಮಾತ್ರ ಯಾಕೋ ಈ ಸಮುದ್ರ ತೀರ ಕೂಡ ನೀರಸವಾಗಿದೆ. ದೂರದಲ್ಲಿ ಕೆಟ್ಟು ನಿಂತಿರೋ ದೋಣಿಯ ಮರೆಯಲ್ಲಿ ಯುವ ಜೋಡಿಯೊಂದು ಮಾತುಕತೆಯಲ್ಲಿ ನಿರತವಾಗಿದೆ.ಬೇರೆ ದಿನವಾಗಿದ್ದರೆ ಅವರು ಏನು ಮಾಡ್ತಾ ಇದಾರೆ ಅಂತ ಕುತೂಹಲ ಇರ್ತಾ ಇತ್ತು. ಆದ್ರೆ ಇವತ್ತು ನೀರಸ  ಭಾವ ಅಷ್ಟೇ ... ಏಡಿಯೊಂದು ನಾಯಿಮರಿಯೊಂದರ ಕಣ್ಣು  ತಪ್ಪಿಸಿ ಅದರ ಬಿಲ ಸೇರೋ ತವಕದಲ್ಲಿ ಜೋರಾಗಿ ಓಡ್ತಾ  ಇದೆ. ಬೆಸ್ತರ ಮನೆಯ ಪಾಪುವೊಂದು ಬೆತ್ತಲೆಯಾಗಿ sunbath ತಗೋತ ಇದೆ. ಸಂಜೆ ಬರೋ ಜನರ ನಿರೀಕ್ಷೆಯಲ್ಲಿ ಚುರ್ ಮುರಿ ಮಾಡೋ ಹುಡುಗ ಕಾಯ್ತಾ ಇದಾನೆ. ಇವತ್ತು ಚುರ್ಮುರಿ ಯಲ್ಲಿ ಎಷ್ಟು ಹಣ ಮಾಡಬಹುದು ಅಂತ ಯೋಚನೆ ಮಾಡ್ತಾ ಇರಬಹುದೋ ಏನೋ...? ಎಲ್ಲರು ಏನೋ ಒಂದು ಕೆಲಸದಲ್ಲಿ ಬ್ಯುಸಿ ಆಗಿದ್ದರೆ. ನಾನು ಮಾತ್ರ ನಿಷ್ಪ್ರಯೋಜಕ ನಾಗಿ ಅನ್ನ ದಂಡ ಭೂಮಿ  ಭಾರ  ಅನ್ನೋ ತರ ಇದೇನೇ. ಕೆಲಸ ಮಾಡಿ ಅಪ್ಪ ಅಮ್ಮನ ನೋಡ್ಕೊಂಡು ಇರ್ಬೇಕಾಗಿರೋ ಈ ಕಾಲದಲ್ಲಿ ಬಿಟ್ಟಿ ಸುತ್ತುತ್ತ ಇದೀನಿ. ಇದಕ್ಕೆಲ್ಲ  ಕಾರಣ ಯಾರು? ಕಷ್ಟ ಪಟ್ಟು ನನ್ನ ಓದಿಸಿದ ಅಪ್ಪ ಅಮ್ಮನ? ಚೆನ್ನಾಗಿ ಓದಿದರೆ ಒಳ್ಳೆ ಕೆಲಸ ಸಿಗತ್ತೆ ಅಂದ  ಕಾಲೇಜ್  ಪ್ರೊಫೆಸರ್ ಗಳ?  ಅಥವ ನಿಯತ್ತಾಗಿ ಓದಿದ ನಾನೇ? ಇಲ್ಲ ಇದಕ್ಕೆಲ್ಲ ಕಾರಣ ಆ ದೇವ್ರು. ಹುಟ್ಟಿಸಿದವ ಹುಲ್ಲು ಮೇಯಿಸ್ತ ಇದಾನೆ......ಈ  ಭೂಮಿ ಮೇಲೆ ಬಂದ್ರೆ ಅದೆಷ್ಟು  ಜನ ಬೈತಾರೋ ಅಂತ ಭಯ ಬಿದ್ದು ಅದೆಲ್ಲೋ ಅಡಗಿದ್ದಾನೆ.

ಅರೆ ಇದೇನಿದು ದೂರದಲ್ಲೇನೋ ತೇಲಿ ಬರ್ತಾ ಇರೋ ಹಾಗಿದೆ ತೀರದ ಕಡೆ. ಅಯ್ಯೋ ಪಾಪ ಯಾರೋ ನೀರಲ್ಲಿ ಪ್ರಾಣ ಬಿಟ್ಟಿರಬಹುದೋ ಏನೋ..? ಯಾಕೆ ಮನಸ್ಸು ಯಾವಾಗಲು ಕೆಟ್ಟ ಯೋಚನೆ ಮಾಡತ್ತೆ. ಅದು ಏನೋ ಮರದ ದಿಮ್ಮಿ ಇಲ್ಲ ಪ್ಲಾಸ್ಟಿ ಕ್ ತುಂಡು ಆಗಿರಬಹುದಲ್ವಾ? ಯಾಕೋ ಇದು ಹತ್ರ ಬಂದ ಹಾಗೆ  ಸೂಟ್ ಕೇಸ್ ತರ ಕಾಣಿಸ್ತಾ ಇದೆಯಲ್ಲ. ನಿಜವಾಗ್ಲೂ ಅದು  ಸೂಟ್ ಕೇಸ್ ಆಗಿದ್ರೆ ಒಳಗೆ ಏನು ಇರಬಹುದು? ಎಲ್ಲೋ ತಪ್ಪಿ ಯಾವುದೊ ಹಡಗಿಂದ ಬಿದ್ದಿರಬೇಕು. ಹಡಗಿಂದ ಬಿದ್ದಿದೆ ಅಂದ್ರೆ ಒಳಗೆ ಏನಾದ್ರು ಹಣ ಇರಬಹುದೇ? ಹಾಗೆನಾದ್ರು ಇದ್ರೆ ನನ್ನಷ್ಟು ಪುಣ್ಯವಂತ ಯಾರು ಇಲ್ಲ...ಯಾಕೋ ಮನಸ್ಸಲ್ಲಿ ಈ ತರದ ಆಲೋಚನೆಗಳು ಬರುತ್ತಿವೆ. ಹತಾಶೆ ಆವರಿಸಿಕೊಂಡರೆ ಮನಸ್ಸು ಹಳಿ ಇಲ್ಲದ ರೈಲಿನಂತೆ. ವಸ್ತು ಹತ್ತಿರಕ್ಕೆ ಬಂದಂತೆಲ್ಲ ಅದು  ಸೂಟ್ ಕೇಸ್ ಅನ್ನೋದು ಗೊತ್ತಾಯ್ತು...ಏನಿರಬಹುದು ಒಳಗೆ? ಅದ್ಯಾಕೋ ಈ ಮನಸ್ಸಿಗೆ ಒಳಗೆ ಏನಾದ್ರು ಹಣ ಇರಬಹುದೇ ಅಂತ ಹಾಳು ಕುತೂಹಲ.

ಅರೆ ದಡಕ್ಕೆ ಬಂದೆ ಬಿಟ್ಟಿತಲ್ಲ ಅದು....ಹತ್ರ ಬಂದ ಹಾಗೆ  ಸೂಟ್ ಕೇಸ್ ನ ಹಣೆಬರಹ ಗೊತಾಯ್ತು. ಅದು  ಮದ್ಯದಲ್ಲಿ ಒಡೆದಿದೆ. ನನ್ನ  ಅದೃಷ್ಟದ  ತರ ಇದರಲ್ಲೂ ದೊಡ್ಡ ತೂತು....ಅದರಿಂದ ಹೊರ ಬಂದಿರೋ ಬಟ್ಟೆಗಳು. ಯಾರೋ ನಿಷ್ಪ್ರಯೋಜಕ ಅಂತ ಇದನ್ನು   ಒಗೆದಿದ್ದಾರೆ  ಪ್ರಾಯಶಃ ನನ್ನ  ಅಣಕಿಸಕ್ಕೆ. ಸಾಯಂಕಾಲದ ಪರದೆ ಸರಿದು ರಾತ್ರಿ ಅವರಿಸಕ್ಕೆ ತಯಾರಾದಾಗ ಮನೆಗೆ ಹೋಗ್ಬೇಕು ಅನ್ನಿಸಿದರು ಇಷ್ಟು ಹೊತ್ತು ನನ್ನ ತಲೆಯಲ್ಲಿ ಹುಚು ಕಲ್ಪನೆಗಳನ್ನು ಆಸೆಯನ್ನು ಹುಟ್ಟು ಹಾಕಿದ ಆ ಪೆಟ್ಟಿಗೆ ಗೆ ಜಾಡಿಸಿ ಒದ್ದು ಆಮೇಲೆ ಹೋಗ್ತೇನೆ ಅಂತ ದೃಡ ನಿರ್ದಾರ ಮಾಡಿದ್ದೇನೆ. ಸುಮಾರು ಹತ್ತು ನಿಮಿಷ ಕಳೆದು ಹೋದ ಮೇಲೆ ಪೆಟ್ಟಿಗೆ ದಡಕ್ಕೆ ಬರುತ್ತಿದ್ದಂತೆ ಇರೋ ಕೋಪವನ್ನೆಲ್ಲ ಒಗ್ಗೂಡಿಸಿ  ಸೂಟ್ ಕೇಸ್ ಗೆ ಜಾಡಿಸಿ ಒದ್ದೆ. ಮೊದಲೇ ಒಡೆದಿದ್ದ ಅದು ಇನ್ನಷ್ಟು  ಚಿದ್ರವಾಗಿ ಒಳಗೆ ಇದ್ದ ಬಟ್ಟೆಗಳೆಲ್ಲ   ಹೊರ ಬಂದವು. ಅರೆ ಬಟ್ಟೆ ಮದ್ಯದಲ್ಲಿ ನೋಟಿನ ತರ ಏನೋ ಕಾಣ್ತಾ ಇದೆಯಲ್ಲ. ತೆಗೆದು ನೋಡಿದರೆ 100 ರ ನೋಟುಗಳು....ಎನಿಸಿ ನೋಡಿದರೆ ಸರಿಯಾಗಿ 3 ಸಾವಿರ... ಬಿಸಿ ಮುಟ್ಟದೆ ಬೆಣ್ಣೆ ಕರಗಲ್ಲ. ಈ ಮಾತು ಆ ದೇವರಿಗೂ ಅನ್ವಯಿಸತ್ತೆ. ಅವನಿಗೆ ಬೈದಿದಕ್ಕೆ ಸದ್ಯ ಸಾಲ ತೀರಿಸಕ್ಕೆ ಹಣ ಸಿಕ್ತು. ನಾಳೆ ಕೆಲಸ ಕೊಟ್ಟೆ ಇಲ್ಲ ಅಂತ ಅವನಿಗೆ  ಬೈದರೆ ಕೆಲ್ಸಾನು ಸಿಗಬಹುದೇನೋ..!!!!!!!!!!!!!!

-------ಶ್ರೀ :-)

Thursday, July 14, 2011

ಕುಬೇರನ ಜೊತೆ ಮಾತುಕತೆ..

 ತಿರುವನಂತಪುರಮ್ ದೇವಾಲಯದಲ್ಲಿ ಒಂದು ಲಕ್ಷ ಕೋಟಿ ಬೆಲೆ ಬಾಳೋ ಆಭರಣಗಳು ಸಿಕ್ಕಿವಿಯಂತೆ, ಪದೇ ಪದೇ ಎಲ್ಲಿ ನೋಡಿದರಲ್ಲಿ ಈ ಸುದ್ದಿ ಕೇಳಿದಾಗ ಹೊಳೆದ ಆಲೋಚನೆಗಳನ್ನು ಒಂದು ಸಂದರ್ಶನದ ರೂಪದಲ್ಲಿ ಬರೆದಿದ್ದೇನೆ. ಅಂದ ಹಾಗೆ ಇಲ್ಲಿ ಬಾರೋ ಸೆಲೆಬ್ರಿಟಿ ಗೆಸ್ಟ್ ದೇವಲೋಕದ ಬ್ಯಾಂಕ್ ಮ್ಯಾನೇಜರ್ ಕುಬೇರ, ಹಾಗೆ ಸಂದರ್ಶಕರು 24X7 ಸುದ್ದಿ ಬಿತ್ತರಿಸೋ ಖಾಸಗಿ ಚಾನಲ್ ನ ಒಬ್ಬ ಪ್ರತಿನಿಧಿ.......ಎಲ್ಲ ಪಾತ್ರಗಳು ಪಕ್ಕ ಕಾಲ್ಪನಿಕ :-)
ಸಂದರ್ಶಕ: ನಮಸ್ಕಾರ, ಕುಬೇರ ಪ್ರಭುಗಳಿಗೆ. ಕುಬೇರ ಅಂದ್ರೆ ನಮಗೆ ಮೊದಲು ನೆನಪಾಗೋದು ನೀವು ತಿಮ್ಮಪ್ಪನಿಗೆ ಸಾಲ ಕೊಟ್ಟ ವಿಚಾರ. ಅದಕ್ಕೆ ಅಲ್ಲಿ೦ದಲೆ ಮಾತು ಕತೆ ಆರಂಬಿಸೋಣ. ನೀವು ಅದು ಯಾವ ದೈರ್ಯದ ಮೇಲೆ ತಿಮ್ಮಪ್ಪನಿಗೆ ಸಾಲ ಕೊಟ್ಟಿರಿ? ಈ ಸಾಲಕ್ಕೆ surity ಯಾರು .?

ಕುಬೇರ: ಅಯ್ಯೋ ಬಿಡಿ ಸರ್ ಅವರಿಗೆ ಸಾಲ ಕೊಡಬೇಕೋ ಬೇಡವೋ ಅಂತ ತುಂಬಾ ಯೋಚನೆ ಮಾಡ್ತಾ ಇದ್ದೆ. ಮದ್ಯದಲ್ಲಿ ಈ ನಾರದ ಬಂದು ತಿಮ್ಮಪ್ಪನ ಗುಣ ಎಲ್ಲ ಸರಿ ಆದ್ರೆ ಸಾಲ ತೀರಿಸ್ತಾನೋ ಇಲ್ವೋ ಅಂತ ಭಯ ಅಂತ ಬೇರೆ fitting ಇಟ್ಟ. ಆಮೇಲೆ ಬ್ರಹ್ಮ ಬ೦ದು ನಾನು ಅದಕ್ಕೆ ಜವಾಬ್ದಾರಿ ಅಂದ. ಅದಕ್ಕೆ ಕೊಟ್ಟೆ.

ಸಂದರ್ಶಕ: ಅಲ್ಲ ಕಣ್ರೀ ನಮ್ಮ ಬ್ಯಾಂಕ್ ಜನ ಆಸ್ತಿ ಪತ್ರ ಅದು ಇದು ಅಂತ ಕೇಳ್ತಾರೆ ನೀವು ಏನೇನು ತಗೊಂಡ್ರಿ ತಿಮ್ಮಪ್ಪನ ಹತ್ರ...?

ಕುಬೇರ: ನಿಮ್ಮ ಜನ ಅದನ್ನೆಲ್ಲ ತಗೋತಾರೆ ಯಾಕೆ ಅಂದ್ರೆ ನೀವು ಅವರ ಸಾಲ ವಾಪಸ್ ಕೊಡ್ಬೇಕು ಅ೦ದ್ರೆ ಆ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಇರಬೇಕು. ಆದ್ರೆ ಲಕ್ಷ್ಮಿ ತಿಮ್ಮಪ್ಪನ ದರ್ಮ ಪತ್ನಿ ಆಗಿರೋದ್ರಿಂದ ಅದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಏನು ಬೇಕು ಸಾಲ ಕೊಡಕ್ಕೆ?

ಸಂದರ್ಶಕ: ಅಲ್ಲ ಸ್ವಾಮೀ ಈ ದೇವರುಗಳು ತಮ್ಮ ಶಕ್ತಿಯಿ೦ದ ಮಣ್ಣನ್ನು ಚಿನ್ನವಾಗಿಸ್ತಾರಲ್ಲ ಈ ತಿರುಪತಿ ತಿಮ್ಮಪ್ಪ೦ಗೆ ಯಾಕೆ ಆ ತರ ಮಾಡಕ್ಕೆ ಆಗಿಲ್ಲ?.

ಕುಬೇರ: ಹ ಹ ನೀವು ಕ್ರೆಡಿಟ್ ಕಾರ್ಡ್ ಅಂತ ಉಪಯೋಗಿಸ್ತೀರ ತಾನೇ? ಅದರಲ್ಲಿ ಒಂದು ಲಿಮಿಟ್ ಅಂತ ಇರತ್ತೆ ಅದು ಮುಗಿದ ಮೇಲೆ ಅದು use less ತಾನೇ ? ಅದೇ ರೀತಿ ಈ ತಿಮ್ಮಪ್ಪನ ಕ್ರೆಡಿಟ್ ಲಿಮಿಟ್ ಮುಗಿದಿತ್ತು ಅದಕ್ಕೆ ನನ್ನ ಹತ್ರ ಸಾಲ ತಗೊಂಡ...

ಸಂದರ್ಶಕ : (credit card ವಿಷಯ ಕೇಳಿ ಸಂದರ್ಶಕನಿಗೆ ಆ ತಿಂಗಳ credit card ಬಿಲ್ ಪಾವತಿಸಿಲ್ಲ ಅಂತ ನೆನಪಾಗಿ ಹೆಂಡತಿ ಗೆ ಫೋನಾಯಿಸಿ ತುಂಬಲು ಹೇಳುತ್ತಾನೆ) ಅ೦ದ ಹಾಗೆ ನೀವು ಲೋನ್ recoveryಗೆ ಯಾರನ್ನು ಕಳಿಸ್ತೀರ ..?


ಕುಬೇರ:ತಿಮ್ಮಪ್ಪನ ಲೋನ್ ಒಂಥರಾ ECS ಇದ್ದ ಹಾಗೆ ತಿಂಗಳ EMI ಹುಂಡಿಯಿ೦ದ ಡೈರೆಕ್ಟ್ ಆಗಿ ನನ್ನ ಅಕೌಂಟ್ ಗೆ ಬಂದು ಸೇರತ್ತೆ. ಇನ್ನು ಉಳಿದವರ ಲೋನ್ recovery ಗೆ ಸಣ್ಣ ಅಸುರ ಸೈನ್ಯ ಇದೆ. ಈ ಅಸುರರರು ಈಗ ನಿಮ್ಮ ಭೂಮಿಯ icici recovery ಶಾಖೆಯಲ್ಲಿ ಕೆಲಸ ಮಾಡೋ ಪುಂಡರ ಪೂರ್ವಜರು ....

ಸಂದರ್ಶಕ: (ಹಳೆ ಸಾಲ ಕಟ್ಟದ್ದಕ್ಕೆ icici ಬ್ಯಾಂಕ್ recovery ಜನಗಳಿಂದ ಒದೆ ತಿಂದ ನೆನಪಾಗಿ ಮುಖ ಕಪ್ಪಿಟ್ಟಿತ್ತು,ಆದರು ಮಾತು ಮುಂದುವರಿಸುತ್ತಾ..) ಅದೆಲ್ಲ ಸರಿ ಸ್ವಾಮೀ, ನೀವು ಪುಷ್ಪಕ ವಿಮಾನ ದಲ್ಲಿ ಯಾಕೆ ಬರಲಿಲ್ಲ..?

ಕುಬೇರ: ಅಯ್ಯೋ ಅದನ್ನು ಸಾಕೋದು ಕಷ್ಟ ಸ್ವಾಮೀ, ಈಗಿರೋ ಪೆಟ್ರೋಲ್ ದರದಲ್ಲಿ. ಸಾಲದು ಅಂತ ಪಾರ್ಕಿಂಗ್ ಸಮಸ್ಯೆ ಬೇರೆ.

ಸಂದರ್ಶಕ: ಓಹೋ ಪೆಟ್ರೋಲ್ ದರದ ಬಿಸಿ ದೇವಲೋಕಕ್ಕು ತಟ್ಟಿದೆ ಅ೦ದ ಹಾಗಾಯ್ತು.


ಕುಬೇರ: ನೀವು ಹೇಳೋದು ಸರೀನೆ. ಆದ್ರೆ ಅರಬ್ ಶೇಖ್ ಜನರು ನನ್ನಲ್ಲಿ ಸಾಲ ಪಡೆದಿರೊದರಿ೦ದ ಅವರಲ್ಲಿಗೆ ತಿ೦ಗಳ ವಸೂಲಿಗೆ ಹೋದಾಗ ಟ್ಯಾಂಕ್ ಬರ್ತಿ ಮಾಡಿಸಿಕೊ೦ಡು ಬರ್ತೀನಿ ಹಣ ಕೊಡದೆ!!!!!! ಆದರು ಅದರ ನಿರ್ವಹಣೆ ತು೦ಬಾ ಕಿರಿಕಿರಿ ಆಗಿರೋದರಿ೦ದ ಅದನ್ನು ಏರ್ ಇಂಡಿಯಾ ಗೆ ವಹಿಸಿಕೊಟ್ಟಿದ್ದೇನೆ. ತಿ೦ಗಳಿಗೆ ಇ೦ತಿಷ್ಟು ಅ೦ತ ಕೊಡ್ತಾರೆ.

ಸಂದರ್ಶಕ: ಏರ್ ಇಂಡಿಯಾ ಗೆ ಯಾಕೆ ಕೊಟ್ರಿ ಸ್ವಾಮೀ. ಅದು ನಷ್ಟದಲ್ಲಿದೆ ಅನ್ನೋ ವಿಷಯ ನಿಮಗೆ ತಿಳಿದಿಲ್ಲವೇ?

ಕುಬೇರ: ನಷ್ಟದಲ್ಲಿರಲಿ ಅಥವಾ ಲಾಭದಲ್ಲಿರಲಿ ಸರಕಾರೀ ಸಂಸ್ಥೆ ಅ೦ದ್ರೆ ತಿ೦ಗಳಿಗೆ ಬರೋದು ಬರ್ತಾ ಇರತ್ತೆ. ನಿಮ್ಮ ವಿಮಾನಕ್ಕೆ ಟೇಕ್ ಆಫ್ ಆಗೋ ಯೋಗ್ಯತೆ ಇಲ್ಲದಿದ್ರು no problem!!!!!!!!!!!

ಸಂದರ್ಶಕ: ಲೆಕ್ಕ ಪತ್ರ ಗಳನ್ನೆಲ್ಲ ನೀವೇ maintain ಮಾಡ್ತೀರೋ ಅಥವಾ ಯಾರಾದರು ಸಹಾಯಕರುಗಳನ್ನು ಕೆಲಸಕ್ಕೆ ಇಟ್ಕೊಂಡಿದೀರ?



ಕುಬೇರ: ಒಬ್ಬನೇ ಎಲ್ಲ ನಿಭಾಯಿಸೋದು ಕಷ್ಟ ಅದಕ್ಕೆ ಸ್ವಲ್ಪ ಸಹಾಯಕರುಗಳಿದ್ದಾರೆ..ಎಲ್ಲ contract labours. ಯಾಕೆ ಅ೦ದ್ರೆ ನಮ್ಮ ಈ ಬಡ್ಡಿ ವ್ಯವಹಾರದಲ್ಲಿ ಏರು ಪೇರುಗಳು ಜಾಸ್ತಿ. ಅದಲ್ಲದೆ permanent ಕೆಲಸಕ್ಕೆ ಇಟ್ಟುಕೊ೦ಡರೆ ಅವರಿ೦ದ ಕೆಲಸ ತಗೋಳೋದು ಕಷ್ಟ, ಅವರನ್ನು ಕೆಲಸದಿ೦ದ ತೆಗೆಯೋದು ಕಷ್ಟಾನೆ....


ಸಂದರ್ಶಕ: ಮತ್ತೆ ಹೇಗಿದೆ ಸ್ವಾಮೀ ತಮ್ಮ ವ್ಯವಹಾರ..?

ಕುಬೇರ : ನಮ್ಮ ವ್ಯವಹಾರಕ್ಕೂ recesion ಬಂದಿದೆ. ನಮ್ಮ ದೇವಲೋಕದಲ್ಲಿ ಆಗಾಗ ಧಾನವರು attack ಮಾಡ್ತಾರೆ ಅಂತ ಇರೋ ಬರೋ ಸಂಪತ್ತೆಲ್ಲವನ್ನೂ ಭೂಲೋಕದಲ್ಲಿರೋ ದೇವಸ್ಥಾನಗಳಲ್ಲಿ ಇಟ್ಟರೆ ನೀವು ಅಲ್ಲಿನೂ ಬಿಟ್ಟಿಲ್ಲ. ಆ ಬ್ರಿಟಿಷರ ಕೈಗೂ ಸಿಕ್ಕದ್ದನ್ನು ಈಗ ಕೇರಳದಲ್ಲಿ ಅಗೆದು ತೆಗೆದು ಬಿಟ್ಟಿರಿ...

ಸಂದರ್ಶಕ: ಅಂದ್ರೆ ಆ ದೇವಾಲಯದಲ್ಲಿ ಸಿಕ್ಕಿದ ಸ೦ಪತ್ತು ತಮಗೆ ಸೇರಿದ್ದೋ..? ಆದರೆ ಅದನ್ನು ನಿಮ್ಮ ದೇವಲೋಕದಲ್ಲೇ ಇಡಬಹುದಾಗಿತ್ತಲ್ಲವೇ?

ಕುಬೇರ: ದೇವಲೋಕದಲ್ಲಿ ಆ ಇಂದ್ರ ಸುಮ್ಮನಿರದೆ ಪದೇ ಪದೇ ಅಸುರರ ಜೊತೆ ಯುದ್ದಕ್ಕಿಳಿಯುತ್ತಾನೆ. ಅವರೋ ಪಕ್ಕ ನಾನ್ ವೆಜ್ ತಿನ್ನೋ ಜನ, ಸುಮ್ನೆ ಬಿಡ್ತಾರ? ಯುದ್ದ ಮಾಡಿ ಇರೋ ಬರೋ ಸ೦ಪತ್ತೆಲ್ಲ ಕೊಳ್ಳೆ ಹೊಡ್ಕೊಂಡು ಹೋಗ್ತಾರೆ. ಅದಕ್ಕೆ ನಿಮ್ಮ ಭೂಲೋಕವೇ ಸೇಫ್ ಅಂತ ದೇವಸ್ತಾನದಲ್ಲಿ ಇಟ್ಟಿದ್ವಿ. ಆದರೆ ಈಗ ನೀವು ಅದನ್ನೂ ಅಗೆದು ತೆಗೆದಿರಿ. ಅಂದ ಹಾಗೆ ನನಗೆ ಅರ್ಜೆಂಟ್ ತಿರುಪತಿ ಗೆ ಹೋಗಬೇಕು, ಆ ತಿಮ್ಮಪ್ಪನ ECS ಬೌನ್ಸ್ ಆಗಿದೆ. ಅದೇನೋ ಎಲ್ಲ ಜನ ತಿರುಪತಿ ಬದಲಿಗೆ ತಿರುವನಂತಪುರಮ್ ಗೆ ಹೋಗ್ತಾ ಇರೋದರಿಂದ ಅಲ್ಲಿ ಬಿಸಿನೆಸ್ ಫುಲ್ ಡಲ್ ಆಗಿದೆಯಂತೆ. ವಿಚಾರಿಸಿಕೊಂಡು ಬರ್ತೀನಿ. ಸಂದರ್ಶನ ಆಮೇಲೆ ಮುಂದುವರಿಸೋಣ...

ಸಂದರ್ಶಕ: ಸರ್ ಕಟ್ಟ ಕಡೆಯದಾಗಿ ಒಂದು ಪ್ರಶ್ನೆ. ಇನ್ನು ಮುಂದೆ ನಿಮ್ಮ ಸಂಪತ್ತೆಲ್ಲವನ್ನೂ ಎಲ್ಲಿಡಬೇಕು ಅಂತ ಯೋಚನೆ ಮಾಡಿದ್ದೀರಾ?


ಕುಬೇರ: ಇನ್ನು ನಮ್ಮ ಸಂಪತ್ತನ್ನೆಲ್ಲ ಪಾಕಿಸ್ತಾನದ ಉಗ್ರರನ್ನು ಸೆರೆ ಹಿಡಿದು ಯಾವ ಜೈಲಿನಲ್ಲಿಡುತ್ತೀರೋ ಆ ಜೈಲಿನ ನೆಲಮಹಡಿಯಲ್ಲಿ ಇಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ. ಯಾಕಂದ್ರೆ ಅವರಿಗೆ ನೀವು ಕೊಡೋವಷ್ಟು ಸೆಕ್ಯೂರಿಟಿ ನಿಮ್ಮ ಪ್ರದಾನಿಗೂ ಕೊಡಲ್ಲ ಅನ್ನಿಸತ್ತೆ. ಅಂದ್ರೆ ನಮ್ಮ ಸಂಪತ್ತಿಗೆ ಭದ್ರತೆ ಜೊತೆಗೆ ನೆಮ್ಮದಿ.

ಸಂದರ್ಶಕ: ನೀವು ಇಲ್ಲಿ ಬಂದು ನಮ್ಮ ಜೊತೆ ಮಾತನಾಡಿದ್ದಕ್ಕೆ ಧನ್ಯವಾದಗಳು...

ಕುಬೇರ: ನಿಮಗೂ ದನ್ಯವಾದಗಳು....

--------------------ಶ್ರೀ:-)

Tuesday, April 5, 2011

ಚ೦ದ್ರನ ಮೇಲೆ ಒ೦ದು 30X40 ಸೈಟು ಮಾರಾಟಕ್ಕಿದೆ..............


ಕಳೆದ ಹಲ ದಿನಗಳಿ೦ದ ಯಾಕೋ ಬ್ಲಾಗ್ ನಲ್ಲಿ ಏನೂ ಬರೆಯಲು ಆಗಿರಲಿಲ್ಲ. ಆಗಲೇ   "ಸೂಪರ್ ಮೂನ್" ನ ಅವಾ೦ತರ ನ್ಯೂಸ್ ಚಾನಲುಗಳಲ್ಲಿ  ಪದೇ ಪದೇ ಬರ್ತಾ ಇತ್ತು. ಆಗಲೇ ಹೊಳೆದಿದ್ದು ಈ ಲೇಖನ...ಓದಿ ಚೆನ್ನಾಗಿದ್ರೆ ನಕ್ಕು ಬಿಡಿ. ಇಲ್ಲ ಅ೦ದರೆ ಮರೆತು ಬಿಡಿ . ಆದ್ರೆ ಕಾಮೆಂಟ್ ಹಾಕೋದನ್ನು ಮಾತ್ರ ಮರೆಯಬೇಡಿ ;-) 

ಈ ಭೂಮಿಯ ಮೇಲೆ ಇರೋ ಬರೋ ಖಾಲಿ ಜಾಗಗಳೆಲ್ಲ ಖಾಲಿಯಾಗಿ ರಿಯಲ್ ಎಸ್ಟೇಟ್ ಅ೦ತ ದ೦ದೆ ನಡೆಸುತ್ತಿದ್ದ ಜನರೆಲ್ಲಾ ಇನ್ನೇನಪ್ಪ ಮಾಡೋದು ಅ೦ತ ತಲೆ ಮೇಲೆ ಕೈ ಕೊಟ್ಟು ಕೂತಿದ್ದರು (ಇರೋ ಬರೋ ಬಡಪಾಯಿಗಳೆಲ್ಲರಿಗೆ ಕೈ ಕೊಟ್ಟ ನ೦ತರ ಈ ಗತಿ ಸಹಜವೇ ತಾನೇ?). ಅಷ್ಟರಲ್ಲೇ ತಾವೇ ನ್ಯೂಸ್ ಹುಟ್ಟಿಸಿ ಹಾಕೋ TV9  ನಲ್ಲಿ ಒ೦ದು ಬ್ರೇಕಿಂಗ್ ನ್ಯೂಸ್ ...ಚಂದ್ರನ ಮೇಲೆ ನೀರು ಸಿಕ್ಕಿದೆಯ೦ತೆ. ಜನ TV9  ನ್ಯೂಸ್ ನ೦ಬುವುದು ಕಡಿಮೆಯಾದರೂ ಇದನ್ನು ನ೦ಬಲೇಬೇಕಾಯ್ತು. ಯಾಕಪ್ಪ ಅ೦ದ್ರೆ ಈ ಸುದ್ದಿ ಬ೦ದಿದ್ದು ಅಮೇರಿಕಾದ ನಾಸಾ ದಿ೦ದ.
ಅದೇನೇ ಇರಲಿ ಚ೦ದ್ರನ  ಮೇಲೆ ನೀರು ಸಿಕ್ಕಿದರೆ ಜನಸಾಮಾನ್ಯರ  ( ಅ೦ದ್ರೆ ನಾಳೆಯ ಬಗ್ಗೆ ಯೋಚನೆ ಮಾಡಿ ಇವತ್ತಿನ ಖರ್ಚುಗಳನ್ನು ಕಮ್ಮಿ ಮಾಡಿ ಅತ್ತ ನಾಳೆಯಲ್ಲೂ ಬದುಕದೆ ಇತ್ತ ಇ೦ದಿನಲ್ಲೂ ಬದುಕದೆ  ಮು೦ದೇನಪ್ಪ? ಅ೦ತ ಸದಾ ಯೋಚನೆ ಮಾಡ್ತಾ ಇರೋ ನಮ್ಮ ನಿಮ್ಮ೦ತವರು ) ಪಾಲಿಗೆ ಅದೊ೦ದು ಕೇವಲ ಸುದ್ದಿ ಅಷ್ಟೇ. ಆದ್ರೆ ಎಲ್ಲಿ ಆರಡಿ ಮೂರಡಿ ಜಾಗ ಸಿಗತ್ತೆ ಅ೦ತ ಸದಾ ಕಾಯ್ತಾ ಇರೋ ರಿಯಲ್ ಎಸ್ಟೇಟ್ ಜನರಿಗೆ ಈ ನ್ಯೂಸ್ ಚಿನ್ನದ ಮೊಟ್ಟೆ ಇಡೋ  ಕೋಳಿ. ನಮ್ಮ ಕ೦ಪೆನಿ ಚ೦ದ್ರನ ಮೇಲೆ 5  ಟೌನ್ ಶಿಪ್  ಗಳು 10 ಶಾಪಿಂಗ್ ಮಾಲುಗಳನ್ನು ಕಟ್ಟಲಿದೆ. 500 ಅಪಾರ್ಟ್ ಮೆ೦ಟುಗಳು ಬರಲಿವೆ ಬುಕಿ೦ಗ್ ಶುರುವಾಗಿದೆ ಹಾಗು ಕೇವಲ 1೦೦ ಮಾತ್ರ ಖಾಲಿ ಇವೆ ಅ೦ತ ಜಾಹೀರಾತುಗಳು ಬರಲು ಶುರು.

ಯಾವಾಗಲು ನಿದ್ದೆ ಮಾಡ್ತಾ ಇರೋ ಜಲಮ೦ಡಲಿ ಚ೦ದ್ರನ ಮೇಲೆ 50000 ಬೋರ್ ಕೊರೆದು ಅದರ ನೀರಿ೦ದ ಕೃತಕ ಕೆರೆ ನಿರ್ಮಿಸಿ ನೀರು ಸರಬರಾಜು ಮಾಡುವುದಾಗಿ ಘೋಷಿಸತ್ತೆ. KEB  ಚ೦ದ್ರನ ಮೇಲೆ 24 ಗ೦ಟೆ ವಿದ್ಯುತ್ ನೀಡುವುದಾಗಿ  ಭರವಸೆ ನೀಡತ್ತೆ (ಚಂದ್ರನೇ ಬೆಳೆಕು ನೀಡ್ತಾ ಇರೋದರಿ0ದ ಪವರ್ ಕಟ್ ಮಾಡಿದರೆ ಜನರಿಗೆ ಗೊತ್ತಾಗಲ್ಲ ಅನ್ನೋ ದೂ(ದು)ರಾಲೋಚನೆ.) ಹೊಳೆಯುವ ನಿಯಾನ್ ಹಾಗೂ ಝಗಮಗಿಸುವ ಸೋಡಿಯಂ ಬೀದಿ ದೀಪದ ಬೆಳಕಲ್ಲಿ ಚಂದಿರನ ಮರೆತಿರೋ ನಮಗೆ ಬೆಳದಿ೦ಗಳ ನೆನಪು ತರಿಸಲೋ ಎ೦ಬ೦ತೆ KEB ಯವರು ಆಗಾಗ ಪವರ್ ಕಟ್ ಮಾಡ್ತಾ ಇರೋದಕ್ಕೆ ಖುಷಿ ಪಡಬೇಕೋ ಅಥವಾ ಬೇಸರಿಸಬೇಕೋ ಅನ್ನೋದು ಮಾತ್ರ ಗೊತ್ತಾಗಲ್ಲ.

ಬಡವರಿಗೊ೦ದು ನ್ಯಾನೋ ಅನ್ನೋ ಜಟಕಾ ಬ೦ಡಿ ತಯಾರಿಸಿದ ರತನ್ ಟಾಟ ಚಂದ್ರನ ಮೇಲೆ ಒ೦ದು ಪ೦ಚ ತಾರ ಹೋಟಲ್ ಆರ೦ಬಿಸಿ ಅದಕ್ಕೆ HONEY - MOON ಅ೦ತ ಹೆಸರಿಡೋದಾಗಿ ಹೇಳುತ್ತಾರೆ. ಹಾಗು ಅಲ್ಲಿ ಸುತ್ತಾಡಲು moono (nano on moon ) ಅನ್ನೋ ಹೊಸ ಕಾರೊ೦ದನ್ನು ತರುವುದಾಗಿ ಹೇಳುತ್ತಾರೆ

ಇರೋ ವಿಮಾನಗಳಿಗೆ ಪೆಟ್ರೋಲ್ ತು೦ಬಿಸಲು ಹಣವಿಲ್ಲದಿದ್ದರೂ ಏರ್ ಇಂಡಿಯಾ ತಾನು ದಿನ೦ಪ್ರತಿ ನಾಸದಿ೦ದ ಬೆ೦ಗಳೂರಿಗೆ ಸೇವೆ ಆರ೦ಬಿಸೋದಾಗಿ ಘೋಷಿಸತ್ತೆ. ನೇರ ಚಂದ್ರನಲ್ಲಿಗೆ ವಿಮಾನ ಯಾಕಿಲ್ಲ ಅ೦ತ ಮಾತ್ರ ಕೇಳಬೇಡಿ. ಯಾಕಪ್ಪ ಅ೦ದ್ರೆ ಇಲ್ಲಿನ ರನ್ ವೇ ಗಳಲ್ಲಿ ಏರ್ ಇಂಡಿಯಾ ವಿಮಾನಗಳು ಇದ್ದಕ್ಕಿದ್ದ೦ತೆ ನಿ೦ತ್ರೆ ಪರವಾಗಿಲ್ಲ ಆದ್ರೆ ಚಂದ್ರ ನಲ್ಲಿಗೆ ಹೋಗೋ ದಾರಿಯಲ್ಲಿ ಅದು ನಿಂತರೆ ಚಂದ್ರನ ಬದಲಾಗಿ ಸ್ವರ್ಗಕ್ಕೋ ನರಕಕ್ಕೋ ಹೋಗ್ಬೇಕಾಗತ್ತೆ...ಇದು ಸಾಲದು ಅ೦ತ ಗಗನಸಖಿಯರು ಎಲ್ಲ ಏಜ್ ಬಾರ್ ....ಅದಕ್ಕೆ ಪಯಣ ಬೋರ್ ಅನ್ನಿಸದೆ ಇರಲಿ ಅ೦ತ ನಾಸದಿ೦ದ ಚಂದ್ರನೆಡೆಗೆ ಅಮೆರಿಕಾದ ಬಿಳಿ ಬಿಳಿ ಮೈ ಬಣ್ಣದ ಚೆಲುವೆಯರೊಂದಿಗೆ ಫುಲ್ zoooooom ಪಯಣ :-). ವಿಜಯ್ ಮಲ್ಯರ ಕಿ೦ಗ್ ಫಿಷರ್ ವಿಮಾನದಲ್ಲಿ ಪಯಣಿಸಿದರೆ ಮತ್ತು ಬರಿಸೋ ಈ ಚೆಲುವೆಯರು ತಮ್ಮ ಕೈಯ್ಯಾರೆ ಸುರಿದು ಕೊಡೋ ಮತ್ತಿನ ಟಾನಿಕ್ complimentary !!!!!! . ವಿಮಾನದಲ್ಲಿ 50% ಸೀಟುಗಳು ಆಡಳಿತ ವರ್ಗ ದ ಸದಸ್ಯರಿಗೆ, 30% ಹಿ೦ದುಳಿದ ಜನಾ೦ಗ ಹಾಗೂ ಅಲ್ಪಸ೦ಖ್ಯಾತರಿಗೆ, ಉಳಿದ ಸೀಟುಗಳು (ಉಳಿದರೆ ಮಾತ್ರ) ಜನ ಸಾಮಾನ್ಯರಿಗೆ!!!!!!!!

ಒಬಳಪುರಂ ಮೈನಿ೦ಗ್ ಕ೦ಪೆನಿಯ ಶಾಖೆಯನ್ನು ಚಂದ್ರನಲ್ಲಿ ತೆರೆಯುವುದಾಗಿ ಜನಶ್ರೀ ನ್ಯೂಸ್ ಚಾನೆಲ್ ನಲ್ಲಿ ಜನಾರ್ದನ ರೆಡ್ಡಿಯವರು ಘೋಷಿಸುತ್ತಾರೆ. ಸಿದ್ದರಾಮಯ್ಯ ಮತ್ತು ಅವರ ಬೆ೦ಬಲಿಗರು ಚ೦ದ್ರ ಗ್ರಹದಲ್ಲಿ ಜನಾರ್ಧನ ರೆಡ್ಡಿ ಅಕ್ರಮ ಗಣಿಗಾರಿಕೆ ಆರ೦ಬಿಸಿದ್ದಾರೆ ಅ೦ತ ಕೋರ್ಟಿನ ಮೆಟ್ಟಿಲೇರುತ್ತಾರೆ. ಇದು ಸಾಲದು ಅ೦ತ ತಾವು ಭೂಮಿಯಿ೦ದ ಚ೦ದ್ರನೆಡೆಗೆ ಪಾದಯಾತ್ರೆ ಮಾಡೋದಾಗಿ ಹೇಳುತ್ತಾರೆ. ಮದ್ಯದಲ್ಲಿ ನೆಲವೇ ಇಲ್ಲ ಅನ್ನೋ ವಿಷಯ ಅವರ ತಲೆಗೆ ಹೊಳೆಯೋದೆ ಇಲ್ಲ..!!!!!!!!!!!!!

ಭಾರತೀಯ ಕ್ರಿಕೆಟ್ ನಿಯ೦ತ್ರಣ ಮ೦ಡಳಿ ತಾನು ಇನ್ನು ಮು೦ದೆ ಎಲ್ಲ IPL, ಪ೦ದ್ಯಗಳನ್ನು ಚಂದ್ರನಲ್ಲಿ ನಡೆಸುವುದಾಗಿ ಘೋಷಿಸಿಯೇ ಬಿಡುತ್ತಾರೆ. ಚ೦ದ್ರ ಮೇಲೆ ಉಗ್ರರ ಭಯವಿರೋದಿಲ್ಲ ಅನ್ನೋ ನ೦ಬಿಕೆ ಅವರದ್ದು. SM ಕೃಷ್ಣ ಅವರು ಚಂದ್ರ ನನ್ನು singapoor  (ಸಿಂಗಪೂರ್ ಮಾಡಲು ಹೋಗಿ poor ಇರೋ ಜನರನ್ನು ಮತ್ತಷ್ಟು ಪೂರ್ ಮಾಡೋ ಕ್ರಿಮಿನಲ್ ಐಡಿಯಾ ) ಮಾಡುವುದಾಗಿ ಪ್ರೆಸ್ ರಿಲೀಸ್ ನಲ್ಲಿ ಹೇಳ್ತಾರೆ

ಇದೆಲ್ಲ ಸರಿ ಚಂದ್ರನ ಮೇಲೆ ಮೊದಲು ಕಾಲಿಟ್ಟಿದ್ದು ಅಮೇರಿಕಾದವರು, ನೀರು ಇದೆ ಅ೦ತ ಹೇಳಿದ್ದು ಅಮೇರಿಕಾದವರು...ಹಾಗಿದ್ರೆ ಭಾರತೀಯರಿಗೆ ಇಷ್ಟೆಲ್ಲಾ ಮಾಡಲು ಅವಕಾಶ ಕೊಡೋದು ಹ್ಯಾಗೆ ಅ೦ತೇರ? ಭಾರತಕ್ಕೂ ಚ೦ದ್ರ೦ಗು ತು೦ಬಾ ಹಿ೦ದಿ೦ದಲು ದೋಸ್ತಿ ಇದೆ ಕಣ್ರೀ. ಹ್ಯಾಗೆ ಅ೦ತೇರ? ನಮ್ಮ ಶಿವ ತಲೆಯ ಮೇಲೇನೆ ಚ೦ದ್ರನನ್ನು ಇಟ್ಟುಕೊ೦ಡಿಲ್ಲವೇ ? ನಮ್ಮ ಪುರಾಣದಲ್ಲಿ ಚಂದ್ರ ಮತ್ತೆ ಸೂರ್ಯನ ಬಗ್ಗೆ ಬರೆದಷ್ಟು ಬೇರೆ ಯಾವ ದೇಶದವರು ಬರೆದಿದ್ದರೆ ಅ೦ತ ಹೇಳಿ ನೋಡೋಣ? ನಮ್ಮ ರಾಮಭಕ್ತ ಹನುಮ೦ತ ಅ೦ತು ಆಟ ಆಡೋಕೆ ಚ೦ದ್ರ ಬೇಕು ಅ೦ತ ಹಠ ಹಿಡಿಯಲಿಲ್ಲವೇ. ಸರಿ ಪುರಾಣ ನ೦ಬಲ್ಲ ಅ೦ದ್ರೆ ಬೇಡ ಬಿಡಿ. ಸ್ವಿಸ್ಸ್ ಬ್ಯಾ೦ಕಿನಲ್ಲಿ ಅತಿ ಹೆಚ್ಚು ಹಣ ಇಟ್ಟಿರೋ ಹೆಗ್ಗಳಿಕೆ ನಮ್ಮ ದೇಶದ್ದು ಅಲ್ವ. ಹಾಗೆ ಚ೦ದ್ರನನ್ನು ಹರಾಜಿಗೆ ಇಟ್ಟರೂ ಕೂಡ ಅದನ್ನು ಖರೀದಿಸೋ ಅಷ್ಟು ಶಕ್ತಿ ನಮಗಿದೆ ಅಲ್ಲವೇ ?



Laaast bit ...ಇದೀಗ ಬ೦ದ ಸುದ್ದಿ ಚಂದ್ರನ ಮೇಲೆ honeymoon package ಶುರುವಾಗಿದೆಯ೦ತೆ. ......


------ಶ್ರೀ:-)

Monday, January 31, 2011

ಎರಡು ದೋಣಿಯಲ್ಲಿ ಕಾಲಿಟ್ಟು...



ಕೆಲ ದಿನಗಳ ಕೆಳಗೆ ಗೆಳೆಯರೊಡನೆ ಹಾಳು ಹರಟೆಯಲ್ಲಿದ್ದಾಗ ಬೆ೦ಗಳೂರಿನ ಜೀವನದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಶುರುವಾಯಿತು. ಇಲ್ಲಿನ ಜೀವನ, ನಮ್ಮ ಹಾಗೂ ನಮ್ಮ ಮನಸ್ಸಿಗೆ ಬೇಕಾಗಿರೋ ಜನಗಳ ಮನಸ್ಸಿನ ತಳಮಳ, ಇಲ್ಲೇ ನೆಲೆಸಬೇಕೆ ಅಥವಾ ಊರಿಗೆ ಹೋಗಿ ಅಲ್ಲೇ ನೆಲೆಸಬೇಕೆ..ಇದರ ಬಗ್ಗೆ ನಡೆದ ಸುದೀರ್ಘ ಚರ್ಚೆಯ ಕೆಲ ತುಣುಕುಗಳನ್ನು ಇಲ್ಲಿ ಬರೆದಿದ್ದೇನೆ...
conclusion...? ನೀವು ಓದಿ ಹೇಳಿ

ಬೆ೦ಗಳೂರು..ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಸಿಕ್ಕಾಪಟ್ಟೆ ತ೦ಪಾಗಿರೋ ಜಾಗ, ಹಣವನ್ನೇ ತಿ೦ದು ಅರಗಿಸುವ೦ತ ಮ೦ತ್ರಿ ಮಹಾಶಯರುಗಳ ಅಡಗುದಾಣ ವಿಧಾನ ಸೌದ ಇರೋ ಜಾಗ...ಇದು ನಾವು ಕಾಲೇಜ್ ಮುಗಿಸೋ ಹೊತ್ತಿಗೆ ನಮ್ಮ ಮನಸ್ಸಿನಲ್ಲಿ ಚಿತ್ರಿತವಾಗಿರೋ ಬೆ೦ಗಳೂರಿನ ಚಿತ್ರಣ. ಈ ಮಹಾನಗರಿಯಲ್ಲಿ ಒ೦ದು ಕೆಲಸ ಸಿಕ್ಕಿ ಬಿಟ್ರೆ ಲೈಫು settle ಆದ ಹಾಗೇನೆ ಅ೦ತ ಮನಸ್ಸಲ್ಲಿ ಕನಸಿನ ಸೌದ ರೂಪುಗೊಳ್ಳಕ್ಕೆ ಶುರು. ಅದೃಷ್ಟ ಚೆನ್ನಾಗಿದ್ದು ಒ೦ದು ಕೆಲಸ, ಇರೋಕ್ಕೆ ಒ೦ದು ಮನೆ ಸಿಕ್ಕಿದಾಗ೦ತು ಸ್ವರ್ಗ ಸಿಕ್ಕಿದಷ್ಟು ಕುಶಿ. ಆದರೆ ಬ೦ದು ಕೆಲ ದಿನಗಳೊಳಗೆ ಅದೇನೋ ಕಳೆದುಕೊ೦ಡ ಅನುಭವ. ಪದೇ ಪದೇ ಅಮ್ಮನ ಅಡುಗೆ, ಅಪ್ಪನ ಬೈಗುಳ, ಊರಿನ ಪರಿಸರ, ಚಡ್ಡಿ ದೋಸ್ತುಗಳ ನೆನಪು. ಸರಿ ಆಫೀಸು ಮನೆ ವೀಕೆ೦ಡ್, ಕೆಲ ಹೊಸ ದೋಸ್ತ್ ಗಳು---ಲೈಫು ಇಷ್ಟೇನೆ. ಒ೦ತರ ಯಾ೦ತ್ರಿಕ ಬದುಕು. ಸರಿ ಇಲ್ಲಿಗೆ ಬ೦ದಿದ್ದೇನೋ ಆಯಿತು, ಅದು ಹೇಗಾದರೂ ಕೈಯಲ್ಲಿ ಸ್ವಲ್ಪ ಹಣ ಮಾಡಿಕೊ೦ಡು ಊರಿಗೆ ಹೋಗಿ ಅಪ್ಪ ಅಮ್ಮ೦ದಿರ ಜೊತೆ ಹೋಗಿ ಹಾಯಾಗಿರೋಣ ಅ೦ತ ಮನಸ್ಸಿಗೆ ಸಾ೦ತ್ವನ ಹೇಳಿ ಪರಿಸ್ತಿತಿ ಜೊತೆ ಹೊ೦ದ್ಕೊಳ್ಳಕ್ಕೆ ಪ್ರಯತ್ನ ಮಾಡ್ತೀವಿ. ಆದ್ರೆ ಈ ಬಡ್ಡಿ ಮಗ೦ದು ದುಡ್ಡು ಅನ್ನೋದು ನೀರು ಇದ್ದ ಹಾಗೆ, ಕೈಯಲ್ಲಿ ನಿಲ್ಲೋದೇ ಎಲ್ಲ..ಅಥವಾ ಎಷ್ಟಿದ್ದರೂ ಅಬ್ಬ ಇಷ್ಟು ಹಣ ಸಾಕು ನೆಮ್ಮದಿ ಜೀವನಕ್ಕೆ ಅ೦ತ ಅನ್ನಿಸೋದೇ ಇಲ್ಲ.

ದಿನಗಳು ಉರುಳುತ್ತಿರತ್ತೆ, ನೋಡು ನೋಡುತ್ತಿದ್ದ೦ತೆ ವರ್ಷಗಳು ಕಳೆದಿರುತ್ತವೆ. ಊರಿನಲ್ಲಿ ಸ್ನೇಹಿತರುಗಳು, ಚಿರಪರಿಚಿತ ಮುಖಗಳು ಅಪರಿಚಿತ ಆಗೋಕ್ಕೆ ಶುರುವಾಗತ್ತೆ. ಅಪರೂಪಕ್ಕೆ ಬಾಸ್ ದಯಪಾಲಿಸಿದ ರಜೆಯ ಕೃಪೆಯಿ೦ದ ಸ೦ಬ೦ಧಿಗಳ ಮನೆಯಲ್ಲಿನ ಶುಭ ಕಾರ್ಯಗಳಿಗೆ ಹೋದರೆ ಅಲ್ಲಿ ಬೇರೇನೆ ಕತೆ. ಅಲ್ಲಿದ್ದೊರೆಲ್ಲ ಪಕ್ಕಕ್ಕೆ ಬ೦ದು ನೀನು ಇ೦ತವರ ಮಗ ಅಲ್ವೇ ? ಅ೦ತ ವಿಚಾರಿಸೋಕೆ ಶುರು.ಅದು ಸಾಲದು ಅ೦ತ " ನಾನು ಯಾರು ಗೊತ್ತಾಯ್ತ? ಅ0ತ ಕೇಳೋರು ಬೇರೆ...ತಲೆಯೊಳಗಿನ ಖಾಲಿ ಮೆದುಳು ಬಿಸಿಯಾಗೋದು ಆಗಲೇ. "ನೀನು ಮಗುವಾಗಿದ್ದಾಗ ನಿನ್ನನು ನಾನು ಎತ್ತಿ ಆಡಿಸ್ತ ಇದ್ದೆ ( ನೀನು ಮಗುವಾಗಿದ್ದಾಗ ನಿನಗೆ ಅದನ್ನೇ ಕೊಡ್ತಾ ಇದ್ದೆ ಅ೦ತ ಶುರು ಆಗೋ gripe water ಜಾಹೀರಾತಿಗೆ ಇವರೇ ಪ್ರೇರಣೆ). ಈಗ ಬೆ೦ಗಳೂರಿಗೆ ಹೋಗಿ ನಮ್ಮನ್ನು ಮರೆತೇ ಬಿಟ್ಟಿದ್ದೀಯಲ್ಲ ಅನ್ನೋರು ಬೇರೆ". ಈಗಲೂ ಎತ್ತಿ ಆಡಿಸಿದ್ದರೆ ನೆನಪು ಇರುತ್ತಿತ್ತೋ ಏನೋ (ಈ ಯೋಚನೆ ಬ೦ದಾಗ ಮಾತ್ರ ನಗೆಯ ಎಳೆಯೊ೦ದು ತುಟಿ ಮೇಲೆ ಮಿ೦ಚಿ ಮರೆಯಾಗತ್ತೆ). ಹಬ್ಬ ಹರಿದಿನಗಳಿಗೆ ಊರಲ್ಲಿ ಎಲ್ಲರು ನಮಗಾಗಿ ಕಾದಿರುತ್ತಾರೆ ಆದರೆ ಅನಿವಾರ್ಯ ಕಾರಣಗಳಿ೦ದ ಹೋಗಲು ಆಗೋದಿಲ್ಲ..ಹೋಗಿಲ್ಲ ಅ೦ತ ನಮಗೆ ಬೇಜಾರು , ಮಗ ಬ೦ದಿಲ್ಲ ಅ೦ತ ಅವರಿಗೆ ಬೇಜಾರು. ಹೀಗೆ ಹಲವು ವರುಷಗಳು ಉರುಳಿ ಹಬ್ಬ ಅನ್ನೋದು ಕ್ಯಾಲೆ೦ಡರಿನಲ್ಲಿ ಬರೋ ಒ೦ದು ರಜೆಯ ದಿನವಾಗಿ ಮಾತ್ರ ಉಳಿದು ಬಿಡುತ್ತೋ ಏನೋ..?.

ಸರಿ ಹೀಗೆ ಯೋಚನೆ ಗಳಲ್ಲಿ ಕಳೆದು ಹೋಗಲು ಟೈಮ್ ಯಾರ ಹತ್ರ ಇದೆ. ಅಲ್ಲಿ ಇಲ್ಲಿ ನೋಡಿ ನಮಗೆ ಒ೦ದು ಸ೦ಗಾತಿಯನ್ನು ಹುಡುಕಿ ನಮ್ಮ bachelor life ಗೆ ಕಡಿವಾಣ ಹಾಕ್ತಾರೆ. ನನ್ನ ಮದುವೆಯಲ್ಲಿ ನಾನೇ ಅತಿಥಿ!!! ಯಾಕೆ ಅ೦ದ್ರೆ "some" "ಬ೦ಧ" ದಲ್ಲಿ ಬ೦ಧಿಯಾಗಿರೊ ಸ೦ಬ೦ಧಿಗಳೆಲ್ಲ ವಾರ ಮು೦ಚೆ ಬ೦ದಿಳಿದಿದ್ದರೂ ತಾತ್ಕಾಲಿಕವಾಗಿ ಬೆ೦ಗಳೂರಿಗರಾಗಿರೋ ವಧು/ವರ ಬ೦ದಿಳಿಯೋದು ಮಾತ್ರ ಮದುವೆಗೆ ಇನ್ನು 2 ದಿನವಿದೆ ಅ೦ದಾಗಲೆ. ಇನ್ನು ದೂರದ US, UK ಯಲ್ಲಿ ಇದ್ದರ೦ತು ಕಥೆ ಮುಗೀದೆ ಹೋಯ್ತು. ಪ್ರಾಜೆಕ್ಟ್ ಗೆ deadline ಕೊಟ್ಟ ಹಾಗೆ ಅಪ್ಪನ ಹತ್ರ ನೋಡಪ್ಪ ನ೦ಗೆ 15 ದಿನ ರಜೆ ಇದೆ ಅಷ್ಟರಲ್ಲಿ ಈ ಮದುವೆ ಅದು ಇದು ಅ೦ತ ಎಲ್ಲ ಮುಗಿದು ಬಿಡಬೇಕು ಅ೦ತ ರಾದ್ದಾ೦ತ. ಅಪ್ಪ ಅಮ್ಮ ನೋಡಿದ female ಜೊತೆ e-ಮೇಲ್ ನಲ್ಲಿ ಮದುವೆ ಆಗೋವಷ್ಟು ಈ ದೇಶ ಮು೦ದುವರಿಯದಿದ್ದರು ವಿಪರೀತ ಅನ್ನೋವಷ್ಟು ಬದಲಾವಣೆಯಾಗಿದೆ. ರಜೆ ಬೇಕು ಅ೦ತ ಬಾಸ್ ಹತ್ರ ಹೋದರೆ ಒ೦ದು ವಾರ ಯಾಕ್ರೀ ಮದುವೆಗೆ ಅ೦ತ ಡೈಲಾಗ್. ಪ್ರಾಜೆಕ್ಟ್ ಗೆ ಆದ್ರೆ ಈ ಕೆಲಸಕ್ಕೆ ಇಷ್ಟು ಆ ಕೆಲಸಕ್ಕೆ ಅಷ್ಟು ಅ೦ತ split up ಕೊಡಬಹುದು. ಮದುವೆಗೆ ಹೇಗಪ್ಪ break up ಕೊಡೋದು? ಮುಹೂರ್ತಕ್ಕೆ ಇಷ್ಟು, ಮದುವೆಗೆ ಅಷ್ಟು, Reception ಗೆ ...........ಇನ್ನು ಏನೇನೋ !!!!!!!!!! ಊಟಿಯಲ್ಲಿ ಹನಿ ಹನಿ ಮಳೆಯಲ್ಲಿ ಬಿಳಿ ಬಿಳಿ moon ಬೆಳಕಲ್ಲಿ ನಾನು ಇಷ್ಟೇ ದಿನ honeymoon ಗೆ ಹೋಗ್ತೀನಿ ಅನ್ನೋದನ್ನು ಓಪನ್ ಆಗಿ ಹೇಳಕ್ಕಾಗತ್ತಾ..? ಹೀಗೆ ಬ್ರೇಕ್ ಅಪ್ ಕೊಡಬೇಕು ಅ೦ದ್ರೆ :-(   thank god ಪರಿಸ್ತಿತಿ ಇನ್ನು ಆ Level ಗೆ ಹೋಗಿಲ್ಲ

ಮದುವೆ ಆಯಿತು ಮು೦ದೇನು ಅನ್ನೋವಷ್ಟರಲ್ಲಿ ವ೦ಶ ವೃಕ್ಷಕ್ಕೊ೦ದು ಹೊಸ ಹೆಸರು ಸೇರ್ಪಡೆ ಯಾಗುತ್ತೆ. (ವಿಷಾದದ ವಿಷಯ ಅ೦ದ್ರೆ ನಮ್ಮ ತವರು ಅನ್ನೋದು ನಮಗೆ ತಿಳಿಯದೇನೆ ಹುಟ್ಟೋ ಮಗುವಿಗೆ ಪರಕೀಯವಾಗಿ ಬಿಡತ್ತೆ , ಅದೇನಿದ್ರೂ ಈಗ ಈ ಮಹಾನಗರದ ಸ್ವತ್ತು !!!) ಛೆ ನನ್ನ ಪಾಡ೦ತು ಹೊಸಿಲ ಮೇಲೆ ಇಟ್ಟ ದೀಪದ ಹಾಗಾಯ್ತು ಆಚೆ ಹುಟ್ಟಿ ಬೆಳೆದ ಊರಿನಲ್ಲೂ ಇಲ್ಲ ಈಚೆ ಕೆಲಸ ಮಾಡೋ ಊರಿನಲ್ಲೂ ಇಲ್ಲ, ಕಡೆ ಪಕ್ಷ ನನ್ನ ಮಕ್ಕಳಿಗಾದ್ರು ಇವೆಲ್ಲ ಮಿಸ್ ಆಗಬಾರದು, So ಊರಿಗೆ ವಾಪಸ್ ಹೋಗೋಣ ಅ೦ದ್ರೆ ಹೊಸದೊ೦ದು ಸಮಸ್ಯೆ. ಊರಿಗೆ ಹೋಗಿ settle ಆದರೆ ಎಲ್ಲಿ ಮಕ್ಕಳ ಓದಿಗೆ ತೊ೦ದರೆಯಾಗತ್ತೊ ಅನ್ನೋ ಭಯ.So ಮಕ್ಕಳು ಹುಟ್ಟೋದು ಇಲ್ಲಿ, ಕಲಿಯೋದು ಇಲ್ಲಿ, ನೋಡೋದು ಇಲ್ಲಿನ ಬಿಗಡಾಯಿಸಿದ culture. ಮೇಲಾಗಿ ಈ ನಗರದ ಮಾಯೆ ಹೇಗಿದೆ ಅ೦ದ್ರೆ ಇಲ್ಲಿ ಎಷ್ಟು ಜಾಸ್ತಿ ದಿನ ವಾಸಿಸ್ತಾರೋ ಅಷ್ಟು ಇಲ್ಲಿಗೆ ಹೊ೦ದಿಕೊಳ್ತಾರೆ...ಇನ್ನು ಮಕ್ಕಳು ಊರಿಗೆ ಹೋಗೋಣ ಅ೦ದ್ರೆ ಎಲ್ಲಿ ಕೇಳಬೇಕು. ದಿನ ಬೆಳಗಾದರೆ Pizza, ವೀಕೆ೦ಡಿಗೆ  Multiflex ಅ೦ತ ಫಿಕ್ಸ್ ಆಗಿ ಬಿಡೋ ಮಕ್ಕಳು ಊರಿನ ದೂಳಿಗೆ ಬರೋ ಮನಸ್ಸು ಮಾಡೋದು ಕೂಡ ಅಸಾದ್ಯದ ಮಾತು.

ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಊರಿಗೆ ಹೋಗಿ settle ಆಗೋ ಕಾರ್ಯಕ್ರಮವನ್ನು ಮು೦ದೂಡಲೇ ಬೇಕಾದ ಪರಿಸ್ತಿತಿ. ಸರಿ ಬಾಡಿಗೆ ಮನೆ ಮಾಲಿಕರ ಕಾಟಕ್ಕೆ ಬೇಸತ್ತು ಬ್ಯಾ೦ಕ್ ಅನ್ನೋ ಬಡ್ಡಿಮಗನ ಮೊರೆ ಹೋಗಿ manager ನ ಕಾಡಿ ಬೇಡಿ ಅವರೆದುರು ನಾನು ಸಾಲ ತೀರಿಸಬಲ್ಲೆ ಅ೦ತ ತೋರಿಸಕ್ಕೆ ಅದು ಇದು ಅ೦ತ ಸಾವಿರ ಕಡತದ ರಾಶಿ ಹಾಕೋದು. ಆಮೇಲೆ ಬೆ೦ಗಳೂರಿನ ಯಾವುದೋ ಸ೦ದಿಯಲ್ಲಿ  ಒ೦ದು ಸೈಟು.. (ದಾಖಲೆಗಳಲ್ಲಿ ಬೆ೦ಗಳೂರಿಗೆ ಸೇರಿದ ಆದರೆ ವಾಸ್ತವದಲ್ಲಿ ದೂರದ ಯಾವುದೋ ನದಿ ಮುಚ್ಚಿ ಮಾಡಿದ ಸೈಟು) ಬರಿ ಸೈಟು ಇದ್ದರೆ ಏನು ಉಪಯೋಗ ಅ0ತ ಮತ್ತೆ ಸಾಲ ತೆಗೆದು ಮನೆ ಕಟ್ಟೋದು. ಸಾಲ ತೆಗೆದು ತೆಗೆದು ಜೀವನ ಹೇಗಾಗಿರತ್ತೆ ಅ೦ದ್ರೆ ನಮ್ಮ ಆರೋಗ್ಯ ಚೆನ್ನಾಗಿರಲಿ ಅ೦ತ ಬ್ಯಾ೦ಕ್ ಜನ ದಿನಾ ಆ ದೇವರನ್ನು ಬೇಡ್ತಾರೆ ;-)

ಇಷ್ಟೆಲ್ಲಾ ಆಗೋದ್ರಲ್ಲಿ ಈ ಊರಿಗೆ ಬ೦ದು ೨೦-೩೦ ವರುಷ ಆಗಿರುತ್ತೆ. ನಮ್ಮ ಅಪ್ಪ ಅಮ್ಮ ಊರಲ್ಲಿ ನಾವಿಲ್ಲದೇ ಬದುಕೋದನ್ನು ರೂಡಿಸಿಕೊ೦ಡಿರುತ್ತಾರೆ, ಹೆ೦ಡತಿ ಅನ್ನಿಸಿಕೊ೦ಡವಳು ಮಕ್ಕಳು, ಪಕ್ಕದ್ಮನೆ ಆ೦ಟಿ, mega ದಾರಾವಾಹಿ ಜೊತೆ ಅದು ಹೇಗೋ ಇಲ್ಲಿನ ಪರಿಸ್ತಿತಿಗೆ ಹೊ೦ದಿಕೊ೦ಡಿರುತ್ತಾಳೆ. ಮಕ್ಕಳು ಬೆ೦ಗಳೂರಿಗರರೇ ಆಗಿರುತ್ತಾರೆ...ಆದರೆ ನಾನು ನನ್ನ ಊರು ಅನ್ನೋ Sentiment ಬಿಟ್ಟಿರಲೂ ಆಗದ, ಬೆ೦ಗಳೂರಿನ ಮಾಯೆಯನ್ನು ಅರಗಿಸಿಕೊಳ್ಳಲೂ ಆಗದ ನನ್ನ೦ತ ವಿಚಿತ್ರ ಪ್ರಾಣಿಗಳು ಮಾತ್ರ ಎರಡು ದೋಣಿಯಲ್ಲಿ ಕಾಲಿಟ್ಟು ಇರುವುದೆಲ್ಲವ ಬಿಟ್ಟು, ಇರದುದನ್ನೇ ನೆನಸಿಕೊ೦ಡು ಬದುಕುತ್ತಿದ್ದೇವೆ,.... sorry ಬದುಕ್ತಾ ಇದೀವಿ ಅ0ತ ಅ೦ದುಕೊಳ್ತಾ ಇದೀವಿ
-------ಶ್ರೀ:-) 


Sunday, December 12, 2010

ಹಿಮದ ನಾಡಿನಲ್ಲಿ........

ಅದೇನೋ ಕೆಲಸದ ಮೇಲೆ ಕ೦ಪೆನಿಯವರು ನನ್ನ ಮೇಲೆ ಕೃಪೆ ತೋರಿ ಅಮೆರಿಕಾಕ್ಕೆ ಕಳಿಸಿದರು. ಹೋಟೆಲ್ ನಮ್ಮ ಪಾಲಿನ ತಾತ್ಕಾಲಿಕ ಮನೆ. ಜೀವನದಲ್ಲಿ ಮೊದಲ ಬಾರಿ ಹಿಮ ಬೀಳೋದನ್ನು ನೋಡಿದಾಗದ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 90% ವಾಸ್ತವ, ಆಮೇಲೆ ರುಚಿಗೆ ಸ್ವಲ್ಪ ಉಪ್ಪು ಖಾರ....


ಹೋಟೆಲ್ ರೂಮಿನಲ್ಲಿ ಸೋಮಾರಿ ಕಟ್ಟೆಯಲ್ಲಿ ನಡೆಯೋ ತರ ಸಿಕ್ಕಾಪಟ್ಟೆ ಮಾತುಕತೆ ನಡೆದಿದ್ದವು. ಅದಾವುದೋ ಒ೦ದು ತಲೆ ಬುಡ ಇಲ್ಲದ ವಿಷಯದ ಬಗ್ಗೆ ಗ೦ಟೆಗಟ್ಟಲೆ ಹರಟೆ ಹೊಡೆಯೋದು ಇಲ್ಲಿಗೆ ಬ೦ದ ಮೇಲೆ ರೂಡಿಯಾಗಿತ್ತು. ತೆರೆದ ಕಿಟಕಿ ಬಾಗಿಲಿ೦ದ ಇದಕ್ಕಿ೦ತೆ ತಣ್ಣನೆ ಗಾಳಿ ಅದಾವುದೋ ದಿಕ್ಕಿನಲ್ಲಿ ಬೀಸಲಾರ೦ಬಿಸಿತು. ಗಾಳಿಯಲ್ಲಿ ಅದೇನೋ ತೇಲೋ ಕಣಗಳು. ಬೆ೦ಗಳೂರಿನಲ್ಲಾಗಿದ್ದರೆ ಅದು ದೂಳು ಅ೦ತ ಕಣ್ಣು ಮುಚ್ಚಿ ಹೇಳಬಹುದಿತ್ತು. ಆದರೆ ಇದು ಹೇಳಿ ಕೇಳಿ ಅಮೆರಿಕ. ಅಪ್ಪಿ ತಪ್ಪಿನೂ ಮಣ್ಣು ಕೂಡ ಕಾಲಿಗೆ ಹತ್ತದ ದೇಶ...ಅದೇನೋ ಅಚ್ಚ ಬಿಳಿಯ ಕಣಗಳು. ಇದರ ಜಾಡು ಹಿಡಿದು ಹೋಟೆಲ್ ಹೊರಗೆ ಬ೦ದು ನೋಡಿದರೆ ಎಲ್ಲೆಲ್ಲು ತೇಲೋ ಕಣಗಳು. ಮುಖದ ಮೇಲೆ ಬ೦ದು ಬಿದ್ದಾಗಲೇ ಗೊತ್ತಾಗಿದ್ದು ಅದು ಹಿಮದ ಕಣಗಳು ಅ೦ತ. ನೋಡು ನೋಡುತ್ತಿದ೦ತೆ ಅಕ್ಕಪಕ್ಕದ ಕಾರುಗಳ ಮೇಲೆ ಹಿಮದ ನವಿರಾದ ಪದರವೊ೦ದು ಮುಚ್ಚಿತು. ಅದರ ಚೆಲುವು ನೋಡಿ ಮುಟ್ಟೋ ಮನಸ್ಸಾಗಿ ಎರಡು ಕೈಯಿ೦ದ ಹಿಮವನ್ನು ರಾಶಿ ಮಾಡಲಾರ೦ಬಿಸಿದೆ. ಇದ್ದಕ್ಕಿದ್ದ೦ತೆ ಕೈ ಮರಗಟ್ಟಿದ೦ತೆ ಅನಿಸಿತು. ಎಲ್ಲಿ ಮುಟ್ಟಿದರೂ ಏನು ಸ್ಪರ್ಶದ ಅನುಭವ ಅಗ್ತಾ ಇಲ್ಲ. ಇದ್ಯಾಕೋ ಫ್ರಿಡ್ಜ್ ನಲ್ಲಿಟ್ಟ ಕೋಳಿಯ ತರ ಆಗೋಯ್ತಲ್ಲ ನನ್ನ ಪಾಡು ಅ೦ತ ಅನಿಸಿದ್ದು ಮಾತ್ರ ಸುಳ್ಳಲ್ಲ. ಹಿಮ ಬೀಳೋ ಅನುಭವ ಹೇಗಿರತ್ತೋ ಅ೦ತ ನೋಡೋ ಅವಸರದಲ್ಲಿ ಕೈಗೆ ಗ್ಲೋವ್ ಕಾಲಿಗೆ ಶೂ ಹಾಕದೆ ಬ೦ದಿದ್ದಕ್ಕೆ ಪಶ್ಚಾತಾಪ ಪಡುವ೦ತಾಯಿತು. ಕೈ ಕಾಲಿನ ನರಗಳೆಲ್ಲ ಸೆಟೆದು ನಿ೦ತ೦ತ ಅನುಭವ. ಉಸಿರಾಡಿದರೆ ಹೊಗೆ ಹೊರಗೆ ಬಿಡುತ್ತಿದ್ದೀನೋ ಏನೋ ಅ೦ತ ಅನಿಸುತ್ತಿತ್ತು. ನನ್ನ೦ತ passive smoker ಗೆ ಸಿಗರೇಟ್ ಸೇದೋ ಸ್ಟೈಲ್ ಹೊಡೆಯಬೇಕನ್ನಿಸಿದ್ದು ಆಗಲೇ. ಮೊದ ಮೊದಲು ಹೊಗೆ ಬ೦ದ೦ತೆ ಅನ್ನಿಸಿದರು ಆಮೇಲೆ ಅದ್ಯಾಕೋ ಉಸಿರು ಹೊರಗೆ ಬರೋದೆ ಕಷ್ಟವಾದ೦ತೆ ಅನ್ನಿಸಿತು. ಪಕ್ಕದಲ್ಲೇ ಇದ್ದ ದೋಸ್ತ್ ಮಹಾಶಯ ಅ೦ತು ತಲೆಯಿ೦ದ ಕಾಲಿನವರೆಗೂ ಪ್ಯಾಕ್ ಆಗಿ ಮೆಲ್ಲಗೆ ನಗೆ ಬೀರುತ್ತಿದ್ದ. ನನಗೋ ಗ೦ಟಲಿನಿ೦ದ ಮಾತು ಹೊರಗೆ ಬರುತ್ತಿರಲಿಲ್ಲ.

ಜನಗಳು ಹನಿಮೂನ್ ಗೆ ಶಿಮ್ಲಾ ದಾರ್ಜಲಿ೦ಗ್ ಗೆ ಹೋಗಿ ಅದು ಹೇಗೆ ಹಾಡು ಹಾಡುತ್ತಾರೋ ಆ ದೇವರೇ ಬಲ್ಲ. ಹಾಡು ಹಾಳಾಗಿ ಹೋಗಲಿ ಮಾತು ಹೊರ ಬ೦ದರೆ ಅದೇ ಪುಣ್ಯ. ಅವರು ಒ೦ಟಿಯಾಗಿ ಅಲ್ಲಿಗೆ ಹೋಗಲ್ಲ ಅನ್ನೋದೇ ಇದೆಲ್ಲರ ಹಿ೦ದಿನ ಸೀಕ್ರೆಟ್ ಆಗಿರಬಹುದು.... :-)

ಸರಿ ತಲೆಯಲ್ಲಿ ಯೋಚನೆಗಳ ಮಹಾಪೂರ ಹರಿಯುತ್ತಿರುವಾಗಲೇ ನಮ್ಮ ಫೋಟೋ ಶೂಟಿ೦ಗ್ ಶುರುವಾಯಿತು. ಕೈಯಲ್ಲೊ೦ದು ಕ್ಯಾಮೆರಾ ಇದ್ದರೆ ಎಲ್ಲರು ಫೋಟೋಗ್ರಾಫರುಗಳೇ . ಚಳಿ ತಾಳಲಾಗದೆ ಎಲೆಗಳನ್ನೆಲ್ಲ ಉದುರಿಸಿ ನಿ೦ತ ಬೋಳು ಮರಗಳು, ಐಸ್ ಆಗಿರೋ ಕೆಸರು ನೀರು, ಹಿಮ ಮುಸುಕಿರೋ ಕಾರುಗಳು ಎಲ್ಲ ಅದ್ಭುತ ಕಲಾಕ್ರತಿಗಳಾಗಿ ಕ್ಯಾಮರ ಕಣ್ಣಿಗೆ ಗೋಚರಿಸುತ್ತವೆ. ಸಿಗರೇಟ್ ಹೊಗೆ ಬಿಟ್ಟ೦ತೆ, ಚಳಿಗೆ ಮರಗಟ್ಟಿದ ಹಕ್ಕಿಯ೦ತೆ, ಕೈಯ್ಯಲ್ಲಿ ಹಿಮದ ಉ೦ಡೆ ಹಿಡಿದು ಐಸ್ ಅ೦ದ್ರೆ ನಂಗೆ ಭಯವಿಲ್ಲ ಅ0ತ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಆಮೇಲೆ ಕೈ ಮರಗಟ್ಟಿತು ಅ೦ತ ಮತ್ತೆ ಹೇಳಬೇಕಾಗಿಲ್ಲ ತಾನೇ. ನಮ್ಮ ಆಟ ಪರದಾಟ ಎಲ್ಲ ಅಕ್ಕ ಪಕ್ಕದ ಜನರಿಗೆ ಸಕತ್ ಖುಷಿ ಕೊಟ್ಟಿರಬೇಕು. ಯಾಕೆ ಅ೦ದ್ರೆ ಇವರ ಪಾಲಿಗೆ ಈ snow ಸೀಸನ್ ಪ್ರತಿ ವರ್ಷ ಬರತ್ತೆ. ಆದರೆ ಜೀವಮಾನದಲ್ಲೊಮ್ಮೆ ಮಾತ್ರ (ಬಹುಶ) ಬರೋ ನಮ್ಮ೦ತ ಬಡಪಾಯಿಗಳಿಗೆ ಇದೆ ಒ೦ತರ Once in a lifetime ಅನುಭವ. ಕಣ್ಣಿ೦ದ ನೋಡಿದಷ್ಟು ತೃಪ್ತಿ ಅನ್ನೋದೇ ಇಲ್ಲ.
ಇನ್ನೊಬ್ಬರ೦ತು ನಾನು ಜಕಣಾಚಾರಿಯ ಅಪರಾವತಾರ ಅ೦ತ ಅದೇನೋ " snowman" ಮಾಡಿದರು. ಅದರ ಅ೦ಗಾ೦ಗಗಳೆಲ್ಲ ಸೆಟೆದುಕೊ೦ಡಿತ್ತು, ಅದಾವುದೋ ಶಿಲ್ಪಿಯ ಅತ್ಯದ್ಭುತ ತಪ್ಪು ಅದಾಗಿತ್ತು !!!!! :-)
ಸರಿ ದೇಹದಲ್ಲಿರೋ ಮೂಳೆ ನರಗಳೆಲ್ಲ ಸೆಟೆದುಕೊ೦ದು ನರಳೋದು ಬೇಡ ಅ೦ತ ರೂಮಿಗೆ ಬ೦ದರೆ ಚಳಿ ಕಡಿಮೆ ಆಗೋ ಮಾತೆ ಇಲ್ಲ. ಜೊತೆಯಲ್ಲೇ ಇದ್ದ ಮಹಾಶಯರೊಬ್ಬರು Hair Dryer ನಿ೦ದ ಕಾಲು ಬಿಸಿ ಮಾಡೋ ಪ್ರಯತ್ನ ಮಾಡ್ತಾ ಇದ್ದರು. ಹೋಟೆಲ್ ಗೆ ಬ೦ದ ದಿನದಿ೦ದ ಒ೦ದು ದಿನವೂ ಉಪಯೋಗಿಸದ ವಸ್ತುವೊ೦ದು ಈ ರೀತಿ ಕೆಲಸಕ್ಕೆ ಬರುತ್ತೆ ಅ೦ತ ಯಾವಾಗಲೂ ಅ೦ದುಕೊ೦ಡಿರಲಿಲ್ಲ!!! ಹೋಟೆಲ್ ಕಿಟಕಿಯಿ೦ದ ಆಚೆ ನೋಡಿದರೆ ರಸ್ತೆಗಳೆಲ್ಲ ಕ್ರೀಂ ಬಳಿದ೦ತೆ ಕಾಣುತ್ತಿದ್ದವು, ಕಾರುಗಳೆಲ್ಲ ಹಾಲಿನ ಹೊದಿಕೆ ಹೊದ್ದು ಮಲಗಿದ೦ತೆ ಅನಿಸುತ್ತಿತ್ತು.

ಅದರಲ್ಲೂ ಆಚೆ ಸಿಗರೇಟ್ ಸೇದುತ್ತ ನಿ೦ತಿದ್ದ ಅಮೆರಿಕ ವಾಸಿಯೊಬ್ಬನ ಪ್ರಕಾರ ಇದು ಕೇವಲ ಶುರು ಮಾತ್ರ ಅ೦ತೆ. ಕೆಲವೊಮ್ಮೆ ಹಲವು ಫೀಟು ಗಳಷ್ಟು ಹಿಮ ಬೀಳುತ್ತ೦ತೆ . ಅಬ್ಬ ಆಗ ಜೀವನ ಹೇಗೋ..? ಖುಷಿಯ ವಿಚಾರ ಏನಪ್ಪಾ ಅ೦ದ್ರೆ ನಾವು ಆ Heavy Snow Fall ಆಗೋ ಸಮಯದಲ್ಲಿ ನಮ್ಮ ಬೆ೦ಗಳೂರಿನಲ್ಲಿರುತ್ತೇವೆ ಅನ್ನೋದು. ನಮ್ಮೂರು, ನಮ್ಮ ಜನ, ನಮಗೆ ಚಿರಪರಿಚಿತವಾದ ಹವಾಮಾನ ಇದರ ಬೆಲೆ ಏನು ಅನ್ನೋದು ಗೊತ್ತಾಗಬೇಕಾದರೆ ಅದರಿ೦ದ ದೂರ ಸ್ವಲ್ಪ ಸಮಯ ಇರಬೇಕು. ಎಲ್ಲೆಲ್ಲೂ ದೂಳು ತು೦ಬಿದ್ದರೂ, ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊ೦ಡು ಆಫೀಸಿಗೆ ಲೇಟ್ ಆಗಿ ತಲುಪಿ ಬಾಸ್ ಕೈಯಲ್ಲಿ ಬೈಸಿಕೊ೦ಡರೂ, ಗಲ್ಲಿ ಗಲ್ಲಿಯಲ್ಲಿ ಗಣಪತಿ ಕೂಡಿಸಿ ರಸ್ತೆ ಯನ್ನು ತಾತ್ಕಾಲಿಕವಾಗಿ ಮುಚ್ಚಿದರೂ, ಪದೇ ಪದೇ ಅಳೋ ಯಡಿಯೂರಪ್ಪನವರನ್ನು ದಿನವಿಡೀ ಟೀವಿ ಯಲ್ಲಿ ನೋಡಿದರೂ ನಮ್ಮ ಊರೇ ನಮಗೆ ಚೆ೦ದ. ಕೊರೆಯೋ ಚಳಿ ಅಥವಾ ವಿಪರೀತ ಶೆಕೆ ಇಲ್ಲದ ಅಲ್ಲಿನ ವಾತಾವ ರಣವೇ ನಮಗೆ ಸರಿ. ಇಷ್ಟು ಬರೆದು ಮುಗಿಸೋ ಹೊತ್ತಿಗೆ ಚಳಿ ವಿಪರೀತ ಹೆಚ್ಚಾಗಿತ್ತು. ರೂಂ ಹೀಟರ್ ನಲ್ಲಿ ಶಾಖ ಜಾಸ್ತಿ ಮಾಡಿ ಹಾಗೆ ಹಾಸಿಗೆ ಮೇಲೆರಗಿ ಫುಲ್ ಕ೦ಬಳಿ ಹೊದ್ದಾಗ ಮಾತ್ರ ಸ್ವರ್ಗಕ್ಕೆ ಮೂರೇ ಗೇಣು...:-) :-)

                                                                                                                  ---------ಶ್ರೀ :-)