Thursday, April 3, 2014

ಯಮನ Appraisal

ಈ ಲೇಖನ ಬರೆಯಲು ಶುರು ಮಾಡಿ ಸುಮಾರು 2 ವರ್ಷ ಆಯಿತು. ಸರಿ ಹೇಗಿದ್ರು ಯಾವುದೇ ಲೇಖನ ಬರೆಯದೆ ತುಂಬಾ ದಿನಗಳಾದವು ಅಂತ ಈ ಲೇಖನ ಪೂರ್ತಿಗೊಳಿಸಿ ಪೋಸ್ಟ್ ಮಾಡಿದ್ದೇನೆ. ಇಲ್ಲಿ ಯಮ ಮತ್ತು ಶಿವ ಅಂತ ಬಳಸಿದ್ದಕ್ಕೆ ಕ್ಷಮೆ ಇರಲಿ (ದೇವರು ಅಂದ್ರೆ ಭಯ ಭಕ್ತಿ ಹಾಗು ಗೌರವ ನನಗೂ ಇದೆ, ಆದರೂ ದೇವ್ರು ಯಾವಾಗ್ಲೂ ನನ್ನ ಜೊತೆನೇ ಇರೋ ಸ್ನೇಹಿತ ಅನ್ನೋ ಫೀಲಿಂಗ್ ಕೂಡ ಜೊತೆಗಿದೆ ).  as usual ಇದೆಲ್ಲ ಬರೇ ಕಾಲ್ಪನಿಕ ಅಷ್ಟೇ..... 


ವರ್ಷದ ಟಾರ್ಗೆಟ್  ಮುಗಿಸಿದ ಸಂತೋಷದಲ್ಲಿ ಯಮನು ತನ್ನ Reporting Manager  ಶಿವನ  Chamber ಒಳಗೆ ಎಂಟ್ರಿ ಹಾಕ್ತಾ ಇದ್ದಾನೆ. ವರ್ಷದ Dead ಲೈನ್ ಟಾರ್ಗೆಟ್ ಅನ್ನು ಮೀಟ್ ಆಗಿದ್ದೇನೆ, ಆದ್ದರಿಂದ ಸರಿಯಾದ Hike  ಸಿಕ್ಕೇ ಸಿಗತ್ತೆ. ರಂಭೆ, ಊರ್ವಶಿ, ಮೇನಕೆಯಂತ ಬೆಡಗಿಯರಿರೋ ಸ್ವರ್ಗಕ್ಕೆ ಪ್ರಮೋಶನ್ ಸಿಕ್ಕಿದರೂ ಸಿಗಬಹುದು ಅಂತ ಮನಸ್ಸಿನಲ್ಲಿ ಲೆಕ್ಕಾಚಾರ.... ಇತ್ತ ಶಿವನೋ ಇಂದ್ರನ Appraisal ಅನ್ನು ಈಗ ತಾನೇ ಮುಗಿಸಿದ್ದಾನೆ. ಹೊರ ಬರುತ್ತಿರೋ ಇಂದ್ರನ ಮುಖದಲ್ಲಿ ಏನೋ ಕಳವಳದ ಛಾಯೆ... ಇಂದ್ರನೋ ವರ್ಷವಿಡೀ ಅಪ್ಸರೆಯರ ನೃತ್ಯ ನೋಡೋದ್ರಲ್ಲಿ ಬ್ಯುಸಿ, ಸಾಲದು ಅಂತ ಕಾಲು ಕೆರೆದು ಅಸುರರೊಂದಿಗೆ ಜಗಳ ಆಡ್ತಾ ಇರ್ತಾನೆ. ಇನ್ನು ಇವನಿಗೆ ಎಲ್ಲಿ hike  ಸಿಗಬೇಕುಏನಿದ್ರು ನನ್  ತರ ಹಾರ್ಡ್ ವರ್ಕ್ ಮಾಡೋವವರಿಗೆ ಮಾತ್ರ ಒಳ್ಳೆ  hike  ಸಿಗತ್ತೆ ಅಂತ ಯಮ ಮನಸ್ಸಲ್ಲೇ ಅಂದ್ಕೊಳ್ತಾನೆ.
         Appraisal  ಟೈಮ್ ಅಲ್ವಾ ಶಿವನ ಆಫೀಸ್  ಫುಲ್ ಜನ. ಯಮನಿಗೋ ಪಾರ್ಕಿಂಗ್ ಜಾಗ ಸಿಗದೇ ಕೋಣವನ್ನು ಅಲ್ಲೇ ಸೈಡ್ ಅಲ್ಲಿ ಪಾರ್ಕ್ ಮಾಡಿ ಒಳಗೆ ಬರ್ತಾನೆ. ಸಲ ಒಳ್ಳೆ hike ಆದ್ರೆ ಮೊದಲು vehicle ಅನ್ನು ಚೇಂಜ್ ಮಾಡ್ಬೇಕುಸಿಕ್ಕಾಪಟ್ಟೆ maintainance  ಬರ್ತಾ ಇದೆ ಅಂತ ಯೋಚಿಸ್ತಾ ಇರೋವಾಗಲೇ  "ಬನ್ನಿ ಯಮ ಮಹಾರಾಜರೇ ಅಂತ ಫುಲ್ ಮರ್ಯಾದೆ ಕೊಟ್ಟು ಒಳಗೆ ಕರೀತಾನೆ ಶಿವ. ಮರ್ಯಾದೆ ಯಾಕೋ ಸ್ವಲ್ಪ ಜಾಸ್ತಿ ಆದ ಹಾಗಿದೆಯಲ್ಲ ಅಂತ ಅಳುಕಿನಿಂದಲೇ ಬಲಗಾಲಿಟ್ಟು ಒಳಗೆ ಕಾಲಿಡ್ತಾನೆ ಯಮ

ಶಿವ : ಮತ್ತೆ ಹೇಗಿತ್ತು ವರ್ಷ?
ಯಮ :( ಪ್ರಶ್ನೆ ಗೆ ಕೆಲವು ದಿನಗಳಿಂದ ಚೆನ್ನಾಗಿ Prepare ಆಗಿದ್ದರಿಂದ ಅಳುಕಿಲ್ಲದೆ ಶುರು ಹಚ್ಕೊಳ್ತಾನೆ ಯಮ) ಪರಶಿವಾ,  ಸಲ ನೀವು ಕೊಟ್ಟ ಒಂದು ಕೋಟಿ ಜನರಿಗೆ ಸಾವು ಅನ್ನೋ  ಟಾರ್ಗೆಟ್ ಅನ್ನು ರೀಚ್ ಆಗಿದ್ದೇನೆ. ಮದ್ಯದಲ್ಲಿ ಸ್ವಲ್ಪ efficiency ಕಡಿಮೆ ಆಗಿತ್ತು. ಆದರೆ ವರುಣ ದೇವ ಮತ್ತು ವಾಯು ದೇವನ ಜೊತೆ ಡೀಲ್ ಮಾಡಿಕೊಂಡು  ಅಲ್ಲಲ್ಲಿ ಪ್ರವಾಹ, ಚಂಡಮಾರುತ ಬರಿಸಿ ಟಾರ್ಗೆಟ್  ಸರಿದೂಗಿಸಿದ್ದೇನೆ.
ಶಿವ : ಅದು As per process ನಿಮ್ಮ ಕೆಲಸ. ಅದಲ್ಲದೆ ಏನು ಮಾಡಿದ್ದೀರಿ...?

 
ಈಗ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ತಾನೆ ಯಮ. ಅಲ್ಲ ಗುರುವೇ ನಿಯತ್ತಾಗಿ ಟಾರ್ಗೆಟ್ ಮುಗಿಸಿ ಅದೇನೋ ಉದ್ದಾರ ಮಾಡ್ತಾನೆ ಅಂತ ಇವನ ಹತ್ರ ಬಂದ್ರೆ ಶಿವ ಈ  ತರ ಬತ್ತಿ ಇಟ್ಟುಬಿಟ್ನಲ್ಲ . ನಾನು ಬೇರೆ ದರಿದ್ರ ಹೈಕ್ ನಂಬಿಕೊಂಡು ಕುಬೇರನ ಹತ್ರ ಸಾಲ ತಗೊಂಡು  ಸ್ವರ್ಗದಲ್ಲಿ 30X40 ಸೈಟ್ ಬೇರೆ ತೆಗ್ದಿದೀನಿ. ಇವನು ಯಾಕೋ ಹೊಗೆ ಹಾಕ್ಸೋ ತರ ಕಾಣಿಸ್ತಾ ಇದೆಯಲ್ಲ ಅಂದುಕೊಂಡು ಸುಮ್ನೆ ಒಂದ್ಸಲ ಕೆಮ್ಮುತ್ತಾನೆ....... 

ಶಿವ : (ಯಮನಿಂದ ಉತ್ತರ ಬರದಿದ್ದನ್ನು ಗಮನಿಸಿ):  ಸರಿ ಬಿಡಿ ನರರನ್ನು ಎತ್ತಾಕೊಂಡು ಬರೋವಾಗ ಎಷ್ಟು ಸಲ Process violation ಆಗಿದೆ? ಚಿತ್ರಗುಪ್ತ ಲೆಕ್ಕಾಚಾರದಲ್ಲಿ ಅದೇನೋ ಎಡವಟ್ಟು ಆಗಿ ಮೊನ್ನೆ ಯಾರೋ ತಪ್ಪು ವ್ಯಕ್ತಿನ ಕರ್ಕೊಂಡು ಬಂದ್ರಿ ಅಂತ ಸುದ್ದಿ ಬಂತು ನಂಗೆ. ನಿಮ್ಮ Error matrix ಹೇಳ್ತಾ ಇದೆ.  
ಯಮ: ಮಹಾಸ್ವಾಮಿ ಅದು ಚಿತ್ರಗುಪ್ತನ ತಪ್ಪು ಅಲ್ಲವೆ. ಅವನ error matrix ಗೆ ಎಫೆಕ್ಟ್ ಆಗಬೇಕು ಅಲ್ವಾ ಅದು?
ಶಿವ: ನೋಡು ಯಮ, ನಿಮ್ಮ ಕೆಳಗೆ ಅವ್ನು ಕೆಲಸ ಮಾಡ್ತಾ ಇದಾನೆ ಅಂದ್ರೆ ಅವನು ಮಾಡಿದ ತಪ್ಪಿಗೂ ನೀನೇ ಹೊಣೆ. ಅದ್ದರಿಂದ ಅದು ನಿಮ್ಮ  ಮ್ಯಾಟ್ರಿಕ್ಸ್ ಗೆ ಬರುತ್ತೆ. ಅದಿರಲಿ ನಿಮಗೆ ಕೊಟ್ಟ ಟಾರ್ಗೆಟ್ ಅಲ್ಲದೆ ಬೇರೆ ಏನು ಮಾಡಿದ್ದೀರಿ? ನಿಮಗೆ ಗೊತ್ತಿರಬೇಕು ಅಲ್ವಾ, ಕೆಲಸ ಎಲ್ಲರು ಮಾಡ್ತಾರೆ ಆದ್ರೆ ನಿಮ್ಮ Growth ಆಗಬೇಕು ಅಂದ್ರೆ ನೀವು ಬೇರೆಯವರಿಗಿಂತ ವಿಬಿನ್ನವಾಗಿರೋದು ಅಥವಾ ನೀವೇ ನೀವಾಗಿ Initiative ತಗೊಂಡು ಏನಾದ್ರೂ ಮಾಡಿರಬೆಕು. ರೀತಿಯದ್ದು ಏನಾದ್ರು ಇದೆಯಾ?

ಯಮ: ಮಹಾಸ್ವಾಮಿ ಒಂದು ಕೋಣ, ಒಂದೈವತ್ತು ಯಮಕಿಂಕರರು ಆಮೇಲೆ ಒಬ್ಬ ಕಂಪ್ಯೂಟರ್ ಸ್ಪೆಷಲಿಸ್ಟ್ ಚಿತ್ರಗುಪ್ತನನ್ನು ಕೊಟ್ಟು ಏನಾದರು ವಿಬಿನ್ನವಾಗಿ ಮಾಡಿ ಅಂದ್ರೆ ಏನು ಮಾಡಕ್ಕೆ ಅಗತ್ತೆ. I  have my own limitations you  know. ನನ್ನ ವರ್ಕಿಂಗ್ conditions ಎಷ್ಟು ಕಷ್ಟ ಇದೆ ಗೊತ್ತಾ ನಿಮಗೆ. ಎಲ್ಲಾ ಕಳ್ಳ ಕದೀಮರಿಗೆ ಶಿಕ್ಷೆ ಕೊಡಬೇಕು, ಅವರ ಪಾಪಕ್ಕನುಗುಣವಾಗಿ ಚಾಟಿಯೇಟು ಕೊಡಬೇಕು, ಎಣ್ಣೇಲಿ ಕುದಿಸಬೇಕು.......   ಎಷ್ಟೋ ಸಲ ಯಮಕಿಂಕರರು ಸಾಲದೇ ನಾನೇ ಅವರ ಜೊತೆ Stay back ಮಾಡ್ತೇನೆ,  ಅದ್ಕೆ Overtime ಕೂಡ ಸಿಗೋದಿಲ್ಲ. ಜೊತೆಗೆ ಶಿಕ್ಷೆಯ ಪ್ರಮಾಣ ಸರಿ ಇದೆಯಾ ಅಂತ  Quality ಕೂಡ ಚೆಕ್ ಮಾಡ್ಬೇಕು ನಾನು. ನೀವು ಒಂದು Matrix  ಮಾತ್ರ Maintain  ಮಾಡ್ತೀರಿ. ಆದರೆ ನಾನು ಅದೆಷ್ಟು excel ಶೀಟ್ ಗಳನ್ನ Update ಮಾಡಬೇಕು ಅನ್ನೋದು ನನಗೆ ಮಾತ್ರ ಗೊತ್ತು. 

ಶಿವ: ಏನ್ರಿ ನೀವು ಹೀಗೆ ಹೇಳ್ತೀರಲ್ಲ. ಏನೋ ನೀವೊಬ್ಬರೇ ಕೆಲಸ ಮಾಡಿದ ಹಾಗೆ. ನೀವು ಈಗ ಹೇಳಿದ ಎಲ್ಲಾ ಕೆಲಸಗಳನ್ನು ಎಸ್. ಎಸ್. ಎಲ್. ಸಿ ಫೇಲ್ ಆದವರೂ ಬೇಕಾದ್ರೆ ಮಾಡ್ತಾರೆ ಕಣ್ರೀ. ನಿಮ್ಮ B. E ಇನ್ Law and Order  ಯಾಕೆ ಬೇಕುಪೋಸ್ಟ್ ಗ್ರಾಡ್ಜುವೇಶನ್ in  Hell Maintainance ಬೇರೆ. ಏನಾದ್ರೂ ಹೊಸದು ಯೋಚನೆ ಮಾಡಬೇಕು ನೀವು... 

ಯಮ: ನಾವು ಭೂಲೋಕದಲ್ಲಿ ಒಂದು ಬ್ರಾಂಚ್ ಆಫೀಸ್ ಇಟ್ಟು ಒಂದಿಬ್ಬರು ಯಮಕಿಂಕರರನ್ನು ಅಲ್ಲೇ ಲಾಂಗ್ ಟರ್ಮ್ ವೀಸಾದಲ್ಲಿಟ್ಟು  ಲೈಫ್ ಟರ್ಮ್ ಮುಗಿದಿರೋ ಜನರನ್ನು ಡೈರೆಕ್ಟ್ ಆಗಿ ನರಕಕ್ಕೆ ಕಳಿಸಬಹುದು. ಪದೇ ಪದೇ ನಾವು ಭೂಲೋಕಕ್ಕೆ ಹೋಗೋ ಖರ್ಚು ಮತ್ತು ಟೈಮ್ ಉಳಿಯುತ್ತೆ ಅಂತ ಒಂದು ಐಡಿಯಾ ಕೊಟ್ಟೆ ನಾನು ನಿಮಗೆ.  ಆದರೆ ನೀವು ಅದನ್ನು ಆಗೋದಿಲ್ಲ ಅಂದು ಬಿಟ್ರಿ.  

ಶಿವ : ಐಡಿಯಾ ಚೆನ್ನಾಗೇ ಇತ್ತು ಆದ್ರೆ ಯಮಕಿಂಕರರ ಖರ್ಚು ವೆಚ್ಚ ಕ್ಕೆ  ಬಜೆಟ್ ಅಪ್ರೂವಲ್ ಸಿಗೋದಿಲ್ಲ, ಅದಕ್ಕೆ ಆಗೋದಿಲ್ಲ ಅಂದಿದ್ದು. ನೀವು ಯೋಚನೆ ಮಾಡಬೇಕು  Resourses ಕಮ್ಮಿ ಹೇಗೆ ಉಪಯೋಗಿಸಬೇಕು ಅಂತ. ಉದಾಹರಣೆಗೆ ಒಬ್ಬನ ಜೀವಿತಾವಧಿ ಮುಗಿದಿರತ್ತೆ ಅವನನ್ನು ಕರೆತರೋಕೆ ನೀವು ಹೋಗ್ತೀರ, ಆಗ ಅವ್ನು ಊಟ ಮಾಡ್ತಾ ಇರ್ತಾನೆ. ನೀವುಗಳು ಮಾನವೀಯತೆ ದೃಷ್ಟಿಯಿಂದ ಅವನ ಊಟ ಮುಗಿಯೋವರೆಗೆ ಕಾದಿದ್ದು ಆಮೇಲೆ ಅವನ ಜೀವ ಸೆಳೆದು ಕರೆದುಕೊಂಡು ಬರ್ತೀರ. ಅಷ್ಟು ಹೊತ್ತು ನಿಮ್ಮ ಟೈಮ್ ವೇಸ್ಟು.  ಅವ್ನು ಮಾಡಿದ ಊಟ ವೇಸ್ಟ್. ನಿಮ್ಮ  ಟಾರ್ಗೆಟ್ ಅಲ್ಲಿ ಒಂದು 20% ಕೇಸ್ ಗಳು ಹೀಗೆ ಆದರೆ ಒಟ್ಟು ಎಷ್ಟು ವೇಸ್ಟ್ ಅಲ್ವಾ? ಅದಕ್ಕೆ ಅವನ ಟೈಮ್ ಮುಗಿದ ಕೂಡ್ಲೇ ಅವನು ಏನೇ ಮಾಡ್ತಾ ಇದ್ದರು ಕರ್ಕೊಂಡು ಬಂದು ಬಿಡಬೇಕುಹೀಗೆ ಹೊಸ ಹೊಸ ಯೋಚನೆ ಮಾಡ್ತಾ ಇರಬೇಕು.. ಎಲ್ಲವನ್ನು ನಾನೇ ಹೇಳೋದಿಕ್ಕೆ ಆಗೋದಿಲ್ಲ. ನೀವೇ Initiative ತಗೋಬೇಕ್ರಿ.... 

ಯಮ: (ಇವ್ರು ಏನೋ ಒಂದು ಪರ್ಸಂಟೇಜ್ ಗೆ ಫಿಕ್ಸ್ ಆಗಿದ್ದಾರೆ, ಇನ್ನು ವಾದಿಸಿ ಫಲವಿಲ್ಲ ಅಂದುಕೊಂಡುಓಕೆ ಸರ್ ಬರೋ ವರ್ಷದಲ್ಲಿ ಹಾಗೇ ಮಾಡ್ತೇನೆ  ..... 

ಶಿವ: (ಯಮನ ಹಾವಭಾವ ಗಮನಿಸಿ ) ಆದರೂ ನಿಮಗೆ ಕೊಟ್ಟ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೀರಿ. ಎಲ್ಲಾ Processಗಳು, ಟಾರ್ಗೆಟ್ ಗಳು ಎಲ್ಲವನ್ನೂ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ. ಸೊ ನಿಮ್ಮ ರೇಟಿಂಗ್ 5 ರಲ್ಲಿ  3 .  ನಿಜ ಹೇಳ್ಬೇಕು ಅಂದ್ರೆ ನೀವು 3 ಗಿಂತ ತುಂಬಾ ಹೆಚ್ಚು ಆದರೆ 4 ಕ್ಕಿಂತ ಮಾತ್ರ  ಸ್ವಲ್ಪ ಕಮ್ಮಿ. 4 ಕೊಡಬೇಕು ಅನ್ನೋದು ನನಗೂ ಆಸೆ ಆದ್ರೆ ನನಗೂ  ಕೆಲವು Limitations ಇರುತ್ತೆ ಅಲ್ವಾ. ನನ್ನ ಕೇಳೋದಾದ್ರೆ 3 ಕೂಡ ಒಳ್ಳೆ  ರೇಟಿಂಗೇ ಬಿಡಿ. ಆದ್ರೆ ನೀವು ಇನ್ನೂ ಒಳ್ಳೆ ರೇಟಿಂಗ್ ತಗೋಬೋದಿತ್ತು. Anyhow there is always a next ಟೈಮ್ .... ಆಲ್ ದಿ ಬೆಸ್ಟ್.  ಹಾ ಹೇಳೋದು ಮರೆತಿದ್ದೆ . ಸದ್ಯದಲ್ಲೇ ಕೆಲವು Organisation ಚೇಂಜ್ ಗಳು ಆಗುತ್ತೆ. ಅಲ್ಲಿ ಇಲ್ಲಿ ಕೆಲ ಸಣ್ಣ ಬದಲಾವಣೆಗಳು ಅಷ್ಟೇ. ನಿಮಗೆ ಮೇಲ್ ಬರತ್ತೆ ಬಿಡಿ .... 

ಯಮ: (ಮುಖದಲ್ಲಿ ನಿರ್ಲಿಪ್ತ ಭಾವನೆ) ದನ್ಯವಾದಗಳು ಸರ್.... 

ಶಿವ: ನಿಮಗೆ ರಿಪೋರ್ಟ್ ಮಾಡಿಕೊಳ್ಳೋ ಕಾರ್ಮಿಕರಿಗೆ Organisation Changes ಬಗ್ಗೆ ಮೇಲ್ ಬಂದ ನಂತರವೇ review ಮೀಟಿಂಗ್  ಮುಗಿಸಿ ... ಅವಸರವೇನಿಲ್ಲ ....

ಯಮ: As u wish sir ......

ಬಾಗಿಲನ್ನು ದಡಾರನೆ ಹಾಕಿ ಹೊರನಡಿಯುತ್ತ ಯೋಚಿಸ್ತಾನೆ ಯಮ " ಸರಿ ನನ್ನ ಅಪ್ರೈಸಲ್  ಅಂತು ಹೊಗೆ ಆಯ್ತು. ನನಗೆ ರಿಪೋರ್ಟ್ ಮಾಡಿಕೊಳ್ಳೋ ಜನರಿಗೆ ಮೇಲ್ ಬಂದ ನಂತರ Review ಶುರು ಹಚ್ಕೊ ಅಂತಿದಾನೆ ಶಿವ . ಯಾವಾಗಲೇ ಆದರೂ ನಾನೇ ತಾನೇ ಮಾಡಬೇಕು, ಅದೂ ಅಲ್ದೆ ಇವತ್ತೇ ಇವರಿಗೆ ಕ್ಲಾಸ್ ತಗೊಂಡ್ರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತೆ. ನನ್ನ ಹೈಕ್ ಹೊಗೆ ಅಂದ್ರೆ ನನಗೆ ರಿಪೋರ್ಟ್ ಮಾಡ್ಕೊಳೋ ಚಿತ್ರಗುಪ್ತ ಹಾಗೂ ಯಮ ಕಿಂಕರರಿಗೂ ಹೊಗೇನೇ .... ಪಾಪಸಿಕ್ಕಾಪಟ್ಟೆ ಓವರ್ ಟೈಮ್  ಮಾಡ್ತಾವೆ ಅವ್ವು, ಆದರೇನು ಮಾಡೋದು  ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕಲ್ಲವೇ ಅಂದುಕೊಳ್ತಾ ಮೀಟಿಂಗ್ ರೂಂ ಯಾವುದಾದರೂ ಖಾಲಿ ಇದೆಯಾ ಅಂತ ನೋಡ್ತಾನೆ ಯಮಖಾಲಿ ರೂಮೊಂದರಲ್ಲಿ ಯಮಕಿಂಕರನೊಬ್ಬ ಅದ್ಯಾವುದೋ ಕ್ರೆಡಿಟ್ ಕಾರ್ಡ್ ಪಾರ್ಟಿ ಜೊತೆ ಮಾತಾಡ್ತಾ ಇರೋದು ಕಾಣಿಸತ್ತೆ, ಸರಿ ಸದ್ಯಕ್ಕೆ ಇದೇ ಬಕ್ರ ಅಂದುಕೊಂಡು ಲ್ಯಾಪ್ ಟಾಪ್ ಜೊತೆ ಒಳಗೆ ನಡಿತಾನೆ ಯಮ.

ಯಮಕಿಂಕರ: ಸರ್ ನಮಸ್ತೆ (ಫೋನ್ ಕಾಲ್ ಕಟ್ ಮಾಡ್ತಾ )
ಯಮ:  ನಿಮ್ಮ Appraisal ಶುರು ಹಚ್ಹ್ಕೊಳ್ಳೋಣವೇ ?
ಯಮಕಿಂಕರ: ಸರಿ ಸಾರ್

ಯಮ ಲ್ಯಾಪ್ ಟಾಪ್ ಚಾರ್ಜರ್ ಕನೆಕ್ಟ್ ಮಾಡಿ ವಿಂಡೋಸ್ ಗೆ ಲಾಗಿನ್ ಆಗ್ತಾನೆ. ಬಡ್ಡಿ ಮಗಂದು ಕಿತ್ತೋಗಿರೋ ಲ್ಯಾಪ್ ಟಾಪ್ ಕೊಟ್ಟಿದಾರೆ, ಲಾಗಿನ್ ಆಗೋದಕ್ಕೆ ಒಂದು ಗಂಟೆ ತಗೊಳತ್ತೆ ಅಂತ ಮನಸ್ಸಲ್ಲೇ ಬೈಕೋತಾನೆ. ಅಷ್ಟರಲ್ಲೇ ಬಾಗಿಲು ಸದ್ದು ಮಾಡುತ್ತೆ, ತಲೆ ಎತ್ತಿ ನೋಡಿದರೆ ಚಿತ್ರಗುಪ್ತ... ನನ್ ಮಗನ್ನ ಯಾರು ಕರೆದರು? ಸಕತ್ ತಲೆ ತಿಂತಾನೆ ಅಂತ ಇವನ review ಲಾಸ್ಟ್ ಗೆ ಇಟ್ಟುಕೊಂಡಿದ್ದೆನಲ್ಲ ಅಂದುಕೊಳ್ಳೋ ವಷ್ಟರಲ್ಲಿ ಚಿತ್ರಗುಪ್ತನೇ ಮಾತು ಶುರು ಹಚ್ಕೊಳ್ತಾನೆ.

ಚಿತ್ರಗುಪ್ತ: ಯಮ ಮಹಾರಾಜರೇ ಮೇಲ್ ಚೆಕ್ ಮಾಡಿದಿರಾ ?
ಯಮ: ಇಲ್ಲ ಬೆಳಗ್ಗಿಂದ ಸ್ವಲ್ಪ ಬ್ಯುಸಿ ಆಗಿದ್ದೆ, ಏನಾದ್ರು ವಿಶೇಷ ಇದೆಯಾ?
ಚಿತ್ರಗುಪ್ತ: ಸ್ವಲ್ಪ ವಿಶೇಷಾನೇ, ನಂಗೆ ಪ್ರಮೋಶನ್ ಆಗಿದೆ. 
ಯಮ: ಒಹ್ really ? Congrats. ಯಾವ ಡಿಪಾರ್ಟ್ ಮೆಂಟ್ ?
ಚಿತ್ರಗುಪ್ತಡಿಪಾರ್ಟ್ ಮೆಂಟ್ ಏನು ಚೇಂಜ್ ಇಲ್ಲ, ರೋಲ್ ಚೇಂಜ್ ಆಗಿದೆ ಅಷ್ಟೇ. ಇನ್ನು ಮೇಲಿಂದ ನೀವು ನನಗೆ ರಿಪೋರ್ಟ್ ಮಾಡಬೇಕು. ನಿಮ್ಮ ವರ್ಷದ ಟಾರ್ಗೆಟ್ ನಾನು ಸೆಟ್ ಮಾಡ್ತೇನೆ. ಆಮೇಲೆ ಕಿಂಕರರಿಗೆಲ್ಲ ರಿವೀವ್ ಮೀಟಿಂಗ್ ನಾನೇ ಮಾಡ್ತೇನೆ. ಸರಿ ನಾನು HR ಹತ್ರ ಸ್ವಲ್ಪ ಹೋಗಿ ಬರ್ತೇನೆ. ನಾಳೆ ನಿಮ್ಮ ವರ್ಷದ ಟಾರ್ಗೆಟ್ ಸೆಟ್ ಮಾಡೋಣ, ಸ್ವಲ್ಪ ಬೇಗ ಬಂದು ಬಿಡಿ ನಾಳೆ.... 

      ಬಾಗಿಲನ್ನು ಹಾಕಿ ಹೊರನಡೆದ ಚಿತ್ರಗುಪ್ತನ ಮುಖದಲ್ಲಿ ಏನೋ ಕಳೆ, ಮೀಸೆಯಂಚಿನಲ್ಲಿ ಒಂದು ಕಂಡೂ ಕಾಣದಂತಿರೋ ನಗು. ಯಮಕಿಂಕರ ಕಕ್ಕಾಬಿಕ್ಕಿ. ನಾಳೆಯಿಂದ ತನಗೆ ಯಾರು work assign ಮಾಡುವರೋ ಎಂಬ ಕಳವಳ. ಯಮನಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗಿದೆ, ಮಾತೇ  ಹೊರಡ್ತಾ ಇಲ್ಲ. ಮುಂದೆ ಚಿತ್ರಗುಪ್ತನ ಆದೇಶ ಪಾಲನೆ ಮಾಡಬೇಕಾದ  ಸನ್ನಿವೇಷ ಕಲ್ಪಿಸಿಕೊಂಡು ತಲೆ ಸುತ್ತು ಬಂದ ಹಾಗೆ ಆಗ್ತಾ ಇದೆ. ಲ್ಯಾಪ್ ಟಾಪ್ ಅನ್ನು ಸ್ವಿಚ್ ಆಫ್ ಮಾಡಿ ಮಾತಿಲ್ಲದೆ ಆಫೀಸಿಂದ  ಮನೆಗೆ  ಹೊರಡ್ತಾನೆ.                 ಆಫೀಸಿಂದ ಹೊರ ಬರುತ್ತಿದ್ದಂತೆ ಯಮನ ಕೋಣ ಪಕ್ಕಕ್ಕೆ ಬಂದು ನಿಲ್ಲುತ್ತೆ. ಯಾಕೋ ಇಡೀ ಪ್ರಪಂಚದಲ್ಲಿ ತನ್ನನು ಅರ್ಥ ಮಾಡಿಕೊಂಡ ಹಾಗೂ ತನ್ನನ್ನು ಸಮದಾನಪಡಿಸುವ ಜೀವ ಈ ಕೋಣ ಮಾತ್ರ ಅನ್ನಿಸುತ್ತೆ ಯಮಂಗೆ. ಅಲ್ಲೇ ಹೊರಗೆ ಹುಲ್ಲುಹಾಸಿನ ಮೇಲೆ ಕೂತ್ಕೊಂಡು ಯೋಚನೆ ಮಾಡ್ತಾ ಅದೇನೋ ಹೊಳೆದಂತೆ ಲ್ಯಾಪ್ ಟಾಪ್ ಓಪನ್ ಮಾಡಿ  Naukri. com ಸೈಟ್ ಗೆ ಲಾಗಿನ್ ಆಗ್ತಾನೆ. ಅದೆಷ್ಟೋ ವರ್ಷದಿಂದ ನೋಡದೇ ಇದ್ದ Resume ಅನ್ನು Update ಮಾಡ್ತಾನೆ. ಅಲ್ಲಿ ಇಲ್ಲಿ ತಡಕಾಡಿ ಒಂದು ಹೊಸ ಕೆಲಸಕ್ಕೆ Apply ಮಾಡ್ತಾನೆ..... 

 Job Location: ತ್ರಿಶಂಕು ಸ್ವರ್ಗ ................... 
Contact person: ವಿಶ್ವಾಮಿತ್ರ .............. 


                                                                                                                              --ಶ್ರೀ :-) -----




Sunday, August 25, 2013

ನನ್ನವಳು

ಈ ಲೇಖನ ಬರೆಯಲು ಶುರು ಮಾಡಿ ಸುಮಾರು ಒಂದು ವರ್ಷ ಆಯಿತು, ಫೈನಲ್ ಟಚ್ ಕೊಟ್ಟಿದ್ದು ಮಾತ್ರ ಈಗ ಅಷ್ಟೇ
ಅದ್ಯಾಕೋ ಹಾಗೆ ಸುಮ್ನೆ ಕೂತಿದ್ದಾಗ ನನ್ನ ವಳು ಹೇಗಿರಬೇಕು ಅನ್ನೋ ಯೋಚನೆ ಬಂತು. ಹೇಗಿರಬೇಕು ಅಂತ ಆಸೆಪಡೋದು ಮಾತ್ರ ನಮ್ಮ ಕೆಲಸ. ಆದರೆ ಕೊಡೋದು ಬಿಡೋದು ಎಲ್ಲ ಆ ಸೂತ್ರದಾರನ  ಕೈಲಿ ಅಲ್ವಾ ಆದ್ರೂ ದೇವ್ರು ಅನ್ನೋ ಸೂತ್ರದಾರನ ಮೂಲಕ future wife ಗೆ ಒಂದು ಪತ್ರ.... ಆದ್ರೆ ಇದು ಹೃದಯದ ವಿಷಯ ಅದ್ಕೇ ಈ  ಸಲ ಲೇಖನ without ಮಸಾಲ..

ಸಂಗಾತಿಯಾಗಿ ಬರೋ ನೀನು ಕೆಲಸ ಮಾಡೋದು ಬೇಡ. ಮನೇಲಿ ಆರಾಮಾಗಿರು ಅಂತ ಹೇಳ್ಬೇಕು ಅನ್ನೋ ಆಸೆ ಕಣೆ. ನೀನು ಕೆಲಸ ಮಾಡಿದ್ರೆ ಅಬ್ಬಬ್ಬ ಅಂದ್ರೆ ಸ್ವಲ್ಪ ಹಣ ಜಾಸ್ತಿ ಸಿಗಬಹುದು, ಆಮೇಲೆ ಬೇರೆ ಅವ್ರು ಕಟ್ಟಿರೋ ಮನೆಗೆ ರೆಂಟ್ ಕೊಡೋದು ಬಿಟ್ಟು ನಮ್ಮದು ಅಂತ ಮನೆ ಕೊಂಡ್ಕೊಂಡು EMI ಲೆಕ್ಕಾಚಾರದಲ್ಲಿ ನಮ್ಮ ಮುಂದಿನ ಅಮೂಲ್ಯ 25 -30 ವರ್ಷ ಕಳೆಯಬಹುದು. ಆದರೆ EMI ಲೆಕ್ಕಾಚಾರದಲ್ಲಿ ನಮ್ಮ ಮದ್ಯೆ ಪ್ರೀತಿ ಎಲ್ಲಿ ಸೊರಗಿ ಹೋಗತ್ತೋ ಅನ್ನೋ ಭಯ ನಂಗೆ. ಅದೇ ನೀನು ಮನೇಲೆ ಇದ್ದರೆ  ನಾನು ಆಫೀಸ್ ಇಂದ ಮನೆಗೆ ಬಂದಾಗ ಮುಗುಳ್ನಗೆ ಚೆಲ್ಲಿ ಒಂದು ಕಪ್ ಟೀ ಕೊಟ್ರೆ ಎಷ್ಟು  ಚೆನ್ನಾಗಿರತ್ತೆ ಅಂತ ಯೋಚನೆ ಮಾಡು. ಒಂದು ಕಪ್ ಟೀ ಕುಡಿದು ಒಂದು walking ಹೋಗಿ ಮುಸ್ಸಂಜೆ ತಿಳಿ ತಂಪಲ್ಲಿ ದಿನದ ಆಗು ಹೋಗುಗಳ ಬಗ್ಗೆ ಮಾತುಕತೆ ಮಾಡಿದ್ರೆ ಎಷ್ಟು ಹಿತವಾಗಿರತ್ತೆ ಅಲ್ವಾ...? ನೀನು ಕೆಲಸ ಮಾಡಿದ್ರೆ ನಿನ್ನ shopping ನೀನೆ ಮಾಡ್ಕೊಬೋದು, ಆದ್ರೆ ನನ್ನಲ್ಲಿ ಏನಾದ್ರು ತೆಗ್ಸಿ ಕೊಡಿ ಅಂತ ಹೇಳೋದು,  ನಾನು ಮರೆತರೆ ಹುಸಿ ಕೋಪ ತೋರೋ ಚಾನ್ಸ್ ಮಿಸ್ ಆಗತ್ತೆ ಅಲ್ವಾ ಚಿನ್ನಾ...ಯೋಚನೆ ಮಾಡು.

 ಟೀವಿ ಅಲ್ಲಿ ನಿನಗಿಷ್ಟ ಬಂದ ಪಿಲ್ಮ್ ನೋಡು ಆದ್ರೆ ಕುಚ್ ಕುಚ್ ಹೋತ ಹೈ ಅಥವಾ ಕಭಿ ಕುಶಿ ಕಭಿ ಘಂ( ಕಭಿ ಕುಶಿ always ಘಂ)  ಫಿಲಂ ನ 101 ನೇ ಸಲ ನೋಡಿ ಬೇಜಾರು ಮಾಡ್ಕೋಬೇಡ. ಬೇಜಾರ್ ಮಾಡ್ಕೊಂಡ್ರು ಪರವಾಗಿಲ್ಲ ಆದ್ರೆ ಆ ಫಿಲಂ ನಲ್ಲಿ ಶಾರುಖ್ ಆಕ್ಟಿಂಗ್ ಸೂಪರ್ ಅಂತ ಮಾತ್ರ ಹೇಳಬೇಡ (  ಅದನ್ನು ತಡೆದುಕೊಳ್ಳೋ ಸಹನೆ ನಂಗೆ ಇಲ್ಲ :-) ) .
ಅವ್ನು ಸಿಗರೇಟ್ ಸೇದುತ್ತಾ ಫೋಸ್ ಕೊಡ್ತಾ ಇದ್ರೆ ಅದೇ ಹೊಗೇಲಿ ಅವನನ್ನು ಸುಡಬೇಕು ಅನ್ನಿಸುತ್ತೆ ನಂಗೆ . ನನಗೆ ಅನ್ನಿಸೋ ಹಾಗೆ ಹಾಗೆ ಅವನಿಗೆ ಸಿಕ್ಕಿದ ಅತ್ಯುತ್ತಮ ಪಾತ್ರ ಅಂದರೆ my name is khaan ಚಿತ್ರದ್ದು ಇರಬೇಕು. ಮನಸ್ಸಿಗೆ ಅದೇನೋ ಖುಷಿ ಆಯ್ತು ಅದನ್ನು ನೋಡಿ ;-)

ಕ್ರಿಕೆಟ್ ಇರೋ ಟೈಮ್ ಅಲ್ಲಿ remote ಕೊಡು ಅಂತ ನಾನು ಜಗಳ ಆಡೋದಿಲ್ಲ. ಅವ್ರು ಆಡೋ ಆ ತೋರಿಕೆಯ ಆಟ ನೋಡೋದಕ್ಕಿಂತ ಅದ್ಯಾವುದೋ serial ಅಲ್ಲಿ busy ಆಗಿರೋ ನಿನ್ನ ಮುಖ ನೋಡೋದೇ ವಾಸಿ ಅನ್ನೋದು ನನ್ನ ಭಾವನೆ...ಆದ್ರೆ ಆ serial ನಲ್ಲಿ ಹೀರೋಯಿನ್ ಮತ್ತೆ ಹೀರೋಗೆ ಜಗಳ ಆಗಿ ಹೀರೋಯಿನ್ ಅತ್ರೆ ನೀವು ಕೂಡ ಅಳಬೇಕು feel her pain ಅಂತ ಮಾತ್ರ ಹೇಳಬೇಡ. ಅವ್ಳು ಅಳೋದಕ್ಕೆ director ಹಣ ಕೊಡ್ತಾನೆ...ನಾನು ಸುಮ್  ಸುಮ್ನೆ ಅತ್ರೆ ನಿಮ್ ಅತ್ತೆ ಒದೆ ಕೊಡ್ತಾರೆ ....ನಂಗೆ or ನಿಂಗೆ!!!!!!!! ಧಾರಾವಾಹಿನ ನೋಡ್ತಾ ಇದ್ರೆ ಬೇಡ ಅನ್ನೋದಿಲ್ಲ ಯಾಕೆ ಅಂದ್ರೆ ಅದೆಲ್ಲಿಂದಲೋ ಹುಡುಕಿ ತಂದ ಸುರಸುಂದರಿಯರೆಲ್ಲ ಇರೋದು ಅಲ್ಲಿನೇ....  ಅವರ  ಗುಣ ಗಾನ ಮಾಡಿದ್ರೆ ಸಿಟ್ಟಾಗಬೇಡ. ಅವ್ರು ನಿನ್ ಮುಂದೆ ವೇಸ್ಟ್ ಅನ್ನೋದನ್ನ ಪದೇ ಪದೇ ನಿರೂಪಿಸಕ್ಕೆ ಹಾಗೆ ನೋಡ್ತೇನೆ ಅಷ್ಟೇ  ...  

ನನ್ನ ಅಪ್ಪ ಅಮ್ಮ ನ  ಚೆನ್ನಾಗಿ  ನೋಡ್ಕೋ ಅಂತ ನಿನ್ ಹತ್ರ ಕೇಳೋದಿಲ್ಲ. ನಿನ್ ಅಪ್ಪ ಅಮ್ಮಂದಿರನ್ನು ಅವರಲ್ಲಿ  ನೋಡು ಅಂತ ಮಾತ್ರ ಹೇಳ್ತೀನಿ ಅಷ್ಟೇ. ಯಾಕೆ ಅಂದ್ರೆ ಯುಗ ಯುಗ ಕಳೆದರೂ ಈ  ಅತ್ತೆ ಸೊಸೆ ಅನ್ನೋ ಕಾನ್ಸೆಪ್ಟ್ ಮಾತ್ರ ಇನ್ನೂ correct ಆಗಿ update  ಆಗಿಲ್ಲ. ಯಾವಾಗ್ಲೂ ಈ ಪ್ರೊಗ್ರಾಮ್ ಕಾನ್ಸೆಪ್ಟ್ ಗೆ ಫಿಟ್ಟಿಂಗ್ ಮಾಸ್ಟರ್ ಗಳು ಅನ್ನೋ  external virus ಅಟ್ಯಾಕ್ ಆಗೋದೇ ಜಾಸ್ತಿ  ....ಎಲ್ಲ ಕಿಂತ ಮುಖ್ಯ  ವಿಷಯ ಅಂದ್ರೆ may ಬಿ ಸುಮಾರು 20 ವರ್ಷಕ್ಕೆ ನಿಂಗೆ ಅತ್ತೆ ಆಗಿ ಪ್ರೋಮೋಷನ್ ಸಿಕ್ಕಿದರು ಸಿಗ್ಬೋದು...ಆಮೇಲೆ ಅಷ್ಟೇ "kyon ki saans bi kabhi bahu thi".

ಇಡೀ ವಾರ ನಾನು ಒಬ್ಳೆ ಇರ್ತೇನೆ  ಕಡೇ ಪಕ್ಷ ವೀಕೆಂಡ್ ಅಲ್ಲಿ ಆದರು ನನ್ನ ಹೊರಗೆ ಎಲ್ಲಾದರು ಕರ್ಕೊಂಡ್ ಹೋಗಿ ನಂಗೆ, ಊಟ ಕೊಡ್ಸಿ, ಚಾಟ್ಸ್ ಕೊಡ್ಸಿ ಅಂತ ಕೇಳು ಓಕೆ ಆದ್ರೆ ಹೋಟೆಲ್ ನೀವೇ choose ಮಾಡಿ  ಅಂತ  ಮಾತ್ರ  ಅನ್ಬೇಡ ಯಾಕೆ ಅಂದ್ರೆ ನಂದು taste based selection. ಅದು ರೋಡ್ ಸೈಡ್  ಅದ್ರು ಸರಿ ತಾಜ್ ವೆಸ್ಟ್ ಎಂಡ್  ಆದರು ಸರಿ. ಆದ್ರೆ ಹುಡುಗಿಯರಿಗೆ ಯಾವಾಗಲು ಜಿಗ ಜಿಗಿಸುವ ದೊಡ್ಡ ಹೋಟೆಲ್ ಗಳೇ ಇಷ್ಟ ಅಂತ ಎಲ್ರೂ  ಹೇಳ್ತಾರೆ...ಅದ್ಕೆ ಹೋಟೆಲ್ ಅರಿಸೋ ಜವಾಬ್ದಾರಿ ನಿಮ್ಮದು...

ಇನ್ನು ಕಡೆಯದಾಗಿ ನನ್ ಬಗ್ಗೆ ನಾನು ಹೇಳ್ಕೋಬೇಕು ಅಲ್ವ. ಮುರ್ಖರಿಗೆ ಬುದ್ದಿಯನು ನೂರ್ಕಾಲ ಪೇಳಿದರೆ  ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ  ಅಂತ ಅಮ್ಮ ಯಾವಾಗಲು ಹೇಳ್ತಾ ಇರ್ತಾಳೆ. ಇಲ್ಲಿ ಮುರ್ಖ ಯಾರು ಅಂತ ನೀನು ಜಾಸ್ತಿ ಯೋಚನೆ ಮಾಡೋದು ಬೇಡ ಅನಿಸತ್ತೆ. ನಾವು ಹುಡುಗರೇ ಇಷ್ಟು ಯಾವಾಗಲು ನಮ್ಮ ಬೆನ್ನ ಹಿಂದೆ ಯಾರದ್ರು ಒಬ್ರು ಬುದ್ದಿವಾದ ಹೇಳ್ತಾ ಇರ್ಬೇಕು ಇಲ್ಲ ಅಂದ್ರೆ ನಾವು ಹಿಂದೆನೇ ಉಳಿದು ಬಿಡ್ತೇವೆ. ಬಾಲ್ಯದಲ್ಲಿ ಅಮ್ಮ ತಿದ್ದಿ ತೀಡಿ 50% ಸರಿ ಮಾಡಿದ್ಲು. ಆಮೇಲೆ ಮೇಸ್ಟ್ರು ಲೆಕ್ಚರರ್ ಗಳು ಸೇರಿ ತುಂಬಾ ಪ್ರಯತ್ನ ಪಟ್ರು ಸರಿ ಮಾಡಕ್ಕೆ. ಆದ್ರೆ ಕೆಲ ವಿಷಯಗಳಲ್ಲಿ ನಾವು ಮೇಷ್ಟ್ರಿಗೆ ಕ್ಲಾಸ್  ಹೇಳೋವಷ್ಟು ಬುದ್ದಿವಂತರಾಗಿ ಬಿಟ್ವಿ (ಮೇಷ್ಟ್ರೇ ಸಾಯಂಕಾಲ ಕ್ಲಾಸ್ ಮುಗಿಸ್ಕೊಂಡು ಮನೆಗೆ ಬನ್ನಿ ನಾವು  ನಿಮಗೆ ಟ್ಯುಶನ್ ಕೊಡ್ತೇವೆ ಅನ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡಿದ್ವಿ  ಅಂತ ನಮಗೆ ಮಾತ್ರ ಗೊತ್ತು :-). ಕೆಲ ವಿಷಯಗಳಲ್ಲಿ ನನ್ನ ಬದಲಾಯಿಸಬೇಕು ಅಂತ ನಿನಗೆ ಅನಿಸಬಹುದು. ಆದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?   ತಿದ್ಕೋಳೋಕೆ  ಇಷ್ಟವಿಲ್ಲ ಅಂತೇನೂ ಅಲ್ಲ, ಆದರೆ  ದಿನಚರಿಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡ್ಕೋಬೇಕು ಅಂದರೆ  ನೂರು ಸಲ ಯೋಚನೆ ಮಾಡೋ ಸೋಂಬೇರಿ ನಾನು (ಯೋಚನೆ ಮಾಡಬೇಕೋ ಬೇಡವೋ ಅಂತ ಯೋಚನೆ ಮಾಡೋವಷ್ಟು ಸೋಂಬೇರಿ ಅನ್ನಬಹುದೇನೋ)

ಕಡೆಯದಾಗಿ,
ನೀ ಕೇಳಿದ್ದೆಲ್ಲ ಕೊಡ್ತೀನಿ ಅಂತೇನೂ ಅಲ್ಲ, ಆದರೆ ಇಲ್ಲ ಅನ್ನೋ ಮಾತು ಬಾಯಿಗೆ ಬರಲ್ಲ
ನಿನ್ನ ನೆನಪಾಗಲ್ಲ ಅಂತೇನೂ ಅಲ್ಲ ಆದರೆ ನೀನು ಮನಸ್ಸಿನ ಪುಟದಿಂದ ಸರಿಯೋದೆ ಇಲ್ಲ
ಸಕ್ಕರೆಗಿಂತ ನೀನು ಸಿಹಿ ಅಂತೇನೂ ಅಲ್ಲ, ಆದ್ರೆ ನೀನಿಲ್ದೆ ಆ ಸಿಹಿ ಸಹ್ಯ ಅನಿಸೋದಿಲ್ಲ ಅಷ್ಟೇ ......
ನಿನ್ ಬಗ್ಗೆ ಲೇಖನ ಬರೀಬೇಕು ಅಂತೇನು ಅಲ್ಲ, ಆದ್ರೆ ಮನಸ್ಸೆಲ್ಲ ತುಂಬಿರೋ ನಿನ್ನ ಪದಗಳಲ್ಲಿ ಸೆರೆ ಮಾಡಬೇಕು ಅನ್ನೋ ಆಸೆ  ಅಷ್ಟೇ .................

                                                                                                                                       ಶ್ರೀ :-)

Monday, July 22, 2013

ಮನೆ ಬಾಡಿಗೆಗೆ ಇದೆಯೇ? (CTRL+F for TO LET)

ಮದ್ವೆ ಅಂದ್ರೆ facebook ಸ್ಟೇಟಸ್ ಸಿಂಗಲ್ ಇಂದ ಮ್ಯಾರೀಡ್ ಅಂತ ಚೇಂಜ್ ಮಾಡೋವಷ್ಟು ಸುಲಭ ಅಂತ ಅಂದ್ಕೊಂಡಿದ್ದೆ ನಾನು. ಹೆಂಡ್ತೀನ ಕರ್ಕೊಂಡು ಹೋಗೋದಕ್ಕಿಂತ ಮುಂಚೆ ಮನುಷ್ಯರು ವಾಸ ಮಾಡೋಕೆ ಲಾಯಕ್ಕು ಇರೋ ಒಂದು ಮನೆ ಮಾಡು, ಈಗ ಇರೋ ಮನೆ ಒಂದು ಪಾಳು ಮನೆ ತರಾ ಇದೆ ಅಂತ ಅಮ್ಮನಿಂದ ಕಿವಿಮಾತು (ಕಿವಿಮಾತು ಅನ್ನೋದಕ್ಕಿಂತ ಕಿವಿ ಹಿಂಡಿ ಹೇಳಿದ ಮಾತು ಅನ್ನೋದು ಸೂಕ್ತವೇನೋ). ಸರಿ ಆಫೀಸಿನಲ್ಲಿ ಹೊಸ ಪ್ರಾಜೆಕ್ಟ್ ಬಂದಾಗಲೆಲ್ಲ ಅದನ್ನು ಹಂತ ಹಂತವಾಗಿ ವಿಭಜಿಸಿ ಕಾರ್ಯಗತಗೊಳಿಸೋದು(what a joke ;-)) ವಾಡಿಕೆ.  ಬಾಡಿಗೆ ಮನೆ ಹುಡುಕೋ ಪ್ರಾಜೆಕ್ಟ್ ಕೂಡ ಹಂತ ಹಂತವಾಗಿ ಮುಗಿಸೋಣ ಅಂದ್ಕೊಂಡೆ. ಮೊದಲ ಹಂತದಲ್ಲಿ ಬ್ರೋಕರ್ ಗೆ ಕೊಡೋ ಹಣ ಉಳಿಸೋಕೆ ಸ್ಕೆಚ್. ಫ್ರೆಂಡ್ಸು, ಸಹೋದ್ಯೋಗಿಗಳು ಸೇರಿದಂತೆ ಎಲ್ಲ ಸಹೃದಯರಲ್ಲಿ ಮನೆ ಖಾಲಿ ಇದ್ರೆ ಹೇಳ್ರೋ ಅಂತ ಕೈ ಜೋಡಿಸಿ ಪ್ರಾರ್ಥನೆ. ಆಮೇಲೆ ಸ್ವಲ್ಪ ದಿನ ಬಿಟ್ಟು ಏನ್ರೋ ಎಂಥಾ ಫ್ರೆಂಡ್ಸುಗಳೋ ನೀವೆಲ್ಲ?  ಒಂದು ಮನೆ ಹುಡುಕಿ ಕೊಡಕ್ಕೆ ಆಗಿಲ್ವಲ್ಲ ಅಂತ ಎಮೋಷನಲ್ ಬ್ಲಾಕ್ ಮೇಲ್ ಮಾಡಿದೆ. ಒಂದೆರಡು ಮನೆ ದೊರಕಿದ್ರು ಯಾಕೋ ಬೇಡ ಅನ್ನಿಸ್ತು.... ಇಷ್ಟರಲ್ಲಿ ಒಂದು ತಿಂಗಳು ಕಳೆದು ಹೋಗಿದ್ದರಿಂದ ಎರಡನೇ ಹಂತ ಶುರು ಮಾಡಿದೆ.  ಏನು ಅಂತೀರಾ? ಸಮಯ ಸಿಕ್ಕಾಗಲೆಲ್ಲ ಅಲ್ಲಿ ಇಲ್ಲಿ ಮನೆ ಖಾಲಿ ಇದೆ ಅನ್ನೋ ಬೋರ್ಡಿಗಾಗಿ ಹುಡುಕಾಟ. ಅಲ್ಲಿ ಇಲ್ಲಿ ಟೀ ಅಡ್ದಾಗಳು, ಬಾಯಲ್ಲಿ ನೀರು ತರಿಸೋ ಪಾನಿಪುರಿ ಸ್ಪಾಟ್ ಗಳು, ಪಾರ್ಕಿಂಗ್ ಅಲ್ಲಿ ನಿಲ್ಲಿಸಿದ ಹೊಸ ಹೊಸ ಕಾರುಗಳು, ಬೇರೆ ಬೇರೆ ಸೈಜ್ ನಾಯಿಗಳು, ನಾಯಿಗಳ ಜೊತೆ ವಾಕಿಂಗ್ ಹೋಗ್ತಾ  ನಗು ಚೆಲ್ಲೋ ಚೆಲುವೆಯರು ಸಿಕ್ಕಿದರೇ ಹೊರತು ಮನೆ ಮಾತ್ರ ಸಿಕ್ಲೇ ಇಲ್ಲ. ಸರಿ ಪ್ರಾಜೆಕ್ಟು ಕುತ್ತಿಗೆಗೆ ಬರ್ತಾ ಇದೆ  ಇನ್ನು ಟ್ರೈನಿಗಳನ್ನು ನಂಬಿ ಪ್ರಯೋಜನವಿಲ್ಲ, ಸ್ಪೆಷಲಿಸ್ಟ್ ಗೆ ಹೇಳೋದೇ ವಾಸಿ ಅಂತ ಇರೋ ಬರೋ ಬ್ರೋಕರ್ ಗಳಿಗೆ ನಂಬರ್ ಕೊಟ್ಟು ಮನೆ ಹುಡುಕಲು ಹೇಳಿದಾಗ ಏನೇನು ಪಲಿತಾಂಶ ಬಂತು ಅನ್ನೋದರ ಬಗ್ಗೆ ಈ ಲೇಖನ .

ಶನಿವಾರ ಬೆಳಗ್ಗೆ  ಫೋನ್ ರಿಂಗ್ ಆಯಿತು, ಹೊರಗೆ  ಇನ್ನೂ ಕತ್ತಲೆ, ಟೈಮ್ ನೋಡಿದ್ರೆ 6.30.  ಯಾರೋ ಫ್ರೆಂಡ್ಸು ಕಳ್ ನನ್ ಮಕ್ಳು ಕಾಲ್ ಮಾಡಿರಬೇಕು ಅಂದ್ಕೊಂಡು ಪಿಕ್ ಮಾಡಿದರೆ ಅದು ಬ್ರೋಕರ್ ಕಾಲ್ . ಸಾರ್ ಒಂದು ಮನೆ ಇದೆ. ಬೇಗ ನೋಡೋಕೆ ಬನ್ನಿ. ಆಮೇಲೆ ಓನರ್ ಹೊರಟು ಹೋಗ್ತಾರೆ ಅ೦ದ. ಸರಿ ಓನರ್ ಒಳ್ಳೆ VIP ಇರಬೇಕು ಅಂದ್ಕೊಂಡೆ. ಇನ್ನು ಇದೇ ಮೂತೀಲಿ ಹೋದ್ರೆ ಯಾರೋ ಪೊರ್ಕಿ ಅಂದ್ಕೋತಾರೆ ಅಂತ ಸ್ನಾನ ಮಾಡಿ ಹೊರಟೆ. ಶನಿವಾರ ಇಷ್ಟು ಬೇಗ ಸ್ನಾನ ಮಾಡಿದ್ದು ಇತಿಹಾಸ. ಅಪರೂಪಕ್ಕೆ ಹುಡುಗಿಯರಿಗೆ ಕಾಳು ಹಾಕಕ್ಕೆ ಕೂಡ ಇಷ್ಟು ಬೇಗ ಎದ್ದು ರೆಡಿ ಆಗಿಲ್ಲ .ಸರಿ ಅಂತ ಹೋದರೆ 2ನೇ ಮಹಡಿಯಲ್ಲಿ ಮನೆ, ಸಕತ್ ಆಗಿದೆ, ಒಳ್ಳೆ ಏರಿಯಾ, ಪಾರ್ಕಿಂಗ್ ರೋಡ್ ಅಲ್ಲಿ ಆದ್ರೂ ಪರವಾಗಿಲ್ಲ.  ಇನ್ನೇನು ಫಿಕ್ಸ್ ಮಾಡೋಣ ಅಂತ ಯೋಚನೆ ಮಾಡ್ತಾ ಇರೋವಾಗಲೇ ಓನರ್ ಕಡೆಯಿಂದ ಬಂತು ಬ್ರಹ್ಮಾಸ್ತ್ರ. ಏನಪ್ಪಾ ಮದುವೆ ಆಗಿದೆಯಾ ಅಂತ. ಒಹ್ ಈ ಸಲ ಅದೃಷ್ಠ ನನ್ ಜೊತೆ ಇದೆ ಯಾಕೆ ಅಂದ್ರೆ ಮದುವೆ ಫಿಕ್ಸ್ ಆಗಿದೆಯಲ್ಲ. ಆಗಿದೆ ಸರ್ ಅಂತ ಫುಲ್  confidense ಅಲ್ಲಿ ಹೇಳಿದೆ. ಹೆಂಡತಿ ಎಲ್ಲಿ ಇರೋದು ಅಂತ ಕೇಳಿದ್ದಕ್ಕೆ ಸಾರ್ ಇನ್ನು ಆರು ತಿಂಗಳಲ್ಲಿ ಮದ್ವೆ ಸಾರ್ ಅಂದೆ. ಹಾಗಾದ್ರೆ ನೀವು ಒಂದು ಕೆಲಸ ಮಾಡಿ ಈಗಲೇ ಅಡ್ವಾನ್ಸ್ ಕೊಟ್ಟು ಬಿಡಿ. ಆಮೇಲೆ ಇವತ್ತಿಂದಲೇ ಈ ಮನೆಗೆ rent ಶುರು  ಮಾಡ್ಕೊಂಡು ಬಿಡಿ, ಮದುವೆ ಆಗೋವರೆಗೆ ಈಗ ಇರೋ ಮನೇಲೇ ಇರಿ,ಮದುವೆ ಆದ ಮೇಲೆ ಶಿಫ್ಟ್ ಮಾಡ್ಕೊಳ್ಳಿ ಯಾಕಂದ್ರೆ ಬ್ಯಾಚುಲರ್ ಗೆ ನಾವು ಮನೆ ಕೊಡೋದಿಲ್ಲ. !!!!!!!!! oh my god. "ನಿಮ್ಮಂತ ಮಹಾನುಭಾವರುಗಳು ಇದ್ರೂ ಕೂಡ ಕಾಲ ಕಾಲಕ್ಕೆ ಮಳೆ ಆಗ್ತಾ ಇದೆ ಅಂದ್ರೆ ಆ ದೇವ್ರು ಎಷ್ಟು ದಯಾಮಯಿ ಇರಬೇಕು , ನಿಮಗೆಲ್ಲ ನರಕದ ಮಹಾದ್ವಾರದಲ್ಲಿ ಬಿಕ್ಷೆ ಬೇಡೋ ಕೆಲಸ ಕಾಯಂ" ಅಂತ ಶಾಪ ಹಾಕ್ಕೊಂಡು ಮನೆಗೆ ಬಂದು ನಿದ್ದೆ ಮುಂದುವರಿಸಿದೆ.... 


ಮದ್ಯಾಹ್ನ 12. 30 ಅದೇನೋ ಮೀಟಿಂಗಲ್ಲಿ  ಕೂತಿರಬೇಕಾದ್ರೆ ಫೋನ್ ರಿಂಗಾಯಿಸಿತು.sadda haq ರಿಂಗ್ ಟೋನ್ ಬೇರೆ. ಎಲ್ರೂ ಒಮ್ಮೆ ಕಣ್ಣು ಕೆಕ್ಕರಿಸ್ಕೊಂಡು ನೋಡಿದ್ರು. ಮೀಟಿಂಗ್ ಇರ್ಬೇಕಾದ್ರೆ ಸೈಲೆಂಟ್ ಮೋಡ್ ಇಡಬೇಕು ಅನ್ನೋದು ರೂಲ್ಸ್, ಆದ್ರೆ ಬಡ್ಡಿಮಗಂದು ನೆನಪಾಗಲ್ವೆ...ಪಕ್ಕದಲ್ಲೇ ಕೂತ ಮಿತ್ರನೊಬ್ಬನ ಮುಖದಲ್ಲಿ ಸಂದೇಹದ ನೋಟ( "ಕಳ್ ನನ್  ಮಗ ಫೇಕ್ ಕಾಲ್ activate ಮಾಡಿ ಹೊರಗೆ ಹೋಗ್ತಾ ಇದಾನೆ" ಅಂತ ಇರಬಹುದೇನೋ).   ಹೊರಬಂದು ಕರೆ ಉತ್ತರಿಸಿದರೆ ಬ್ರೋಕರ್ ಮಹಾಶಯಂದು.  ಸಾರ್  ಒಂದು  ಸಕ್ಕತ್  ಮನೆ ಇದೆ. ಓನರ್ ಬೇರೆ ಕಡೆ ಇರೋದು, ತಿಂಗಳಿಗೊಮ್ಮೆ ಬರ್ತಾರೆ , ವಿಶಾಲವಾದ ಪಾರ್ಕಿಂಗ್ ಜಾಗ ಇದೆ, ನಿಮ್ ತರಾನೆ ಒಬ್ರು ಕಾಲ್ ಸೆಂಟರ್ ಉದ್ಯೋಗಿ 3 ವರ್ಷ ಇದ್ರು,ಅಂದ. ಪುಣ್ಯಾತ್ಮ ನಾನು ಕಾಲ್ ಸೆಂಟರ್ ಉದ್ಯೋಗಿ ಅಲ್ಲಪ್ಪ ಅಂದೆ. ಸರ್ ಮತ್ತೆ ದಿನ ಬೆಳಗ್ಗೆ ನಿಮ್ಮನ್ನ ಪಿಕ್ ಮಾಡಕ್ಕೆ ಗಾಡಿ ಬರತ್ತೆ ಅಲ್ವಾ ಅದ್ಕೆ ಹಾಗೆ ಅಂದ್ಕೊಂಡೆ ಅಂದ. ಓಹೋ ಗಾಡಿ ಬಂದವರೆಲ್ಲ ಕಾಲ್ ಸೆಂಟರ್ ಉದ್ಯೋಗಿಗಳು. ಒಳ್ಳೇ ಲಾಜಿಕ್ ಅಂದ್ಕೊಂಡೆ ಮನಸ್ಸಿನಲ್ಲಿ . ಎಷ್ಟು ಗಂಟೆಗೆ ಬರಲಪ್ಪ ಅಂದ್ರೆ ರಾತ್ರೆ ಒಂದು  9 ಗಂಟೆಗೆ ಬನ್ನಿ ಸಾರ್ ಅಂದ. ಬೆಂಗಳೂರಿಗರು ಸಂಜೆ 6 ರ ಮೇಲೆ ಮನೆ ತೋರಿಸೋದಿಲ್ಲ ಅಂತಾರೆ, ಅಂತದ್ರಲ್ಲಿ ಇದು ಏನಪ್ಪಾ ರಾತ್ರೆ ಮನೆ ತೋರಿಸ್ತಾರೆ ಮಾಲಕರು ಅಂದೆ.  ಇಲ್ಲಾ ಸಾರ್ ಸಕತ್ ಒಳ್ಳೆ ಜನ ,ಬೆಳಗ್ಗೆ ಧ್ಯಾನ ಮಾಡ್ತಾರೆ, ಸಂಜೆ ಯಾವ್ದೋ ಯೋಗ ಅಂತೆ ಅದ್ಕೆ ಲೇಟು ಅಂದ. ಓಹೋ ಒಳ್ಲ್ಲೇ ಜನ, ಪಾರ್ಕಿಂಗ್ ಜಾಗ ಬೇರೆ ಇದೆ, ಇನ್ನೇನು ಮನೆ ಚೆನಾಗಿಲ್ಲ ಅಂದ್ರೂನು ಅಡ್ಜಸ್ಟ್ ಮಾಡ್ಕೊಳ್ಳೋದು ಅಂತ ಮೈಂಡ್ ಫಿಕ್ಸ್ ಮಾಡ್ಕೊಂಡೆ. ಸರೀ ರಾತ್ರಿ ಊಟ ಮುಗಿಸ್ಕೊಂಡು ಬ್ರೋಕರ್ ಗೆ ಕಾಲ್ ಮಾಡಿದ್ರೆ ಇಲ್ಲೇ ಬಂದ್ ಬಿಡಿ ಸಾರ್ ಹೋಗೋಣ ಅಂದ. ಅಂತು ಮಹಾಶಯನ ಕರ್ಕೊಂಡು ಒಂದೈದು ಕಿಲೋಮೀಟರು ಹೋದ ಮೇಲೆ  ಸಾರ್ ಇಲ್ಲೇ ನಿಲ್ಲಿಸಿ ಬಿಡಿ ಅಂದ. ದೊಡ್ಡ 3 ಅಂತಸ್ತಿನ ಮನೆ. ಸಕತ್ ಆಗಿ ಇದೆ ಅಂತ ಆ ಕಡೆ ಹೆಜ್ಜೆ ಇದ್ರೆ, ಸಾರ್ ಮನೆ ಈ ಕಡೆ ಇರೋದು ಇಲ್ಲಿ ಬನ್ನಿ ಅನ್ನೋದೆ? ನೋಡಿದರೆ ಒಂದು ಸಾದಾರಣ ಮನೆ,ಹೊರಗಿನ ಗೋಡೆ ನೋಡಿದರೆ ಪೇಯಿಂಟ್ ನ ಮುಖ ನೋಡಿ ಏನಿಲ್ಲಾ ಅಂದ್ರು 10 ವರ್ಷ ಮೇಲೆ ಆಗಿದೆ. ಸಾರ್ ಓನರ್ ಹೊರಗಡೆ ಪೇಯಿಂಟ್ ಮಾಡಿಸೋದಿಲ್ಲ ಅದು ವೇಸ್ಟ್ ಅಲ್ವಾ ಸಾರ್ ಒಳಗಡೆ ನೋಡಿ ಮನೆ ಚೆನ್ನಾಗಿದೆ ಅಂದ. ಇಲ್ಲಿ ಪಾರ್ಕಿಂಗ್ ಎಲ್ಲಿದೆಯಪ್ಪ  ಅಂದ್ರೆ ಸಾರ್ ಮೊದ್ಲು ಮನೆ ನೋಡಿ ಆಮೇಲೆ ಪಾರ್ಕಿಂಗ್ ಜಾಗ ತೋರಿಸ್ತೇನೆ ಅಂದ. ಸರಿ ಒಳಗೆ ಹೋಗಿ ನೋಡಿದ್ರೆ ಅದು ಔಟ್ ಹೌಸ್ ಮನೆ. ಗಾಳಿ ಬೆಳಕು ಅನ್ನೋದು ಇಲ್ವೇ ಇಲ್ಲ.  ಮುಂಚೆ ಇದ್ದ ಕಾಲ್ ಸೆಂಟರ್ ಉದ್ಯೋಗಿ 3 ವರ್ಷ ಯಾಕೆ ಇದ್ದ ಅನ್ನೋದು ಈಗ ಗೊತ್ತಾಯಿ ತು. ಅವ್ರಿಗೆ ರಾತ್ರೆ ಕೆಲಸ ಹಗಲು ನಿದ್ದೆ, ಗಾಳಿ ಬೆಳಕು ಇಲ್ಲ ಅಂದ್ರೆ ಅವ್ರಿಗೆ ಫುಲ್ ಕುಶ್...ಬಾಡಿಗೆ ಎಷ್ಟಪ್ಪ ಅಂತ ಕೇಳಿದ್ರೆ   ಬೇರೆ ಅವ್ರಿಗೆ ಆದ್ರೆ 8 ಸಾವಿರ. ಆದ್ರೆ ಈ ಓನರ್ ಮಗ ನಿಮ್ ತರಾನೆ ಕೆಲಸ ಮಾಡೋದು ಅದ್ಕೆ ಒಂದು ಇನ್ನೂರು ಕಮ್ಮಿ ಕೊಡಿ ಅಂದ ಮಹಾನುಭಾವ. ಸರೀಪ್ಪ ಒಮ್ಮೆ ಪಾರ್ಕಿಂಗ್ ಜಾಗ ತೋರಿಸು ಏನು ಅಂತ ಹೇಳ್ತೇನೆ ಅಂದ್ರೆ ಪಾರ್ಟಿ ರೇಗಿ ಬಿಡೋದೇ?. ಆಗ್ಲಿಂದ ಪಾರ್ಕಿಂಗ್ ಜಾಗ ಅಂತ ತಲೆ ತಿನ್ತೀರಲ್ಲ ಅಲ್ಲಿ ನೋಡಿ ಆ ಪಕ್ಕದ ಖಾಲಿ ಸೈಟ್ ಇದೆ ಅಲ್ವಾ,ಅದೇ ಪಾರ್ಕಿಂಗ್ ಅಂತಾ ಇದ್ರೆ ಹೊಡಿಯೋದು ಒಂದೇ ಬಾಕಿ. ಏನ್ರಿ ನೀವು ಪಕ್ಕದ್ ಸೈಟ್ ತೋರಿಸಿ ಪಾರ್ಕಿಂಗ್ ಇದೆ ಅಂತೀರಾ ಅಂದ್ರೆ ಸಾರ್ ಮನೆ ಸಕತ್ ಡಿಮ್ಯಾಂಡ್ ಇದೆ ಬೇಕಾದರೆ ತಗೋಳಿ ಇಲ್ಲಾಂದ್ರೆ ಬಿಡಿ ಅನ್ನೊದೆ. ? ಇರು ಮಗನೆ ನಿಂಗೆ ಅಂತ ಸಿಟ್ಟಿನಲ್ಲಿ ಬ್ರೋಕರ್ ನ ಅಲ್ಲೇ ಬಿಟ್ಟು ಮನೆಗೆ  ಬರೋವಾಗ ಗಂಟೆ 11. ಅವ್ನು ಅವನ ಮನೆಗೆ ಹೋಗ್ಬೇಕು ಅಂದ್ರೆ ಏನಿಲ್ಲ ಅಂದ್ರು 2-3 ಕಿಲೋಮೀಟರು ನಡೀಬೇಕು, ಹೀಗಾದ್ರೂ  ಸೇಡು ತೀರಿಸ್ಕೊಂಡೆ ಅನ್ನೋ ಸಮಾದಾನ ಮನಸ್ಸಿನಲ್ಲಿ. 

ಇನ್ನು ಬರೋದು ಮೋಸ್ಟ್ ಇಂಟೆರೆಸ್ಟಿಂಗ್ ಪಾರ್ಟಿ. ನಿವೃತ್ತ ಪ್ರಾಂಶುಪಾಲರು. ಮನೆ ನೋಡ್ತಾ ಇರೋವಾಗ ಅವರ ಲೆಕ್ಚರ್ ಶುರು. ಪಾಪ ಅವರು ಪಾಠ ಮಾಡದೆ ಬಹಳ ದಿನಗಳಾಗಿರಬಹುದೇನೋ ಅನ್ನಿಸಿತು. ಸರಿ ಯಾಕೆ ಇವರಿಗೆ ಬೇಜಾರು ಮಾಡೋದು ಅಂತ ಸ್ವಲ್ಪ ಸಮಯ ಕೇಳಿಸ್ಕೊಂಡೆ. ಬೋರ್ ನೀರು ಇದೆ, ಆದ್ರೆ ನಿಮಗೆ ಕನೆಕ್ಷನ್ ಇಲ್ಲ. ಯಾಕೆ ಅಂದ್ರೆ ಬೋರ್ ಕನೆಕ್ಷನ್ ಕೊಟ್ರೆ ಕಾವೇರಿ ನೀರನ್ನು ಯಾರು ಬಳಸದೆ ಅದು ಹಾಳಾಗತ್ತೆ ಅಂದ್ರು. ಟಾಯ್ಲೆಟ್ ಅಲ್ಲಿ ಪೈಪ್ ಹಾಕಿಲ್ಲ. ಹೊರಗಡೆಯಿಂದ ನೀರು ತಗೊಂಡು ಹೋಗ್ಬೇಕು, ಯಾಕೆ ಅಂದ್ರೆ ಆಮೇಲೆ ಜನ ನೀರು ಜಾಸ್ತಿ ಬಳಸ್ತಾರೆ.  ಅಡಿಗೆ ಮನೇಲಿ ನೀರು ಬರೋದಿಲ್ಲ ಯಾಕೆ ಅಂದ್ರೆ ಅಲ್ಲಿ ನೀವು ಅದು ಇದು ಅಂತ  ತೊಳೆದು ಆಮೇಲೆ ಬ್ಲಾಕ್ ಆಗುತ್ತೆ ಸುಮ್ನೆ ನಮಗೆ ತಲೆನೊವು ಅನ್ನೋದೇ? ಇದ್ಯಾಕೋ ತಲೆ ನೋವು ಪಾರ್ಟಿ, ಸಹವಾಸ ಬೇಡಪ್ಪ ಅಂತನಿಸಿತು. ಯಾರಿಗೊತ್ತು ಆಮೇಲೆ ಈ  ಪಾರ್ಟಿ ಬೆಡ್ ರೂಮ್  ತೋರಿಸಿ ಇದು ಬೆಡ್ ರೂಮ್, ಆದ್ರೆ ಇಲ್ಲಿ ಮಲಗೋ ಹಾಗಿಲ್ಲ. ಯಾಕೆ ಅಂದ್ರೆ ನನಗೆ ಮಕ್ಕಳನ್ನು {ಮುಂದೆ ಆಗಬಹುದಾದ ಮಕ್ಕಳು ;-) }  ಕಂಡ್ರೆ  ಆಗೋದಿಲ್ಲ ಅನ್ನೋದಕ್ಕಿಂತ ಮೊದಲು ನಿಮ್ಮ ಮನೆ ನನಗೆ ಇಷ್ಟ ಆಗಿಲ್ಲ ಅಂತ ಹೇಳಿ ಬ್ರೋಕರ್ ಗೆ ಒಮ್ಮೆ ಗುರಾಯಿಸಿ ನನ್ನ ಬೈಕ್ ಹತ್ತಿದೆ...... 


ಅಂತು ಇಂತು ಬಹಳಷ್ಟು ಹುಡುಕಾಟ, ಪರದಾಟ, ಸುತ್ತಾಟ, ಓನರ್ ಜೊತೆ ಕಿತ್ತಾಟಗಳ ನಂತರ ಒಂದು ಸೂರು ಸಿಕ್ಕಿತು. ಸ್ನೇಹಿತನೊಬ್ಬನ ದಯೆಯಿಂದ ಬ್ರೋಕರ್ ಗೆ ಕೊಡೋ ಕಾಸು ಕೂಡ ಅರ್ಧದಷ್ಟು ಉಳಿಯಿತು. ಆ ಸ್ನೇಹಿತನಿಗೆ ಕೊಟ್ಟ ಪಾರ್ಟಿ ಕಾಸು ಉಳಿಸಿದ್ದಕ್ಕಿಂತ ಜಾಸ್ತಿನೇ ಆಯ್ತು ಅನ್ನೋದು ನನಗೆ ಮಾತ್ರ ಗೊತ್ತಿರೋ ವಿಷಯ. ಆದ್ರೆ ನಮ್ಮೋರಿಗೆ ಮಾಡಿದ ಖರ್ಚು ಯಾವತ್ತೂ ಬೇಸರ ತರಿಸೋದಿಲ್ಲ ಅಲ್ವಾ?
 3 ಅಂತಸ್ತಿನ ಮನೆ, ಅದರಲ್ಲಿ ನನ್ನದು 2 ನೆ ಅಂತಸ್ತು. ಗ್ರೌಂಡ್ ಫ್ಲೋರ್ ಬೇಕು ಅಂತಾ  ಇದ್ದ ನಾನು exercise ಆಗತ್ತೆ ಅಂತ ಒಪ್ಪಿಕೊಂಡೆ. ಇನ್ನು ಬೋರ್ ನೀರು ಬರಬೇಕಾದ ಎಲ್ಲ ಜಾಗಗಳಲ್ಲೂ ಬರುತ್ತೆ. ಕಾವೇರಿ ನೀರು ಕೂಡ ಬರುತ್ತೆ ಆದ್ರೆ ಅದು ಬರೋ ಜಾಗಕ್ಕೆ ನಾನು ಹೋಗ್ಬೇಕು ಅಷ್ಟೇ :-). (ನೀರು pressure ಕಡಿಮೆ, ಗ್ರೌಂಡ್ ಫ್ಲೋರ್ ಗೆ ಹೋಗಿ ನೀರು ತರಬೇಕು)  . ವಿಶಾಲವಾದ ಪಾರ್ಕಿಂಗ್ ಜಾಗ ಇದೆ, ಆದ್ರೆ ರೋಡ್ ಮೇಲೆ ಅಷ್ಟೇ. ಒಳ್ಳೆ ಪಕ್ಕದ ಮನೆಯವರು (ಯಾಕೆ ಅಂದ್ರೆ ಅವ್ರು ಮನೆ ಇಂದ ಹೊರಗೆ ಬರೋದಿಲ್ಲ, ಮಾತೂ ಆಡೋದಿಲ್ಲ). ...  ಅಂತೂ 7 ತಿಂಗಳ ಹುಡುಕಾಟದ ನಂತರ ಒಂದು ಸಾದಾರಣ ಮನೆ ನನ್ನ ಪಾಲಿಗೆ ಅರಮನೆಯಾಗಿ ಕಂಡಿದ್ದು ಮಾತ್ರ ಬಾಡಿಗೆ ಮನೆ ಅನ್ನೋ ಮಹಾಮಾಯೆಯ ಕೃಪೆಯೇ ಸರಿ...... 
                                                                                          --------ಶ್ರೀ:-)