Monday, October 30, 2017

ನೀರು.......2050

ನೀರು.......2050


ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಸುಮಾರು 8 ಗಂಟೆಯ ಆಸು ಪಾಸಿಗೆ ಒಂದು ಬಿಂದಿಗೆ ನೀರು ಕೊಡುತ್ತಾರೆ. ಅದು ಗುರುತಿನ ಚೀಟಿ ತೋರಿಸಿದ್ರೆ ಮಾತ್ರ. ಅಪ್ಪಿ ತಪ್ಪಿ ಅದನ್ನ ಮರೆತಿದ್ದರೆ ಅವತ್ತು ಹನಿ ನೀರು ಕೂಡ ಸಿಗೋದಿಲ್ಲ. ಕಿಟಕಿಯಿಂದ ನೋಡಿದರೆ ಪಕ್ಕದ ಮನೆ  ರಮೇಶ ಒಂದು ಬಿಂದಿಗೆ ನೀರಿನ ಜೊತೆ ಬರುತ್ತಿದ್ದಾನೆ. ನನ್ನನ್ನು ನೋಡಿದವನೇ ಕುಹಕ ನಗೆ ಬೀರಿದ. ಪ್ರತಿದಿನ ಇಬ್ರು ಜೊತೆಗೇನೆ ಹೋಗ್ತಾ ಇದ್ವಿ. ಅವನೇ ಬಂದು ನನ್ನ ಎಬ್ಬಿಸೋನು. ನಿನ್ನೆ ನನ್ನ ಹಿಂದೆ ನಿಂತಿದ್ದ, ನನ್ನ ಕೊಡ ತುಂಬೋವಷ್ಟರಲ್ಲಿ ಬರೋವಷ್ಟರಲ್ಲಿ ನೀರು ನಿಂತು ಹೋಯ್ತು. ಅವ್ನಿಗೆ ನೀರೇ  ಸಿಕ್ಕಿಲ್ಲ ಅದ್ಕೇ ಇವತ್ತು ಒಬ್ನೇ ಹೋಗಿದ್ದಾನೆ ಬಡ್ಡಿ ಮಗ. ಹಾಳಾಗಿ ಹೋಗ್ಲಿ ಇವತ್ತು ಬ್ಲಾಕ್ ಅಲ್ಲಿ ಒಂದು ಬಿಂದಿಗೆ ನೀರು ತಗೋಬೇಕು ಅಷ್ಟೇ . 

ಸರಿ ಹಲ್ಲು ಸ್ಯಾನಿಟೈಸ್ ಮಾಡೋಣ ಅಂತ ಮೌತ್  ಸ್ಯಾನಿಟೈಸರ್ ತೆಗೆದೆ. ನನ್ನ ಅಪ್ಪನ ಕಾಲದಲ್ಲಿ ಪೇಸ್ಟ್  ಅಂತೇನೋ ಬರುತ್ತಿತ್ತಂತೆ. ಜನರು ಬ್ರಷ್  ಅನ್ನೋದರ ಮೇಲೆ ಪೇಸ್ಟ್ ಅನ್ನೋದನ್ನು ಹಾಕಿ ಗಂಟೆಗಟ್ಟಲೆ ಹಲ್ಲನ್ನು ಉಜ್ಜುತ್ತಿದ್ದರಂತೆ. ಸರಿ ಸುಮಾರು 10-15 ನಿಮಿಷ ನೀರನ್ನು ಪೋಲು ಮಾಡುತ್ತಿದ್ದರಂತೆ. ಅದಕ್ಕೆ ಈಗ ನಮಗೆ ಈ ಗತಿ  ಬಂದಿರೋದು. ಈಗಂತೂ ನಾವು ಈ ಹಾಳು ಅಭ್ಯಾಸ ನಿಲ್ಲಿಸಿದ್ದೀವಿ. ಮೌತ್ ಸ್ಯಾನಿಟೈಸರ್ ಹಾಕಿ ಒಮ್ಮೆ ಬಾಯಿ ಮುಕ್ಕಳಿಸಿದರೆ ಮುಗಿದೋಯ್ತು ಒಂದು  ನಿಮಿಷಕ್ಕೆ ಕೆಲಸ ಮುಗೀತು.  ಸಾನಿಟೈಸರ್ ಬೆಲೆ  200 ರೂಪಾಯಿ ಮಾತ್ರ, ಆದ್ರೆ ಒಂದು ಲೀಟರ್ ನೀರಿನ ಬೆಲೆ ಅದರ ಇಪ್ಪತ್ತು ಪಟ್ಟು. ಸ್ನಾನಕ್ಕೆ ಕೂಡ ಅಷ್ಟೇ. ಮುಂಚೆ ಅದೇನೋ Shower  ಅಂತ ಇತ್ತಂತೆ. ಜನರು ಗಂಟೆಗಟ್ಟಲೆ ಅದರ ಕೆಳಗೆ ನಿಂತು ನೀರು ಪೋಲು ಮಾಡ್ತಾ ಇದ್ದರಂತೆ. You Tube ನಲ್ಲಿ ಆ ವೀಡಿಯೋಗಳನ್ನ ನೋಡಿದರೆ, ಆಗ ಒಬ್ಬರು ಸ್ನಾನ ಮಾಡಲು ಬಳಸ್ತಾ ಇದ್ದ ನೀರಿನಲ್ಲಿ ಈಗ 10-15 ಜನ ಸ್ನಾನ ಮಾಡಬಹುದಿತ್ತೇನೋ. ಈಗ ಅಂತೂ ನಾವು ವೇಪರೈಸರ್ ಟೆಕ್ನಾಲಜಿ ನ ಬಳಸ್ತೀವಿ. ಇದು ನೀರಿನ ಅತ್ಯಂತ ಸಣ್ಣ ಕಣಗಳನ್ನ ಮೈ ಮೇಲೆ ಸ್ಪ್ರೇ ಮಾಡುತ್ತೆ. 5 ನಿಮಿಷಕ್ಕಿಂತ ಜಾಸ್ತಿ ಹೊತ್ತು ಬಾತ್ ರೂಮಿನಲ್ಲಿ  ಇದ್ದರೆ ಅಲಾರಾಂ ಆಗುತ್ತೆ . ಅಪ್ಪಿ ತಪ್ಪಿ ವಾರಕ್ಕೆ ಎರಡಕ್ಕಿಂತ ಜಾಸ್ತಿ ಅಲಾರಾಂ  ಅದರೆ ಅದು ಕ್ರಿಮಿನಲ್ ಕೇಸ್. ನೀರಿನ ದುಂದು  ವೆಚ್ಚ ಮತ್ತು ಕೊಲೆ ಯತ್ನ ಎರಡಕ್ಕೂ ಈಗ ಒಂದೇ ತರದ ದಂಡನೆಯನ್ನು ಸರಕಾರ ಕಾಯಿದೆ ರೂಪದಲ್ಲಿ ತಂದಿದೆ. ಮುಂಚೆ ನೀರು ಸರಬರಾಜು ಮಾಡ್ತಾ ಇದ್ದ ಪೈಪ್ ಲೈನ್ ಗಳು ಈಗ ಅಡುಗೆ ಅನಿಲ ಪೂರೈಕೆಗೆ  ಬಳಸಲಾಗುತ್ತಿದೆ. 

ಮುಂಚೆ  ಕಂಪೆನಿಯ ಷೇರುಗಳನ್ನು ಅಲ್ಲಿ ಕೆಲಸ ಮಾಡೋರಿಗೆ ಕೊಡುತ್ತಿದ್ದರಂತೆ, ಈಗೇನಿದ್ರೂ ನಾವು ಸಂಬಳದ ಒಂದು ಭಾಗವನ್ನು ನೀರಿನಲ್ಲಿ ತಗೊಳುತ್ತೀವಿ. ಇದು ನಮಗೆ ಒಂತರ ಡಬಲ್ ಬೆನಿಫಿಟ್. ಯಾಕಂದ್ರೆ ನೀರಿನ  ಸಂಬಳಕ್ಕೆ  ಟ್ಯಾಕ್ಸ್ ಇರೋದಿಲ್ಲ. ಹಾಗು ಕಂಪೆನಿ ಕೊಡೋ ನೀರಿನ ದರ ಹೊರಗಡೆ ಮಾರ್ಕೆಟ್  ದರಕ್ಕೆ ಹೋಲಿಸಿದರೆ ತುಂಬಾನೇ ಕಮ್ಮಿ. ಅಂಟಾರ್ಟಿಕಾ ದಲ್ಲಿ ಈಗ bottling ಕಂಪನಿ ಶುರು ಮಾಡಿದ್ದಾರೆ. ಇಡೀ ಭೂಮಿಯಲ್ಲಿ ಯಥೇಚ್ಛ  ಶುದ್ಧ ನೀರು ದೊರೆಯುವ ಒಂದೇ ಒಂದು ಜಾಗ ಅಂದರೆ ಅದೊಂದೇ. ವಿಶ್ವದ ದೊಡ್ಡ ದೊಡ್ಡ ದೇಶಗಳಿಗೆ ಇಲ್ಲಿಂದ ನೀರನ್ನು ರಫ್ತು ಮಾಡ್ತಾರೆ. ಕರಾವಳಿ ತೀರದ ಪ್ರದೇಶಗಳಲ್ಲಿ ನೀರಿನ ಸ್ಥಿತಿ ಸ್ವಲ್ಪ ಪರವಾಗಿಲ್ಲ. ಅಲ್ಲಿ ಸಮುದ್ರದ ನೀರನ್ನು ಶುದ್ದೀಕರಿಸಿ ಕುಡಿಯುವ ನೀರಾಗಿ ಸರಬರಾಜು ಮಾಡ್ತಾರೆ. ಆದರೆ ಜನರ ದುರಾಸೆ ನೋಡಿ ಸರಕಾರ ಕೆಲವೇ ಕೆಲವು ಯೂನಿಟ್ ಗಳಿಗೆ ಪರವಾನಿಗೆ ನೀಡಿದೆ. ಅಂತರ್ಜಲವನ್ನು ಜನರು  ಖಾಲಿ ಮಾಡಿರೋ ರೀತಿ ನೋಡಿ ಸರಕಾರ ಪಾಠ ಕಲಿತಿದೆ.  ಆದರೂ ಅಕ್ರಮ ಶುದ್ದೀಕರಣ ಘಟಕಗಳು ತಲೆಯೆತ್ತಿ ನೀರಿನ ಮಾಫಿಯಾಗಳು ಬ್ರಹತ್ ಪ್ರಮಾಣದಲ್ಲಿ ಬೆಳೆದಿವೆ.  ಮುಂಚೆ ಇದ್ದ ಮರಳು ಮಾಫಿಯಾದ ಸಾವಿರ ಪಟ್ಟು ಈ ನೀರಿನ ಮಾಫಿಯಾ ಬೆಳೆದಿದೆ.

ಮಳೆ ಕೊಯ್ಲು ಈಗ ಕಡ್ಡಾಯ, ತಪ್ಪಿದರೆ ಅದು ಕ್ರಿಮಿನಲ್ ಅಪರಾಧ. ಎಲ್ಲ ಮನೆಗಳಲ್ಲಿ ನೀರು ಮರು  ಶುದ್ದ್ದೀಕರಣ ಘಟಕಗಳು ಇರಲೇಬೇಕು ಇಲ್ಲ ಅಂದ್ರೆ ಅವರಿಗೆ ಹತ್ತು ಪಟ್ಟು ತೆರಿಗೆ ಹಾಕ್ತಾರೆ,. ಅಂಗಡಿಗಳಲ್ಲಿ ನೀರಿನ ಬಾಟಲಿ ತಗೋಬೇಕು ಅಂದ್ರೆ ಆಧಾರ್ ಕಡ್ಡಾಯ. ಎಲ್ಲ ಗಣಕೀಕೃತ ಆಗಿರೋದರಿಂದ ಒಂದು ಆಧಾರ್ ನಂಬರ್ ಗೆ 250ml ಬಾಟಲಿ ಅಷ್ಟೇ ಸಿಗೋದು. ಬ್ಲಾಕ್ ಅಲ್ಲಿ ಅಂಗಡಿಯವರು ಆಗಾಗ ಯಾರದ್ದೋ ಆಧಾರ್ ಹೆಸರಿನಲ್ಲಿ ಗೋಲ್ ಮಾಲ್ ಮಾಡ್ತಾರೆ . ಸರಕಾರಕ್ಕೆ ಗೊತ್ತಾದ್ರೆ ಮಾತ್ರ ಅಂಗಡಿ ಮುಚ್ಚಿಸಿ  ಜೈಲ್ಗೆ ಹಾಕ್ತಾರೆ. ಚುನಾವಣೆಯಲ್ಲಿ ಈಗ ಹಣ ಹೆಂಡ ಯಾರು ಹಂಚುವವರಿಲ್ಲ, ಏನಿದ್ರೂ  ಬಾಟಲಿಗಟ್ಟಲೆ ನೀರು ಹಂಚುತ್ತಾರೆ ಅಷ್ಟೇ ಯಾಕಂದ್ರೆ ಅದಕ್ಕಿಂತ ಅಮೂಲ್ಯ ವಸ್ತು ಬೇರೆ ಏನು ಉಳಿದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀರಿದ್ದೆ ಕಾರುಬಾರು. ಒಂದು ಪಕ್ಷ ನಾವು ಪಾತಾಳದಿಂದ ನೀರು ತರಿಸಿಕೊಡ್ತೇವೆ ಅಂದರೆ ಮತ್ತೊಂದು ಪಕ್ಷದವರು ನಾವು ಅನ್ಯಗ್ರಹಗಳಿಂದ ಪೈಪ್ ಮುಖಾಂತರ ನೀರು ತರಿಸಿಕೊಡ್ತೇವೆ ಅಂತಾರೆ, ಆದರೆ ಪಾತಾಳದಲ್ಲಿ ಅಥವಾ ಅನ್ಯಗ್ರಹಗಳಲ್ಲಿ ನೀರು ಇದೆಯೇ ಅನ್ನೋದರ ಬಗ್ಗೆ ಅವರು ಯೋಚ್ನೆ ನೇ ಮಾಡಲ್ಲ. ಆಡಳಿತ ಸರಕಾರ ತಂದಿರೋ ನೀರು ಭಾಗ್ಯ ಅನ್ನೋ ಹೊಸ ಯೋಜನೆ ಸಾಕಷ್ಟು ಪ್ರಚಾರ ಪಡೆದಿದೆ. ಆದರೆ ಫಲಾನುಭವಿಗಳಿಗೆ ದೊರೆಯಬೇಕಾದ ನೀರಿನ ಬಾಟಲಿಗಳು ಮಾತ್ರ ಒಮ್ಮೊಮ್ಮೆ ದಾರಿ  ತಪ್ಪಿ ದಿನಸಿ ಅಂಗಡಿಗೆ ಹೋಗುತ್ತಿವೆ. ಅವಕ್ಕೆ ಸರಿಯಾದ ದಾರಿ ತೋರಿಸೋದು google map ಗು ದೊಡ್ಡ ಸವಾಲಾಗಿದೆ.

ಕಟ್ಟಿರೋ ಅಣೆಕಟ್ಟುಗಳನ್ನು ದೊಡ್ಡ ಕ್ರಿಕೆಟ್ ಗ್ರೌಂಡ್ ಆಗಿ ಪರಿವರ್ತಿಸಲಾಗಿದೆ. ಯಾಕಂದ್ರೆ ನದಿಯಲ್ಲಿ ನೀರು ಹರಿಯೋವಷ್ಟು ಮಳೆ ಬೀಳೋದೇ ಇಲ್ಲ. ಬಿದ್ದರು ಕೂಡಲೇ ಇಂಗಿ ಹೋಗುತ್ತೆ.  ಅಪ್ಪಿ ತಪ್ಪಿ ಮಳೆ  ಬಂದರೆ ನಾವು ಒಂದು ಹನಿಯು ಹಾಳಾಗದಂತೆ ಅದನ್ನು ಸಂಗ್ರಹಿಸಿ ಇಡುತ್ತೇವೆ. ಪ್ರಾಯಶ ಈ ಕೆಲಸ ನಮ್ಮಆ ಪೂರ್ವಜರು ಮಾಡಿದ್ದಾರೆ ನಮಗೆ ಈ ಗತಿ ಬರ್ತಾ ಇರಲಿಲ್ವೇನೋ. ಜಾಸ್ತಿ ನೀರು ಬಳಸುವ ಭತ್ತ, ಕಬ್ಬುಗಳನ್ನೂ ಸರಕಾರದ ಪರವಾನಿಗೆ ಇಲ್ಲದೆ ಬೆಳೆಯುವಂತಿಲ್ಲ. ನಮ್ಮ ಪೂರ್ವಜರು ಚಿನ್ನ ಬೆಳ್ಳಿ ಆಸ್ತಿ ಮನೆ ಅನ್ನೋದನ್ನು ಬಿಟ್ಟು ಈ ನೀರನ್ನು ಕಾಪಾಡಿದ್ದರೆ ಸಾಕಿತ್ತು, ಈ ಪೀಳಿಗೆಗೆ ಅದೇ ದೊಡ್ಡ ಆಸ್ತಿ ಆಗಿರೋದು. ಆದ್ರೆ ಕೆಟ್ಟ ಮೇಲೇ  ತಾನೇ ಬುದ್ದಿ ಬರೋದು. . ಕೋಕೋ ಕೋಲಾ ಪೆಪ್ಸಿ ಕಂಪೆನಿಗಳು ತಮ್ಮ ಕೋಲಾ ಗಳನ್ನು ನಿಲ್ಲಿಸಿ ಕೇವಲ ನೀರನ್ನು ಮಾತ್ರ ಮಾರಾಟ ಮಾಡ್ತಾ ಇದ್ದಾರೆ. ಅವರು ಸಮುದ್ರದ ನೀರಿಂದ ನೀರನ್ನು ಶುದ್ದೀಕರಿಸೋ ಪರ್ಮಿಟ್ ತಗೊಂಡಿದ್ದಾರೆ. ನೀರಿನ ಆಟಗಳನ್ನು ಒಳಗೊಂಡ Wonder La ಇತ್ಯಾದಿ Amusement ಪಾರ್ಕುಗಳು  ಈಗ ನೀರಿನ ಸಂರಕ್ಷಣೆಯ ವಿದಿ ವಿಧಾನಗಳನ್ನು ಸಂಗ್ರಹಿಸೋ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಮುಂಚೆ ಜನ ನೀರನ್ನು ಹೇಗೆ ಪೋಲು ಮಾಡ್ತಾ ಇದ್ರೂ ಅನ್ನೋದರ  ಸಾಕ್ಷ ಚಿತ್ರಗಳಿವೆ, ದುಮ್ಮಿಕ್ಕೋ ಜಲಪಾತ, ಉಕ್ಕಿ ಹರಿಯೋ ನದಿ, ಕಣ್ಣೆತ್ತಿ ನೋಡಿದಷ್ಟು ದೂರ ನೀರನ್ನು ತುಂಬಿಕೊಂಡ ಅಣೆಕಟ್ಟುಗಳ ಚಿತ್ರಗಳು ವೀಡಿಯೋಗಳು ಇಲ್ಲಿ ಲಭ್ಯ ಇವೆ. Amusement ಪಾರ್ಕುಗಳ ಗತವೈಭವದ ಚಿತ್ರಗಳು ಕೂಡ  ಇಲ್ಲಿವೆ.  ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಇವು ತುಂಬಾ ಅನುಕೂಲವಾಗಿವೆ.

ಒಮ್ಮೊಮ್ಮೆ ಅನಿಸುತ್ತೆ ಹಳೇ  ಮೂವೀಗಳಲ್ಲಿ ತೋರಿಸೋ ಹಾಗೆ ಜಲಪ್ರಳಯ ಆಗಿದ್ರೆ ಚೆನ್ನಾಗಿರೋದು.... ಈ ಜೀವಮಾನದಲ್ಲಿ ಮತ್ತೊಮ್ಮೆ ಹರಿಯೋ ನೀರನ್ನು ನೋಡುವ ಆಸೆ...  ಅದರಲ್ಲಿ ಆಡುವ ಆಸೆ... ಅದರಲ್ಲಿ ಮುಳುಗೇಳುವ  ಆಸೆ .... ಬದುಕಿದ್ದರೆ ಅದನ್ನು ಕೊನೆವರೆಗೂ ಉಳಿಸುವ ಆಸೆ  .......


---ಶ್ರೀ :-)














Monday, April 25, 2016

ದ್ವಂದ್ವ.....



ದ್ವಂದ್ವ.....


ಪಕ್ಕದ ಮನೆ ಕೊಟ್ಟಿಗೆಯಲ್ಲಿ ಯಾಕೋ ಕರುವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿ ತ್ತು . ಏನನ್ನೋ ನೋಡಿ ಅದು ಭಯ ಪಟ್ಟ ಹಾಗಿತ್ತು. ಅಷ್ಟರಲ್ಲಿ ಪಕ್ಕದ್ಮನೆ ಮಾದ ಓಡೋಡಿ ಗೌಡ್ರ ಮನೆಗೆ ಬಂದ. ಗೌಡ್ರೆ ಹುಲಿ ಮತ್ತೆ ಬಂದೈತೆ ಹಟ್ಟಿಗೆ, ಬೇಗ ಕೋವಿ ತಗೊಂಡು ಬನ್ನಿ ಅಂದ. ಗೋಡೆಯಲ್ಲಿ ನೇತು ಹಾಕಿದ್ದ ಕೋವಿ ಎತ್ತಿ ಸರ ಸರನೆ ಮಾದನ ಹಟ್ಟಿಗೆ ಹೊರಟರು ಗೌಡ್ರು. ಹಟ್ಟಿಯೊಳಗೆ ಇಣುಕಿ ನೋಡಿದರೆ ಹುಲಿ ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಎಳೆಯುತ್ತಾ ಇತ್ತು. ಕರುವನ್ನು ಕಟ್ಟಿ ಹಾಕಿದ್ದರಿಂದ ಅದನ್ನು ಎಳೆದುಕೊಂಡು ಹೋಗೋದು ಹುಲಿಗೆ ಸಾಧ್ಯವಾಗಿರಲಿಲ್ಲ.. ಕೋವಿ ಎತ್ತಿ ಹುಲಿಗೆ ಗುರಿ ಇಟ್ಟರು ಗೌಡ್ರು. ಡಂ ಡಂ ಎಂದು ಸಿಡಿಯಿತು ಗುಂಡು. ಮರುಕ್ಷಣ ಹುಲಿ ಅಲ್ಲಿಂದ ಹಟ್ಟಿ ಗೋಡೆ ಮೇಲೆ ನೆಗೆದು ಓಡಿ ಹೋಯಿತು. ಆದರೆ ಗೌಡ್ರು ಹೊಡೆದ ಒಂದು ಗುಂಡೂ ಕೂಡ ಹುಲಿಗೆ ತಾಗಿರಲಿಲ್ಲ. ಎರಡು ಗುಂಡುಗಳು ಗುರಿ ತಪ್ಪಿ ಗೋಡೆಗೆ ಹೊಡೆದಿದ್ದನ್ನು ಸ್ಪಷ್ಟವಾಗಿ ನೋಡಿದ್ದರು ಗೌಡರು. ಆದರೂ ಹುಲಿ ಓಡಿದ್ದು ಯಾಕೆ ಅಂತ ಗೌಡ್ರು ಯೋಚಿಸುತ್ತ ಇರುವಷ್ಟರಲ್ಲಿ ಗುಂಡಿನ ಸದ್ದು ಕೇಳಿದ ಮಾದ ಹಟ್ಟಿಯೊಳಗೆ ಬಂದ. ಹುಲಿ ಪರಾರಿಯಾಗಿತ್ತು. ಕರುವಿನ ಗಂಟಲಲ್ಲಿ ಹುಲಿಯ ಹಲ್ಲಿನ ಗುರುತು ಬಿಟ್ಟರೆ ಬೇರೆ ಏನು ಜಾಸ್ತಿ ಏಟಾಗಿರಲಿಲ್ಲ. ಕರುವಿನ ಗಂಟಲಿಂದ ಹರಿದ ನೆತ್ತರ ಬಿಂದುಗಳು ಹಟ್ಟಿಯೊಳಗೆ ಅಲ್ಲಲ್ಲಿ ಕಾಣುತ್ತಿತ್ತು.  ಅದನ್ನು ನೋಡಿದ ಮಾದ ಅಂತು ಗೌಡ್ರು ಹೊಡೆದ ಗುಂಡುಗಳು ಹುಲಿಗೆ ಸರಿಯಾಗೇ ನಾಟಿವೆ. ಇವತ್ತೋ ನಾಳೆನೋ ಹುಲಿ ಸಾಯೋದು ಗ್ಯಾರಂಟೀ ಅಂತ ಅಕ್ಕ ಪಕ್ಕದ ಮನೆಯವರಿಗೆಲ್ಲ ಹೇಳಿ ಬಿಟ್ಟ. ತಾನು ಹೊಡೆದ ಯಾವ ಗುಂಡೂ ಹುಲಿಗೆ ತಾಗಿಲ್ಲ ಅಂತ ಗೊತ್ತಿದ್ರು ಗೌಡ್ರು ಸುಮ್ನಿದ್ರು. ಬಿಟ್ಟಿ ಪ್ರಚಾರ ಯಾರಿಗೆ ಬೇಡ. ಅಪ್ಪಿ ತಪ್ಪಿ ಮುಂದೆ ಯಾವತ್ತಾದ್ರು ದಾಳಿ ಮಾಡಿದರೆ ಅಮೇಲೆ ನೋಡಿಕೊಳ್ಳೋಣ ಅಂತ ಸುಮ್ನಿದ್ರು ಗೌಡ್ರು. ಮಾರನೇ ದಿನ ಬೆಳಗಾಗೋದ್ರೊಳಗೆ ಗೌಡ್ರು ಹುಲಿ ಕೊಂದ ಸುದ್ದಿ ಊರಿಡೀ ಹರಡಿತು, ಗೌಡ್ರ ಶೌರ್ಯದ ಕತೆ ಊರ ಜನರ ಬಾಯಲ್ಲೆಲ್ಲ. ಗೌಡರಿಗೆ ಮಾತ್ರ ಗುಂಡು ತಗಲದೇ  ಹುಲಿ ಓಡಿದ್ಯಾಕೆ ಅನ್ನೋದು ಮಾತ್ರ ಅರ್ಥ ಆಗ್ಲೇ ಇಲ್ಲ.. ಇಷ್ಟಕ್ಕೂ ಗೌಡ್ರು ಅಬ್ಬಬ್ಬಾ ಅಂದ್ರೆ ಒಂದೆರಡು ಸಲ ಕೋವಿ ಚಲಾಯಿಸಿರಬಹುದೇನೋ. ಅವರಿಗದು ದೊರಕಿದ್ದು ಕೂಡ ಆಕಸ್ಮಿಕ. ನಕ್ಸಲ್ ನಿಗ್ರಹ ಪಡೆಯವರು ನಕ್ಸಲ್ ಗುಂಪೊಂದರ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸರಿಗೆ ದೊರಕಿದ್ದ ಕೋವಿ ಅದು. ಸರಕಾರಕ್ಕೆ ಲೆಕ್ಕ ಕೊಡದೆ ಪೋಲಿಸ್ ಪಡೆಯಲ್ಲಿದ್ದ ಸಂಬಂದಿಯೊಬ್ಬ ಅದನ್ನು ಇವರಿಗೆ ಕೊಟ್ಟಿದ್ದ. ಇವರೋ ನಮ್ಮ ತಾತ ಈ ಬಂದೂಕಿಂದ ಅದೆಷ್ಟೋ ಹುಲಿ ಜಿಂಕೆಗಳನ್ನು ಬೇಟೆ ಆಡಿದ್ದರು ಆ ಕಾಲದಲ್ಲಿ  ಅಂತ ಬಿಲ್ಡ್ ಅಪ್ ತಗೊಂಡಿದ್ರು. ವಾಸ್ತವದಲ್ಲಿ ಅಟ್ಟಿಸಿಕೊಂಡು ಬಂದರೆ  ಒಂದು ನಾಯನ್ನು ಓಡಿಸೋವಷ್ಟು ಎದೆಗಾರಿಕೆ ಇಲ್ದೇ ಇದ್ರೂ ಗೌಡ್ರು ಮುಂಚೆ ಬೇಟೆಗೆ ಹೋಗ್ತಾ ಇದ್ರಂತೆ, ಅದೆಷ್ಟೋ ಹುಲಿ ಚಿರತೆಗಳನ್ನು ಕೊಂದಿದ್ದರಂತೆ ಅಂತ ಗ್ರಾಮಸ್ತರ ಬಾಯಲ್ಲಿ ಫೇಮಸ್ ಆಗಿದ್ದರು. 


 ಮಾರನೇ ದಿನ ಅದೆಷ್ಟೋ ಜಾನುವಾರುಗಳನ್ನು ಬಲಿ ಪಡೆದು ಅಮಾಯಕ ಗ್ರಾಮಸ್ತರ ನಿದ್ದೆ ಹಾಳು ಮಾಡಿದ ಆ ವ್ಯಾಘ್ರ ವ  ಕೊಂದ ಗೌಡರಿಗೆ ಸನ್ಮಾನ ಮಾಡಬೇಕು ಅಂತ ಊರ ಯುವಕ ಸಂಘದಲ್ಲಿ ನಿರ್ದಾರವಾಯ್ತು. ಪಂಚಾಯ್ತಿ ಕಡೆಯಿಂದ ನಡೆಯೋ ಗ್ರಾಮಸಭೆಗೂ ಮುಂಚೆ ಸನ್ಮಾನ ಸಮಾರಂಭವನ್ನು ಊರ ಶಾಲೆಯಲ್ಲಿ ಇಟ್ಟುಕೊಂಡಿದ್ದಾರೆ ಹಾಗು ನೀವು ಬರಬೇಕು ಅಂತ ಗೌಡರಿಗೆ ಸಂದೇಶವು ಬಂತು. ಗೌಡರಿಗಂತು ಖುಶಿಯೋ ಖುಷಿ. ಮುಂದಿನ ಬಾರಿ ಚುನಾವಣೆಗೆ ಸ್ಪರ್ದಿಸಬೇಕು ಅಂದುಕೊಂಡಿದ್ದ ಅವರಿಗೆ ಇದೊಂದು ಸುವರ್ಣಾವಕಾಶವಾಗಿ ಕಂಡು ಕೂಡಲೇ ಒಪ್ಪಿ ಬಿಟ್ಟರು. 

ಆದರೆ ಸಂಜೆಯ ವೇಳೆಗೆ  ಮಾದ ತಂದ ಸುದ್ದಿ ಗೌಡ್ರ ನೆಮ್ಮದಿಯನ್ನೇ ಹಾಳು ಮಾಡಿತ್ತು. ಘಾಟಿಯ ಬಳಿಯಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿಂದ ಕೊಂಚ ದೂರದಲ್ಲಿ ಹುಲಿಯೊಂದು ಸತ್ತಿದೆ. ಅದರ ಮೈಮೇಲೆ ಗುಂಡಿನ ಏಟುಗಳಿವೆ. ಅದು ನೀವು ಗುಂಡು ಹೊಡೆದ ಹುಲಿನೇ, ಸಂಶಯವೇ ಇಲ್ಲ. ನಾನು ಈಗ ತಾನೇ ನೋಡಿ ಬಂದೆ ಅಂದಿದ್ದ ಮಾದ. ಈಗ ಗೌಡ್ರ ಮನಸ್ಸು ಗೊಂದಲದ ಗೂಡಾಗಿತ್ತು. ನನ್ನ ಕೋವಿಯ ಗುಂಡು ಹುಲಿಗೆ ತಾಗೆ ಇಲ್ಲ ಇನ್ನು ಸಾಯೊದು ಹೇಗೆ? ಬಹುಶ ಆ ಹುಲಿನೇ ಬೇರೆ ಈ ಹುಲಿನೇ ಬೇರೆ. ಆದರೂ  ಗುಂಡೇ ತಾಗದೆ ಹುಲಿ ಹಟ್ಟಿಯಿಂದ ಓಡಿದ್ದಾದರು ಯಾಕೆ? ಇಲ್ಲಿ ಬರೋ ಮುಂಚೆನೇ ಏನಾದರು ಅದಕ್ಕೆ ಗುಂಡು ತಗುಲಿತ್ತೋ ಏನೋ . ಪ್ರಾಯಶ ಅದಕ್ಕೆ ಇರಬಹುದು ಅದಕ್ಕೆ ಕರುವನ್ನು ಎಳೆದು ಕೊಂಡು ಹೋಗೋಕ್ಕೆ ಸಾಧ್ಯವಾಗಿಲ್ಲ. ಅದಕ್ಕೆಮತ್ತೆ ನಾನು ಗುಂಡು ಹಾರಿಸಿದಾಗ ಗುಂಡಿನ ಶಬ್ದ ಕೇಳಿ ಭಯಪಟ್ಟು ಓಡಿರಬಹುದು. ಈಗ ಅರಣ್ಯ ಇಲಾಖೆಯ ಅಧಿಕಾರಿಗಳೇನಾದ್ರು ಹುಲಿಯ ಸಾವಿನ ತನಿಖೆ ಆರಂಬಿಸಿದರೆ ನನಗೆ ಆಪತ್ತು. ನಮ್ಮ ಗೌಡರೇ ಹುಲೀನ ಕೊಂದಿದ್ದು ಅಂತ ಹೆಮ್ಮೆಯಿಂದ ಗ್ರಾಮಸ್ತರು ಹೇಳಿಕೊಳ್ಳುತ್ತಾರೆ. ಕಾನೂನಿನಲ್ಲಿ ನರಬಕ್ಷಕ ಹುಲಿಯನ್ನು ಕೊಲ್ಲಬಹುದು ಅದೂ ಕೂಡ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾತ್ರ. ಆದರೆ ನಮ್ಮ ಊರಿನಲ್ಲಿ ಕಾಣಿಸಿಕೊಂಡ ಹುಲಿ ಅಪ್ಪಿ ತಪ್ಪಿಯೂ ಗ್ರಾಮಸ್ತರ ಮೇಲೆ ಹಲ್ಲೆ ಮಾಡಿರಲಿಲ್ಲ. ಅದಕ್ಕೆಗ್ರಾಮಸ್ತರು ಪದೇ  ಪದೇ ಹುಲಿಯ ಕಾಟದ ಬಗ್ಗೆ  ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಅಪ್ಪಿ ತಪ್ಪಿ ಅರಣ್ಯಾಧಿಕಾರಿಗಳ ಕೈಗೆನಾದ್ರು ನನ್ನ ಹೆಸರು ಸಿಕ್ಕಿಹಾಕಿಕೊಂಡರೆ ಆ ದೇವರೇ ಗತಿ. ವರ್ಷಗಟ್ಟಲೆ ಕೋರ್ಟು ಕಚೇರಿ ಸಹವಾಸ ಖಚಿತ. ಅದೂ ಕೂಡ ನಾನು ಮಾಡದೇ ಇರೋ ತಪ್ಪಿಗೋಸ್ಕರ. ಹಾಗಂತ ನಾನು ಹುಲೀನ ಹೊಡೆದಿಲ್ಲ, ನಾನು ಹೊಡೆದ ಗುಂಡು ಹುಲಿಗೆ ತಾಕಿಲ್ಲ ಅಂದ್ರೆ ಗ್ರಾಮಸ್ತರು ನನ್ನನ್ನು ಕೀಳಾಗಿ ಕಾಣಬಹುದು. ಇವನೊಬ್ಬ ಹೇಡಿ ಸುಳ್ಳುಗಾರ ಅಂತಾನು ಅಂದುಕೊಳ್ಳಬಹುದು. ಇಷ್ಟು ವರ್ಷ ಕಾಯ್ದುಕೊಂಡ ಮಾನ ಮರ್ಯಾದೆ ಎಲ್ಲ ಹೋಗುತ್ತೆ. ಚುನಾವಣೆಯಲ್ಲಿ  ಇವರ ಓಟು  ಪಡೆದು ಗೆಲ್ಲೋದು ಕನಸಿನ ಮಾತೇ ಸರಿ.  ಗೌರವ, ಸನ್ಮಾನ ರಾಜಕೀಯ ಅವಕಾಶ ಒಂದು ಕಡೆ, ಕೋರ್ಟು ಕಚೇರಿ ಇನ್ನೊಂದೆಡೆ. ತಕ್ಕಡಿಯಲ್ಲಿ ತೂಗೋದು ಕಷ್ಟವಾಯ್ತು ಗೌಡರಿಗೆ.  ಅದಕ್ಕೆ ಮನೆಯ ಜಗಲಿಯಲ್ಲಿ ಶತ ಪಥ ತಿರುಗಾಡ್ತಾ ಇದ್ದರು. 
ಅಪ್ಪಿ ತಪ್ಪಿ ಏನಾದ್ರು ಕೋರ್ಟು ಕಚೇರಿ ಅಂತ ಬಂದ್ರೆ ಇನ್ನು ಒಳ್ಳೇದೆ ಆಯ್ತು ಸಹಾನುಭೂತಿ ಜಾಸ್ತಿ ಆಗಿ ಇನ್ನು ಒಂದಷ್ಟು ಓಟು ಗಳು ಜಾಸ್ತಿನೇ ಬೀಳ್ತಾವೆ ಅಂದುಕೊಂಡ ಗೌಡ್ರ ಮುಖದಲ್ಲಿ ಮುಗುಳ್ನಗೆ ಬಂತು. ಹಾಗೆ ಜಗಲಿಯಿಂದ ಒಳನಡೆದ ಗೌಡರು ಹಾಸಿಗೆಗೊರಗಿದರು. ಯೋಚನೆ ಮಾಡಿ ಸುಸ್ತಾಗಿದ್ದ  ಗೌಡ್ರನ್ನು ನಿದ್ರಾದೇವಿ ಆವರಿಸಿಕೊಂಡಳು.  ಗೌಡರ ಕನಸಲ್ಲಿ ಹುಲಿಯೊಂದು ಬಂದು ಗಹ ಗಹಿಸಿ  ನಕ್ಕಂತಾಯ್ತು, ಅದರ ಮೂತಿ ಮಾತ್ರ ಮಾದನ ಹಟ್ಟಿಯಲ್ಲಿ ಕಂಡಿದ್ದ ಹುಲಿಯನ್ನೇ ಹೋಲುತ್ತಿತ್ತು !!!!!!!!!!!!!!!   







Wednesday, January 27, 2016

ಒಳ್ಳೆಯತನ ...ಕೆಟ್ಟತನದ ನಡುವೆ

ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ  ಅಂದ್ರೆ? ನಾವಿರೋ ಸನ್ನಿವೇಷಗಳಿಗನುಗುಣವಾಗಿ ಒಳ್ಳೆಯದು ಕೆಟ್ಟದು ಅನ್ನೋದು ಬದಲಾಗುತ್ತಿರುತ್ತವೆ.  ಯಾವಾಗಲೂ ನಮ್ಮ ಮೂಗಿನ ನೇರಕ್ಕೆ ಒಳ್ಳೆಯತನ ಇರುತ್ತೆ ಅನ್ನೋದು ಮಾತ್ರ  ವಾಸ್ತವ. ಇಲ್ಲಿವೆ ಕೆಲ ಸನ್ನಿವೇಷಗಳು....  


ಒಳ್ಳೆಯತನ ...ಕೆಟ್ಟತನದ ನಡುವೆ 
ಹಾಳಾದ್ದು ಅಲಾರಾಂ ಕೈ ಕೊಡ್ತು ಹೊಡಿಲೇ ಇಲ್ಲ ಇವತ್ತು, ಎಚ್ರಾನೇ ಆಗಿಲ್ಲ  ಅಂತ ಲೇಟಾಗಿ ಎದ್ದು ಬಡ ಬಡಾಯಿಸೋದು ಈ ಮಹಾನಗರದಲ್ಲಿ ಸರ್ವೇ ಸಾಮಾನ್ಯ. (ವರ್ಷಕ್ಕೊಮ್ಮೆ ನಾದ್ರೂ ಶೆಲ್ ಬದಲಾಯಿಸದಿದ್ರೆ ಕೈ ಕೊಡದೆ ಇನ್ನೇನು ಮಾಡತ್ತೆ ಅದು ಪಾಪ, ಅದ್ಕೆ ಕಾಲು ಅನ್ನೋದು ಇದ್ದಿದ್ರೆ ಜಾಡ್ಸಿ ಒದೀತಿತ್ತೋ ಏನೋ).  ಅಂತು ಇಂತೂ ಎದ್ದು ಬೆಳಗ್ಗಿನ ಕಾರ್ಯಕ್ರಮ ಎಲ್ಲ ಮುಗ್ಸಿ ರೆಡಿ ಆಗಿ ಬಸ್ ಸ್ಟ್ಯಾಂಡ್ ಗೆ ಓಡಿ  ಹೋಗ್ತೀರಾ. ಮಾಮೂಲಿ ಟೈಮ್ ಗಿಂತ ಜಸ್ಟ್ 5 ನಿಮಿಷ ಲೇಟು ಅಷ್ಟೇ. ಬಸ್ ಹೊರಟಿರತ್ತೆ ಸ್ಟ್ಯಾಂಡ್ ಇಂದ, ನೀವು ಕೈ ತೋರಿಸ್ತೀರ. ನನ್ನ ವಿಶ್ಲೇಷಣೆ ಇಲ್ಲಿ ಶುರು. ಬಸ್ ಡ್ರೈವರ್ ಬಸ್ ನಿಲ್ಸಿದ್ರೆ ಅವ್ನು ನಿಮ್ ಮನಸಿಗೆ ಒಳ್ಳೆಯವನು ಅನಿಸ್ತಾನೆ. ಆದ್ರೆ ಬಸ್ ಒಳಗೆ ಕೂತ ಉಳಿದ ಎಲ್ಲ ಜನರಿಗೆ ಅವ್ನ ಮೇಲೆ ಸಿಟ್ಟು, ಏನಪ್ಪಾ ಲೇಟಾಯ್ತು ನೀನು ನೋಡಿದ್ರೆ  ಎಲ್ಲ ಕಡೇ ನಿಲ್ಲಿಸ್ತ ಇದ್ದೀಯ ಅಂತ ಬೈಗುಳು ಸ್ಟಾರ್ಟ್.  ಅಕಸ್ಮಾತ್ ಅವ್ನು ನಿಲ್ಸಿಲ್ಲ ಅಂದ್ರೆ ಡ್ರೈವರ್ ನಿಮ್ಮ ಪಾಲಿಗೆ ಕೆಟ್ಟವನು ಅನ್ಸತ್ತೆ. ದಿನ ಇದೆ ಬಸ್ ಅಲ್ಲಿ ಬರ್ತೀನಿ ಅಂತ ಗೊತ್ತಿದ್ರು ನಿಲ್ಸಿಲ್ಲ ಹಾಗೆ ಹೋದ ಅಂತ ಬೈಕೊತಿರ. ಅದೇ ಬಸ್ ಒಳಗೆ ಇರೋ ಜನಕ್ಕೆ ಡ್ರೈವರ್ ಸರಿಯಾದ ಸಮಯಕ್ಕೆ ಅವರವರ ಜಾಗಕ್ಕೆ ತಲುಪಿಸ್ತಾನೆ ಅಂತ ಒಳ್ಳೆ ಮನುಷ್ಯನಾಗಿ ಬಿಡ್ತಾನೆ. ಕೆಲವೇ ನಿಮಿಷಗಳಲ್ಲಿ ಒಳ್ಳೇದು ಕೆಟ್ಟದು ಅನ್ನೋದು ಗಾಳೀಲಿ ತೇಲೋ ಎಲೆ ತರ ಚಂಚಲ ಆಗಿಬಿಡತ್ತೆ.   ಒಳ್ಳೆತನ ಹಾಗು ಕೆಟ್ಟತನ ಅನ್ನೋದನ್ನು ಡ್ರೈವರ್ ನ ಕಾಲ ಕೆಳಗೆ  ಬಂದಿಯಾಗಿರೋ ಅಕ್ಷಿಲೇಟರ್ ಹಾಗು ಬ್ರೇಕುಗಳು  ನಿರ್ದರಿಸೋದು ಮಾತ್ರ ವಿಪರ್ಯಾಸ


ಬಾನುವಾರ .... ಹೊಸ ಸಿನೆಮಾ ಒಂದು ಬಂದಿದೆ ...ನಮ್ಮ ಮೆಚ್ಚಿನ ಹೀರೋ. ಮೊದಲ  ದಿನ ಮೊದಲ ಷೋ ನೋಡಬೇಕು ಅನ್ನೋ ಆಸೆ. ಶನಿವಾರಾನೆ ನಾಳೆ ಬೆಳಗ್ಗೆ  ಬೇಗ ಎದ್ದು ಸಿನೆಮಾಗೆ ಹೋಗಬೇಕು ಅಂತ ಡಿಸೈಡ್ ಮಾಡಿರ್ತೀರ .. ಆದರೆ sunday sickness ಎಲ್ಲಿ ಬಿಡಬೇಕು, ಅದಕ್ಕೆ ಏಳೋದು ಲೇಟ್ ..... ಸರಿ ಬುಕ್ ಮೈ ಶೋ ದ ಲ್ಲಿ ಬುಕ್ ಮಾಡೋಣ ಅಂತ ನೋಡಿದರೆ ಮೊಬೈಲ್ ಅಲ್ಲಿ ನೆಟ್ ವರ್ಕ್ ಸಮಸ್ಯೆ. ಸರಿ ಥಿಯೇಟರ್ ನಲ್ಲಿನೇ ಟಿಕೆಟ್ ತಗೊಳ್ಳೋಣ ಅಂತ ಬೇಗ ರೆಡಿ ಯಾಗಿ ಹೋಗಿ ನೋಡಿದರೆ ಅಲ್ಲಿ ದೊಡ್ಡ ಸರದಿ ಸಾಲು... ಪರಿಚಿಅತ ಮುಖಗಳು ಯಾವುದಾದರು ಇದೆಯಾ ಅಂತ ಒಮ್ಮೆ ಕಣ್ಣು ಹಾಯಿಸಿ ಅಲ್ಲೇ ಸರದಿಯಲ್ಲಿ ನಿಂತಿರೋ ಪಾಪ ಪ್ರಾಣಿಗೆ ಒಂದು ಸ್ಮೈಲ್ ಕೊಟ್ಟು ಸಾರ್ ಒಂದು ಟಿಕೆಟ್ ತಗೋತೀರ ಅಂತ ಕೇಳ್ತೀರಾ ... ಇಲ್ಲಿ ಸರಿ ತಪ್ಪು ಅನ್ನೋದು ಬೇಡ. ಆ ಮನುಷ್ಯ ನಿಮಗೂ ಸೇರಿಸಿ ಟಿಕೆಟ್ ತಗೊಂಡರೆ ಅವ್ನು ನಿಮ್ಮ ಪಾಲಿಗೆ ತುಂಬಾ ಒಳ್ಳೆಯವನು. ಆದರೆ ಆದೇ ಸರದಿ ಸಾಲಿನಲ್ಲಿ ನಿಂತಿರೋ ಕೊನೆಯ ಮನುಷ್ಯನ ಪಾಲಿಗೆ ನೀವಿಬ್ರು ಉಗ್ರಗಾಮಿಗಳ ತರ ಅನ್ನಿಸೋದಂತು ಖಚಿತ. ಅವ್ನು ಟಿಕೆಟ್ ತಗೊಂಡಿಲ್ಲ ಅಂದ್ರೆ ನಿಮ್ಮ ಪಾಲಿಗೆ ಅವ್ನು ಕೆಟ್ಟವನು. ಆದರೆ ಹಿಂದಿರೋ ಜನರಿಗೆ ಅವ್ನು ಒಳ್ಳೆಯವನು. ಒಂದು ಗಂಟೆಯಿಂದ ಲೈನ್ ಅಲ್ಲಿ ನಿಂತಿದೀವಿ ಈಗ ಬಂದು ನಕ್ರ ಮಾಡ್ತಾ ಇದಾನೆ ಒಳ್ಳೆದಾಯ್ತು ಟಿಕೆಟ್ ಸಿಕ್ಕಿಲ್ಲ ಈ ಮೂತಿಗೆ ಅಂತ . 100 ರುಪಾಯಿಯ ಒಂದು ಟಿಕೆಟ್ ಗೆ ಒಳ್ಳೆತನ ಕೆಟ್ಟತನ ದ ಮದ್ಯೆ ಒಂದು ರೇಖೆ ಎಳೆಯೋ ಚಾನ್ಸ್ ಇಲ್ಲಿ..
ಇಲ್ಲೇ ಇನ್ನೊಂದು ಸನ್ನಿವೇಶ.... ಸುದೀಪ್ ಅಥವಾ ದರ್ಶನ್ ಅವರ ಚಿತ್ರ ಅಂದುಕೊಳ್ಳೋಣ. ಅಪರೂಪಕ್ಕೆ ಎಂಬಂತೆ ಹೆಂಡತಿ ಈ ಚಿತ್ರ ನೋಡಲೇಬೇಕು ಅಂತ ಹಠ ಹಿಡಿದಿದ್ದಾಳೆ. ತರಾತುರಿಯಲ್ಲಿ ಹೊರಟು ಬರೋವಷ್ಟರಲ್ಲಿ  ಚಿತ್ರ ಮಂದಿರದಲ್ಲಿ ಸಿಕ್ಕಾಪಟ್ಟೆ ಜನ. ಜೊತೆ ಹೆಂಡತಿ ಬೇರೆ ಇದಾಳೆ, ಟಿಕೆಟ್ ಸಿಕ್ಕಿಲ್ಲ ಅಂದ್ರೆ ಮನೇಲಿ ಮಹಾಯುದ್ದ  ನಡೆಯೋದು ಖಂಡಿತ. ಅಲ್ಲೇ ಕಣ್ಣು ಹಾಯಿಸಿದರೆ ಸಂದಿಯಲ್ಲೊಬ್ಬ ಬ್ಲಾಕ್ ಟಿಕೆಟ್ ಮಾರೋದು ಕಾಣಿಸುತ್ತೆ. ಬೇರೆ ಸಮಯದಲ್ಲಿ ಆಗಿದ್ರೆ ಈ ಬ್ಲಾಕ್ ಟಿಕೆಟ್  ಮಾರೋ ನನ್ ಮಕ್ಳನ್ನು ಜೈಲ್ ಗೆ ಹಾಕ್ಬೇಕು ಅಂತ ಹೇಳ್ತಾ ಇದ್ರೂ ಇವತ್ತು ಮಾತ್ರ ಅವ್ನು ನಿಮ್ ಪಾಲಿಗೆ ದೇವರೇ ಸರಿ. ದುಪ್ಪಟ್ಟು ಹಣ ತೆತ್ತು ಚಿತ್ರಮಂದಿರದೊಳಗೆ ಹೆಜ್ಜೆ ಹಾಕ್ತೀರಿ. ಈಗ ತನ್ನ ,ಮನದನ್ನೆಯನ್ನು ಪುಸಲಾಯಿಸಿ ಹೇಗೋ ದುಡ್ಡು ಹೊಂದಿಸಿ ಟಿಕೆಟ್ ತಗೊಳೋಕೆ ಕ್ಯೂ ಅಲ್ಲಿ ನಿಂತಿರೋ ಚಿಗುರುಮೀಸೆಯ ಹುಡುಗನ ಪಾಡು. ಬಿಸಿಲಿನಲ್ಲಿ ನಿಂತಿದ್ದಾನೆ, ನೂಕುನುಗ್ಗಲು ಬೇರೆ , ತನ್ನ ಸರದಿ ಇನ್ನೇನು ಬರಬೇಕು ಅಷ್ಟರಲ್ಲಿ ಟಿಕೆಟ್ ಸೋಲ್ಡ್ ಔಟ್ . ಈಗ ಬ್ಲಾಕ್ ಟಿಕೆಟ್ ಮಾರುವವನು ಅವನ ಪಾಲಿಗೆ ವಿಲ್ಲನ್. ಬ್ಲಾಕ್ ಟಿಕೆಟ್ ಖರೀದಿಸಿದ ನೀವಂತೂ ಅವನ ಪಾಲಿಗೆ ಹತ್ತು ತಲೆಯ ರಾವಣನಂತೆ ಕಂಡರೂ ಆಶ್ಚರ್ಯವಿಲ್ಲ ....ಏನಂತೀರಿ?

ಶ್ರೀ :-)


Sunday, August 2, 2015

ಜೋಕರ್ ......

ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆಲ ದಿನಗಳ ಹಿಂದೆ ನಡೆದ ಯಕ್ಷಗಾನದ ಬಗೆಗಿನ ಒಂದು ಕಾರ್ಯಕ್ರಮದಲ್ಲಿ ಸ್ನೇಹಿತನೊಬ್ಬ ಹೇಳಿದ ಘಟನೆಯಿಂದ ಪ್ರೇರಿತ ಈ ಲೇಖನ, ಜೊತೆಗೆ ಸ್ವಲ್ಪ ಕಲ್ಪನೆ ... ಕಥೆಯ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ.

                                           

                                             ಜೋಕರ್ 

ಹೊರಗೆ ಮಳೆ ದೋ ಎಂದು ಸುರಿಯುತ್ತಿದೆ. ಮಳೆಗಾಲ ಅಂದ್ರೆ ನನ್ನಂತ ಯಕ್ಷಗಾನ ಪಾತ್ರದಾರಿಗಳಿಗೆ ರಜಾ ದಿನಗಳು. ರಜೆ ಅಲ್ಲ ಒಂತರ ಸಜೆ ಅಂದ್ರು ತಪ್ಪೇನು ಇಲ್ಲ. ಈ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಅಂತ ಒಂದೆರಡು ಹರಕೆಯ ಯಕ್ಷಗಾನ ಬಿಟ್ಟರೆ ನಮಗೆ ಅಸಹನೀಯ ರಜೆ. ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರದರ್ಶನ ಕೊಟ್ಟು ಹಗಲಲ್ಲಿ ನಿದ್ರಿಸಿದ ನಮಗೆ ಈಗ ಸ್ವಲ್ಪ ಕಷ್ಟದ ಹೊತ್ತು. ಹಗಲು ದುಡಿಬೇಕು ರಾತ್ರೆ ನೆಮ್ಮದಿಯ ನಿದ್ರೆ ಮಾಡಬೇಕು, ಇದು ಜಗದ ನಿಯಮ. ಆದರೆ ಯಕ್ಷಗಾನಕ್ಕೆ ಇದು ಅನ್ವಯಿಸುವುದಿಲ್ಲ. ಜ್ವರದಿಂದ ಬಳಲಿ ಬೆಂಡಾಗಿರೋ ಹೆಂಡತಿ ಮೂಲೆಯಲ್ಲಿ ಮಲಗಿದ್ದಾಳೆ. ಕೈಯಿಟ್ಟರೆ ಸುಟ್ಟು ಹೋಗುವುದೇನೋ ಅನ್ನೋವಷ್ಟು ಜ್ವರ. ಯಜಮಾನರು ಇವತ್ತು ಒಂದು ಬಯಲಾಟ ಇದೆ ಬಾ ಮಾರಾಯ ಅಂತ ಹೇಳಿ ಹೋಗಿದ್ದಾರೆ. ಇವಳನ್ನು ಬಿಟ್ಟು ಹೇಗೆ ಹೋಗ್ಲಿ ನಾನು. ನಾನಿಲ್ಲದೆ ನಡೆಯದೇನೋ ಅನ್ನೋ ಪರಿಸ್ತಿತಿ ಏನೂ ಇಲ್ಲ ಆದ್ರೆ ನಾನಿಲ್ಲದೆ ಜನ ನಗಲಾರರು ಅನ್ನೋದು ಮಾತ್ರ ಸತ್ಯ ಯಾಕಂದ್ರೆ ನಾನು ಜನರ ಬಾಯಲ್ಲಿ ವಿಧೂಷಕ ಅಥವಾ ಜೋಕರ್. ಆದರೆ ಇವಳ ಬಾಡಿದ ಮುಖವನ್ನು ನೆನೆಸಿಕೊಂಡು ನಾನು ನಗಿಸುವುದು ಹೇಗೆ. ಆದರೆ ಕಾಣದ ನನ್ನ ನೋವಿನಲ್ಲಿ ಜನ ನಗು ಕಾಣುತ್ತಾರೆ ಅನ್ನೋದು ಮಾತ್ರ ಸತ್ಯ. ನನಗೆ ಸಹ ಪಾತ್ರದಾರಿ ಒದ್ದರೆ ಅಥವ ವಿಚಿತ್ರವಾಗಿ ನಡೆಯುತ್ತಾ ನಾನು ಬಿದ್ದರೆ ಜನರ ಕರತಾಡನ ಮುಗಿಲು ಮುಟ್ಟುತ್ತೆ. ನನ್ನ ತೊದಲು ನುಡಿಗೆ ಮಾತ್ರ ಜನರ ಕರತಾಡನ. ನಾನು ರಂಗಸ್ಥಳದಲ್ಲಿ ಅಪ್ಪಿ ತಪ್ಪಿ ಏನಾದರು ಒಳ್ಳೆ ಯ ನಾಲ್ಕು ಸಾಲು ಹೇಳಿದರೆ ಜನರಿಂದ ನೀರಸ ಪ್ರತಿಕ್ರಿಯೆ. ಯಾಕಂದ್ರೆ ನಾನು ನಾನಾಗಿದ್ದರೆ ಅಲ್ಲಿ ಅದು ನಾನಲ್ಲ.  ಜನರು ಚಹಕ್ಕೋ ಇಲ್ಲ ಬಿಸಿ ವಡೆ ತಿನ್ನಲೋ ಎದ್ದು ಹೋದರೆ ಆ ಬ್ಲಾಂಕ್ ಸ್ಪಾಟ್ ತುಂಬೋಕೆ ನಾನು ಬೇಕು. ಆದರೆ ಸ್ಪಾಟ್ ಅಲ್ಲಿ ಕಥಾನಾಯಕ ಬಂದ ಮೇಲೆ ನಾನು ತೆರೆಯ ಮೂಲೆಯಲ್ಲಿ ಏನೇನೋ ಹಾವ ಭಾವ ತೋರಿಸುತ್ತ ನಿಲ್ಲಬೇಕು. ವಿಪರ್ಯಾಸ..,..


ಕೈಲಿ ಒಂದು ಹರಿದ ಬ್ಯಾಗ್ ಹಿಡಿದು ಯಕ್ಷಗಾನ ಮೇಳದವರೊಡನೆ ಊರೂರು ಸುತ್ತುತ್ತ ಇದ್ದವ ನಾನು. ಅದೇನು ಕಂಡು ನನ್ನ ಮದುವೆ ಆದಳೋ ಗೊತ್ತಿಲ್ಲ. ಆದರೆ ತೆರೆಯ ಮೇಲಿನ ನನ್ನ ಮಾತಿಗೆ ಹಾವಭಾವಕ್ಕೆ ಇಡೀ ಊರು ನಕ್ಕರು ಇವಳನ್ನು ನಗಿಸೋದು ಇದುವರೆಗೂ ಸಾದ್ಯವಾಗಿಲ್ಲ. ನೀನು ನನ್ನ ಅಭಿನಯ, ಮಾತು ಕೇಳಿ ಯಾಕೆ ನಗೋದಿಲ್ಲ ಅಂತ ಕೇಳಿದ್ರೆ ನಿಮ್ಮ ಮಾತಿನ ಹಿಂದಿನ ನೋವು ನನಗೆ ಮಾತ್ರ ಗೊತ್ತು.  ನಿಮಗೆ ಯಾರೋ ಒದ್ದು ನೀವು ಅಲ್ಲಿ ಬಿದ್ದರೆ ಸಭೆ ನಗುತ್ತದೆ. ನಿಮ್ಮ ಮುಖದಲ್ಲಿ ನೀವು ತೋರಿಕೆಯ ನೋವನ್ನು ವಿಚಿತ್ರವಾಗಿ ಬಿಂಬಿಸಿ ನಗಿಸ್ತೀರ. ಆದರೆ ನಿಮಗೆ ನಿಜವಾಗಿಯೂ ನೋವಾಗಿರಬುಹುದೇನೋ ಅನ್ನೋ ಭಯವನ್ನು ಮನಸ್ಸಿನೊಳಗಿಟ್ಟು ನಾನು ಹೇಗೆ ನಗಲಿ  ಅಂದಳು ನಗುತ್ತ. ನೀನು ನನ್ನ ಯಕ್ಷಗಾನ ನೋಡೋಕೆ ಬರಬೇಡ ಕಣೆ ಅಂದುಬಿಟ್ಟೆ ಅವತ್ತು. ಯಾಕೆ ಅಂದಳು?. ಹೆಂಡತಿಯನ್ನೇ ನಗಿಸಲಾಗದ ಈ ಪ್ರಾಣಿ ನಮ್ಮನ್ನೇನು ನಗಿಸಿಯಾನು ಅಂತ ಲೋಕ ಕೇಳಿದರೆ ನನ್ನಲ್ಲಿ ಉತ್ತರವಿಲ್ಲ ಅದಕ್ಕೆ ಅಂದಿದ್ದೆ. ಇದಾದ ಮೇಲೆ ಒಮ್ಮೆನೂ ಆಕೆ ಬಂದಿಲ್ಲ...  


ಮಳೆಗಾಲದಲ್ಲಿ ಯಕ್ಷಗಾನ ನಡೆಯೋದೇ ಕಮ್ಮಿ .ಈಗ ಯಕ್ಷಗಾನ ನೋಡೋರ ಸಂಖ್ಯೆನೂ  ಅಷ್ಟಕಷ್ಟೇ. ಏನೋ ಅಲ್ಲಿ ಇಲ್ಲಿ ಅಂತ ಕೆಲ ಯಜಮಾನರುಗಳ ಕೃಪೆಯಿಂದ ಯಕ್ಷಗಾನ ಮಂಡಳಿಗಳು ಇನ್ನೂ ಉಳಿದುಕೊಂಡಿವೆ. ಕಸುಬಾಗಿರೋದ್ರಿ೦ದ 5 ಜನ ಇದ್ದರೂ ಅಥವಾ 5೦೦ ಇದ್ದರೂ ನಾವು ನಮ್ಮ ಕೆಲಸ ಮಾಡಬೇಕು. ಇದರ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗೇನೆ ಆ ವಿಘ್ನೇಶ್ವರನನ್ನು ವಂದಿಸಿ ಬಣ್ಣ ಹಾಕಿ ಅಭಿನಯಿದಾಗ ಸಿಗೋ ತೃಪ್ತಿನೂ ಅವರ್ಣನೀಯ. ವ್ಯವಸಾಯದ ಕೆಲಸಗಳೆಲ್ಲ ಮುಗಿದಿದ್ದವು.  ಅಪರೂಪಕ್ಕೆ ಎಂಬಂತೆ ಮಳೆಯೂ ಬಿಟ್ಟಿತ್ತು. ಅದಕ್ಕೇ  ಏನೋ ಜನರು ಜಾಸ್ತೀನೇ ಇದ್ದರು.


ಯಕ್ಷಗಾನ ಆರಂಭವಾಯ್ತು. ಭಾಗವತರು ತಮ್ಮ ಕಂಠ ಸಿರಿಯಿಂದ ಜನರನ್ನು ಹಿಡಿದಿಟ್ಟಿದ್ದಾರೆ. ಅವರ ಗಾನದ ಪ್ರತಿ ಏರಿಳಿತಕ್ಕೂ ಕರತಾಡನ. ಇಂದಿನ ಪ್ರಸಂಗ ಕೀಚಕ ವಧೆ. ಮೇಲಿರೋ ಆ ಸೂತ್ರದಾರ ಕೀಚಕನನ್ನು ದುರುಳ ಖಳನಾಯಕನನ್ನಾಗಿ ತೋರಿಸಿದರೆ ನಮ್ಮ ಸೂತ್ರದಾರರು ಇಂದು ಅವನನ್ನು ಕಥಾ ನಾಯಕನಿಗೆ ಸರಿ ಸಮಾನವೆನ್ನಿಸೋ ರೀತಿ ವೈಭವೀಕರಿಸಿದ್ದಾರೆ. ಇದೆ ಕಲೆಯ ಗಮ್ಮತ್ತು. ಕಥೆಯ ಪಾತ್ರಗಳೆಲ್ಲ ಕಥೆಗಾರನ ಕೈಲಿ ಬಂಧಿ. ಆದರು ಕೊನೆ ಮಾತ್ರ ಅದೇ ...ಕೀಚಕನ ಪರ್ಯಾವಸಾನ. ಕೀಚಕನ ರಂಗಪ್ರವೇಶ ಆಯಿತು, ಜೊತೆಗೆ ನಾನು. ಕೀಚಕನೋ ಅಜಾನುಭಾಹು. ಹಾವಭಾವಗಳಿಂದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಭಾಗವತರು ತನ್ಮಯರಾಗಿ ಭಾಗವತಿಕೆಯಲ್ಲಿ ತಮ್ಮ ಏರಿಳಿತ ತೋರಿಸುತ್ತಿದ್ದರೆ ತಾನೇನು ಕಮ್ಮಿ ಎಂದು ಇವನು ಸುತ್ತು ಹಾಕುತ್ತಿದ್ದಾನೆ. ಜನರ ಕಣ್ಣಿಗೆ ರಾಗ, ತಾಳ, ನೃತ್ಯ, ಹಾವಭಾವ ಗಳ ರಸದೌತಣ. ಅಲ್ಲೇ ಬದಿಯಲ್ಲಿ ನಿಂತ ನಾನು ಸುತ್ತು ಹಾಕಲು ಪ್ರಯತ್ನಿಸಿ ಬಿದ್ದೆ. ಸುತ್ತು ಹಾಕಲು ಬರೋದಿಲ್ಲ ಅಂತೇನು ಇಲ್ಲ. ಇವನಿಗೆ ಸರಿಸಮಾನವಾಗಿ ಅಥವಾ ಇನ್ನೊಂದು ಸುತ್ತು ಜಾಸ್ತಿ ನಾನು ಸುತ್ತಬಲ್ಲೆ ಆದರೆ ನಾನಿಲ್ಲಿರೋದು ವಿಧೂಷಕನಾಗಿ ಮಾತ್ರ. ನಾನು ಸುತ್ತು ಹಾಕಿದರೆ ಜನ ಚಪ್ಪಾಳೆ ಹೊಡೆಯೋದಿಲ್ಲ, ಬಿದ್ದರೆ ಮಾತ್ರ ಚಪ್ಪಾಳೆ!!! ಯಕ್ಷಗಾನ ಮುಂದುವರಿಯುತ್ತಿದೆ. ಪಾಂಡವರು ವಿರಾಟ ರಾಜನಲ್ಲಿ ಆಶ್ರಯಪಡೆದಿದ್ದಾಯ್ತು, ಭೀಮ ಬಾಣಸಿಗನಾಗಿದ್ದು ಅಯ್ತು. ಅರ್ಜುನ ಬೃಹನ್ನಳೆ ಯಾಗಿದ್ದು ಆಯ್ತು. ದ್ರೌಪದಿಯು ಮಹಾರಾಣಿಯ ಸಹಾಯಕಿ ಆಗಿ ಸೇರಿಕೊಂಡಿದ್ದಾಯ್ತು. ಕೀಚಕನ ಮಾತಿಗೆ ನಾನು ವಿಚಿತ್ರ ಹಾವ ಭಾವಗಳಿಂದ ತಮಾಷೆಯಾಗಿ ಉತ್ತರಿಸುತ್ತಿದ್ದರೆ  ಸಭಿಕರು ನಗೆಯ ಕಡಲಲ್ಲಿ ಮುಳುಗಿದ್ದರು. ನೆರೆದಿದ್ದ ಸಭೆಯ ಮೇಲೆ ಹಾಗೆ ಕಣ್ಣು ಹಾಯಿಸುತ್ತಿದ್ದಾಗ ಪರಿಚಿತ ಮುಖವೊಂದನ್ನು ನೋಡಿ ಕಣ್ಣು ಅಲ್ಲಿಂದ ಕದಲದಾಯ್ತು. ಅರೇ ಇವಳು ಇಲ್ಲಿ ಯಾಕೆ ಬಂದಳು? ಅದೂ ನಗುತ್ತಿದ್ದಾಳೆ, ಇಷ್ಟು ವರ್ಷಗಳಲ್ಲಿ ಮೊದಲ ಭಾರಿ ನನ್ನ ಅಭಿನಯ ನೋಡಿ ನಗುತ್ತಿದ್ದಾಳೆ. ಕಡೆಗೂ ನಾನು ಇವಳನ್ನು ನನ್ನ ಅಭಿನಯದಿಂದ ನಗಿಸುವಲ್ಲಿ ಸಫಲನಾಗಿದ್ದೇನೆ. ಆದರೆ ಎದ್ದೇಳಲಾಗದಷ್ಟು ಅನಾರೋಗ್ಯವಿದ್ದರೂ ಯಾಕೆ ಬಂದಳು? ಯೋಚನೆಯಲ್ಲಿ ಮುಳುಗಿದ್ದವನ ಬೆನ್ನಿಗೊಂದು ಅನಿರೀಕ್ಷಿತ ಒದೆ. ರಂಗಸ್ಥಳದಲ್ಲಿದ್ದೂ ಕಳೆದು ಹೋಗಿದ್ದ ನನ್ನನ್ನು ಒಂದು ಒದೆಯಿಂದ ಕೀಚಕ ಪಾತ್ರದಾರಿ ವಾಪಸು ಕರೆ ತಂದಿದ್ದ. ಒದೆಗೆ ಜೋಲಿ ತಪ್ಪಿ ಬಿದ್ದೆ,  ಎದ್ದು ನಕ್ಕೆ. ಇದು ಕಥೆಯಲ್ಲಿನ ಸನ್ನಿವೇಷವೆಂದು ಜನ ನಕ್ಕರು. ಕಥೆ ಮುಂದುವರಿಯಿತು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಬೇಕೆಂದು ಹೋರಟ. ನಾನು ಪರಸ್ತ್ರೀಯ ಮೇಲೆ ಕಣ್ಣು ಹಾಕಿದ ನಿನ್ನ ಅಂತ್ಯ ಹತ್ತಿರ ಬಂದ ಹಾಗಿದೆ ನಿನ್ನ ಸಹವಾಸವೇ ಬೇಡ ಮಾರಾಯ ಅಂತ ಎದ್ದು ಬಿದ್ದು ಓಡಿದೆ. ಜನ ಮತ್ತೆ ನಕ್ಕರು. ಇಲ್ಲಿಗೆ ನನ್ನ ಪಾತ್ರ ಮುಗಿದಿತ್ತು. 


ರಂಗಸ್ಥಳದಿಂದ ಸರಿದವನೇ ವೇಷ ಕಳಚೋವಷ್ಟು ಕೂಡ ವ್ಯವದಾನವಿಲ್ಲದೆ ಮೊದಲು ನನ್ನಾಕೆಯನ್ನು ಮಾತನಾಡಿಸಿ ಬರುತ್ತೇನೆಂದು ಸಭೆಯತ್ತ ನಡೆದೆ. ಎಲ್ಲರೂ ಯಕ್ಷಗಾನದಲ್ಲಿ ಲೀನರಾಗಿದ್ದರು. ಕಡೆ ಸಾಲಿನಲ್ಲಿ ಕೂತಿದ್ದ ನನ್ನಾಕೆ ಮಾತ್ರ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ.  ಹತ್ತಿರ ಹೋದಂತೆ ಆಕೆಯ ಮುಖದಲ್ಲಿ ಒಂದು ಪ್ರಶ್ನೆಯ ಛಾಯೆ. ಜ್ವರ ಏನಾದರೂ ಕಡಿಮೆ ಆಗಿದೆಯೇ ನೋಡೋಣ ಅಂತ ಆಕೆಯ ಕೆನ್ನೆ ಸವರಲು ಹೋದೆ . ಮರುಕ್ಷಣ ಪಟ್ ಅಂತ ಕೆನ್ನೆಗೆ ಯಾರೋ ಭಾರಿಸಿದ ಹಾಗಾಯ್ತು .. ನನ್ನಾಕೆಯ ಬಗ್ಗೆ ಯೋಚನೆ ಮಾಡ್ತಾ ಇದ್ದ ನನ್ನ ಕಣ್ಣಿಗೆ ಆ ಸುಸಂಸ್ಕೃತ ಹೆಣ್ಣುಮಗಳು ನನ್ನ ಹೆಂಡತಿಯಂತೆ ತೋರಿದ್ದಳು. ಛೇ...  ಎಂಥಾ ತಪ್ಪಾಗಿ ಹೋಯ್ತು, ನನ್ನ ವೃತ್ತಿಗೆ ಅಪಮಾನವಾಗಿ ಹೋಯ್ತು ಅಂತ ಕಣ್ಣಂಚಿನಲಿ ನೀರ ಧಾರೆ. ಅಷ್ಟರಲ್ಲಿ ಹೇಯ್ ಇವ್ರು ಜೋಕರ್ ಮಾರಾಯ್ತಿ, ಸುಮ್ನೆ ನಿನ್ನೆಡೆಗೆ ಬಂದಂತೆ ನಟಿಸ್ತಾ ಇದ್ರು ಅನ್ಸುತ್ತೆ. ಇದು ಅವರ ಕಥೆಯ ಭಾಗ ಇರಬೇಕು, ಯಾಕೆ ಅವರಿಗೆ ಹೊಡೆದೆ? ನೋಡು ಈಗ ಕಣ್ಣಲ್ಲಿ ನೀರು ಬಂದ ಹಾಗೆ ನಟಿಸ್ತಾ ಇದ್ದಾರೆ ..... ಕ್ಷಮಿಸಿ ಸರ್  ಅಂದ್ರು ಯಾರೋ ಪುಣ್ಯಾತ್ಮರು. ನಾನು ಮತ್ತೆ ನಕ್ಕೆ. ಕಣ್ಣಲ್ಲಿ ನೀರು ಬರ್ತಾನೆ ಇತ್ತು. ಇದು ನಟನೆಯ ಕಣ್ಣೇರು ಅಲ್ಲ ಅಂತ ಇವರಿಗೆ ಹೇಳೋರ್ಯಾರು?  ನಾನು ಯಾಕೆ ನಗಿಸ್ತೀನಿ ಅಂತ ಇವರಿಗೆ ಹೇಳೋರ್ಯಾರು? ಆ ನಗೆ ಹಿಂದೆ ಇರೋ ನೋವು ತಿಳಿದವರ್ಯಾರು? ಕಥೆಯ ನಿರೂಪಣೆಯಲ್ಲಿಲ್ಲದ  ಈ ಸನ್ನಿವೇಷವನ್ನು ವಿವರಿಸೋರ್ಯಾರು?


ವಿಚಿತ್ರ ವೇಷಭೂಷಣ, ತಪ್ಪಿತಸ್ಥನ ನಿಲುವು, ಕಣ್ಣಲ್ಲಿ ನೀರು, ಮುಖದಲ್ಲಿ ನಗು, ನನ್ನನ್ನೇ ದಿಟ್ಟಿಸುತ್ತಿರೋ ನೂರಾರು ಕಣ್ಣುಗಳು .... ವಿಧಿಯ ನೈಜ ಜೀವನದ  ಕಥಾ ಪ್ರಸಂಗವೊಂದರಲ್ಲಿ ನಿಜವಾದ ಜೋಕರ್ ನಾನಾಗಿದ್ದೆ.

---ಶ್ರೀ:-)
"ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ "


Sunday, July 19, 2015

Simply Complicated

ತಾರೀಕು ಹದಿನೈದು, ತಿಂಗಳ ಮದ್ಯಂತರ... ಕಂಪನಿ ಕೊಟ್ಟ ಸಂಬಳ ಖಾಲಿ... ಬ್ಯಾಂಕ್ ಪ್ರತಿ ತಿಂಗಳೂ ಕೊಡೋ ಸಾಲ (ಕ್ರೆಡಿಟ್ ಕಾರ್ಡ್) ನ ಮಿತಿಯು (ಕ್ರೆಡಿಟ್ ಲಿಮಿಟ್)  ಸರಿ ಸುಮಾರು ಮಿತಿ ಮೀರಿತ್ತು.... ತಲೆ ಕೆಟ್ಟು ಹೋದ ಹಾಗೆ ಅನ್ನಿಸಿ ಮಾಲ್ ಗೆ ಒಂದು ರೌಂಡ್ ಹಾಕಿಕೊಂಡು ಬರೋಣ ಅಂತ ಹೊರಟೆ. ವಾಪಸ್ಸು ಬಂದಾಗ ಸುಮಾರು ಒಂದು ಮೀಟರ್ ಉದ್ದದ ಬಿಲ್ಲು,  ಕೈ ತುಂಬಾ ಸಾಮಾನು, ತಲೇಲಿ ಮೂಡಿದ್ದು ಈ ಲೇಖನ...... 

Simply Complicated..... 

ಮನೆಗೆ ರೇಶನ್ ಎಲ್ಲರಿಗೂ ಬೇಕು. ಆದ್ರೆ ಮನೆ ಪಕ್ಕದಲ್ಲಿ ಇರೋ ಪ್ರಾವಿಶನ್ ಅಂಗಡೀಲಿ ತಗೊಳ್ಳೋದಕ್ಕಿಂತ AC ಮಾಲ್ ಅಲ್ಲಿ ತಗೊಂಡ್ರೆ  ನಮ್ಮ ಘನತೆ ಹೆಚ್ಚುತ್ತೆ, ಡಿಸ್ಕೌಂಟ್ ಸಿಗುತ್ತೆ  ಅಂದ್ಕೋತೀವಿ. ಅಲ್ಲಿ ಹೋದ್ರೆ ನಮಗೆ ಬೇಕಿದ್ದುದಕಿಂತ ಬೇಡದೆ ಇರೋದೇ ಜಾಸ್ತಿ. ಸರಿ ಒಳಗೆ ಹೋಗಿ ಒಂದು ರೌಂಡು ಹಾಕಿ ಬರೋವಷ್ಟರಲ್ಲಿ ಒಂದೋ ನಮ್ಮ ಕೈಲಿರೋ ಕಾಸು ಖಾಲಿ ಆಗಬೇಕು,ಇಲ್ಲ ಅವರು ಕೊಡೋ ತಳ್ಳೋ ಗಾಡಿ ತುಂಬಿರಬೇಕು. ಒಂದು ಕೆಜಿ ತಗೊಳ್ಳೋ ಬದಲು 2 kg  ತಗೊಂಡ್ರೆ ಏನೋ ಫ್ರೀ ಸಿಗುತ್ತೆ  ಅಂತ ತಗೋತೀವಿ. ಆ ಫ್ರೀ ಸಿಗೋ ವಸ್ತು ಏನಾದ್ರೂ ಪರವಾಗಿಲ್ಲ ಆದರೂ ತಗೋತೀವಿ. 500 ಕ್ಕಿಂತ ಜಾಸ್ತಿ ಬಿಲ್ ಆದ್ರೆ ಪಾರ್ಕಿಂಗ್ ಫ್ರೀ, ಅದ್ಕೆ ಏನೇನೋ ತಗೊಂಡು 500 ಕ್ಕೆ ಸರಿದೂಗಿಸ್ತೀವಿ. ಹೀಗೆ ಹೆಚ್ಚಿಗೆ ತಗೊಂಡ ವಸ್ತುಗಳು ಹಾಳಾಗೋದೆ ಜಾಸ್ತಿ. ಆದ್ರೆ who cares ..... ಸರಿ ಶಾಪ್ಪಿಂಗ್ ಮಾಡಿ ಸುಸ್ತಾಗಿದೆ ಅಂತ ಮಾಲ್ ಪಕ್ಕ ಇರೋ ಜ್ಯೂಸು ಸೆಂಟರಿನಲ್ಲಿ  ಜ್ಯೂಸು ತಗೊಂಡು ಕುಡಿದು ಖುಷಿ ಪಡ್ತೀವಿ. ಮಾಲ್ ಪಕ್ಕ ಜ್ಯೂಸ್ ಗೆ ರೇಟು ಡಬಲ್ ಅನ್ನೋದನ್ನು ಮರೀತೀವಿ. ಕಾರ್ ಪೆಟ್ರೋಲ್ ಚಾರ್ಜ್ ವೇಸ್ಟು , ಪಾರ್ಕಿಂಗ್ ಕಾಸು ವೇಸ್ಟು, ತಿಂಡಿ ತೀರ್ಥಗಳಿಗೆ ಹೆಚ್ಚಿಗೆ ಹಣ ಕೊಟ್ಟಿದ್ದು ವೇಸ್ಟು, ಫ್ರೀ ಸಿಕ್ಕಿರೋ ವಸ್ತುಗಳು ಒಂತರಾ ವೇಸ್ಟೇನೆ. ಒಟ್ಟಿನಲ್ಲಿ ಮಾಲ್ ಅಲ್ಲಿ ಸಿಗೋ 2-10% ಡಿಸ್ಕೌಂಟ್ ಗೆ ಅಥವಾ ಉಪಯೋಗಕ್ಕೆ ಬರದೇ  ಇರೋ ಫ್ರೀ ವಸ್ತುಗಳಿಗೆ ಮಾರು ಹೋಗಿ ಬಕ್ರ ಆಗ್ತೀವಿ...  ಆಗ್ತಾನೆ ಇರ್ತೀವಿ.


ದೊಡ್ಡ ಮನೆ ಬೇಕು ಅನ್ನೋದು ಎಲ್ಲರ ಆಸೆ... ದೊಡ್ಡ ಮನೆಗೆ ಶಿಫ್ಟ್ ಆದ ಮೇಲೆ ಮನೆ ತುಂಬಾ ಖಾಲಿ ಖಾಲಿ ಅಂತ ಅನ್ನಿಸೋಕೆ ಶುರು ಆಗತ್ತೆ. ಅಲ್ಲಿ ಇಲ್ಲಿ ನೋಡಿ, Olx, Quikr ಗಳಲ್ಲೆಲ್ಲ ಅದು ಇದು ಅಂತ ಹುಡುಕಾಟ ಮಾಡಿ ಸೊಸೆಯನ್ನು  ಮನೆಗೆ  ತುಂಬಿಸಿಕೊಂಡ ಹಾಗೆ ಡೈನಿಂಗ್ ಟೇಬಲ್ಲು, ಸೋಫಾ, ಟೀಫಾಯಿ, ಬುಕ್ ಸ್ಟಾಂಡು ಎಲ್ಲವನ್ನು ಮನೆಗೆ ಬರ ಮಾಡಿಕೊಳ್ತೀವಿ. ಸೋಫಾದ ಲೆದರ್ ಹಾಳಾಗತ್ತೆ ಅಂದುಕೊಂಡು ಅದಕ್ಕೊಂದು ಸೋಫಾ ಕವರ್ ಹಾಕಬೇಕು... ಡೈನಿಂಗ್ ಟೇಬಲ್ ಶೈನ್ ಹೋಗತ್ತೆ ಅಂತ ಅದರ ಮೇಲೆ ಕೂರೋದೇ ಇಲ್ಲ. ಅಥವಾ ಅದಕ್ಕೆ ಇನ್ನೊಂದು ಕವರ್.. ಸರಿ ಕವರ್ ಹಾಕಿದ ಮೇಲೆ ಅದು ದೂಳಾಗತ್ತೆ, ಕಲೆ ಆಗತ್ತೆ. ಅದನ್ನು ಒಗೆಯೋಕೆ ಅಂತ ಸ್ಟ್ರಾಂಗ್ ಡಿಟರ್ಜೆಂಟ್.  ಸ್ಟ್ರಾಂಗ್ ಡಿಟರ್ಜೆಂಟ್ ಅಂದ ಮೇಲೆ ಅದು ಒಗೆಯೋ ಕೈ ಮೇಲೆ ಪರಿಣಾಮ ಬೀರದೇ ಇರೋಕೆ ಹೇಗೆ ಸಾದ್ಯ ..?  ಕೈ ಎಲ್ಲ ಒಡೆದು ನೋವು ಉರಿ ಶುರು ಆಗುತ್ತೆ. ಇದು ಯಾಕೋ ಸರೀ ಹೋಗ್ತಾ ಇಲ್ಲ ಅಂತ ದೀಪಾವಳಿಗೋ  ಇಲ್ಲ ನ್ಯೂ ಇಯರ್ ಗೋ  ಆಫರ್ ಗಳು ಬಂದ ಕೂಡ್ಲೇ ಒಂದು ವಾಶಿಂಗ್ ಮಷೀನ್ ತಗೋತೀವಿ.... ಅದ್ಕೆ ಒಂದು ಹೊಸ ಕವರ್ ಅಂತ ಮತ್ತೆ ಹೇಳೋದು ಬೇಕಾಗಿಲ್ಲ ಅನ್ಸುತ್ತೆ ..? ಸರಿ ಮನೆ ಎಲ್ಲ ಸೆಟ್ ಒಂದು ಲೆವೆಲ್ ಗೆ ಸೆಟ್  ಆಯಿತು ಅಂತ ಉಸಿರು ಬಿಡೋವಷ್ಟರಲ್ಲಿ ಹನ್ನೊಂದು ತಿಂಗಳು ಮುಗಿದಿರತ್ತೆ . ಒಂದು ದಿನ ರಾಹುಕಾಲದಲ್ಲಿ ಮನೆ ಓನರ್ ಬಾಡಿಗೆ ಜಾಸ್ತಿ ಮಾಡಿ ಹೊಸ ಅಗ್ರಿಮೆಂಟ್ ತಗೊಂಡು ಕುಹಕ ನಗೆ ಬೀರುತ್ತಾ ನಿಂತಿರ್ತಾರೆ .  ಹೆಚ್ಚೇನು ಇಲ್ಲ ಅಬ್ಬಬ್ಬ ಅಂದ್ರೆ 500-1000 ರೂಪಾಯಿ ಜಾಸ್ತಿ ಅಷ್ಟೇನೇ. ಹಳೇ ಮನೆ ಬಿಟ್ಟು ಹೋಗಬೇಕಾದ್ರೆ ಕೊಡಬೇಕಾದ ಪೇಂಟಿಂಗ್ ಖರ್ಚು, ಬ್ರೋಕರ್ ಗೆ ಕೊಡಬೇಕಾದ ಹಣ, ಮನೆಯಲ್ಲಿರೋ ಸಾಮನುಗಳನ್ನು ಸಾಗಿಸೋ ಖರ್ಚು ಇವನ್ನೆಲ್ಲ ಲೆಕ್ಕ ಹಾಕಿದರೆ ಜಾಸ್ತಿ ಮಾಡಿರೋ ಬಾಡಿಗೆಯ ಮೊತ್ತವೇ ವಾಸಿ. ಆದರೂ  ಯಾಕೋ ಬಾಡಿಗೆ ಜಾಸ್ತಿ ಅನ್ನಿಸಿ ಬೇರೆ ಮನೆ ನೋಡೋ ಪ್ಲಾನ್ ಮಾಡ್ತೀವಿ. ಆದರೆ ಈಗ ಮನೆಯಲ್ಲಿರೋ ಫರ್ನಿಚರ್ ಗೆ ಅನುಗುಣವಾಗಿನೇ ಮನೆ ಹುಡುಕಬೇಕು. ಮನೆಯಲ್ಲಿ ವಾಸ ಮಾಡಬೇಕಾಗಿರೋ ಮನುಷ್ಯರನ್ನು ಬಿಟ್ಟು ನಿರ್ಜೀವವಾಗಿರೋ ಟೇಬಲ್ ಕುರ್ಚಿಗಳಿಗೋಸ್ಕರ ಬದುಕೋ ಅನಿವಾರ್ಯತೆ ...ವಿಚಿತ್ರವೆನಿಸಿದರೂ ನಿಜ.


ಕಾಲ ಬದಲಾಗಿದೆ. ಊಟಕ್ಕೆ ಕಾಸಿಲ್ದೇ ಇದ್ರೂ ಪರವಾಗಿಲ್ಲ ಆದ್ರೆ ಕೈಯಲ್ಲಿ ಮಾತ್ರ  ದೊಡ್ಡದಾದ ಮೊಬೈಲ್ ಬೇಕೇ ಬೇಕು. ಆ ಮೊಬೈಲಲ್ಲಿ ಇರೋ app ಗಳನ್ನ ಉಪಯೋಗಿಸಬೇಕು ಅಂದರೆ ಇಂಟರ್ನೆಟ್ ಪ್ಯಾಕ್ ಬೇಕು...... ಸರಿ ಇಂಟರ್ನೆಟ್ ಪ್ಯಾಕ್ ಇದ್ದ ಮೇಲೆ ಕೈ ಸುಮ್ನೆ ಕೂರುತ್ತಾ? ಅದು ಇದು ಅಂತ Download ಮಾಡ್ತೀವಿ, ಬೇಡದೆ ಇರೋ ನ್ಯೂಸ್ ಗಳನ್ನು ಓದಿ ಕಾಮೆಂಟ್ ಮಾಡ್ತೀವಿ..... WhatsApp, Facebook ನಲ್ಲಿ  ಅದು ಇದು  ನೋಡಿ ಕಣ್ಣು ತಂಪು ಮಾಡ್ಕೋತೀವಿ. ನಾವು ಜೀವನದಲ್ಲಿ ಎಷ್ಟು ಬ್ಯುಸಿ ಅಂದರೆ  ದೇವಸ್ಥಾನದಲ್ಲಿ ದೇವರಿಗೆ  ಸುತ್ತು ಹಾಕೋಕೆ ಕೂಡ  ಟೈಮ್ ಇಲ್ಲ ಆದ್ರೆ ಮೊಬೈಲ್ ಅಲ್ಲಿ ಮಾತ್ರ Temple Run ಬೇಕು. ದೇವರಿಗೆ ಸುತ್ತು ಹಾಕೋದು ಬಿಡಿ ಚೆಲುವೆಯರ ಸುತ್ತ ಸುತ್ತೋ ಹುಡುಗರು ಬೆ ರಳೆಣಿಕೆಯಷ್ಟೇ . ಯಾಕಂದ್ರೆ ಹುಡುಗಿಯರ ಮೇಲೆ ಹುಡುಗರಿಗೆ, ಹುಡುಗರ ಮೇಲೆ ಚೆಲುವೆಯರಿಗೆ CRUSH ಆಗೋದರ ಬದಲು CANDY ಮೇಲೆ CRUSH ಆಗಿದೆ. ಅವರೆಲ್ಲ ಆಡೋದರಲ್ಲೇ ಬ್ಯುಸಿ. ಸರಿ ಮೊಬೈಲ್ ಮೇಲೆ ಇಷ್ಟೆಲ್ಲಾ ಅತ್ಯಾಚಾರ ಮಾಡಿದರೆ ಬ್ಯಾಟರಿ ಖಾಲಿ ಆಗದೆ ಇರುತ್ತಾ? ಅದು ಖಾಲಿ ಆಗತ್ತೆ .... ಆಗ್ತಾನೆ ಇರತ್ತೆ. ಆದರೆ ಪದೇ ಪದೇ ಚಾರ್ಜ್  ಮಾಡೋಕೆ ಎಲ್ಲಿ ನೆನಪಾಗುತ್ತೆ ,  ಪವರ್ ಪ್ಯಾಕ್ ತಗೊಳ್ಳೋದು ಉತ್ತಮ ಅನ್ನಿಸಿ ತಗೋತೀವಿ.... ಈಗ ಫುಲ್ ನೆಮ್ಮದಿ ಅಂತ ಅಂದ್ಕೋತೀವಿ.  ಆದರೆ ಅಲ್ಲಿ ಆಗೋದೇ ಬೇರೆ. ಪವರ್ ಪ್ಯಾಕ್ ಇದೆ ಅಂತ ಮೊಬೈಲ್ ಚಾರ್ಜ್ ಗೆ ಹಾಕೋದೇ ಅಪರೂಪ. ಪವರ್ ಬ್ಯಾಂಕ್ ಇದೆ ಅಂತ ಗೊತ್ತಾದ ಕೂಡಲೇ ಸ್ನೇಹಿತರಿಗೂ ಅದರಲ್ಲಿ ಪಾಲು ಬೇಕೇ ಬೇಕು. CANDY CRUSH ಅಲ್ಲಿ ಯಾವುದೋ ಲೆವೆಲ್ ಅಲ್ಲಿ ಆಟ ಮುಂದೆ ಹೋಗದೆ ಇದ್ದಾಗ ಅಥವಾ WhatsApp ಅಲ್ಲಿ ಯಾರೂ ಮೆಸೇಜ್ ಕಳುಹಿಸದೇ ಇದ್ದಾಗ, ಅಪರೂಪಕ್ಕೆ ಮನೆಯ ನೆನಪು ಬಂದು ಒಂದು ಕಾಲ್ ಮಾಡೋಣ ಅಂದುಕೊಂಡ ವೇಳೆಯಲ್ಲಿ ಮಾತ್ರ  " ಲೋ ಬ್ಯಾಟರಿ.... ಪ್ಲೀಸ್ ಕನೆಕ್ಟ್ ಚಾರ್ಜರ್"


ಮೇಲೆ ಹೇಳಿದ ಸನ್ನಿವೇಷ ಗಳು ಕೆಲವು ಮಾತ್ರ, ಇಂತವು ದೈನಂದಿನ ಜೀವನದಲ್ಲಿ ಸಾಕಷ್ಟು ಇವೆ. ಆದ್ರೆ ಇದೆಲ್ಲ ಮಾಡೋವಾಗ ಮನಸ್ಸಿಗೆ ಏನೋ ಒಂದು ಮುದ ಸಿಗುತ್ತೆ ಅನ್ನೋದು ಕೂಡ ನಿಜ.... ಜೀವನವನ್ನು Simple ಇಂದ Complicate ಮಾಡಿಕೊಳ್ಳೋದರಲ್ಲಿ ಸಂತೋಷ ಕಂಡುಕೊಳ್ಳುತ್ತಾ ಇದೀವಿ ಅನ್ನೋದು ಮಾತ್ರ ಕಟು ವಾಸ್ತವ... Side Effects of  So Called Happy (Luxurious..?)  City Life :-) :-)


--- ಶ್ರೀ :-)

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"


Thursday, April 3, 2014

ಯಮನ Appraisal

ಈ ಲೇಖನ ಬರೆಯಲು ಶುರು ಮಾಡಿ ಸುಮಾರು 2 ವರ್ಷ ಆಯಿತು. ಸರಿ ಹೇಗಿದ್ರು ಯಾವುದೇ ಲೇಖನ ಬರೆಯದೆ ತುಂಬಾ ದಿನಗಳಾದವು ಅಂತ ಈ ಲೇಖನ ಪೂರ್ತಿಗೊಳಿಸಿ ಪೋಸ್ಟ್ ಮಾಡಿದ್ದೇನೆ. ಇಲ್ಲಿ ಯಮ ಮತ್ತು ಶಿವ ಅಂತ ಬಳಸಿದ್ದಕ್ಕೆ ಕ್ಷಮೆ ಇರಲಿ (ದೇವರು ಅಂದ್ರೆ ಭಯ ಭಕ್ತಿ ಹಾಗು ಗೌರವ ನನಗೂ ಇದೆ, ಆದರೂ ದೇವ್ರು ಯಾವಾಗ್ಲೂ ನನ್ನ ಜೊತೆನೇ ಇರೋ ಸ್ನೇಹಿತ ಅನ್ನೋ ಫೀಲಿಂಗ್ ಕೂಡ ಜೊತೆಗಿದೆ ).  as usual ಇದೆಲ್ಲ ಬರೇ ಕಾಲ್ಪನಿಕ ಅಷ್ಟೇ..... 


ವರ್ಷದ ಟಾರ್ಗೆಟ್  ಮುಗಿಸಿದ ಸಂತೋಷದಲ್ಲಿ ಯಮನು ತನ್ನ Reporting Manager  ಶಿವನ  Chamber ಒಳಗೆ ಎಂಟ್ರಿ ಹಾಕ್ತಾ ಇದ್ದಾನೆ. ವರ್ಷದ Dead ಲೈನ್ ಟಾರ್ಗೆಟ್ ಅನ್ನು ಮೀಟ್ ಆಗಿದ್ದೇನೆ, ಆದ್ದರಿಂದ ಸರಿಯಾದ Hike  ಸಿಕ್ಕೇ ಸಿಗತ್ತೆ. ರಂಭೆ, ಊರ್ವಶಿ, ಮೇನಕೆಯಂತ ಬೆಡಗಿಯರಿರೋ ಸ್ವರ್ಗಕ್ಕೆ ಪ್ರಮೋಶನ್ ಸಿಕ್ಕಿದರೂ ಸಿಗಬಹುದು ಅಂತ ಮನಸ್ಸಿನಲ್ಲಿ ಲೆಕ್ಕಾಚಾರ.... ಇತ್ತ ಶಿವನೋ ಇಂದ್ರನ Appraisal ಅನ್ನು ಈಗ ತಾನೇ ಮುಗಿಸಿದ್ದಾನೆ. ಹೊರ ಬರುತ್ತಿರೋ ಇಂದ್ರನ ಮುಖದಲ್ಲಿ ಏನೋ ಕಳವಳದ ಛಾಯೆ... ಇಂದ್ರನೋ ವರ್ಷವಿಡೀ ಅಪ್ಸರೆಯರ ನೃತ್ಯ ನೋಡೋದ್ರಲ್ಲಿ ಬ್ಯುಸಿ, ಸಾಲದು ಅಂತ ಕಾಲು ಕೆರೆದು ಅಸುರರೊಂದಿಗೆ ಜಗಳ ಆಡ್ತಾ ಇರ್ತಾನೆ. ಇನ್ನು ಇವನಿಗೆ ಎಲ್ಲಿ hike  ಸಿಗಬೇಕುಏನಿದ್ರು ನನ್  ತರ ಹಾರ್ಡ್ ವರ್ಕ್ ಮಾಡೋವವರಿಗೆ ಮಾತ್ರ ಒಳ್ಳೆ  hike  ಸಿಗತ್ತೆ ಅಂತ ಯಮ ಮನಸ್ಸಲ್ಲೇ ಅಂದ್ಕೊಳ್ತಾನೆ.
         Appraisal  ಟೈಮ್ ಅಲ್ವಾ ಶಿವನ ಆಫೀಸ್  ಫುಲ್ ಜನ. ಯಮನಿಗೋ ಪಾರ್ಕಿಂಗ್ ಜಾಗ ಸಿಗದೇ ಕೋಣವನ್ನು ಅಲ್ಲೇ ಸೈಡ್ ಅಲ್ಲಿ ಪಾರ್ಕ್ ಮಾಡಿ ಒಳಗೆ ಬರ್ತಾನೆ. ಸಲ ಒಳ್ಳೆ hike ಆದ್ರೆ ಮೊದಲು vehicle ಅನ್ನು ಚೇಂಜ್ ಮಾಡ್ಬೇಕುಸಿಕ್ಕಾಪಟ್ಟೆ maintainance  ಬರ್ತಾ ಇದೆ ಅಂತ ಯೋಚಿಸ್ತಾ ಇರೋವಾಗಲೇ  "ಬನ್ನಿ ಯಮ ಮಹಾರಾಜರೇ ಅಂತ ಫುಲ್ ಮರ್ಯಾದೆ ಕೊಟ್ಟು ಒಳಗೆ ಕರೀತಾನೆ ಶಿವ. ಮರ್ಯಾದೆ ಯಾಕೋ ಸ್ವಲ್ಪ ಜಾಸ್ತಿ ಆದ ಹಾಗಿದೆಯಲ್ಲ ಅಂತ ಅಳುಕಿನಿಂದಲೇ ಬಲಗಾಲಿಟ್ಟು ಒಳಗೆ ಕಾಲಿಡ್ತಾನೆ ಯಮ

ಶಿವ : ಮತ್ತೆ ಹೇಗಿತ್ತು ವರ್ಷ?
ಯಮ :( ಪ್ರಶ್ನೆ ಗೆ ಕೆಲವು ದಿನಗಳಿಂದ ಚೆನ್ನಾಗಿ Prepare ಆಗಿದ್ದರಿಂದ ಅಳುಕಿಲ್ಲದೆ ಶುರು ಹಚ್ಕೊಳ್ತಾನೆ ಯಮ) ಪರಶಿವಾ,  ಸಲ ನೀವು ಕೊಟ್ಟ ಒಂದು ಕೋಟಿ ಜನರಿಗೆ ಸಾವು ಅನ್ನೋ  ಟಾರ್ಗೆಟ್ ಅನ್ನು ರೀಚ್ ಆಗಿದ್ದೇನೆ. ಮದ್ಯದಲ್ಲಿ ಸ್ವಲ್ಪ efficiency ಕಡಿಮೆ ಆಗಿತ್ತು. ಆದರೆ ವರುಣ ದೇವ ಮತ್ತು ವಾಯು ದೇವನ ಜೊತೆ ಡೀಲ್ ಮಾಡಿಕೊಂಡು  ಅಲ್ಲಲ್ಲಿ ಪ್ರವಾಹ, ಚಂಡಮಾರುತ ಬರಿಸಿ ಟಾರ್ಗೆಟ್  ಸರಿದೂಗಿಸಿದ್ದೇನೆ.
ಶಿವ : ಅದು As per process ನಿಮ್ಮ ಕೆಲಸ. ಅದಲ್ಲದೆ ಏನು ಮಾಡಿದ್ದೀರಿ...?

 
ಈಗ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ತಾನೆ ಯಮ. ಅಲ್ಲ ಗುರುವೇ ನಿಯತ್ತಾಗಿ ಟಾರ್ಗೆಟ್ ಮುಗಿಸಿ ಅದೇನೋ ಉದ್ದಾರ ಮಾಡ್ತಾನೆ ಅಂತ ಇವನ ಹತ್ರ ಬಂದ್ರೆ ಶಿವ ಈ  ತರ ಬತ್ತಿ ಇಟ್ಟುಬಿಟ್ನಲ್ಲ . ನಾನು ಬೇರೆ ದರಿದ್ರ ಹೈಕ್ ನಂಬಿಕೊಂಡು ಕುಬೇರನ ಹತ್ರ ಸಾಲ ತಗೊಂಡು  ಸ್ವರ್ಗದಲ್ಲಿ 30X40 ಸೈಟ್ ಬೇರೆ ತೆಗ್ದಿದೀನಿ. ಇವನು ಯಾಕೋ ಹೊಗೆ ಹಾಕ್ಸೋ ತರ ಕಾಣಿಸ್ತಾ ಇದೆಯಲ್ಲ ಅಂದುಕೊಂಡು ಸುಮ್ನೆ ಒಂದ್ಸಲ ಕೆಮ್ಮುತ್ತಾನೆ....... 

ಶಿವ : (ಯಮನಿಂದ ಉತ್ತರ ಬರದಿದ್ದನ್ನು ಗಮನಿಸಿ):  ಸರಿ ಬಿಡಿ ನರರನ್ನು ಎತ್ತಾಕೊಂಡು ಬರೋವಾಗ ಎಷ್ಟು ಸಲ Process violation ಆಗಿದೆ? ಚಿತ್ರಗುಪ್ತ ಲೆಕ್ಕಾಚಾರದಲ್ಲಿ ಅದೇನೋ ಎಡವಟ್ಟು ಆಗಿ ಮೊನ್ನೆ ಯಾರೋ ತಪ್ಪು ವ್ಯಕ್ತಿನ ಕರ್ಕೊಂಡು ಬಂದ್ರಿ ಅಂತ ಸುದ್ದಿ ಬಂತು ನಂಗೆ. ನಿಮ್ಮ Error matrix ಹೇಳ್ತಾ ಇದೆ.  
ಯಮ: ಮಹಾಸ್ವಾಮಿ ಅದು ಚಿತ್ರಗುಪ್ತನ ತಪ್ಪು ಅಲ್ಲವೆ. ಅವನ error matrix ಗೆ ಎಫೆಕ್ಟ್ ಆಗಬೇಕು ಅಲ್ವಾ ಅದು?
ಶಿವ: ನೋಡು ಯಮ, ನಿಮ್ಮ ಕೆಳಗೆ ಅವ್ನು ಕೆಲಸ ಮಾಡ್ತಾ ಇದಾನೆ ಅಂದ್ರೆ ಅವನು ಮಾಡಿದ ತಪ್ಪಿಗೂ ನೀನೇ ಹೊಣೆ. ಅದ್ದರಿಂದ ಅದು ನಿಮ್ಮ  ಮ್ಯಾಟ್ರಿಕ್ಸ್ ಗೆ ಬರುತ್ತೆ. ಅದಿರಲಿ ನಿಮಗೆ ಕೊಟ್ಟ ಟಾರ್ಗೆಟ್ ಅಲ್ಲದೆ ಬೇರೆ ಏನು ಮಾಡಿದ್ದೀರಿ? ನಿಮಗೆ ಗೊತ್ತಿರಬೇಕು ಅಲ್ವಾ, ಕೆಲಸ ಎಲ್ಲರು ಮಾಡ್ತಾರೆ ಆದ್ರೆ ನಿಮ್ಮ Growth ಆಗಬೇಕು ಅಂದ್ರೆ ನೀವು ಬೇರೆಯವರಿಗಿಂತ ವಿಬಿನ್ನವಾಗಿರೋದು ಅಥವಾ ನೀವೇ ನೀವಾಗಿ Initiative ತಗೊಂಡು ಏನಾದ್ರೂ ಮಾಡಿರಬೆಕು. ರೀತಿಯದ್ದು ಏನಾದ್ರು ಇದೆಯಾ?

ಯಮ: ಮಹಾಸ್ವಾಮಿ ಒಂದು ಕೋಣ, ಒಂದೈವತ್ತು ಯಮಕಿಂಕರರು ಆಮೇಲೆ ಒಬ್ಬ ಕಂಪ್ಯೂಟರ್ ಸ್ಪೆಷಲಿಸ್ಟ್ ಚಿತ್ರಗುಪ್ತನನ್ನು ಕೊಟ್ಟು ಏನಾದರು ವಿಬಿನ್ನವಾಗಿ ಮಾಡಿ ಅಂದ್ರೆ ಏನು ಮಾಡಕ್ಕೆ ಅಗತ್ತೆ. I  have my own limitations you  know. ನನ್ನ ವರ್ಕಿಂಗ್ conditions ಎಷ್ಟು ಕಷ್ಟ ಇದೆ ಗೊತ್ತಾ ನಿಮಗೆ. ಎಲ್ಲಾ ಕಳ್ಳ ಕದೀಮರಿಗೆ ಶಿಕ್ಷೆ ಕೊಡಬೇಕು, ಅವರ ಪಾಪಕ್ಕನುಗುಣವಾಗಿ ಚಾಟಿಯೇಟು ಕೊಡಬೇಕು, ಎಣ್ಣೇಲಿ ಕುದಿಸಬೇಕು.......   ಎಷ್ಟೋ ಸಲ ಯಮಕಿಂಕರರು ಸಾಲದೇ ನಾನೇ ಅವರ ಜೊತೆ Stay back ಮಾಡ್ತೇನೆ,  ಅದ್ಕೆ Overtime ಕೂಡ ಸಿಗೋದಿಲ್ಲ. ಜೊತೆಗೆ ಶಿಕ್ಷೆಯ ಪ್ರಮಾಣ ಸರಿ ಇದೆಯಾ ಅಂತ  Quality ಕೂಡ ಚೆಕ್ ಮಾಡ್ಬೇಕು ನಾನು. ನೀವು ಒಂದು Matrix  ಮಾತ್ರ Maintain  ಮಾಡ್ತೀರಿ. ಆದರೆ ನಾನು ಅದೆಷ್ಟು excel ಶೀಟ್ ಗಳನ್ನ Update ಮಾಡಬೇಕು ಅನ್ನೋದು ನನಗೆ ಮಾತ್ರ ಗೊತ್ತು. 

ಶಿವ: ಏನ್ರಿ ನೀವು ಹೀಗೆ ಹೇಳ್ತೀರಲ್ಲ. ಏನೋ ನೀವೊಬ್ಬರೇ ಕೆಲಸ ಮಾಡಿದ ಹಾಗೆ. ನೀವು ಈಗ ಹೇಳಿದ ಎಲ್ಲಾ ಕೆಲಸಗಳನ್ನು ಎಸ್. ಎಸ್. ಎಲ್. ಸಿ ಫೇಲ್ ಆದವರೂ ಬೇಕಾದ್ರೆ ಮಾಡ್ತಾರೆ ಕಣ್ರೀ. ನಿಮ್ಮ B. E ಇನ್ Law and Order  ಯಾಕೆ ಬೇಕುಪೋಸ್ಟ್ ಗ್ರಾಡ್ಜುವೇಶನ್ in  Hell Maintainance ಬೇರೆ. ಏನಾದ್ರೂ ಹೊಸದು ಯೋಚನೆ ಮಾಡಬೇಕು ನೀವು... 

ಯಮ: ನಾವು ಭೂಲೋಕದಲ್ಲಿ ಒಂದು ಬ್ರಾಂಚ್ ಆಫೀಸ್ ಇಟ್ಟು ಒಂದಿಬ್ಬರು ಯಮಕಿಂಕರರನ್ನು ಅಲ್ಲೇ ಲಾಂಗ್ ಟರ್ಮ್ ವೀಸಾದಲ್ಲಿಟ್ಟು  ಲೈಫ್ ಟರ್ಮ್ ಮುಗಿದಿರೋ ಜನರನ್ನು ಡೈರೆಕ್ಟ್ ಆಗಿ ನರಕಕ್ಕೆ ಕಳಿಸಬಹುದು. ಪದೇ ಪದೇ ನಾವು ಭೂಲೋಕಕ್ಕೆ ಹೋಗೋ ಖರ್ಚು ಮತ್ತು ಟೈಮ್ ಉಳಿಯುತ್ತೆ ಅಂತ ಒಂದು ಐಡಿಯಾ ಕೊಟ್ಟೆ ನಾನು ನಿಮಗೆ.  ಆದರೆ ನೀವು ಅದನ್ನು ಆಗೋದಿಲ್ಲ ಅಂದು ಬಿಟ್ರಿ.  

ಶಿವ : ಐಡಿಯಾ ಚೆನ್ನಾಗೇ ಇತ್ತು ಆದ್ರೆ ಯಮಕಿಂಕರರ ಖರ್ಚು ವೆಚ್ಚ ಕ್ಕೆ  ಬಜೆಟ್ ಅಪ್ರೂವಲ್ ಸಿಗೋದಿಲ್ಲ, ಅದಕ್ಕೆ ಆಗೋದಿಲ್ಲ ಅಂದಿದ್ದು. ನೀವು ಯೋಚನೆ ಮಾಡಬೇಕು  Resourses ಕಮ್ಮಿ ಹೇಗೆ ಉಪಯೋಗಿಸಬೇಕು ಅಂತ. ಉದಾಹರಣೆಗೆ ಒಬ್ಬನ ಜೀವಿತಾವಧಿ ಮುಗಿದಿರತ್ತೆ ಅವನನ್ನು ಕರೆತರೋಕೆ ನೀವು ಹೋಗ್ತೀರ, ಆಗ ಅವ್ನು ಊಟ ಮಾಡ್ತಾ ಇರ್ತಾನೆ. ನೀವುಗಳು ಮಾನವೀಯತೆ ದೃಷ್ಟಿಯಿಂದ ಅವನ ಊಟ ಮುಗಿಯೋವರೆಗೆ ಕಾದಿದ್ದು ಆಮೇಲೆ ಅವನ ಜೀವ ಸೆಳೆದು ಕರೆದುಕೊಂಡು ಬರ್ತೀರ. ಅಷ್ಟು ಹೊತ್ತು ನಿಮ್ಮ ಟೈಮ್ ವೇಸ್ಟು.  ಅವ್ನು ಮಾಡಿದ ಊಟ ವೇಸ್ಟ್. ನಿಮ್ಮ  ಟಾರ್ಗೆಟ್ ಅಲ್ಲಿ ಒಂದು 20% ಕೇಸ್ ಗಳು ಹೀಗೆ ಆದರೆ ಒಟ್ಟು ಎಷ್ಟು ವೇಸ್ಟ್ ಅಲ್ವಾ? ಅದಕ್ಕೆ ಅವನ ಟೈಮ್ ಮುಗಿದ ಕೂಡ್ಲೇ ಅವನು ಏನೇ ಮಾಡ್ತಾ ಇದ್ದರು ಕರ್ಕೊಂಡು ಬಂದು ಬಿಡಬೇಕುಹೀಗೆ ಹೊಸ ಹೊಸ ಯೋಚನೆ ಮಾಡ್ತಾ ಇರಬೇಕು.. ಎಲ್ಲವನ್ನು ನಾನೇ ಹೇಳೋದಿಕ್ಕೆ ಆಗೋದಿಲ್ಲ. ನೀವೇ Initiative ತಗೋಬೇಕ್ರಿ.... 

ಯಮ: (ಇವ್ರು ಏನೋ ಒಂದು ಪರ್ಸಂಟೇಜ್ ಗೆ ಫಿಕ್ಸ್ ಆಗಿದ್ದಾರೆ, ಇನ್ನು ವಾದಿಸಿ ಫಲವಿಲ್ಲ ಅಂದುಕೊಂಡುಓಕೆ ಸರ್ ಬರೋ ವರ್ಷದಲ್ಲಿ ಹಾಗೇ ಮಾಡ್ತೇನೆ  ..... 

ಶಿವ: (ಯಮನ ಹಾವಭಾವ ಗಮನಿಸಿ ) ಆದರೂ ನಿಮಗೆ ಕೊಟ್ಟ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೀರಿ. ಎಲ್ಲಾ Processಗಳು, ಟಾರ್ಗೆಟ್ ಗಳು ಎಲ್ಲವನ್ನೂ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ. ಸೊ ನಿಮ್ಮ ರೇಟಿಂಗ್ 5 ರಲ್ಲಿ  3 .  ನಿಜ ಹೇಳ್ಬೇಕು ಅಂದ್ರೆ ನೀವು 3 ಗಿಂತ ತುಂಬಾ ಹೆಚ್ಚು ಆದರೆ 4 ಕ್ಕಿಂತ ಮಾತ್ರ  ಸ್ವಲ್ಪ ಕಮ್ಮಿ. 4 ಕೊಡಬೇಕು ಅನ್ನೋದು ನನಗೂ ಆಸೆ ಆದ್ರೆ ನನಗೂ  ಕೆಲವು Limitations ಇರುತ್ತೆ ಅಲ್ವಾ. ನನ್ನ ಕೇಳೋದಾದ್ರೆ 3 ಕೂಡ ಒಳ್ಳೆ  ರೇಟಿಂಗೇ ಬಿಡಿ. ಆದ್ರೆ ನೀವು ಇನ್ನೂ ಒಳ್ಳೆ ರೇಟಿಂಗ್ ತಗೋಬೋದಿತ್ತು. Anyhow there is always a next ಟೈಮ್ .... ಆಲ್ ದಿ ಬೆಸ್ಟ್.  ಹಾ ಹೇಳೋದು ಮರೆತಿದ್ದೆ . ಸದ್ಯದಲ್ಲೇ ಕೆಲವು Organisation ಚೇಂಜ್ ಗಳು ಆಗುತ್ತೆ. ಅಲ್ಲಿ ಇಲ್ಲಿ ಕೆಲ ಸಣ್ಣ ಬದಲಾವಣೆಗಳು ಅಷ್ಟೇ. ನಿಮಗೆ ಮೇಲ್ ಬರತ್ತೆ ಬಿಡಿ .... 

ಯಮ: (ಮುಖದಲ್ಲಿ ನಿರ್ಲಿಪ್ತ ಭಾವನೆ) ದನ್ಯವಾದಗಳು ಸರ್.... 

ಶಿವ: ನಿಮಗೆ ರಿಪೋರ್ಟ್ ಮಾಡಿಕೊಳ್ಳೋ ಕಾರ್ಮಿಕರಿಗೆ Organisation Changes ಬಗ್ಗೆ ಮೇಲ್ ಬಂದ ನಂತರವೇ review ಮೀಟಿಂಗ್  ಮುಗಿಸಿ ... ಅವಸರವೇನಿಲ್ಲ ....

ಯಮ: As u wish sir ......

ಬಾಗಿಲನ್ನು ದಡಾರನೆ ಹಾಕಿ ಹೊರನಡಿಯುತ್ತ ಯೋಚಿಸ್ತಾನೆ ಯಮ " ಸರಿ ನನ್ನ ಅಪ್ರೈಸಲ್  ಅಂತು ಹೊಗೆ ಆಯ್ತು. ನನಗೆ ರಿಪೋರ್ಟ್ ಮಾಡಿಕೊಳ್ಳೋ ಜನರಿಗೆ ಮೇಲ್ ಬಂದ ನಂತರ Review ಶುರು ಹಚ್ಕೊ ಅಂತಿದಾನೆ ಶಿವ . ಯಾವಾಗಲೇ ಆದರೂ ನಾನೇ ತಾನೇ ಮಾಡಬೇಕು, ಅದೂ ಅಲ್ದೆ ಇವತ್ತೇ ಇವರಿಗೆ ಕ್ಲಾಸ್ ತಗೊಂಡ್ರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತೆ. ನನ್ನ ಹೈಕ್ ಹೊಗೆ ಅಂದ್ರೆ ನನಗೆ ರಿಪೋರ್ಟ್ ಮಾಡ್ಕೊಳೋ ಚಿತ್ರಗುಪ್ತ ಹಾಗೂ ಯಮ ಕಿಂಕರರಿಗೂ ಹೊಗೇನೇ .... ಪಾಪಸಿಕ್ಕಾಪಟ್ಟೆ ಓವರ್ ಟೈಮ್  ಮಾಡ್ತಾವೆ ಅವ್ವು, ಆದರೇನು ಮಾಡೋದು  ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕಲ್ಲವೇ ಅಂದುಕೊಳ್ತಾ ಮೀಟಿಂಗ್ ರೂಂ ಯಾವುದಾದರೂ ಖಾಲಿ ಇದೆಯಾ ಅಂತ ನೋಡ್ತಾನೆ ಯಮಖಾಲಿ ರೂಮೊಂದರಲ್ಲಿ ಯಮಕಿಂಕರನೊಬ್ಬ ಅದ್ಯಾವುದೋ ಕ್ರೆಡಿಟ್ ಕಾರ್ಡ್ ಪಾರ್ಟಿ ಜೊತೆ ಮಾತಾಡ್ತಾ ಇರೋದು ಕಾಣಿಸತ್ತೆ, ಸರಿ ಸದ್ಯಕ್ಕೆ ಇದೇ ಬಕ್ರ ಅಂದುಕೊಂಡು ಲ್ಯಾಪ್ ಟಾಪ್ ಜೊತೆ ಒಳಗೆ ನಡಿತಾನೆ ಯಮ.

ಯಮಕಿಂಕರ: ಸರ್ ನಮಸ್ತೆ (ಫೋನ್ ಕಾಲ್ ಕಟ್ ಮಾಡ್ತಾ )
ಯಮ:  ನಿಮ್ಮ Appraisal ಶುರು ಹಚ್ಹ್ಕೊಳ್ಳೋಣವೇ ?
ಯಮಕಿಂಕರ: ಸರಿ ಸಾರ್

ಯಮ ಲ್ಯಾಪ್ ಟಾಪ್ ಚಾರ್ಜರ್ ಕನೆಕ್ಟ್ ಮಾಡಿ ವಿಂಡೋಸ್ ಗೆ ಲಾಗಿನ್ ಆಗ್ತಾನೆ. ಬಡ್ಡಿ ಮಗಂದು ಕಿತ್ತೋಗಿರೋ ಲ್ಯಾಪ್ ಟಾಪ್ ಕೊಟ್ಟಿದಾರೆ, ಲಾಗಿನ್ ಆಗೋದಕ್ಕೆ ಒಂದು ಗಂಟೆ ತಗೊಳತ್ತೆ ಅಂತ ಮನಸ್ಸಲ್ಲೇ ಬೈಕೋತಾನೆ. ಅಷ್ಟರಲ್ಲೇ ಬಾಗಿಲು ಸದ್ದು ಮಾಡುತ್ತೆ, ತಲೆ ಎತ್ತಿ ನೋಡಿದರೆ ಚಿತ್ರಗುಪ್ತ... ನನ್ ಮಗನ್ನ ಯಾರು ಕರೆದರು? ಸಕತ್ ತಲೆ ತಿಂತಾನೆ ಅಂತ ಇವನ review ಲಾಸ್ಟ್ ಗೆ ಇಟ್ಟುಕೊಂಡಿದ್ದೆನಲ್ಲ ಅಂದುಕೊಳ್ಳೋ ವಷ್ಟರಲ್ಲಿ ಚಿತ್ರಗುಪ್ತನೇ ಮಾತು ಶುರು ಹಚ್ಕೊಳ್ತಾನೆ.

ಚಿತ್ರಗುಪ್ತ: ಯಮ ಮಹಾರಾಜರೇ ಮೇಲ್ ಚೆಕ್ ಮಾಡಿದಿರಾ ?
ಯಮ: ಇಲ್ಲ ಬೆಳಗ್ಗಿಂದ ಸ್ವಲ್ಪ ಬ್ಯುಸಿ ಆಗಿದ್ದೆ, ಏನಾದ್ರು ವಿಶೇಷ ಇದೆಯಾ?
ಚಿತ್ರಗುಪ್ತ: ಸ್ವಲ್ಪ ವಿಶೇಷಾನೇ, ನಂಗೆ ಪ್ರಮೋಶನ್ ಆಗಿದೆ. 
ಯಮ: ಒಹ್ really ? Congrats. ಯಾವ ಡಿಪಾರ್ಟ್ ಮೆಂಟ್ ?
ಚಿತ್ರಗುಪ್ತಡಿಪಾರ್ಟ್ ಮೆಂಟ್ ಏನು ಚೇಂಜ್ ಇಲ್ಲ, ರೋಲ್ ಚೇಂಜ್ ಆಗಿದೆ ಅಷ್ಟೇ. ಇನ್ನು ಮೇಲಿಂದ ನೀವು ನನಗೆ ರಿಪೋರ್ಟ್ ಮಾಡಬೇಕು. ನಿಮ್ಮ ವರ್ಷದ ಟಾರ್ಗೆಟ್ ನಾನು ಸೆಟ್ ಮಾಡ್ತೇನೆ. ಆಮೇಲೆ ಕಿಂಕರರಿಗೆಲ್ಲ ರಿವೀವ್ ಮೀಟಿಂಗ್ ನಾನೇ ಮಾಡ್ತೇನೆ. ಸರಿ ನಾನು HR ಹತ್ರ ಸ್ವಲ್ಪ ಹೋಗಿ ಬರ್ತೇನೆ. ನಾಳೆ ನಿಮ್ಮ ವರ್ಷದ ಟಾರ್ಗೆಟ್ ಸೆಟ್ ಮಾಡೋಣ, ಸ್ವಲ್ಪ ಬೇಗ ಬಂದು ಬಿಡಿ ನಾಳೆ.... 

      ಬಾಗಿಲನ್ನು ಹಾಕಿ ಹೊರನಡೆದ ಚಿತ್ರಗುಪ್ತನ ಮುಖದಲ್ಲಿ ಏನೋ ಕಳೆ, ಮೀಸೆಯಂಚಿನಲ್ಲಿ ಒಂದು ಕಂಡೂ ಕಾಣದಂತಿರೋ ನಗು. ಯಮಕಿಂಕರ ಕಕ್ಕಾಬಿಕ್ಕಿ. ನಾಳೆಯಿಂದ ತನಗೆ ಯಾರು work assign ಮಾಡುವರೋ ಎಂಬ ಕಳವಳ. ಯಮನಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗಿದೆ, ಮಾತೇ  ಹೊರಡ್ತಾ ಇಲ್ಲ. ಮುಂದೆ ಚಿತ್ರಗುಪ್ತನ ಆದೇಶ ಪಾಲನೆ ಮಾಡಬೇಕಾದ  ಸನ್ನಿವೇಷ ಕಲ್ಪಿಸಿಕೊಂಡು ತಲೆ ಸುತ್ತು ಬಂದ ಹಾಗೆ ಆಗ್ತಾ ಇದೆ. ಲ್ಯಾಪ್ ಟಾಪ್ ಅನ್ನು ಸ್ವಿಚ್ ಆಫ್ ಮಾಡಿ ಮಾತಿಲ್ಲದೆ ಆಫೀಸಿಂದ  ಮನೆಗೆ  ಹೊರಡ್ತಾನೆ.                 ಆಫೀಸಿಂದ ಹೊರ ಬರುತ್ತಿದ್ದಂತೆ ಯಮನ ಕೋಣ ಪಕ್ಕಕ್ಕೆ ಬಂದು ನಿಲ್ಲುತ್ತೆ. ಯಾಕೋ ಇಡೀ ಪ್ರಪಂಚದಲ್ಲಿ ತನ್ನನು ಅರ್ಥ ಮಾಡಿಕೊಂಡ ಹಾಗೂ ತನ್ನನ್ನು ಸಮದಾನಪಡಿಸುವ ಜೀವ ಈ ಕೋಣ ಮಾತ್ರ ಅನ್ನಿಸುತ್ತೆ ಯಮಂಗೆ. ಅಲ್ಲೇ ಹೊರಗೆ ಹುಲ್ಲುಹಾಸಿನ ಮೇಲೆ ಕೂತ್ಕೊಂಡು ಯೋಚನೆ ಮಾಡ್ತಾ ಅದೇನೋ ಹೊಳೆದಂತೆ ಲ್ಯಾಪ್ ಟಾಪ್ ಓಪನ್ ಮಾಡಿ  Naukri. com ಸೈಟ್ ಗೆ ಲಾಗಿನ್ ಆಗ್ತಾನೆ. ಅದೆಷ್ಟೋ ವರ್ಷದಿಂದ ನೋಡದೇ ಇದ್ದ Resume ಅನ್ನು Update ಮಾಡ್ತಾನೆ. ಅಲ್ಲಿ ಇಲ್ಲಿ ತಡಕಾಡಿ ಒಂದು ಹೊಸ ಕೆಲಸಕ್ಕೆ Apply ಮಾಡ್ತಾನೆ..... 

 Job Location: ತ್ರಿಶಂಕು ಸ್ವರ್ಗ ................... 
Contact person: ವಿಶ್ವಾಮಿತ್ರ .............. 


                                                                                                                              --ಶ್ರೀ :-) -----