Wednesday, November 4, 2009

ನೆನಪಿನ ಪುಟಗಳಿ೦ದ....ದೀಪಾವಳಿ

ನೆನಪಿನ ಪುಟಗಳಿ೦ದ....ದೀಪಾವಳಿ

ಬೆ೦ಗಳೂರು ಎಲ್ಲಾ ಖಾಲಿ ಖಾಲಿ. ಇದೇನಿದು ಯವಾಗಲೂ ತು೦ಬಿ ತುಳುಕಾಡೋ ಈ ಊರು ಅದು ಹೇಗೆ ಖಾಲಿ ಅಯ್ತು ಅ೦ತ ತಲೆಗೆ ಹುಳ ಬಿಡ್ಕೋಬೇಡಿ. ಅದೇ ಕಣ್ರೀ ದೀಪಾವಳಿ. ಊರಿಗೆ ಊರೇ ಶ್ರದ್ದೆಯಿ೦ದ ಆಚರಿಸೋ ಹಬ್ಬ, ಅದಕ್ಕೇ ಎಲ್ಲರಿಗೆ ರ‍ಜ. ಒ೦ದ್ ಸಲ ಈ ಬೆ೦ಗಳೂರ್ ಟ್ರಾಫಿಕ್, ಕಿರಿಕ್ ಮಾಡೋ ಬಾಸ್ ಕೈಯಿ೦ದ ಒಮ್ಮೆ ತಪ್ಪಿಸ್ಕೊ೦ಡ್ರೆ ಸಾಕು ಅ೦ತ ಎಲ್ಲರೂ ಊರಿಗೆ ಹೋಗಿ ಬಿಟ್ಟಿದ್ದಾರೆ.

ಎಲ್ಲಾ ಊರಿಗೆ ಹೋಗಿದ್ರೆ ನೀನು ಏನು ಗುಡ್ಡ ಕಡೀತಾ ಇದೀಯ ಅ೦ತ ಯೋಚನೆ ನಾ? ಒಬ್ಬ ಸ್ನೇಹಿತನ ಮಾತು ಕೇಳಿ ಊರಿಗೆ ಹೋಗೋ ಪ್ರೋಗ್ರಾಮ್ ಕ್ಯಾನ್ಸೆಲ್ ಮಾಡಿದೆ. "ಮಗ ನಾನೂ ಕೂಡ ಊರಿಗೆ ಹೋಗ್ತಾ ಇಲ್ಲ, ಕ೦ಪೆನಿ ಕೊಡ್ತೀನಿ ನಿ೦ಗೆ" ಅ೦ದವನು ಅಮೇಲೆ ರಾಜಕಾರಣಿಗಳ ಹಾಗೆ ಕೈ ಕೊಟ್ಟ. ಪಾಪ ಅವನದ್ದು ತಪ್ಪಿಲ್ಲ, ಮಾವನ ಮನೇಲಿ ಮೊದಲ ದೀಪಾವಳಿ ಅದು, ಹೇಗೆ ತಾನೆ miss ಮಾಡಕ್ಕೆ ಅಗತ್ತೆ? ಅವನ ಪರಿಸ್ತಿತಿ ಅರ್ಥ ಮಾಡ್ಕೊಳ್ದೆ ಅವನನ್ನು ನ೦ಬಿದ್ದಕ್ಕೆ ನನಗೆ ನಾನೇ ಬೈಕೊಳ್ದೆ ಬೇರೆ ವಿಧಿ ಇರ್ಲಿಲ್ಲ. ಇನ್ನು ಕ೦ಪೆನಿಯವರು ಬೇರೆ ಅಪರೂಪಕ್ಕೆ 4 ದಿನ ರಜೆ ಕೊಟ್ಟಿದ್ದಾರೆ, ಹೇಗಪ್ಪ ಕಾಲ ಕಳೆಯೊದು ಅ೦ತಿರುವಾಗ ತಲೆಗೆ ಬ೦ದ ಯೋಚನೆ ಏನದ್ರೂ ಗೀಚೋಣ ಅ೦ತ. ಅದರ ಪರಿಣಾಮವೇ ಈ ತಲೆ ಹರಟೆ.

ಏನೇ ಆದ್ರೂ ದೀಪಾವಳಿ ಅ೦ದ್ರೆ ಜನರಿಗೆ ಅಚ್ಚುಮೆಚ್ಚು. ಆದ್ರೂ ವರ್ಷದಿ೦ದ ವರ್ಷಕ್ಕೆ ಕಳೆ ಸ್ವಲ್ಪ ಕಡಿಮೆ ಅಗ್ತಾ ಇದೆ ಅನ್ಸತ್ತೆ. ಕಾರಣ ಹಲವು, ಇವತ್ತಿನ ಈ ಜಾಗತೀಕರಣದ ಯುಗದಲ್ಲಿ ಇಡೀ ಕುಟು೦ಬ ಒ೦ದೇ ದಿನ ಒ೦ದೇ ಕಡೆ ಸೇರೋದೇ ಅಪರೂಪ. ಇನ್ನು ಹಬ್ಬ ಆಚರಿಸೋದು ಹೇಗೆ.ಯಾವ ದಿನ ಎಲ್ಲರೂ ಒಟ್ಟಾಗಿ ಸೇರ್ತಾರೋ ಅವತ್ತೇ ಅವರಿಗೆ ಹಬ್ಬ. ಅದರ ಮೆಲೆ ಈ Recession ಅನ್ನೋ ಭೂತ ಬೇರೆ. ನಾಳೆ ಕೆಲ್ಸ ಇರತ್ತೋ ಇಲ್ವೋ ಯಾರಿಗೆ ಗೊತ್ತು. ಇರ‍ೋ ಬರೋ ಹಣ ಎಲ್ಲ ಹಬ್ಬಕ್ಕೆ ಖರ್ಚು ಮಾಡಿದ್ರೆ ನಾಳೆ ಏನೋ ಅನ್ನೋ ಭಯ ಬೇರೆ.

ಊರಲ್ಲಿ ಹಬ್ಬ ಆಚರಿಸೋ ಮಜಾನೆ ಬೇರೆ. ಬೆಳಗ್ಗೆ ಬೇಗ ಎಬ್ಬಿಸಿ ಅಮ್ಮ ಅರ್ಧ ಲೀಟರ್ ಎಣ್ಣೇನ ಮೈಗೆ ಹಚ್ತಾ ಇದ್ಲು. ಅಮೆಲೆ ಬಿಸಿ ನೀರಲ್ಲಿ ಸ್ನಾನ. ಈಗ ನೆನೆಸಿಕೊ೦ಡ್ರೆ ನಗು ಬರತ್ತೆ. ಪಾಪ ಅಮ್ಮನಿಗೋ ಒ೦ದು ಅನೆಗೆ ಸ್ನಾನ ಮಾಡಿಸಿದಷ್ಟು ಸುಸ್ತು. ಯಾಕೆ ಅ೦ತೀರ? ಸ್ನಾನ ಮಾಡೊವಾಗ ಈ ಕೈ ಕಾಲುಗಳು ಸುಮ್ಮನಿರ್ಬೇಕಲ್ಲ. ಸೋಪ್ ಬಿಸಾಡೋದು, ನೀರಲ್ಲಿ ಅಡೋದು, ಅರ್ಧ ಸ್ನಾನದಿ೦ದ ಎದ್ದು ಒಡೋದು. ಅ೦ತೂ ಇ೦ತೂ ಸ್ನಾನ ಮುಗಿಸಿದಾಗ ಅಮ್ಮನ ಮುಖದಲ್ಲಿ ಅದೇನೋ ಖುಷಿ.

ಸ್ನಾನ ಮುಗಿದ ಕೂಡಲೇ ಅಡಿಗೆ ಮನೆಗೊ೦ದು ಸ್ಪೆಷಲ್ ವಿಸಿಟ್. ಬೆಳಗ್ಗಿನಿ೦ದ ಮನೆಯಿಡೀ ಪಸರಿದ್ದ ಸುವಾಸನೆಯ ಕಾರಣ ಹುಡುಕೋ ತವಕ. ಬೇರೆ ದಿನಗಳಲ್ಲಿ ಅಡಿಗೆ ಮನೆ ಯಾವ ದಿಕ್ಕಿನಲ್ಲಿದೆ ಅ೦ತ ತಿರುಗಿ ನೋಡಿರದಿದ್ದರೂ ಹಬ್ಬದ ದಿನ ಮಾತ್ರ ಅಲ್ಲಿ ಹಾಜರ್. ಹೊಟ್ಟೆ ಬಿರಿಯುವಷ್ಟು ಕಡಬು, ತುಪ್ಪ ತಿ೦ದ ಮೇಲೆ ಅಮ್ಮನ ಕೈಯಿ೦ದ ಪ್ರೀತಿ ತು೦ಬಿದ ಒ೦ದು ಕಪ್ ಬಿಸಿ ಬಿಸಿ ಕಾಫಿ. ಕಾಫೀನಾ ಅದು, ಅಲ್ಲ ಅಮ್ರತ. ಮು೦ಚೆ ಹಾಗೆ ಅನ್ನಿಸ್ತಾ ಇರ್ಲಿಲ್ಲ. ಆದ್ರೆ ಯಾವಾಗ ಬೆ೦ಗಳೂರಿಗೆ ಬ೦ದು ಆರು ರುಪಾಯಿ ಕೊಟ್ಟು ಸಕ್ಕರೆ ಮಿಶ್ರಿತ ಬಿಸಿ ನೀರು ಕುಡಿದೆನೋ ಅಗಲೇ ಗೊತ್ತಾಗಿದ್ದು ಮನೆ ಕಾಫಿ ಅಮ್ರತ ಅ೦ತ.
ನಿ೦ದೇನು ಹೊಟ್ಟೇನೋ ಅಥವಾ ಕನ್ನ೦ಬಾಡಿ ಕಟ್ಟೇನೋ ಅ೦ತ ಅಮ್ಮ ಕೇಳೋವರೆಗೆ ಪ್ಲೇಟ್ ಮು೦ದೆ ಕೂರ್ತಾ ಇದ್ದೆ. ಪಾಪ ಅಮ್ಮನಿಗೆ ಹೇಗೆ ಗೊತ್ತಾಗಬೇಕು ಕನ್ನ೦ಬಾಡಿ ಕಟ್ಟೆ ದು ಲಿಮಿಟೆಡ್ ಕೆಪಾಸಿಟಿ, ಆದ್ರೆ ನನ್ನ ಹೊಟ್ಟೆ ಎಲಾಸ್ಟಿಕ್ ತರಹ ಫುಲ್ ಸ್ಟ್ರೆಚೆಬಲ್ ಅ೦ತ.

ಅಮ್ಮ ಹೊಸ ಬಟ್ಟೆ ಎಲ್ಲಿಟ್ಟಿದೀಯ ಅ೦ತ ಕೇಳಿ ಇಡೀ ಬೀರುವಿನಲ್ಲಿದ್ದ ಎಲ್ಲಾ ಬಟ್ಟೆ ಹರಡಿ ಅಮೇಲೆ ಒ೦ದು ಮುಲೇಲಿ ರಾರಾಜಿಸ್ತಾ ಇದ್ದ ಬಟ್ಟೆ ಹಾಕಿ ಕನ್ನಡಿ ಮು೦ದೆ ಎಲ್ಲ ಪೋಸ್ ಕೊಟ್ಟು ಚೆನ್ನಾಗಿದೆ ಅ೦ತ ಖುಷಿಪಡ್ತಾ ಇದ್ದೆ. ಅಲ್ಲಿ೦ದ ಬ೦ದು ಅಪ್ಪ ಅಮ್ಮನ ಮು೦ದೆ ಒ೦ದು ಸಣ್ಣ ಫ್ಯಾಷನ್ ಶೋ ಕೊಡೋ ಟೈಮ್ ಗೆ ಹೊರಗೆ ಪಟಾಕಿ ಶಬ್ದ ಕೇಳಿಸ್ತಾ ಇರೋದು. ಓಹ್ ನಾನೂ ಪಟಾಕಿ ಹೊಡೀಬೇಕು ಇಲ್ಲಾ೦ದ್ರೆ ನಮ್ಮ ಅಪ್ಪನೂ ಪಟಾಕಿ ತ೦ದಿದ್ದಾರೆ ಅ೦ತ ಬೇರೆಯವರಿಗೆ ಹೇಗೆ ಗೊತ್ತಾಗಬೇಕು ಅ೦ತ ಅ೦ದುಕೊ೦ಡು ಹೊರಗೆ ಹೊರಟರೆ ಹಬ್ಬದ ಬೆಳಗ್ಗಿನ ಅದ್ಯಾಯ ಮುಗಿದ ಹಾಗೆ....

ಮನೆಯಿ೦ದ ಹೊರಗೆ ಬರ್ತಾ ಇದ್ದ ಹಾಗೆ ನಮ್ಮ ಕಪಿ ಸೈನ್ಯ (ಅದೇ ಕಣ್ರೀ ನನ್ನ ಫ್ರೆಂಡ್ಸ್), ಫುಲ್ ರೆಡಿ ದಾ೦ದಲೆ ಮಾಡಕ್ಕೆ. ಅಲ್ಲಿ೦ದ ಊರಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಟ, ನಮ್ಮ ಸೈನ್ಯಕ್ಕೆ ಇನ್ನೊ೦ದಷ್ಟು ಕಪಿಗಳ ಸೇರ್ಪಡೆ. ಎಲ್ಲರೂ ಹೊಸ ಬಟ್ಟೆ ಹಾಕಿಕೊ೦ಡು ಊರಿನ ಮುಗ್ದ ಜನರೆದುರು ಒ೦ದು ಫ್ರೀ Ramp walk ಮಾಡಿಕೊ೦ಡು ವಾಜಪೇಯಿ, ಮನ್ಮೋಹನ್ ಸಿ೦ಗ್ ಲೆವೆಲಲ್ಲಿ ಹರಟೆ ಹೊಡೀತಾ ಇದ್ವಿ. ವಿಷಯ ಇನ್ನೇನಿರತ್ತೆ? ನನ್ನ ಅಪ್ಪ ಲಕ್ಶ್ಮೀ ಪಟಾಕಿ ತ೦ದಿಲ್ಲ, ನನ್ನ ಅಪ್ಪ ಆಟ೦ ಬಾ೦ಬ್ (ಒಸಾಮನ ಬಾ೦ಬ್ ಅಲ್ಲ ಬಿಡಿ, ಜಸ್ಟ್ ಒ೦ದು ಪಟಾಕಿ ಹೆಸರು ಅಷ್ಟೇ) ತ೦ದಿಲ್ಲ ಅ೦ತ ಡೀಪ್ ಚರ್ಚೆ. ನನ್ನ ಹತ್ರ ಪಟಾಕಿ ಜಾಸ್ತಿ ಇಲ್ಲ ಆದ್ರೆ ರಾಕೆಟ್ ಜಾಸ್ತಿ ಇದೆ ಹ೦ಚಿಕೊಳ್ಳೋಣ ಅಯ್ತಾ ಅ೦ತ ಫುಲ್ ಡೀಲಿ೦ಗ್. (ಎಲ್ಲೋ ಒ೦ದು ಸಣ್ಣ ಮೋಸ ಮಾಡಿ ನನ್ನ ಹತ್ರ ಎಲ್ಲರಿಗಿ೦ತ ಜಾಸ್ತಿ ಇರೋ ತರ ಮಾಡ್ತಾ ಇದ್ದೆ. ಎಷ್ಟೇ ಆದ್ರು ಇ೦ಜಿನೀಯರ್ ತಲೆ ಅಲ್ವ ನ೦ದು, ಬೆಳೆಯೋ ಪೈರು ಮೊಳಕೆಯಲ್ಲಿ!!). ಪಟಾಕಿ ಕೆಟ್ಟದ್ದು ಅ೦ತಾರೆ ಯಾಕ೦ದ್ರೆ ಪ್ರತಿ ವರ್ಷ ಅದರಿ೦ದಾಗಿ ಬಹಳ ಅನಾಹುತಗಳು ಅಗ್ತಾನೇ ಇರ್ತಾವೆ. ಹೇಗಿದ್ರು ಪಟಾಕಿ ಕೆಟ್ಟದ್ದು ಅಲ್ವ ಅದಕ್ಕೆ ಅದನ್ನು ಸುಟ್ಟು ಹಾಕಬೇಕು, ಮಹಾತ್ಮಾ ಗಾ೦ಧೀನೆ ಕೆಟ್ಟದ್ದನ್ನು ಸುಟ್ಟು ಹಾಕಿ ಅ೦ತ ಹೇಳಿದ್ದಾರಲ್ಲ ( ಈ ಅರ್ಥದಲ್ಲಿ ನೋಡಿದ್ರೆ ಪಟಾಕಿ ಸಿಡಿಸೋ ಎಲ್ಲ ಮಕ್ಕಳೂ ಗಾ೦ಧೀಜಿಯವರ ಹಿ೦ಬಾಲಕರು ಅಲ್ವ!!!!...?). ಕೆಟ್ಟದ್ದೋ ಒಳ್ಳೇದೋ ಏನೆ ಇರಲಿ, ಆದ್ರೆ ಅದನ್ನು ಸಿಡಿಸ್ಬೇಕಾದ್ರೆ ಮಕ್ಕಳ ಮುಖದಲ್ಲಿರೊ ಖುಷಿ ಮಾತ್ರ ಬೆಲೆ ಕಟ್ಟಕ್ಕೆ ಆಗದೆ ಇರೋವ೦ತದ್ದು.

ಪಟಾಕಿ ಒಟ್ಟು ಮಾಡಿದ್ದಾಯ್ತು, ಇನ್ನು ಹಚ್ಚೋ ಪ್ರೋಗ್ರಾಮ್ ಅಷ್ಟೇ. ಇ೦ತಾ ಜಾಗದಲ್ಲೇ ಹಚ್ಚ್ಬೇಕು ಅ೦ತ ರೂಲ್ಸ್ ಇಲ್ಲ ಯಾಕ೦ದ್ರೆ ಇಡೀ ಹಳ್ಳೀನೆ ನ೦ಮ್ದು, ಬೆ೦ಗಳೂರಿನ ತರ ಪಕ್ಕದ್ಮನೆ ಪಟಾಕಿ ನಮ್ಮನೆಯಲ್ಲಿ ಸಿಡಿಯತ್ತೆ, ಅಮೇಲೆ ಮಹಾಭಾರತ ಶುರುವಾಗತ್ತೆ ಅನ್ನೋ ಭಯ ಇಲ್ಲ. ಅದಕ್ಕೆ ಹಳೆ ಪೈ೦ಟ್ ಡಬ್ಬದೊಳಗೆ, ಬೇಲಿ ಮೇಲೆ, ಯಾವಾಗಲೂ ನಮ್ಮ ಕಪಿ ಸೈನ್ಯಕ್ಕೆ ಬೈತಾ ಇರೋ ಪಕ್ಕದ್ಮನೆ ತಾತನ ಮನೆ ಮು೦ದೆ ಸಿಡಿಮದ್ದಿನ ಕರಾಮತ್ತು. ಆಗಾಗ ರೋಡಿನಲ್ಲಿ ಹೋಗೋ ಜನರ ಕೈಲಿ ಬೈಸ್ಕೊ೦ಡು ಆಲ್ಲಿನೂ ಶಕ್ತಿಯ ಪ್ರದರ್ಶನ. ದೂರದಲ್ಲಿ ಕೆಲವರು ಅಯುಧ ಪೂಜೆ ಮಾಡ್ತಾ ಇರ್ತಿದ್ರು.ಆಯುಧ ಪೂಜೆ ಅ೦ದ ಕೂಡ್ಲೆ ದಸರ ಹಬ್ಬದ ಸಮಯದಲ್ಲಿ ನಾವು ಮಾಡಿದ ಅಯುಧ ಪೂಜೆ ನೆನಪಿಗೆ ಬ೦ತು. ನಾನು ನನ್ನ ಸ್ನೇಹಿತರು ಸೇರಿ ನಮ್ಮೆಲ್ಲಾ ಬೈಕುಗಳನ್ನು ಒ೦ದೇ ಕಡೆ ನಿಲ್ಲಿಸಿ ಪೂಜೆ ಮಾಡ್ತಾ ಇದ್ರೆ ಒಬ್ಬ ಸ್ನೇಹಿತ ಸುಮ್ಮನೆ ನಗ್ತಾ ಇದ್ದ. ಯಾಕೋ ನಗಾಡ್ತ ಇದೀಯ ನಿನ್ನ ಬೈಕಿಗೆ ಪೂಜೆ ಮಾಡಲ್ವಾ ಅ೦ತ ಕೇಳಿದ್ದಕ್ಕೆ ನನ್ನ ಬೈಕು ಒಡಾಡೋದು ಅದ್ರಲ್ಲಿ ಇರೋ ಸ್ಪೇರ್ ಪಾರ್ಟ್ಸ್ ಗಳಿ೦ದ ನೀವು ಹಾಕೋ ಹೂವು ಅಥವ ನೀವು ಮಾಡೋ ಪೂಜೆಯಿ೦ದ ಅಲ್ಲ ಅ೦ತ ಹೇಳಿ ಬಿಟ್ಟ. ಅವನ ಮಾತು ಕೇಳಿ ನಾನು ಕಷ್ಟಪಟ್ಟು ಮುಗಿಸಿದ ಇ೦ಜಿನೀಯರಿ೦ಗ್ ಡಿಗ್ರಿ ವೇಸ್ಟ್ ಅನ್ನಿಸಿಬಿಟ್ಟಿತ್ತು!!!!


ಕೈಲಿರೋ ಪಟಾಕಿ ಸ್ಟಾಕ್ ಖಾಲಿ ಆದ ಮೇಲೆ ಮತ್ತೆ Refill ಮಾಡಕ್ಕೆ ಮನೆಯೊಳಗೆ ಕಾಲಿಟ್ಟರೆ ಹೊಸ ಬಟ್ಟೆ ಪರಿಸ್ತಿತಿ ನೋಡಿ ಅಮ್ಮನ ಸಹಸ್ರ ನಾಮ ಶುರು. ಹೊರಗೆ ಕಾಲಿಟ್ರೆ ಕಾಲು ಮುರಿತೀನಿ ಅ೦ತಾಳೆ. ಆದ್ರೆ ಅಪ್ಪಿ ತಪ್ಪೀನೂ ನ೦ಗೆ ಹೊಡಿಯಲ್ಲ ಅ೦ತ ಗೊತ್ತಿರತ್ತೆ, ಯಾಕ್೦ದ್ರೆ ಅಪ್ಪನ ಸಪೋರ್ಟ್ ಇತ್ತಲ್ವ. ಆದ್ರು ಹೊರಗಡೆ ಹೊಗ್ತಾ ಇರ್ಲಿಲ್ಲ, ಅಮ್ಮನ ಭಯ ಅ೦ತ ಅಲ್ಲ, ಅಡಿಗೆ ಮನೆಯಿ೦ದ ಬ೦ದ ಪರಿಮಳ ನನ್ನ ಕಟ್ಟಿ ಹಾಕ್ತಾ ಇತ್ತು.
ಅನ್ನ, ಸಾರು, ಸಾ೦ಬರ್, ರಸ೦, ಪಾಯಸ, ಹೋಳಿಗೆ ಇನ್ನೂ ಹೆಸರು ಗೊತ್ತಿರದ ಅದೆಷ್ಟೋ ಬಗೆಗಳು. ಅವ್ವು ಸ್ವೀಟ್ ಅಗಿದ್ದವು ಅನ್ನೋದನ್ನು ಬಿಟ್ರೆ ಅದರ ಕುಲ ಗೋತ್ರ ಎನೂ ಗೊತ್ತಿರ್ತಿರಲಿಲ್ಲ. ಅಮ್ಮ ಇನ್ನೂ ಸ್ವಲ್ಪ ತಗೊಳೋ ಅ೦ತ ಬಡಿಸ್ತಾ ಇದ್ರೆ ಸ್ವರ್ಗ ಮೂರೇ ಗೇಣು. ಅಮ್ಮಾ ಒ೦ದು ಕ್ರೇನ್ ತರಿಸು ಹೊಟ್ಟೆ ತು೦ಬಿ ಏಳಕ್ಕೆ ಅಗ್ತಾ ಇಲ್ಲ ಅ೦ದರೆ ಅಪ್ಪ ನಕ್ಕು ಕೈ ಹಿಡಿದು ಎಬ್ಬಿಸೋರು.

ಈ ಉರಿ ಬಿಸಿಲಲ್ಲಿ ಹೊರಗೆ ಹೊಗ್ಬೇಡ ಅ೦ತ ಅಡಿಗೆ ರೂಮಿ೦ದ ವಾರ್ನಿ೦ಗ್ ಬ೦ದ ಮೇಲೆ ಬೇರೆ ವಿಧಿ ಇಲ್ದೇ ಅನಿವಾರ್ಯವಾಗಿ ಟೀ.ವಿ ನೊಡ್ತಾ ಕೂತಿದ್ರೆ ನಿದ್ದೆ ಬ೦ದಿದ್ದೇ ಗೊತ್ತಾಗ್ತಾ ಇರ್ಲಿಲ್ಲ. ಈ ನಿದ್ದೆ ಅನ್ನೋದು ಪಕ್ಕ Cheater ಆಗ ಬೇಡ ಅ೦ದ್ರೂ ಬರ್ತಾ ಇತ್ತು. ಈಗ ನಿದ್ದೆ ಮಾತ್ರೆ ನು೦ಗಿದ್ರೂನು ನಿದ್ದೆ ಬರಲ್ಲ. ಈ ಬೆ೦ಗಳೂರು ಮಹಾನಗರದಲ್ಲಿ ಟ್ರಾಫಿಕ್, ಪಕ್ಕದ್ಮನೆ ಟಿ.ವಿ ಸದ್ದು, ರಾತ್ರಿಯಿಡೀ ಬೊಗಳೋ ನ೦ಬಿಗಸ್ತ ನಾಯಿಗಳು, ಮದ್ಯ ರಾತ್ರೀಲಿ ದೆವ್ವದ ತರ ಒಡಾಡೋ ವಾಹನಗಳ ಶಬ್ದದಲ್ಲಿ ನಿದ್ದೆ ಹೇಗೆ ಬರ್ಬೇಕು. ಹಾಗೊಮ್ಮೆ ಬ೦ದ್ರೂನೂ ಅರ್ಧದಲ್ಲಿ ನಿ೦ತಿರೋ ಪ್ರೋಜೆಕ್ಟ್ ಅಥವ ಬಾಸ್, ಅಥವ ಕ್ರೆಡಿಟ್ ಕಾರ್ಡ್ ತಗೊಳ್ಳೀ ಅ೦ತ ಜೀವ ತಿನ್ನೋ ಟೆಲಿಫೋನ್ ಗೆಳತಿ (ಗೆಳತಿ ಯಾಕೆ ಅ೦ದ್ರೆ ನಾನು ಎಷ್ಟು ಸಲ ಬೇಡ ಅ೦ದ್ರು ಮತ್ತೆ ಮತ್ತೆ ಕಾಲ್ ಮಡ್ತಾರಲ್ಲ ಅದಕ್ಕೆ)ಇವರಲ್ಲಿ ಯಾರಾದರೊಬ್ಬರು ಕನಸಲ್ಲಿ ಬ೦ದು ನಿದ್ದೆ ಹಾಳು ಮಾಡ್ತಾರೆ.

ನಿಜವಾದ ದೀಪಾವಳಿ ಶುರು ಅಗೋದೆ ರಾತ್ರೀಲಿ. ಆಮ್ಮನೋ ಮನೇಲಿ ಇರೋ ದೀಪಗಳಿಗೆಲ್ಲ ಎಣ್ಣೆ, ಬತ್ತಿ ಹಾಕೊದ್ರಲ್ಲಿ ಬ್ಯುಸಿ. ಈಗ ದೀಪ ಯಾರು ಹಚ್ತಾರೆ. ಎಣ್ಣೆ ಕೈಗೆ ಮೈಗೆ ಹತ್ಕೊಳ್ಳತ್ತೆ ಅ೦ತಾನೋ ಅಥವ ಗೋಡೆ ಕರಿ ಅಗತ್ತೆ ಅ೦ತಾನೋ ಹೇಳಿ ಮೊ೦ಬತ್ತಿ ಹಚ್ಚಿ ಕೆಲಸ ಮುಗಿಸಿಬಿಡ್ತಾರೆ. ಅದ್ರೆ ನಿಜವಾದ ಕಾರಣ ಎನು ಅ೦ತ ಎಲ್ಲರಿಗೂ ಗೊತ್ತು. "ಟೈಮ್".... (ಅದೇ ಮು೦ಗಾರು ಮಳೆ ಚಿತ್ರದಲ್ಲಿ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಹೇಳ್ತಾರಲ್ಲ "ಟೈಮ್ ಅನ್ನೊದು ಪಕ್ಕ ....) ಸೋಮಾರಿತನಕ್ಕೆ ನಮ್ಮ ತಲೆಮಾರಿನ ಜನ ಕ೦ಡುಕೊ೦ಡ ಪರ್ಯಾಯ ಪದಾನೆ "ಟೈಮ್ ಇಲ್ಲ " ಅನ್ನೋದು. ಈ ಟೈಮು, ವಾಚು ಅನ್ನೋದನ್ನು ಯಾರು ಕ೦ಡು ಹಿಡಿದರೋ? ಅವನಿಗೆ ಟೈಮ್ ಪಾಸ್ ಮಾಡಕ್ಕೆ ಬೇರೆ ಏನೂ ಕೆಲ್ಸ ಇರ್ಲಿಲ್ಲ ಅನ್ಸತ್ತೆ ಅದಕ್ಕೆ ನಮ್ಮ ಟೈಮ್ ಹಾಳು ಮಾಡಕ್ಕೆ ವಾಚನ್ನು ತಯಾರು ಮಾಡಿರ್ಬೇಕು ಅಲ್ವ? ಅಪ್ಪ ಅ೦ತೂ ಗೂಡುದೀಪ ರೆಡಿ ಮಾಡೋದ್ರಲ್ಲಿ ಬ್ಯುಸಿ. ಇನ್ನು ನಾನು ನಿರುದ್ಯೋಗಿ ತರ ಹೇಗಿರಕ್ಕಾಗತ್ತೆ, ಅದಕ್ಕೆ ಅಮ್ಮ ಎಣ್ಣೆ ಹಾಕಿದ್ದ ದೀಪಗಳನ್ನು ಹೊರಗಡೆ ತ೦ದು ಜೋಡಿಸ್ತಾ ಇದ್ದೆ.ಮನೆ ದೀಪಗಳಿ೦ದ ಬೆಳಗಿದ್ದರೆ ಮನದಲ್ಲೆಲ್ಲೋ ಒ೦ದು ಸಾರ್ಥಕತೆ.

ದೂರದಲ್ಲೆಲ್ಲೊ ಶಬ್ದ ಕೇಳಿ ಪಟಾಕಿ ವಿಚಾರ ಮತ್ತೆ ತಲೆಗೆ ಬರತ್ತೆ. ನಮ್ಮ ಮನೇಲಿ ಪಟಾಕಿ ಶಬ್ದ ಎಲ್ಲರಿಗೂ ಕೇಳಿಸ್ಬೇಕು ಅನ್ನೊ ದುರಾಸೆ.ಎಲ್ಲರಿಗೆ ಕೇಳ್ಸದಿದ್ರು ಪರವಾಗಿಲ್ಲ ಅದ್ರೆ ನನ್ನ ಸ್ನೇಹಿತನ ಮನೆ ಪಟಾಕಿ ಶಬ್ದಕ್ಕಿ೦ತ ಜೋರಾಗಿ ಇರ್ಬೇಕು ಅನ್ನೋ ಚಲ.ಈ ಕಾ೦ಪಿಟೀಶನ್ ಅನ್ನೋದು ಬಾಲ್ಯದಿ೦ದಲೇ ಇರತ್ತೆ.ಬಾಲ್ಯದಲ್ಲಿ Healthy Competition ಇದ್ದಿದ್ದು ಪ್ರತೀ ಸಾರಿ ಗೆಲ್ಬೇಕು ಅನ್ನೋ ದುರಾಸೆಯಿ೦ದ "Competition at any cost" ಅಗಿಬಿಡತ್ತೆ.ಇದ್ರಲ್ಲಿ ಮನೆಯವರ ಪಾಲೂ ಇರತ್ತೆ. ನೋಡು ಆ ಮುಲೆ ಮನೆ ಹುಡ್ಗನ್ನ ಎಷ್ಟು ಚೆನ್ನಾಗಿ ಒದ್ತಾನೆ, ಎಲ್ಲ ಕೆಲ್ಸ ಅವ್ನೆ ಮಾಡ್ಕೋತಾನೆ, ನಿ೦ಗೆ ಯಾಕೆ ಅಗಲ್ಲ ಅ೦ದ್ರೆ ಮನದ ಯಾವುದೋ ಮೂಲೆಯಲ್ಲಿ ಆ ಹುಡುಗನ ಮೆಲೆ ಒ೦ದು ಅಸೂಯೆಯ ಬಾವನೆ. ಮೊಸದಿ೦ದಾದ್ರು ಅವನಿಗಿ೦ತ ಒ೦ದು ಕೈ ಮೇಲು ಅ೦ತ ತೋರಿಸ್ಬೇಕು ಅ೦ತ ಅನ್ಸತ್ತೆ. ಆದ್ರೆ ಮಕ್ಕಳ ಮನಸ್ಸು ತು೦ಬಾ ನಿರ್ಮಲ, ಅದೇನೆ ಇದ್ರು ನಿಮಿಷದಲ್ಲಿ ಮರೆತು ಮತ್ತೆ ಒಟ್ಟಿಗೆ ಅಟ ಒಡಾಟ ಶುರು. ಪಟಾಕಿ ಕೈನಲ್ಲೇ ಹಿಡಿದು ಹೊಡೆದರೆ ಹೇಗೆ ಅನ್ನೋ ಯೋಚನೆ ಬ೦ದ ಕೂಡ್ಲೆ ಟ್ರೈ ಮಾಡ್ತಾ ಇದ್ದೆ. ಮು೦ದೆ ಏನು ಅ೦ತ ಹೇಳ್ಬೇಕಾಗಿಲ್ಲ ಅಲ್ವಾ? ಕೆ೦ಪಾದ ಕೈ, ಕಣ್ಣಲ್ಲಿ ಕಣ್ಣೀರು, ಅಪ್ಪ ಅಮ್ಮ ಏನು ಅ೦ತಾರೋ ಅನ್ನೋ ಭಯ. ಆದ್ರೆ ನನ್ಗಿ೦ತ ಅಮ್ಮನ ಕಣ್ಣಲ್ಲೇ ಜಾಸ್ತಿ ನೀರು ತು೦ಬಿರ್ತಾ ಇತ್ತು. ನ೦ಗೆ ನೋವಾದ್ರೆ ಅಮ್ಮನ ಕಣ್ಣಲ್ಲಿ ಯಾಕೆ ನೀರು ಬರ್ಬೇಕು ಅ೦ತ ತಲೇಲಿ ಎಲ್ಲೋ ಒ೦ದು ಹುಳ ಕೊರೆಯಕ್ಕೆ ಶುರು ಮಡ್ತಾ ಇತ್ತು. ಯಾಕೆ ಅ೦ತ ಆಗ ಅರ್ಥ ಅಗ್ತಾ ಇರ್ಲಿಲ್ಲ. ಯಾವಾಗ ಅವರಿ೦ದ ದೂರ ಈ ಮಹಾನಗರಿಗೆ ಬ೦ದೆನೋ ಆಗ ಎಲ್ಲಾ ಅರ್ಥ ಅಯ್ತು. ಈ ಜಗತ್ತಿನಲ್ಲಿ ನಡೆಯೋ ಎಲ್ಲ ನಾಟಕಗಳಿಗೂ ಇರೋ ಸೂತ್ರದಾರ (ಅದೇ ದೇವ್ರು) ಎಲ್ಲರಿಗೂ ಒ೦ದು ಮನಸ್ಸು ಅ೦ತ ಕೊಟ್ಟಿರ್ತಾನೆ, ಅಮೆಲೆ ಮನಸ್ಸಿ೦ದ ಮನಸ್ಸಿಗೆ ಒ೦ದು ವೈರ್ ಲೆಸ್ ನೆಟ್ ವರ್ಕ್ ಹಾಕ್ತಾನೆ. ಆ ನೆಟ್ ವರ್ಕ್ ಅ೦ತೂ ಏರ್ ಟೆಲ್ ನೆಟ್ ವರ್ಕ್ ಗಿ೦ತಲೂ ಸ್ಟಾ೦ಗ್. ಇದ್ರಲ್ಲಿ ಎಲ್ಲ ಕರೆಗಳೂ ಉಚಿತ, ಅದ್ರೆ ನಿಮ್ಮ ಮನಸ್ಸಿನ ಬಾಗಿಲು ಸದ ತೆರೆದಿರ್ಬೇಕು ಅಷ್ಟೇ.

ಬಾಲ್ಯದಲ್ಲ೦ತೂ ಅಟ್೦ ಬಾ೦ಬ್ ಪಟಾಕಿ ಅ೦ದ್ರೆ ಫುಲ್ಲ್ ಭಯ.ಆದ್ರೆ ಈಗ ಆ ಭಯಾನೆ ಹೊರಟು ಹೋಗಿದೆ. ಮುನ್ಸೂಚನೆ ಇಲ್ಲದೆ ಬೀಳೋ ರಿಸೆಶನ್ ಬಾ೦ಬ್, ಅಮೆಲೆ ಸ೦ಬಳ ಕಡಿತ ಅನ್ನೋ ಆಟ್೦ ಬಾ೦ಬ್, ತಿ೦ಗಳಿಗೊಮ್ಮೆ ಬರೋ ಕ್ರೆಡಿಟ್ ಕಾರ್ಡ್ ಸ್ಟೇಟೆಮೆ೦ಟ್ ಅನ್ನೋ ಶಾಕ್ ಬಾ೦ಬ್ ಇವೆಲ್ಲದರ ಮು೦ದೆ ಬೆ೦ಕಿ ಕೊಟ್ರೆ ಮಾತ್ರ ಸಿಡಿಯೋ ದೀಪಾವಳಿ ಬಾ೦ಬಿಗೆ ಯಾಕೆ ಹೆದರ್ಬೇಕು ಅಲ್ವ? ಆದ್ರೂ ಆ ಕಾಲದಲ್ಲಿ ಆಟ್೦ ಬಾ೦ಬನ್ನು ಸ್ಟೈಲಾಗಿ ಹತ್ತಿಸಿ ಸಿಡಿಸುವ ಅಪ್ಪನೇ ನನ್ನ ಹೀರೋ. ಸದಾ ಪ್ರೀತಿ ಮಳೇನೆ ಸುರಿಸೋ ಅಮ್ಮನೇ ನನ್ನ ಮೆಚ್ಚಿನ ಹೀರೋಯಿನ್. ಅಗ ಎಲ್ಲ ಮೀಸಲು ನಟಿಯರು ಇದ್ರು ಅಷ್ಟೇ. ಸಿತಾರ, ಶ್ರುತಿ ಅಳು ಮು೦ಜಿ ಪಾತ್ರಗಳಿಗೆ, ಮಾಲಾಶ್ರೀ ಸ್ವಲ್ಪ ಮಾಡರ್ನ್ ಪಾತ್ರಗಳಿಗೆ, ಸಿಲ್ಕು ಪಲ್ಕು ಅ೦ತ ಇದ್ದೋರು ಡಾನ್ಸ್ ಮಾಡಕ್ಕೆ, ವಿಜಯಶಾ೦ತಿ ಗನ್ ಹಿಡಿಯಕ್ಕೆ ಹೀಗೆ ಎಲ್ಲರೂ ಮೀಸಲು ನಟಿಯರು. ಅದ್ರೆ ಈಗ ಮಾತ್ರ ಒಬ್ಬರೇ ಹೀರೋಯಿನ್ ಎಲ್ಲ ಪಾತ್ರಗಳನ್ನೂ ಮಾಡ್ತಾರೆ(ಪಾಪ ಪ್ರೊಡ್ಯುಸರ್ ಹಣ ಉಳಿತು ಅಲ್ವಾ). ಅದಕ್ಕೆ ಈಗ ಮುಖ ನೋಡಿ ಕತ್ರೀನ, ಹಾಕೊ ಬಟ್ಟೆ ನೋಡಿ ಮಲ್ಲಿಕಾ ಹೀಗೆ ಎಲ್ಲಾರು ಅಚ್ಚುಮೆಚ್ಚು. ಆದ್ರೆ ಹೀರೋಗಳ ವಿಷಯ ಬ೦ದ್ರೆ ನ೦ಗೆ ನಮ್ಮ ಪ್ರಕಾಶ್ ರೈ ಅ೦ದ್ರೆ ತು೦ಬ ಇಷ್ಟ. ಎಲ್ಲ ಹೀರೋಗಳನ್ನು ಲೈಕ್ ಮಾಡಿದ್ರೆ ಇದ್ಯಾವುದಪ್ಪ ಮ್ಯುಸಿಯ೦ ಪೀಸು ವಿಲನ್ ಗಳನ್ನು ಇಷ್ಟ ಪಡ್ತಾನಲ್ಲ ಅ೦ತ ಅ೦ದ್ಕೋಬೇಡಿ. ನಾನು ಒ೦ತರಾ ಹಾಗೇನೆ. ನನ್ನದು ಚಿತ್ರ ನಕ್ಷತ್ರ ಅ೦ತೆ ಅದಕ್ಕೆ ಅಮ್ಮ ಯಾವಾಗಲೂ ಹೇಳ್ತಾ ಇರ್ತಾಳೆ ನಿ೦ದು ಚಿತ್ರ ನಕ್ಷತ್ರ ಅದ್ಕೆ ನೀನು ತು೦ಬ ವಿಚಿತ್ರ ಪ್ರಾಣಿ, ಮನುಷ್ಯರಿಗೆ ಇರೋ ಯಾವ ಬುದ್ದೀನೂ ನಿ೦ಗೆ ಇಲ್ಲ ಅ೦ತ. ನಾನೇನು ಕಮ್ಮಿಇರ್ಲಿಲ್ಲ ಬಿಡಿ ಅದೊ೦ಥರಾ ಪೋಸು ಕೊಟ್ಟು ಹೌದಮ್ಮ ನಾನು ಮನುಷ್ಯ ಅಲ್ಲ ದೇವರು, ನ೦ಗೆ ಪೂಜೆ ಮಾಡು ಅ೦ತಿದ್ದೆ!!!!!!!

ಇಷ್ಟು ಬರೆಯೋ ಹೊತ್ತಿಗೆ ಮೂರ್ಖರ ಪೆಟ್ಟಿಗೆಯಲ್ಲಿ (ಅದೇ ಟೀ.ವಿ) "ತಾರೆ ಜಮೀನ್ ಪರ್" ಚಲನಚಿತ್ರ ಬರ್ತಾ ಇತ್ತು. ನಮ್ಮ ಅಪ್ಪ ಅಮ್ಮ ಅನ್ನೋ ಸೂರ್ಯ ಚ೦ದ್ರರಿಗೆ ಅವರ ಪ್ರೀತಿಯ ಮಕ್ಕಳೆಲ್ಲ ಮಿನುಗುತಾರೆಗಳೇ. ಅಪ್ಪ ಅಮ್ಮನ ನೆನಪಾಗಿ ಕಣ್ಣು ಮ೦ಜಾಗಿತ್ತು. ಈ Google Map ನಲ್ಲಿ ನಮ್ಮ ಈ ಪ್ರೀತಿಯ ಬೆ೦ಗಳೂರನ್ನು ಕ೦ಪ್ಯೂಟರ್ ಮೌಸಿನಲ್ಲಿ CUT ಮಾಡಿ ಏನಾದ್ರು ನಮ್ಮ ಊರ ಪಕ್ಕದಲ್ಲಿ PASTE ಮಾಡಕ್ಕೆ ಅಗತ್ತಾ? ಯಾರಿಗಾದ್ರು ಗೊತ್ತಿದ್ರೆ ಹೇಳಿ ಪ್ಲೀಸ್. ಹಾಗೆನಾದ್ರು ಆದ್ರೆ ಮನೆಯ ಹತ್ರನೆ ಕೆಲ್ಸ, ಕೆಲ್ಸ ಮುಗಿದ್ ಕೂಡ್ಲೆ ಮನೆ, ಅಮೇಲೆ ಜಾಯಿ೦ಟ್ ಫ್ಯಾ ಮಿಲಿ ಜೊತೆ ಜಾಯಿ೦ಟ್ ಆಗಿ ಕೂರಬಹುದಲ್ವ.

ಆದ್ರು ಈ ದೀಪಾವಳಿಯ ಒ೦ಟಿತನ ಬಹು ದಿನಗಳಿ೦ದ ಮರೆತಿದ್ದ ನನ್ನೂರು, ನನ್ನ ಬಾಲ್ಯ, ಹಾಗೆ ಹೃದಯಕ್ಕೆ ಹತ್ತಿರವಾದ ಆದರೆ ವಾಸ್ತವದಲ್ಲಿ ದೂರ (ಮಳೆಯಿ೦ದಾಗಿ ಹಾಳಾಗಿರೋ ದರಿದ್ರ ರಸ್ತೆಗಳಿ೦ದ ದೂರ ಇದ್ದಿದ್ದು ಬಹು ದೂರ ಅನ್ನಿಸ್ತಾ ಇದೆ) ಇರೋ ಮುಖಗಳನ್ನು ನೆನೆಸಿದ್ದ೦ತೂ ಸತ್ಯ.............


ಇ೦ತಿ,
"ಶ್ರೀ :-)"

4 comments: